ಯುಗ ಯುಗಗಳು ಕಳೆದರೂ
ನಾವು ಮಾಡಿದ್ದೇನು?
ನಾವು ಸಾಧಿಸಿದ್ದೇನು?
ಹುಟ್ಟು ಹಾಕಿದ್ದೇವೆ
ಎಲ್ಲೆಂದರಲ್ಲಿ ಭಯೋತ್ಪಾದನೆಯ
ಅಂಥ್ರಾಕ್ಸ್ ಮೃತ್ಯುಮಾರಿ
ಜೈವಿಕ ಬಾಂಬಿನ ಅಟ್ಟಹಾಸದಲಿ
ಶಸ್ತ್ರಾಸ್ತ್ರಗಳ ಪೌರುಷವೆಲ್ಲಿ?
ಅಂಥ್ರಾಕ್ಸ್ ಭೀತಿ ಪಸರಿಸಿದೆ ಸೋಂಕಿನಂತೆ
ಚಾಚುತಿದೆ ಕಾಲನ ಕೆನ್ನಾಲಿಗೆ
ಉಗ್ರರ ಅಟ್ಟಹಾಸ ನಿದ್ದೆಗೆಡಿಸಿ
ಬೆಚ್ಚಿ ಬೀಳಿಸುತಿದೆ
ಮಿನುಗುವ ಮುಂಚೆ ಕಮರಿಗೆ
ಹಾಡುವ ಮುನ್ನ ದನಿ ಬತ್ತಿದೆ
ಕವಿತೆ ಬರೆಯುವ ಕೈ ನಿಂತಿದೆ
ಧರ್‍ಮದ ಹೆಸರಿನಲಿ
ನಡೆಸಿದವನೊಬ್ಬ ದುಷ್ಕೃತ್ಯವ
ಇದರ ಸೇಡನು ತೀರಿಸುತಿಹನು
ಸಾಮ್ರಾಜ್ಯ ಶಾಹಿಯೊಬ್ಬ
ಇವರೀರ್‍ವರ
ಯುದ್ಧದ ಮಾರಣ ಹೋಮದಲಿ
ಜಗತ್ತು ಅನುಭವಿಸುತಿದೆ ನರಕಯಾತನೆ
ಬಟ್ಟ ಬಯಲಲಿ ತುತ್ತಿಗಾಗಿ
ಆಸೆಗಣ್ಣುಗಳು ನಿಂತಿವೆ ಕಾಯುತ್ತಾ
ಕನಲಿದ ಮುಗ್ಧ ಮಕ್ಕಳು
ರೋಧಿಸುವ ಹೆಂಗೆಳೆಯರು
ಹಣ್ಣು ಕಣ್ಣುಗಳ ಕಂಡ ಕಲ್ಲೆದೆಯು ಕರಗುತಿದೆ
ಅಲ್ಲಿನ ಜನರ ಪ್ರಾಣ ಸಂಕಟಕೆ
ಸ್ಪಂದಿಸುವವರ್‍ಯಾರು?
ಇದರ ನಡುವೆ ಕೋಮುವಾದ
ಅವರು-ಇವರನು ಅಲ್ಲಲ್ಲ!
ಅವರವರೇ ಕಾದಾಡಲು
ಹಚ್ಚಿಹರು ಕಿಚ್ಚನು
ಪ್ರಾಣ ತೆತ್ತದ್ದು ಗಿಡ ಮರ ಬಳ್ಳಿ
ಧಮನ ಮಾಡುವನೆಂದು ಹೇಳುವರು
ಪುನಃ ಹುಟ್ಟುಹಾಕುವರು
ಧರ್ಮದ ಸೋಗಿನಲಿ ಸೇಡು
ಇದರ ಹಿಂದೆ ಏನು ಅಡಗಿಹುದೋ
ಅಮಾಯಕರಿಗೇನು ತಿಳಿದೀತು
ಆದರೆ!
ನಾವು ಆಗೇವಿ
ಬೆತ್ತಲೆ ಮರದ್ಹಾಂಗ
*****