‘ಅಪ್ಪಾ, ನಾನು ಹೋಗತಾ ಇದೇನೆ. ಹೇಳಿ ಹೋಗೋಣ ಅಂತ ಬಂದೆ.’
‘ಎಲ್ಲಿಗೆ ಹೋಗತಾ ಇದೀಯ?’
‘ಉತ್ತರ ದೇಶಕ್ಕೆ.’
‘ಅಲ್ಲಿಗೆ ಯಾಕೆ? ಇಲ್ಲಿ ನಿನಗೆ ಬದುಕಿಲ್ಲವಾ? ಹಂದಿ ಮಾರಾಟ ಮಾಡತಾ ಇದೀಯಲ್ತಾ.’
‘ಮಾಡತಾ ಇದ್ದೆ, ಈಗಿಲ್ಲ. ಏನೂ ಗಿಟ್ಟಿಲ್ಲ. ಹೋದವಾರ ಮನೆಯಲ್ಲಿ ಊಟಕ್ಕೆ ಏನೂ ಇರಲಿಲ್ಲ. ಅದರ ಹಿಂದಿನ ವಾರ ಬರೀ ಸೊಪ್ಪು ಬೇಯಿಸಿ ತಿಂದಿದ್ದೆವು. ಹಸಿವು ತಡೆಯುವುದು ಆಗಲ್ಲ ಅಪ್ಪಾ. ನೀನು ಚೆನ್ನಾಗಿ ಬದುಕಿದ್ದೀಯ. ಹಸಿವಿನ ವಾಸನೆ ಕೂಡ ಬರಲ್ಲ ನಿನಗೆ.
‘ಏನ ಹಾಗಂದರೆ?’
‘ನಮಗೆ ಹಸಿವು ಇದೆ, ನಿನಗೆ ಇಲ್ಲ ಅಂತ. ನೀನು ಪಟಾಕಿ ಮಾರುತ್ತೀಯ. ಪಟಾಕಿ, ರಾಕೆಟ್ತು ಇವಕ್ಕೆಲ್ಲ ಗಿರಾಕಿ ಇದಾರೆ. ಎಲ್ಲಿವರಗೆ ಹಬ್ಬಗಳು ವಿಶೇಷಗಳು ಇರುತ್ತಾವೋ ಅಲ್ಲಿವರೆಗೆ ನಿನ್ನ ವ್ಯಾಪಾರಕ್ಕೆ ತೊಂದರೆ ಇಲ್ಲ. ದುಡ್ಡ ಬರತಾ ಇರತ್ತೆ. ನಮ್ಮ ಕಥೆ ಹಾಗಲ್ಲ ಅಪ್ಪಾ. ಇತ್ತೀಚೆಗೆ ಯಾರೂ ಹಂದಿ ಸಾಕುವುದೇ ಇಲ್ಲ. ಸಾಕಿದರೂ ಅವರೇ ಅದನ್ನ ಬೇಯಿಸಿ ತಿಂದುಬಿಡತಾರೆ. ಹಂದಿ ಖರೀದಿ ಮಾಡುವುದಕ್ಕೆ ದುಡ್ದೂ ಇಲ್ಲ. ಈ ವ್ಯಾಪಾರ ಮುಗಿಯಿತು, ಅಪ್ಪಾ.’
‘ಉತ್ತರ ದೇಶಕ್ಕೆ ಹೊಗಿ ಏನು ಕಡಿದು ಕಟ್ಟ ಹಾಕತೀಯ?’
‘ದುಡ್ಡು ಮಾಡತೇನೆ. ನೋಡಿದೆಯಲ್ಲ, ಕಾರ್ಮೆಲೋ ಹೋಗಿ ಸಾಹುಕಾರನಾಗಿ ವಾಪಸ್ಸು ಬಂದ. ಗ್ರಾಮಘೋನು ಕೂಡ ತಂದಿದಾನೆ. ಒಂದು ಹಾಡಿಗೆ ಐದು ಸಂಟು ವಸೂಲು ಮಾಡತಾನೆ. ಎಲ್ಲಾ ಹಾಡಿಗೂ ಒಂದೇ ರೇಟು. ಡಾನ್ಝಾ ಹಾಡಿಗೂ ಅಷ್ಟೇ, ಆಂಡರ್ಸನ್ ಹೇಳುವ ದುಃಖದ ಹಾಡಿಗೂ ಅಷ್ಟೇ. ಯಾರು ಹೋಗಿ ಕೇಳಿದರೂ ಅಷ್ಟೇ ದುಡ್ಡು. ಚೆನ್ನಾಗಿ ದುಡ್ಡು ಮಾಡತಾ ಇದಾನೆ. ಜನ ಸಾಲು ಗಟ್ಟಿ ನಿಲ್ಲತಾರೆ ಅವನ ಗ್ರಾಮಫೋನು ಹಾಡು ಕೇಳುವುದಕ್ಕೆ, ಅಷ್ಟೇ ನೋಡು. ಸುಮ್ಮನೆ ಒಂದು ಸಾರಿ ಉತ್ತರ ದೇಶಕ್ಕೆ ಹೋಗಿ ಬಂದರೆ ಆಯಿತು. ಅದಕ್ಕೇ ಹೊರಟಿದೇನೆ.’
‘ಹೆಂಡತಿ, ಮಕ್ಕಳನ್ನು ಏನು ಮಾಡತೀಯ?’
‘ಅದನ್ನ ಹೇಳುವುದಕ್ಕೇ ಬಂದಿದ್ದು, ನಾನು ವಾಪಸ್ಸು ಬರುವ ತನಕ ನೀವೇ ಅವರನ್ನ ನೋಡಿಕೊಳ್ಳಿ.’
‘ನನ್ನನ್ನ ಏನು ಅಡುಗೂಲಜ್ಜಿ ಅಂದುಕೊಂಡಿದೀಯಾ? ನಿನ್ನನ್ನ, ನಿನ್ನ ಅಕ್ಕನನ್ನ ಸಾಕಿದ್ದೇ ಹೆಚ್ಚಾಯಿತು. ಇನ್ನು ಯಾವ ಮಕ್ಕಳನ್ನೂ ಸಾಕುವವನಲ್ಲ. ನಿಮ್ಮಕ್ಕ ಪುಣ್ಯಾತ್ಮಳು, ಸತ್ತು ಸ್ವರ್ಗ ಸೇರಿದಳು. ನನಗೆ ಇನ್ನು ಯಾವ ಹೊಸಾ ಜವಾಬ್ದಾರಿಗಳೂ ಬೇಡ, ಗಂಟೆ ಬಾರಿಸುವುದಿಲ್ಲ ಅಂದರೆ ಅದರಲ್ಲಿ ನಾಲಗೆ ಇಲ್ಲ ಅಂತ ಅರ್ಥ ಅನ್ನುವ ಗಾದೆ ಕೇಳಿದ್ದೀಯಲ್ಲ, ಹಾಗೇ ಇದೂನೂ.’
‘ಮಾತಿಗೆ ಅರ್ಥ ಇರಬೇಕು. ನೀನು ನನ್ನ ಸಾಕಿದ್ದರಿಂದ ನನಗೆ ಸಿಕ್ಕಿದ್ದೇನು? ಮೈಮುರಿಯುವಷ್ಟು ದುಡಿತ, ಅಷ್ಟೇ. ನನ್ನನ್ನ ಹುಟ್ಟಿಸುವುದು ಹುಟ್ಟಿಸಿಬಿಟ್ಟು ನಿನ್ನ ದಾರಿ ನೀನೇ ನೋಡಿಕೋ ಅಂತ ಬಿಟ್ಟುಬಿಟ್ಟೆ, ಪಟಾಕಿ ವ್ಯಾಪಾರಕ್ಕೂ ನನ್ನ ಸೇರಿಸಿಕೊಳ್ಳಲಿಲ್ಲ. ನಾನು ನಿನಗೇ ಎದುರಾಳಿ ಆಗಬಾರದು ಅಂತಿರಬೇಕು. ನನಗೊಂದು ಅಂಗಿ ಚಡ್ಡಿ ಸಿಕ್ಕಿಸಿ ಬೀದಿಗೆ ಬಿಟ್ಟೆ, ಇಂಥಾವನ ಮಗ ಅನ್ನುವ ಹೆಸರು ಬಿಟ್ಟು ಇನ್ನೇನೂ ಇಲ್ಲದೆ ಮನೆಯಿಂದ ಹೊರಗೆ ದಬ್ಬಿದೆ. ಈಗ ನಮ್ಮ ಗತಿ ಏನಾಗಿದೆ ನೋಡು. ಹಸಿದು ಸಾಯತಾ ಇದೇವೆ. ನಿನ್ನ ಸೊಸೆ, ನಿನ್ನ ಮೊಮ್ಮಕ್ಕಳು, ನಿನ್ನ ಮಗ ನಾನು, ಎಲ್ಲಾರೂ ನಿನ್ನ ವಂಶದ ಕುಡಿಗಳೇ, ಈಗ ಕಂತೆ ಒಗೆಯುವ ಗತಿ ಬಂದಿದೆ. ಅದೂ ಯಾಕೆ, ಹೊಟ್ಟೆಗೆ ಇಲ್ಲಾ ಅಂತ! ಇದು ಸರಿಯಾ? ಇದು ನ್ಯಾಯವಾ?’
‘ನಿನಗೇನಾದರೆ ನನಗೇನು? ನಿನಗೇ ಗತಿ ಇಲ್ಲದೆ ಇರುವಾಗ ಹೆಂಡತಿಯನ್ನ ಯಾಕೆ ಕಟ್ಟಿಕೊಂಡೆ? ಮನೆ ಬಿಟ್ಟು ಹೋಗುವಾಗ ನನಗೆ ಹೇಳಿ, ಕೇಳಿ ಹೋದೆಯಾ?’
‘ನನ್ನ ಹೆಂಡತಿ ತ್ರಾನ್ಸಿತೋ ನಿನ್ನ ಕಣ್ಣಿಗೆ ಒಳ್ಳೆಯವಳಾಗಿ ಕಾಣಲ್ಲ, ಅದಕ್ಕೇ ಹೀಗನ್ನುತ್ತೀ ಅವಳನ್ನ ಮನೆಗೆ ಕರಕೊಂಡು ಬಂದಾಗೆಲ್ಲ ಅವಮಾನ ಮಾಡಿದೆ. ಮೊದಲನೆ ಸಾರಿ ಮನೆಗೆ ಕರಕೊಂಡು ಬಂದು, ಅಪ್ಪಾ ಇವಳನ್ನ ಮದುವೆ ಆಗತೇನೆ ಅಂದಾಗ ಅವಳನ್ನ ನೀನು ಕಣ್ಣೆತ್ತಿ ಕೂಡ ನೋಡಲಿಲ್ಲ. ಅವಳ ಜಾತಕ ಎಲ್ಲಾ ಗೊತ್ತು, ಅವಳು ಬೀದಿಯಲ್ಲಿ ಬಿದ್ದವಳು ಅನ್ನುವ ಹಾಗೆ ಆಡಿದೆ, ಏನೇನೋ ವೇದಾಂತ ಉಪದೇಶ ಮಾಡಿದೆ. ನನಗೂ ಅರ್ಥ ಆಗದೆ ಇರುವ ಮಾತೆಲ್ಲ ಆಡಿದೆ. ಅದಕ್ಕೇ ಅವಳನ್ನ ಕರೆದುಕೊಂಡು ಬರುವುದನ್ನೇ ಬಿಟ್ಟೆ. ನನ್ನ ಮೇಲೆ ತಪ್ಪು ಹೊರಿಸಬಾರದು. ನಾನು ಉತ್ತರ ದೇಶಕ್ಕೆ ಹೋಗುವ ಮನಸ್ಸು ಮಾಡಿದೇನೆ, ನೀನು ಅವಳನ್ನ ನೋಡಿಕೊಳ್ಳಬೇಕು. ಅಷ್ಟೇ. ಇಲ್ಲಿ ಮಾಡುವುದಕ್ಕೆ ಕೆಲಸವೂ ಇಲ್ಲ, ಹೊಟ್ಟೆ ತುಂಬುವುದಕ್ಕೆ ಸಂಪಾದನೆಯೂ ಇಲ್ಲ.’
‘ಎಲ್ಲಾ ಗಾಳಿ ಮಾತು. ತಿನ್ನುವುದಕ್ಕೆ ದುಡಿಯಬೇಕು, ಬದುಕುವುದಕ್ಕೆ ತಿನ್ನಬೇಕು. ನನ್ನ ನೋಡಿ ಕಲಿತುಕೊಳ್ಳಬೇಕು ನೀನು. ಇಷ್ಟು ವಯಸ್ಸಾಗಿದ್ದರೂ ಕಷ್ಟ ಅಂತ ಗೊಣಗಿದವನಲ್ಲ ನಾನು. ವಯಸ್ಸಿನಲ್ಲಿದ್ದಾಗ ಹೇಗಿದ್ದೆ, ಕೇಳಲೇಬೇಡ ಅದನ್ನ, ಅವಾಗ ಇವಾಗ ಹೆಂಗಸರ ಹತ್ತಿರ ಹೋದರೂ ಅವರಿಗೆ ಕೈ ತುಂಬ ಕಾಸು ಕೊಡುತಿದ್ದೆ. ನೀನು ದುಡಿಮೆ ಮಾಡಿದರೆ ನಿನಗೆ ಏನು ಬೇಕೋ ಅದೆಲ್ಲಾ ಸಿಗುತದೆ, ಅದಕ್ಕಿಂತ ಜಾಸ್ತಿನೂ ಸಿಗತದೆ. ಏನಪ್ಪಾ ಅಂದರೆ ನೀನು ಪೆದ್ದ, ಮುಟ್ಠಾಳ. ಅದಕ್ಕೆ ನಾನು ಕಾರಣ ಅನ್ನಬೇಡ ಮತ್ತೆ.’
‘ನಾನು ನಿನ್ನ ಹೊಟ್ಟೆಯಲ್ಲಿ ಹುಟ್ಟಿದವನು. ಬದುಕುವ ದಾರಿ ಸರಿಯಾಗಿ ತೋರಿಸಬೇಕಾಗಿತ್ತು, ಹುಲ್ಲು ಮೇಯುವುದಕ್ಕೆ ಕುದುರೆಯನ್ನು ಅಟ್ಟಿದ ಹಾಗೆ ನನ್ನ ಮನೆಯಿಂದ ಅಟ್ಟಬಾರದಾಗಿತ್ತು.’
‘ನೀನು ಮನೆ ಬಿಟ್ಟು ಹೋದಾಗ ಏನು ಎಳೇ ಕೂಸು ನೋಡು. ಮುಖದ ಮೇಲೆ ಮೀಸೆ ಬಂದಿತ್ತು ಆಗಲೇ, ಅಥವಾ ನೀನು ಬದುಕಿರುವವರೆಗೂ ನಾನು ಅನ್ನ ಹಾಕಿ ಸಾಕುತೇನೆ ಅಂದುಕೊಂಡೆಯಾ? ಹಲ್ಲಿಗಳು ಮಾತ್ರ ಸಾಯುವವರೆಗೂ ಒಂದೇ ಮನೆಯಲ್ಲಿ ತಿಂದುಕೊಂಡು ಬಿದ್ದಿರತವೆ. ನಿನ್ನ ಪುಣ್ಯ ಮದುವೆ ಆಗಿದೀಯ, ಮಕ್ಕಳಿದಾವೆ. ಎಷ್ಟೋ ಜನಕ್ಕೆ ಬದುಕಿನಲ್ಲಿ ಏನೂ ಸಿಗದೆ ಸುಮ್ಮನೆ ನದಿಯ ನೀರು ಹರಿದ ಹಾಗೆ ಹರಿದು ಹೋಗುತ್ತಾರೆ.’
‘ನಿನ್ನ ಹಾಗೆ ಗಾದೆ ಮಾತು ಹೇಳುವುದಕ್ಕೂ ಕಲಿಸಲಿಲ್ಲ ನನಗೆ ಅದಾದರೂ ಗೊತ್ತಿದ್ದರೆ ನಿನ್ನ ಹಾಗೆ ಜನರನ್ನ ಖುಷಿಮಾಡಬಹುದಾಗಿತ್ತು. ಅವತ್ತು ನನಗೆ ಗಾದೆ ಹೇಳಿಕೊಡಪ್ಪಾ ಅಂದರೆ-ಹೋಗಿ ಮೊಟ್ಟೆ ಮಾರು, ಜಾಸ್ತಿ ಕಾಸು ಸಿಗತದೆ ಅಂದೆ. ಮೊದಲು ಮೊಟ್ಟೆ ಮಾರಿದೆ, ಆಮೇಲೆ ಕೋಳಿ ವ್ಯಾಪಾರ, ಈಗ ಹಂದಿ ಮಾರುವ ಕೆಲಸ. ವ್ಯಾಪಾರ ಚೆನ್ನಾಗಿದೆ ಅಂದರೆ ಚೆನ್ನಾಗಿತ್ತು, ಇಲ್ಲಾ ಅಂದರೆ ಇಲ್ಲ. ಮಕ್ಕಳಾದವು, ಖರ್ಚು ಜಾಸ್ತಿಯಾಯಿತು, ದುಡ್ಡು ಖಾಲಿಯಾಯಿತು. ಈಗ ಸಾಲ ಕೊಡುವವರೂ ದಿಕ್ಕಿಲ್ಲ. ಹೋದವಾರ ಬರೀ ಸೊಪ್ಪು ತಿಂದೆವು, ಈ ವಾರ ಅದೂ ಇಲ್ಲ. ಅದಕ್ಕೇ ಹೊರಟಿದೇನೆ. ಅಪ್ಪಾ, ನೀನು ನಂಬಿದರೆ ನಂಬು, ಬಿಟ್ಟರೆ ಬಿಡು. ನಾನು ನಿನ್ನ ಹಾಗೆ ಮಕ್ಕಳನ್ನ ಹುಟ್ಟಿಸಿ ಬೀದಿಗೆ ಬಿಡಲ್ಲ. ನನಗೆ ಮಕ್ಕಳ ಮೇಲೆ ಪ್ರೀತಿ, ಅವರಿಗೆ ಅಂತಲೇ
ಸಂಪಾದನೆಗೆ ಹೊರಟಿದ್ದೇನೆ.’
‘ನೋಡು ಮಗಾ, ನಿನ್ನ ರೆಕ್ಕೆ ಶಕ್ತಿ ಕಡಮೆಯಾಗುವ ಹೊತ್ತಿಗೆ ರೆಕ್ಕೆ ಬಲಿತ ಮಕ್ಕಳು ಗೂಡು ಬಿಟ್ಟು ಹಾರಿ ಹೋಗತವೆ. ಹುಟ್ಟಿಸಿದ ಅಪ್ಪ ಅನ್ನುವ ಋಣವೂ ಇರಲ್ಲ. ಹೋಗತಾ ಹೋಗತಾ ನೆನಪುಗಳನ್ನೂ ತಿಂದುಕೊಂಡು ಹೋಗತಾರೆ.’
‘ಹಳೇ ಗಾದೆ.’
‘ಇರಬಹುದು. ಸತ್ಯ ತಾನೇ?’
‘ನೀನೇ ನೋಡತಿದೀಯಲ್ಲ. ನಾನು ನಿನ್ನ ಮರೆತಿಲ್ಲ.’
‘ಏನಾದರೂ ನನ್ನಿಂದ ಆಗಬೇಕಾಗಿದ್ದಾಗ ಹುಡುಕಿಕೊಂಡು ಬರುತ್ತೀ. ಎಲ್ಲಾ ನೆಟ್ಟಗಿದ್ದಿದ್ದರೆ ನನ್ನ ಮರೆತೇ ಬಿಡುತಿದ್ದೆ. ನಿಮ್ಮಮ್ಮ ಸತ್ತ ಮೇಲೆ ಒಂಟಿ ಆದೆ. ನಿನ್ನ ಅಕ್ಕ ಸತ್ತ ಮೇಲೆ ಇನ್ನೂ ಒಂಟಿ ಆದೆ. ನೀನೂ ಮನೆ ಬಿಟ್ಟು ಹೋದಮೇಲೆ ನನಗೆ ಇನ್ನು ಯಾರೂ ಇಲ್ಲ ಅನ್ನಿಸಿತು. ಈಗ ಬಂದು ಮನಸ್ಸು ಕದಡಿ ನನ್ನ ಭಾವನೆಗಳನ್ನ ಹುಟ್ಟಿಸುವುದಕ್ಕೆ ನೋಡುತ್ತೀಯ. ಜೀವ ಇರುವವನಿಗೆ ಬದುಕು ಕೊಡುವುದಕ್ಕಿಂತ ಸತ್ತವನನ್ನು ಎಬ್ಬಿಸಿ ಬದುಕಿಸುವುದು ಕಷ್ಟ, ತಿಳಕೋ. ಬೀದಿಗೆ ಬಿದ್ದಾಗ ಏನೇನೋ ಪಾಠ ಕಲೀತೀಯ, ನಿನ್ನ ಬೆನ್ನು ನೀನೇ ಉಜ್ಜಿಕೋ, ನಿನ್ನ ಹೊರೆ ನೀನೇ ಹೊತ್ತುಕೋ.’
‘ಹಾಗಾದರೆ, ನನ್ನ ಹೆಂಡತಿ ಮಕ್ಕಳನ್ನ ನೋಡಿಕೊಳ್ಳಲ್ಲ ಅನ್ನು.’
‘ಅವರ ಪಾಡಿಗೆ ಅವರನ್ನ ಬಿಟ್ಟು ಹೋಗು. ಹಸಿವಿನಿಂದ ಯಾರೂ ಸಾಯಲ್ಲ.’
‘ಅವರನ್ನ ನೋಡಿಕೊಳ್ಳುತ್ತೀಯೋ ಇಲ್ಲವೋ ಹೇಳು. ನನಗೆ ನಿಚ್ಚಳವಾಗಿ
ತಿಳಿಯಬೇಕು.’
‘ಎಷ್ಟು ಜನ ಇದಾರೆ?’
‘ಮೂರು ಗಂಡು, ಎರಡು ಹೆಣ್ಣು ಮಕ್ಕಳು. ಮತ್ತೆ ಇನ್ನೂ ಹುಡುಗಿಯ ಹಾಗೆ ಇರುವ ನಿನ್ನ ಸೊಸೆ.’
‘ಇನ್ನೂ ತೀಟೆ ತೀರಿಲ್ಲ ಅವಳಿಗೆ.’
‘ನಾನು ಅವಳ ಮೊದಲನೆಯ ಗಂಡ, ಒಳ್ಳೆಯ ಹೆಂಗಸು. ಅವಳನ್ನ ಚೆನ್ನಾಗಿ ನೋಡಿಕೋ, ಅಪ್ಪಾ.’
‘ಯಾವಾಗ ವಾಪಸ್ಸು ಬರುತ್ತೀ?’
‘ಬೇಗ ಬರತೇನೆ. ಸ್ವಲ್ಪ ದುಡ್ಡು ಕೂಡಿದ ತಕ್ಷಣ ಬರತೇನೆ, ನಿನಗೆ ಎಷ್ಟು ಖರ್ಚಾಗಿದೆಯೋ ಅದರ ಎರಡರಷ್ಟು ಕೊಡತೇನೆ. ಅವರ ಹೊಟ್ಟೆಗೆ ಅನ್ನ ಹಾಕು, ಅಷ್ಟೇ ನಾನು ಹೇಳೋದು.’
* * *
ಬೆಟ್ಟಗಳ ಮೇಲಿದ್ದ ಹುಲ್ಲುಗಾವಲುಗಳ ಜನ ತಪ್ಪಲಿನ ಹಳ್ಳಿಗಳಿಗೆ ಬರುತಿದ್ದರು. ಹಳ್ಳಿಗಳಲ್ಲಿದ್ದ ಜನ ಸಿಟಿಗೆ ಹೋಗುತಿದ್ದರು. ಸಿಟಿಗೆ ಹೋದ ಜನ ಜನಗಳ ಮಧ್ಯೆ ಕರಗಿ ಕಳೆದುಹೋಗುತಿದ್ದರು.
‘ನಮಗೆ ಎಲ್ಲಿ ಕೆಲಸ ಕೊಡುತಾರೆ, ಗೊತ್ತಾ?’ ‘ಗೊತ್ತು. ಸಿಯುಡಾ ಜುಆರೆಸ್‌ಗೆ ಹೋಗು. ನನಗೆ ಇನ್ನೂರು ಪೆಸೋ ಕೊಟ್ಟರೆ ಆ ಕಡೆಗೆ ದಾಟಿಸುತೇನೆ. ಅಲ್ಲಿ ಹೋದಮೇಲೆ ನಾನು ಯಾರನ್ನ ಹೇಳುತ್ತೇನೋ ಅವರನ್ನ ಹೋಗಿ ಕಾಣು, ನಾನು ಕಳಿಸಿದೆ ಅನ್ನು, ಇಷ್ಟೇ. ಈ ವಿಚಾರ ಇನ್ನು ಯಾರ ಕಿವಿಗೂ ಬೀಳಬಾರದು.’ ‘ಸರಿ, ನಾಳೆ ದುಡ್ಡು
ತರತೇನೆ.’
‘ದಣೀ, ತಗೊಳಿ, ಇನ್ನೂರು ಪೆಸೋ.’
‘ಸಿಯುಡಾ ಜುಆರೆಸ್‌ನಲ್ಲಿರುವ ಸ್ನೇಹಿತನಿಗೆ ಚೀಟಿ ಕೊಡತೇನೆ. ಕಳಕೋಬೇಡ ಅದನ್ನ, ಅವನು ನಿನ್ನನ್ನ ಗಡಿ ದಾಟಿಸತಾನೆ, ನಿನ್ನ ಅದೃಷ್ಟ ಇದ್ದರೆ ಕೆಲಸ ಕೂಡ ಸಿಗತದೆ. ಇಗೋ ಅವನ ಅಡ್ರೆಸು, ಫೋನು ನಂಬರು. ಹೋದ ತಕ್ಷಣ ಅವನನ್ನು ಹುಡುಕು. ಇಲ್ಲ. ನೀನು ಟೆಕ್ಸಾಸ್‌ಗೆ ಹೋಗತಾ ಇಲ್ಲ. ಓರೆಗಾನ್ ಹೆಸರು ಕೇಳಿದೀಯಾ? ಸರಿ, ಓರೆಗಾನ್‌ಗೆ ಹೋಗಬೇಕು ಅಂತ ಹೇಳು. ಸೇಬಿನ ಹಣ್ಣು ಕುಯ್ಲು ಮಾಡುವುದಕ್ಕೆ ಬಂದಿದೇನೆ ಅನ್ನು. ಹತ್ತಿಯ ವಿಚಾರ ಎತ್ತಬೇಡ. ಜಾಣನ ಹಾಗೆ ಕಾಣತೀಯ. ಅಲ್ಲಿಗೆ ಹೋದಮೇಲೆ ಫೆರ್ನಾಂಡೆಸ್‌ನ ನೋಡು, ಗೊತ್ತಿಲ್ಲವಾ ಅವನು? ವಿಚಾರಿಸು, ತಿಳೀತದೆ. ಸೇಬು ಕೀಳುವ ಕೆಲಸ ಇಷ್ಟವಿಲ್ಲವಾ? ಹಾಗಿದ್ದರೆ ಹೋಗಿ ರೈಲು ಕಂಬಿ ಹಾಕುವ ಕೆಲಸಕ್ಕೆ ಸೇರಿಕೋ. ವರ್ಷಗಟ್ಟಲೆ ಕೆಲಸ ಇರತ್ತೆ, ಕೈ ತುಂಬ ದುಡ್ಡು ಕೂಡ ಸಂಪಾದಿಸಬಹುದು. ಕಾರ್ಡು ಕಳಕೊಳ್ಳಬೇಡ.’
* * *
‘ಅಪ್ಪಾ, ನಮ್ಮನ್ನ ಕೊಂದು ಹಾಕಿದರು.’
’ಯಾರು?’
’ನಮ್ಮನ್ನ. ನದಿ ದಾಟುವಾಗ, ಒಂದೇ ಸಮ ಗುಂಡು ಹಾರಿಸಿದರು ನಮ್ಮ ಮೇಲೆ.’
‘ಯಾಕೆ?’
‘ಅದು ಮಾತ್ರ ಕೊನೆಗೂ ತಿಳೀಲಿಲ್ಲ. ಎಸ್ಟಾನಿಸ್ಲಾಡೋ ಗೊತ್ತಲ್ಲಾ? ಅವನು ನನ್ನನ್ನ ಉತ್ತರ ದೇಶಕ್ಕೆ ತಲುಪಿಸುವುದಕ್ಕೆ ಜೊತೆಯಲ್ಲಿ ಬಂದಿದ್ದ, ವ್ಯವಹಾರದ ಗುಟ್ಟುಗಳೆಲ್ಲ ಹೇಳಿದ, ಮೊದಲು ಮೆಕ್ಸಿಕೋ ನಗರಕ್ಕೆ ಹೋದೆವು. ಆಮೇಲೆ ಅಲ್ಲಿಂದ ಎಲ್ ಪಾಸೋ ಊರಿಗೆ ಹೋದೆವು. ನಾವು ಅಲ್ಲಿ ಹೊಳೆ ದಾಟುತಾ ಇದ್ದಾಗ ನಮ್ಮ ಮೇಲೆ ಮೌಸರ್ ಗನ್ನುಗಳಿಂದ ಗುಂಡು ಹಾರಿಸಿದರು. ನಾನು ವಾಪಸ್ಸು ಬಂದೆ. ಯಾಕೆ ಅಂದರೆ ‘ಅಪ್ಪಾ ತಂದೇ, ನನ್ನ ಬಿಟ್ಟು ಹೋಗಬೇಡ, ನನ್ನೂ ಕರಕೊಂಡು ಹೋಗು,’ ಅಂತ ಅವನು ಗೋಗರೆದ. ಆ ಹೊತ್ತಿಗಾಗಲೇ ಹೊಟ್ಟೆ ಮೇಲೆ ಮಾಡಿಕೊಂಡು, ಮೈಗೆಲ್ಲ ಗುಂಡು ಹೊಡೆಸಿಕೊಂಡು ಬಿದ್ದಿದ್ದ, ಅವನನ್ನ ಎಳೆದುಕೊಂಡು, ನಮ್ಮನ್ನ ಹುಡುಕುವುದಕ್ಕೆ ಸರ್ಚ್‌ಲೈಟು ಹಾಕಿದ್ದರಲ್ಲ ಅದರ ಬೆಳಕು ನನ್ನ ಮೇಲೆ ಬೀಳದ ಹಾಗೆ ತಪ್ಪಿಸಿಕೊಂಡು ಬಂದೆ. ‘ಬದುಕಿದೀಯಾ?’ ಅಂತ ಕೇಳಿದೆ. ‘ಅಪ್ಪಾ, ತಂದೇ, ಇಲ್ಲಿಂದ ಕರಕೊಂಡು ಹೋಗು. ಗುಂಡೇಟು ಬಿದ್ದಿದೆ,’ ಅಂದ. ನನಗೆ ಗುಂಡು ತಗುಲಿ ಮೊಳಕೈ ಹತ್ತಿರ ಮಾಂಸ ಕಿತ್ತು ಬಂದಿತ್ತು. ಚೆನ್ನಾಗಿದ್ದ ಕೈ ಮುಂದೆ ಚಾಚಿ ಹಿಡಿದುಕೋ ಭದ್ರವಾಗಿ ಅಂದೆ. ನದಿಯ ಈಚಿನ ನಮ್ಮ ದೇಶದ ದಡದಲ್ಲೇ, ಒಜಿಂಗಾ ಹಳ್ಳಿ ಹತ್ತಿರ, ಏನೂ ಆಗಿಲ್ಲ ಅನ್ನುವ ಹಾಗೆ ನದಿಯಲ್ಲಿ ತೇಲಿಕೊಂಡು ಹೋಗುತಿದ್ದ ಪಾಚಿ ಇತ್ತಲ್ಲ ಅಲ್ಲಿ, ಸತ್ತು ಹೋದ.
‘ಅವನ್ನ ದಡಕ್ಕೆ ಎಳೆದುಕೊಂಡು ಬಂದೆ. ‘ಬದುಕಿದ್ದೀಯಾ?’ ಅಂತ ಕೇಳಿದೆ. ಅವನು ಮಾತಾಡಲಿಲ್ಲ. ಬೆಳಗಾಗುವ ತನಕ ಅವನ ಎದೆ ಉಜ್ಜಿ, ಬಾಯಿಗೆ ಬಾಯಿಟ್ಟು ಗಾಳಿ ಊದಿ ಅವನನ್ನು ಎಬ್ಬಿಸುವುದಕ್ಕೆ ನೋಡಿದೆ. ಅವನ ಕಣ್ಣು ರೆಪ್ಪೆ ಕೂಡ ಮಿಟುಕಲಿಲ್ಲ.
‘ವಲಸೆ ಆಫೀಸರು ಮಧ್ಯಾಹ್ನದ ಹೊತ್ತಿಗೆ ಬಂದ.
‘ಏನು ಮಾಡತಾ ಇದೀಯ ಇಲ್ಲಿ ಅಂತ ಕೇಳಿದ.
‘ಸತ್ತು ಹೋಗಿದಾನಲ್ಲ, ಇವನ ಹೆಣ ಕಾಯತಾ ಇದೀನಿ, ಅಂದೆ.
‘ನೀನೇ ಕೊಂದೆಯಾ ಅವನನ್ನ ಅಂತ ಕೇಳಿದ.
‘ಇಲ್ಲಾ ಸಾರ್ಜೆಂಟ್ ಅಂದೆ.
‘ನಾನು ಸಾರ್ಜೆಂಟ್ ಅಲ್ಲ. ಯಾರು ಕೊಂದಿದ್ದು ಇವನನ್ನ ಅಂತ ಕೇಳಿದ.
‘ಸೈನಿಕರ ಥರ ಡ್ರೆಸ್ಸು ಹಾಕಿಕೊಂಡಿದ್ದ, ಪಿಸ್ತೂಲು ಇತ್ತು. ಅವನು ಸಾರ್ಜೆಂಟ್ ಅಂದುಕೊಂಡಿದ್ದೆ.
‘ಯಾರು ಕೊಂದಿದ್ದು ಅಂತ ಕೇಳತಾ ನನ್ನ ಕೂದಲು ಹಿಡಿದು ಎಬ್ಬಿಸಿದ. ನಾನು ಏನೂ ಮಾಡಲಿಲ್ಲ, ಮೊಳ ಕೈ ನೋಯುತಾ ಇತ್ತಲ್ಲ ಅದಕ್ಕೆ.
‘ಹೊಡೀಬೇಡೀ, ನನಗೆ ಒಂದೇ ಕೈ ಇರೋದು ಅಂದೆ.
‘ಏನಾಯಿತು, ಹೇಳು ಅಂದ.
‘ನಮ್ಮನ್ನೆಲ್ಲ ರಾತ್ರಿ ಹೊರಡಿಸಿದರು. ಖುಷಿಯಾಗಿ ಸಿಳ್ಳೆ ಹಾಕಿಕೊಂಡು ನದಿ ದಾಟುತಾ ಇದ್ದೆವು, ಆ ಕಡೆ ಉತ್ತರ ದೇಶಕ್ಕೆ ಹೋಗುತಾ ಇದ್ದೆವು. ನಾವು ನದಿ ಮಧ್ಯಕ್ಕೆ ಹೋಗಿದ್ದಾಗ ಗುಂಡು ಹಾರಿಸುವುದಕ್ಕೆ ಶುರು ಮಾಡಿದರು. ನಾನು ಇವನು ಇಬ್ಬರೇ ಉಳಿದುಕೊಂಡದ್ದು, ಇವನ ಮೈಯೂ ತಾತಾತೂತು ಆಗಿದೆ ನೀವೇ ನೋಡಿ ಅಂದೆ.
‘ಯಾರು ನಿಮ್ಮ ಮೇಲೆ ಗುಂಡು ಹಾರಿಸಿದ್ದು?
‘ನನ್ನ ಕಣ್ಣಿಗೆ ಯಾರೂ ಕಾಣಲಿಲ್ಲ. ನಮ್ಮ ಮೇಲೆ ಜೋರಾಗಿ ಲೈಟು ಬಿಟ್ಟರು. ಢಂ ಢಂ ಗುಂಡಿನ ಶಬ್ದ ಕೇಳಿಸಿತು. ನನ್ನ ಮೊಳಕೈಗೆ ಗುಂಡೇಟು ಬಿತ್ತು. ಆವಾಗ ಇವನು ಅಪ್ಪಾ ತಂದೆ ನನ್ನ ಕರಕೊಂಡು ಹೋಗು ಅಂದ, ಗುಂಡು ಹಾರಿಸಿದವರು ಯಾರು ಅಂತ ನೋಡುವುದರಲ್ಲಿ ಉಪಯೋಗ ಇಲ್ಲ ಅನ್ನಿಸಿತು. ತಪ್ಪಿಸಿಕೊಂಡು ಬಂದೆವು
ಅಂದೆ.
‘ಹಾಗಾದರೆ ಅವರು ಅಪಾಚೆ ಜನ ಇರಬೇಕು ಅಂದ.
‘ಯಾವ ಅಪಾಚೆ? ನದಿಯ ಆ ಕಡೆ ಅಮೆರಿಕ ದೇಶ, ಟೆಕ್ಸಾಸು ಅಲ್ಲವಾ ಇರುವುದು ಅಂತ ಕೇಳಿದೆ.
‘ಹೌದು. ಆ ಕಡೆ ದಡದಲ್ಲಿ ಅಪಾಚೆ ಅನ್ನುವ ಕಾಡು ಜನ ಕೂಡ ಇದಾರೆ. ನಿನಗೆ ಗೊತ್ತಿಲ್ಲ. ಓಜಿಂಗಾದಲ್ಲಿರುವವರಿಗೆ ಹೇಳತೇನೆ. ಅವರು ಬಂದು ನಿನ್ನ ಸ್ನೇಹಿತನ ಹೆಣ ತೆಗೆದುಕೊಂಡು ಹೋಗತಾರೆ. ನೀನು ವಾಪಸ್ಸು ಹೋಗುವುದಕ್ಕೆ ರೆಡಿಯಾಗಿರು. ಅಂದ ಹಾಗೆ ನಿನ್ನದು ಯಾವ ಊರು? ಮೊದಲನೆಯದಾಗಿ ನೀನು ಊರು ಬಿಟ್ಟು ಬರಲೇಬಾರದಾಗಿತ್ತು. ನಿನ್ನ ಹತ್ತಿರ ದುಡ್ಡಿದೆಯಾ ಅಂದ.
‘ಸತ್ತವನ ಜೇಬಿನಿಂದ ಒಂದಷ್ಟು ದುಡ್ಡು ತಗೊಂಡಿದೇನೆ, ಸಾಕಾಗಬಹುದು ಅಂದೆ.
‘ನಮ್ಮ ದೇಶದ ಜನಕ್ಕೆ ಪುನರ್‍ವಸತಿಗೆ ಅಂತ ಕೊಡುವ ಹಣ ನನ್ನ ಹತ್ತಿರ ಒಂದಿಷ್ಟು ಇದೆ. ನಿನ್ನ ಟಿಕೀಟಿಗೆ ಬೇಕಾಗುವಷ್ಟು ಕೊಡತೇನೆ. ಮತ್ತೆ ಈ ಕಡೆ ಎಲ್ಲೂ ಕಾಣಿಸಿಕೊಳ್ಳಬೇಡ. ಒಂದೇ ಮುಖ ಎರಡು ಸಾರಿ ಕಂಡರೆ ನನಗೆ ತಡೆದುಕೊಳ್ಳುವುದಕ್ಕೆ ಆಗದಷ್ಟು ಕೋಪ ಬರತದೆ, ಹೊರಡು ಇನ್ನ ಅಂದ.
‘ಹೊರಟುಬಿಟ್ಟೆ, ಈಗ ಬಂದು ನಿನಗೆ ಆಗಿದ್ದೆಲ್ಲ ಹೇಳತಾ ಇದೀನಿ ಅಪ್ಪಾ’
‘ಪೆದ್ದಾ ನೀನು. ಹಾಗೇ ಆಗಬೇಕು ನಿನಗೆ, ನಿನ್ನ ಮನೆಗೆ ಹೋದರೆ ನಿನಗೆ ಗೊತ್ತಾಗತದೆ, ಉತ್ತರ ದೇಶಕ್ಕೆ ಹೊರಟಿದ್ದರಿಂದ ಏನಾಯಿತು ಅಂತ.’
‘ಏನಾದರೂ ಕೆಟ್ಟದ್ದಾಯಿತಾ ಅಪ್ಪಾ? ಯಾವುದಾದರೂ ಮಗು ತೀರಿ ಹೋಯಿತಾ?’
‘ತ್ರಾನ್ಸಿತೋ ಬಹಾಳ ಒಳ್ಳೆಯವಳು ಅನ್ನುತಿದ್ದೆಯಲ್ಲಾ. ಅವಳು ಕತ್ತೆಯವನ ಜೊತೆ ಓಡಿ ಹೋದಳು. ನಿನ್ನ ಮಕ್ಕಳು ನಮ್ಮ ಮನೆ ಹಿತ್ತಲಲ್ಲಿ ಮಲಗಿದಾರೆ. ನೀನು ರಾತ್ರಿ ಕಳೆಯುವುದಕ್ಕೆ ಎಲ್ಲಾದರೂ ಜಾಗ ನೋಡಿಕೋ, ನನಗೆ ಆದ ಖರ್ಚಿಗೆ ಹಣ ಹೊಂದಿಸುವುದಕ್ಕೆ ನಿನ್ನ ಮನೆ ಮಾರಿಬಿಟ್ಟೆ, ಪತ್ರದ ಖರ್ಚು, ಕಛೇರಿ ಖರ್ಚು ಅಂತ ನೀನೇ ಮೂವತ್ತು ಪೆಸೋ ಕೊಡಬೇಕು ನನಗೆ.’
‘ಸರಿ ಅಪ್ಪಾ, ನಿನ್ನ ಋಣ ಉಳಿಸಿಕೊಳ್ಳಲ್ಲ. ನಾಳೆ ಬೆಳಗ್ಗೆ ಎದ್ದು ಕೆಲಸ ಹುಡುಕಿಕೊಳ್ಳತೇನೆ. ನಿನಗೆ ಕೊಡಬೇಕಾದ್ದೆಲ್ಲ ಕೊಡತೇನೆ. ಕತ್ತೆಯವನು ನನ್ನ ಹೆಂಡತಿಯನ್ನು ಕರಕೊಂಡು ಯಾವ ಕಡೆ ಹೋದ ಅಂದೆ?’
‘ಅತ್ತ ಕಡೆ. ನಾನು ಅಷ್ಟು ಗಮನ ಕೊಟ್ಟು ನೋಡಲಿಲ್ಲ.’
‘ಸರಿ. ಈಗ ಬರತೇನೆ. ಹೋಗಿ ಅವಳನ್ನ ಕರೆದುಕೊಂಡು ಬರತೇನೆ.’
‘ಮತ್ತೆ ಯಾವ ಕಡೆ ಹೊರಟೆ ನೀನು?’
‘ಅತ್ತಕಡೆಗೆ, ನೀನೇ ಹೇಳಿದೆಯಲ್ಲ, ಆ ದಿಕ್ಕಿಗೆ.’
*****
ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : Paso del Norte North Pass