‘ಇವಳ’ ತೆಕ್ಕೆಯಲ್ಲಿ
‘ಅವಳ’ ಕಲ್ಪಿಸಿ ಕೊಳ್ಳುತ್ತ
‘ಅವಳೆ’ ಎಂದು ಭ್ರಮಿಸಿ
ಸ್ಪಂದಿಸಿದಾಗ
‘ಇವಳಿಗೆ’ ‘ನನ್ನ ಮೇಲೆ ಎಷ್ಟೊಂದು ಮೋಹ’
ಅನ್ನಿಸಿ
ಸುಖಿಸಿದರೆ
ನನಗೆ ಪಾಪ! ಅನ್ನಿಸುತ್ತದೆ
ಸಮಾಧಾನ ತರುತ್ತದೆ!
ನನ್ನ ಒಳತೋಟಿ ಬಹಿರಂಗವಾಗಿಲ್ಲವಲ್ಲ ಅಂತ
‘ಇವಳಿಗೂ’
ಹಾಗೇ ಅನ್ನಿಸಿರಲಿಕ್ಕೂ ಸಾಕು
‘ಪಾತಕ’ ಅಂದರೆ
ಏನು ಮಾಡುವುದು?
ದೌರ್ಬಲ್ಯ,
ಸಜ್ಜನಿಕೆ ತೆರೆ ಹರಿದು ಕೊಂಡು
ಪುಸಕ್ಕನೆ ನುಸುಳಿ
ಎರ್ರಾ ಬಿರ್ರಿ ಕುಣಿಯ ತೊಡಗುತ್ತದೆ.
ನಿರುಪಾಯನಾಗಿದ್ದೇನೆ
‘ನೋಡ್ತಾ, ನೋಡ್ತಾ ಮನೆ ಹೆಂಡತಿ ಕುರುಡಿ’ ಅನ್ನೋ ಹಾಗಾಗಿದೆ.
ನನಗನ್ನಿಸ್ತಿದೆ
ಉಪಾಯವಾಗಿ
ಸ್ವಲ್ಪ ದಿನ ದೂರ ಉಳಿದರೆ!
ಅಡ್ಡಾಡಿ ಬಂದರೆ!
ಬೆಸುಗೆ ಬಲವಾಗ ಬಹುದೇನೋ?
ಉಹೂಂ! ಹೇಳೋಕಾಗಲ್ಲ
ಸುಳಿ, ಸೆಳೆವು ಮಧ್ಯೆ
ರಿಪೇರಿ ಘಟ್ಟ ದಾಟಲೂ ಬಹುದು.
ಆಘಾತಕ್ಕೀಡಾದರೂ ಆಶ್ಚರ್ಯವೇನಿಲ್ಲ.
ಪೇಚಿಗೆ ಸಿಕ್ಕಿಸಿ ಬಿಟ್ಟಿದೆ
ದಯವಿಟ್ಟು ಹೇಳಿ
ನಿಮ್ಮಲ್ಲಿ ಯಾರಿಗಾದರೂ
ಇಂತಹ ತೊಡಕು ಎದುರಾಗಿರ ಬಹುದು
ಏನು ಮಾಡಿದಿರಿ!
*****