ಮೂಡಣದ ಬಾಗಿಲಲಿ ತೆರೆಗಳ ಸರಿಸಿ
ಜೀವಿಗಳ ಬೆಳಗುತಿಹನು ಬಿಂಕದಲಿ
ತಾರೆಗಳು ಮಿನುಗುತಿವೆ ರಾತ್ರಿ ಚೆಲುವಿಯ ಕಂಗಳಲಿ
ರಮಿಸುತಿಹವು ನೀರವತೆ ಬೆಳ್ದಿಂಗಳ ತಂಪಿನಲಿ
ಜಗವೆಷ್ಟೊಂದು ಸುಂದರ ಈ ಸೋಲಾರಿನಲಿ
ಹಣ್ಣೆಲೆ ಉದುರಿ ಚಿಗುರೆಲೆ ಮೂಡಿರಲು
ಧರೆ ಮೈದುಂಬಿ ಹೂ ಮುಡಿದಿರಲು
ಇರುಳಿನಲಿ ಶೃಂಗಾರದಾ ಗಾಳಿ ಬೀಸುತಿರಲು
ಎಲ್ಲೆಲ್ಲೂ ನೋಡಿದರಲ್ಲಿ
ತುಂಬಿ ಹರಿಯುತಿಹುದಾನಂದವೆಲ್ಲೆಲ್ಲೂ
ಎಷ್ಟೊಂದು ಅನನ್ಯ ಸೃಷ್ಟಿಯ ಜಾಣ್ಮೆ
ಅಕ್ಕರೆಯ ಸಕ್ಕರೆಯನಿತೋ
ಈ ಬದುಕಿನ ರಂಗಿನಾಟದಲಿ
ಕರಗಿ ಹೋದವರೆಷ್ಟೋ ಕಾಲನ ಕೆನ್ನಾಲಿಗೆಯಲಿ
ಮಾನವ ಜನ್ಮದ ಗೆಲುವೆನಿತೋ ಈ ಸೃಷ್ಟಿಯಲಿ
ಮನದ ಕಣ್ತೆರೆದು ಭವದ ನಿಜವರಿತಾಗ
ಒಂದರಲಿ ಜನಿಸಿ ಲೀನವಾಗುವುದಿನ್ನೊಂದರಲಿ
ನಡುವೆ ಎಷ್ಟೊಂದು ಭಾವನೆಗಳ ಹಂದರ
ಈ ಸೃಷ್ಟಿಯ ಲೀಲೆಯೋ ಬಲು ಸುಂದರ
*****