ಪ್ರಶ್ನೆಯು ಸುಲಭವಾದುದು ; ಕಷ್ಟವೆಂಬುದು ….. ಉತ್ತರ ಮಾತ್ರ.
ಆದರೆ, ವಿದ್ಯಾರ್ಥಿಗಳ ಮೇಲೆ ಕರುಣೆಯಿಲ್ಲದೆ, ಕೇಶವ ಮಾಸ್ಟ್ರು ಅದನ್ನು ವಿದ್ಯಾರ್ಥಿಗಳ ಮುಂದೆ ಇಟ್ಟರು!
ಸಹಶಿಕ್ಷಣವು ಶಾಲೆಯಲ್ಲಿ ಆರಂಭವಾದಂದಿನಿಂದ ಪುರುಷರ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಮೇಲೆಯೇ ಪ್ರಶ್ನೆಗಳನ್ನು ಕೇಳದೆ, ಹುಡುಗಿಯರಿಗೂ ಪ್ರಬಂಧರಚನೆ ಇತ್ಯಾದಿ ಪಾರಗಳಲ್ಲಿ ಆಸಕ್ತಿ ಹೆಚ್ಚಲೆಂದು, ಕೇಶವ ಮಾಸ್ಟ್ರು “ಹುಡುಗಿಯರು ತಲೆ ಬಾಚುವುದೇಕೆ?” “ದಾಳಿತೊವೈಗೆ ಎಷ್ಟು ಬಗೆಯ ಒಗ್ಗರಣೆಗಳು ಆವಶ್ಯಕ? ಮತ್ತು ಅದರ ಸಾಧಕ ಬಾಧಕಗಳು”-“ಪತ್ನಿಯು ಪತಿಯ ಉತ್ತಮಾರ್ಧವೆಂಬುದನ್ನು ರುಜು ಪಡಿಸಿರಿ -ಇಂತಹ ಪ್ರಶ್ನೆಗಳನ್ನು ಕೊಟ್ಟು, ಆ ಸಂಬಂಧವಾಗಿ ಪ್ರಬಂಧ ಬರೆವಂತೆ ಹೇಳುತ್ತಿದ್ದರು. ಇಂತಹ ಪ್ರಶ್ನೆಗಳಿಗೆ ಉತ್ತರ ಬರೆವುದು ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಗಳಿಗೇ ಹೆಚ್ಚು ಕಷ್ಟತಮವಾಗುತಿತ್ತೆಂಬುದೂ ಅಹುದು. ಆದರೆ, ವಿದ್ಯಾರ್ಥಿನಿ ವಿಭಾಗವು
ಇಂತಹ ಪ್ರಶ್ನೆಗಳನ್ನು ಮೆಚ್ಚುತಿತ್ತು.
ಒಂದು ಸೋಮವಾರ ದಿನ ಬೆಳಗ್ಗೆ ಶಾಲೆಗೆ ಬಂದವರೇ ಕೇಶವ ಮಾಸ್ಟರು, ವಿದ್ಯಾರ್ಥಿಗಳಿಗೆ, ಪ್ರಬಂಧರಚನೆಗೆ ಕೊಟ್ಟ ವಿಷಯವೇ ಇದು- “ಹೆಂಗುಸರು ಬಡಗಿ ಕೆಲಸವನು ಕಲಿಯಬೇಕೆ?”
ಆ ತರಗತಿಯ ಮೂವತ್ತು ವಿದ್ಯಾರ್ಥಿಗಳೂ ಹದಿನೈದು ವಿದ್ಯಾರ್ಥಿನಿಗಳೂ ಲೇಖನಿಯನ್ನು ಬಾಯಿಗಿಟ್ಟು ಚೀಪುತ್ತ, ತಮ್ಮೊಳಗೇ ಪ್ರಶ್ನಿಸಿಕೊಂಡರು:
ಬೇಕೇ ???????
ಆದರೆ, ಎಷ್ಟು ಹೊತ್ತು ಬೇಕೆ ಎಂದು ಪ್ರಶ್ನಿಸಿ ಕೊಳ್ಳಬಹುದು? ಮುಕ್ಕಾಲು ತಾಸಿನೊಳಗೆ ಪ್ರಬಂಧವು ಮುಗಿಯಬೇಕೆಂದು ಕೇಶವ ಮಾಸ್ಟರು ಹೇಳಿದ್ದರು.
ಎಲ್ಲರಿಗೂ ಇದೊಂದು ದೊಡ್ಡ ಸಮಸ್ಯೆಯಾಯಿತು. ಹದಿನೇಳನೇ ವಯಸ್ಸಿಗೆ ಮುಟ್ಟಿದ ಕೆಲವು ‘ಬಾಲಕ’ರು ತಮ್ಮಲ್ಲಿ ಉದಯಿಸಿದ ಕೋಮಲಭಾವಗಳ ದ್ಯೋತಕವಾಗಿ ಕೋಮಲ ಕರಗಳುಳ್ಳವರಿಗೇಕೆ ಆ ದೊರಗು ಕೆಲಸ?” ಎಂದು ಪ್ರಶ್ನಿಸಿಕೊಂಡರು. ವರ್‍ಷೆ ವರ್‍ಷೆ ವಿದ್ಯಾ ವ್ಯಾಸಂಗ ಮಾಡುತ್ತಲೇ ಹೋಗಿ, ಯಾವ ಕಾಲಕ್ಕೂ ಮನೆಯ ಅಡಿಗೆ ಕೆಲಸವನ್ನು ಕೂಡ ಮಾಡಲಾರೆವೆಂದು ಇಷ್ಟರೊಳಗೇ ನಿರ್ಧರಿಸಿದ ‘ಬಾಲಿಕೆ’ ಯರು – ಬಡಗಿ ಕೆಲಸ! ನಮಗೆ!!” ಎಂದು ಮೈದೆಗೆದರು. ಆಗಲೆ ಪುರುಷೋತ್ತಮನು ಅವರ ಸಹಾಯಕ್ಕೆ ಬಂದನು.
ಹೇಗೆ?
ಪುರುಷೋತ್ತಮನಿಗೆ, ಆ ದೊಡ್ಡ ಪ್ರಶ್ನೆಗೆ ತಕ್ಕುದಾದ ಒಂದು ಉತ್ತರ ಆಗಲೇ ಹೊಳೆದಿತ್ತು, ಅದನ್ನು ಒಂದು ಚಿಕ್ಕ ಕಾಗದದ ತುಂಡಿನಲ್ಲಿ ಬರೆದು, ತನ್ನ ಬಳಿಯ ಹುಡುಗನಿಗೆ ನಕಲೆತ್ತುವಂತೆ ಹೇಳಿ, ಆತನು ಮತ್ತೊಬ್ಬನಿಗೆ ಇದೇ ರೀತಿಯ ಸಹಾಯಮಾಡಬೇಕಾಗಿ ತಿಳಿಸಿದನು. ಆ ಚಿಕ್ಕ ಕಾಗದದ ತುಂಡಿನಲ್ಲಿ ಬರೆದ ಅದೊಂದು ಪಂಙ್ತಿ ಹದಿನೈದು ನಿಮಿಷಗಳೊಳಗೆ, ಆ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ತಲಪಿತು!
“ಉತ್ತರ ಬರೆದಾಯಿತೇ?” ಎಂದು ಕೇಶವ ಮಾಸ್ಟರು ಕೇಳಿದರು.
“ಅಹುದು!” ಎನ್ನುತ್ತ, ಆ ನಲ್ಪತ್ತೈದು ವಿದ್ಯಾರ್ಥಿಗಳಲ್ಲಿ ನಲ್ವತ್ತನಾಲ್ಕು ಮಂದಿ ಮುಂದೆ ಹೋಗಿ, ತಾವು ಬರೆದಿದ್ದ ಉತ್ತರದ ಚೀಟುಗಳನ್ನು ಮಾಸ್ಟರಿಗೆ ಕೊಟ್ಟರು. ಕೊಡದೆ ಸುಮ್ಮನೆ ಕುಳಿತ ಆಸಾಮಿ ಪುರುಷೋತ್ತಮನೊಬ್ಬ!
“ಏನು ಪುರುಷೋತ್ತಮ? ಈ ಕ್ಲಾಸಿನಲ್ಲಿ ನೀನೊಬ್ಬನೇ ದಡ್ಡನಾಗಬೇಕೆ? ಪ್ರತಿಯೊಂದು ಬಾರಿಯೂ ನೀನು ಉತ್ತರವನ್ನೆ ಕೊಡುವವನಲ್ಲ!” ಎಂದರು ಕೇಶವ ಮಾಸ್ಟರು.
ವಿದ್ಯಾರ್ಥಿಗಳಿಗೆ ಈ ‘ದಡ್ಡ’ ನಿಂದ ತಾವು ಈಗ ನಕಲೆತ್ತಿದೆವೆಂದು ಪಶ್ಚಾತ್ತಾಪವಾಯಿತು. ಯಾವ ಉತ್ತರವೂ ಸೂಚನೆಯಾಗದೆ ಮೌಡ್ಯದಿಂದಿದ್ದ ಅದೊಂದು ಕ್ಷಣದಲ್ಲಿ ಅವರು, ಅವನು ಕೊಟ್ಟ ಉತ್ತರವನ್ನು ಆತುರದಿಂದ ಪಡೆದಿದ್ದರು!
ಪುರುಷೋತ್ತಮನು ದಡ್ಡನೆಂಬುದು ನಿಜ. ಆ ಶಾಲೆಯ ಹಳೆ ವಿದ್ಯಾರ್ಥಿಗಳಾಗಲೀ ಹೊಸಬರಾಗಲೀ – ಪುರುಷೋತ್ತಮನು ಯಾವ ವರ್ಷವೂ ತೇರ್ಗಡೆ ಹೊಂದಿದುದನ್ನು ನೋಡಿರಲಿಲ್ಲ. ಆದರೂ, ಅವನು ಏಳನೆ ತರಗತಿಯಲ್ಲಿದ್ದನೆಂಬುದು ಆಶ್ಚರ್ಯಕರವಾದ ಸತ್ಯ! ಪುರುಷೋತ್ತಮನಿಗೆ ಏಳನೆ ತರಗತಿಯಲ್ಲಿ ಇವರೇ ಕೇಶವ ಮಾಸ್ಟರು ಕೇಳಿದ ಕೆಲವು ಪ್ರಶ್ನೆಗಳಿಗೆ ಆತನು ಕೊಟ್ಟ ಉತ್ತರಗಳು…..
ಓದಿರಿ ಕೆಲವನ್ನು –
ಪ್ರಶ್ನೆ (೧):-ಗ್ರಾಮಗಳಲ್ಲಿ ಮದ್ಯಪಾನ ನಿಷೇಧ ಪ್ರಚಾರವನ್ನು ನಾವು ಹೇಗೆ ಸಾಧಿಸ ಬೇಕು?
ಉತ್ತರ:- ಗ್ರಾಮಗಳಿಗೆ ಹೋದಾಗ ನಾವು ಕುಡಿಯಬಾರದು.
ಪ್ರಶ್ನೆ (೨):-ಹಿಂದೂ ದೇಶದಲ್ಲಿ ಶಿಶುಮರಣಗಳು ಹೆಚ್ಚಲು ಕಾರಣವೇನು?
ಉತ್ತರ:-ಶಿಶುಗಳು ಹೆಚ್ಚಾಗಿ ಹುಟ್ಟುವುದರಿಂದ.
ಪ್ರಶ್ನೆ (೩):-ಮೂವರು ಹೆಂಗುಸರು ಒಂದೂವರೆ ದಿನದಲ್ಲಿ ಐದೆಕ್ರೆ ಸ್ಥಳದಲ್ಲಿ ನೇಜಿ ಬಿತ್ತುವಾಗ ಇಬ್ಬರು ಗಂಡಸರು ಒಂದೇ ದಿನದಲ್ಲಿ ಬಿತ್ತುವರು. ಎಂಟಕ್ರೆ ಸ್ಥಳಕ್ಕೆ ಇಬ್ಬರಿಗೂ ತಗಲುವ ಸಮಯವೆಷ್ಟು?
ಉತ್ತರ:- ಅವರ ಪ್ರಾಯವೆಷ್ಟು? ಕೊಡುವ ಕೂಲಿ ಎಷ್ಟು?
ಇಂತಹ ದಡ್ಡನನ್ನು ಇಂದು ಕೇಶವ ಮಾಸ್ಟರು “ಹೆಂಗುಸರು ಬಡಗಿ ಕೆಲಸವನ್ನು ಕಲಿಯಬೇಕೆ” ಎಂಬ ಪ್ರಶ್ನೆಯಿಂದ ಪೀಡಿಸಿದ್ದರು.
“ಏನು ಪುರುಷೋತ್ತಮಾ, ಉತ್ತರ ಕೊಡುವುದಿಲ್ಲವೇ?” ಎಂದು ಪುನಃ ಕೇಳಿದರು ಕೇಶವ ಮಾಸ್ಟರು.
ಪುರುಷೋತ್ತಮನು ಮೆಲ್ಲನೆ ಒಂದು ಕಾಗದವನ್ನು ತೆಗೆದು, ಒಂದು ಶಬ್ದವನ್ನು ಗೀಚಿ ಕೊಟ್ಟನು. ಮಾಸ್ಟರು ಓದಿದರು.
ನಲ್ವತ್ತೈದು ವಿದ್ಯಾರ್ಥಿಗಳ ಉತ್ತರವೂ ಏಕರೀತಿಯಲ್ಲಿ ಹೀಗಿತ್ತು:- “ಸಾಧು ಗಂಡನಿದ್ದರೆ, ಹೆಂಡತಿಯು ಬಡಗಿ ಕೆಲಸವನ್ನು ಕಲಿಯಬಾರದು.”
ಪುರುಷೋತ್ತಮನ ಉತ್ತರ ಹೀಗಿತ್ತು:- “ಗಂಡನಿಗೆ ಅದು ಮೊದಲು ತಿಳಿದಿರಬೇಕು!”
ಮನೆಗೆ ಹೋಗುವಾಗ ಕೇಶವ ಮಾಸ್ಟರು ಪುರುಷೋತ್ತಮನನ್ನು ಮೆಲ್ಲಗೆ ಕರೆದು ಕೇಳಿದರು:-“ಪುರುಷೋತ್ತಮ, ನೀನು ನಮ್ಮ ನೆರೆಕರೆಯವನು; ನಿನಗೇನೋ ತಿಳಿದಿದೆ. ನಲ್ವತ್ತೈದು ಹುಡುಗರಿಗೂ ಆ ಉತ್ತರ ಬರೆದು ಕೊಟ್ಟವರು ಯಾರು?”
“ನಾನು”
“ಹುಂ! ನಿನ್ನ ಉತ್ತರ ಮಾತ್ರ ಬೇರೆಯೇ ಇದೆ, ಅದನ್ನು ಯಾರು ಹೇಳಿಕೊಟ್ಟರು?”
“ನೀವು”
“ನಾನು?!?”
“ಆಹುದು; ನಿನ್ನೆ ರಾತ್ರೆ ನಿಮ್ಮೊಡನೆ ಜಗಳವಾಡುತ್ತ ನಿಮ್ಮ ಹೆಂಡತಿ, ಜಗಲಿ ಮೇಲೆ ಬಡಗಿಯವನು ಬಿಟ್ಟು ಹೋದ ಉಳಿಯನ್ನೆತ್ತಿದುದನ್ನು ನಾನು ನೋಡಿದೆ. ಅದರಿಂದ ಹುಡುಗರಿಗೆಲ್ಲಾ ಉತ್ತರ ಬರೆದುಕೊಟ್ಟೆ. ಆ ಮೇಲೆ ಈ ದಿನ ನಿಮ್ಮ ಮುಖವು ಕಂದಿದುದನ್ನು ನೋಡಿದೆ! ಇವೆರಡರಿಂದ ಒಂದೇ ಬಗೆಯ ಉತ್ತರವೂ ಎರಡು ರೂಪಗಳಲ್ಲಿ ಹೊಳೆಯಿತು!”
ಪುರುಷೋತ್ತಮನು ಆ ವರ್ಷ ಆ ತರಗತಿಯಿಂದ ತೇರ್ಗಡೆ ಹೊಂದಿದನೆಂದೂ, ಕೇಶವ ಮಾಸ್ಟರು ಆತನಲ್ಲಿದ್ದ ಗುಪ್ತ ವಿದ್ವತ್ತನ್ನು ವರ್ಣಿಸಿದುದರ ಫಲವೇ ಆದೆಂದೂ ಹೇಳುವರು.
*****