ದೇವರ ದೇವನು ಮಹಾವಿಷ್ಣುವು
ದಶಾವತಾರವ ತಾಳಿದನು
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಲೋಕಕಲ್ಯಾಣವ ಮಾಡಿದನು-
ಹಿಂದಿನಿಂದಲೂ ಕೇಳುತಲಿರುವೆವು
ದಶಾವತಾರದ ಕಥೆಯನ್ನು
ಇಂದು ಬೇರೆಯೇ ರೀತಿಯೊಳರಿಯುವ
ಕಥೆಯಲಿ ಅಡಗಿದ ತತ್ವವನು!
ಮೊದಲಿಗೆ ಪ್ರಳಯವು ಘಟಿಸಿದ ಸಮಯದಿ
‘ಮತ್ಸ್ಯಾ’ವತಾರವ ತಾಳಿದ್ದು
ಸಮುದ್ರ ಮಥನವು ನಡೆಯುವ ವೇಳೆ
‘ಕೂರ್ಮಾ’ವತಾರವ ತಳೆದದ್ದು
ರಕ್ಕಸನಿಂದಲಿ ಭೂಮಿಯ ರಕ್ಷಿಸೆ
‘ವರಾಹ’ ರೂಪವ ಹೊಂದಿದ್ದು
ವಿಷ್ಣುಭಕ್ತ ಪ್ರಹ್ಲಾದನ ಉಳಿಸಲು
‘ನರಸಿಂಹ’ನು ತಾನಾಗಿದ್ದು
ಬಲಿಯನು ಪಾತಾಳದ ಕಡೆ ತುಳಿಯಲು
’ವಾಮನ’ ರೂಪವ ಧರಿಸಿದ್ದು
ಕಾರ್ತವೀರ್ಯನ ಮದವನು ಅಡಗಿಸಿ
‘ಪರಶುರಾಮ’ ತಾನೆನಿಸಿದ್ದು
ಪಿತೃವಾಕ್ಯ ಪರಿಪಾಲನೆ ಮಾಡಲು
‘ರಾಮ’ನಾಗಿ ಅವತರಿಸಿದ್ದು
ಕುರುಪಾಂಡವ ಸಂಗ್ರಾಮವ ನಡೆಸಿದ
‘ಕೃಷ್ಣ’ಪರಮಾತ್ಮನಾಗಿದ್ದು
ಆಸೆಯು ದುಃಖಕೆ ಮೂಲವು ಎನ್ನುತ
ತಿಳಿಸಲು ’ಬುದ್ಧ’ನು ಜನಿಸಿದ್ದು
ಅಧರ್ಮ ಅಳಿಸುತ ಧರ್ಮವ ಉಳಿಸಲು
‘ಕಲ್ಕಿ’ಯಾಗಿ ಅವತರಿಸುವುದು
ಹೀಗೆ ಹತ್ತು ಅವತಾರವು ಇರುವುವು
ಪುರಾಣದಲ್ಲಿನ ಕಥೆಗಳಲಿ
ಭಕ್ತಿಯಿಂದ ಮನೆಮಾಡಿಕೊಂಡಿಹವು
ನಂಬಿಕೊಂಡವರ ಎದೆಯಲ್ಲಿ!
ಮತ್ಸ್ಯ ನೀರಿನಲಿ ಮಾತ್ರ ಬದುಕುವುದು
ಮೊದಲ ಜೀವಿ ಈ ಸೃಷ್ಟಿಯಲಿ
ಕೂರ್ಮ ನೀರಿನಲಿ ಮತ್ತು ನೆಲದಲ್ಲಿ
ಬದುಕುವುದೆರಡೂ ಕಡೆಯಲ್ಲಿ
ವರಾಹ ನೆಲದಲಿ ಮಾತ್ರ ಬದುಕುವುದು
ಉಳಿಯಲಾರದದು ನೀರಿನಲಿ
ಅರ್ಧ ಪ್ರಾಣಿ ಇನ್ನರ್ಧ ಮಾನವನ
ರೂಪ ನರಸಿಂಹ ಕಂಭದಲಿ
ವಾಮನನೆಂದರೆ ಕುಬ್ಜ ದೇಹದವ
ಪೂರ್ಣ ಬೆಳೆದಿರದ ಮಾನವನು
ಪರಶುರಾಮನವ ಪೂರ್ಣನಾದರೂ
ರಾಗದ್ವೇಷದಲಿ ಉಳಿದವನು
ಮರ್ಯಾದಾಪುರುಷೋತ್ತಮನೆನಿಸಿದ
ರಾಮ ಪರಿಪೂರ್ಣನಾದವನು
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಕೃಷ್ಣಪರಮಾತ್ಮನೆನಿಸಿದನು
ಮಾನವನಾಸೆಗೆ ದುರಾಸೆ ಮನಸಿಗೆ
ಬುದ್ಧನು ಅಂತ್ಯವ ಹಾಡಿದನು
ಕುದುರೆಯೇರಿ ಖಡ್ಗವ ಝಳಪಿಸುತಲಿ
ಬರುವನೆನ್ನುವರು ಕಲ್ಕಿಯನು!
ಹತ್ತು ಅವತಾರ ಕ್ರಮದಲಿ ನೋಡಲು ಜೀವಿಕಾಸವು ಕಾಣುವುದು
ಜೀವಿ ನೀರಿನಲಿ ಹುಟ್ಟಿದ ನಂತರ ಬೆಳೆದು ಬಂದುದನು ತಿಳಿಸುವುದು
ಮೊದಲಿಗೆ ಜೀವಿಯು ನೀರಲಿ ಹುಟ್ಟಿತು
ನಂತರ ನೆಲದೆಡೆ ಬಂದಿತ್ತು
ಪ್ರಾಣಿ ಹಂತದಿಂದೇರುತ ಬಂದಿತು
ಮಾನವ ರೂಪವ ಹೊಂದಿತ್ತು!
*****