ಅಸ್ತಮಿಸಿದನು ಕರ್ಣ ದಿನಮಣಿ
ಸೂರ್ಯಾಸ್ತಮಾನವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಯುದ್ಧರಂಗದಿಂದ ಆವರೆಗೆ ಕೇಳಿಬರುತ್ತಿದ್ದ ಕದನ ಕರ್ಕಶ ಸದ್ದು ಅಡಗಿತು. ಭೀಷ್ಮರಿಗದು ಅಸಹನೀಯ ಮತ್ತು ವಿಪತ್ತಿನ ಸೂಚನೆಯಂತೆ ಭಾಸವಾಗತೊಡಗಿತು. ಏನು ವಿಪತ್ತು ಸಂಭವಿಸಿರಬಹುದು? ಶಲ್ಯ ಸಾರಥ್ಯದಲ್ಲಿ ಕರ್ಣ ಅರ್ಜುನನನ್ನು ಕೊಂದುಬಿಟ್ಟನೆ? ಅಥವಾ ದುಶ್ಯಾಸನವಧೆಯಿಂದ ಕಂಗೆಟ್ಟು ಹೋದ ದುರ್ಯೋಧನನೆಲ್ಲಾದರೂ ಭೀಮಸೇನನ ಕೈಗೆ ಸಿಕ್ಕಿಬಿದ್ದು ವಧಿಸಲ್ಪಟ್ಟನೆ? ಯುದ್ಧವೇ ನಿಂತು ಹೋಯಿತೆ? ತಿಳಿಯುವುದು ಹೇಗೆ? ದುರ್ಯೋಧನ ಸತ್ತು ಕರ್ಣ ಬದುಕುಳಿದರೆ ಹಸ್ತಿನಾವತಿಯ ಸಿಂಹಾಸನವನ್ನು ಅವನು ಏರಬೇಕಾಗುತ್ತದೆ. ಯುಧಿಷ್ಠಿರನಿಗಿಂತ ಅವನು ಹೆಚ್ಚಿನ ಪರಾಕ್ರಮ. ಚಿತ್ತ ಚಾಂಚಲ್ಯಕ್ಕೆ ಒಳಗಾಗಿ ದ್ಯೂತವಾಡಿ ರಾಜ್ಯ ಕಳಕೊಳ್ಳುವವನಲ್ಲ. ಸಿಂಹಾಸನಕ್ಕೆ ಅತ್ಯುತ್ತಮ ಆಯ್ಕೆ. ಜೀವಮಾನವಿಡೀ ಸೂತಪುತ್ರನೆಂಬ ಅಪಮಾನಕ್ಕೊಳಗಾದ ಕರ್ಣ ಕುರುಸಾಮ್ರಾಜ್ಯದ ಚಕ್ರವರ್ತಿಯಾಗಲಿ. ಜೀವನದಲ್ಲಿ ಅವನಿಗೂ ಸಂತೋಷದ ಕ್ಷಣಗಳು ಲಭಿಸಲಿ.
ಕತ್ತಲಾವರಿಸುತ್ತಿತ್ತು. ಪ್ರತೀಹಾರಿಯನ್ನು ಕೇಳಿದರೆ ಯುದ್ಧರಂಗದವಿಷಯ ತನಗೆ ತಿಳಿಯದೆಂದ. ಶಿಖಂಡಿಯಿಂದಾಗಿ ಹೀಗಾದ ಮೇಲೆ ಯುದ್ಧರಂಗದ ವರ್ತಮಾನವನ್ನು ದುರ್ಯೋಧನ ಇಲ್ಲವೇ ಕರ್ಣ ತಿಳಿಸುತ್ತಿದ್ದರು. ಇಂದು ಇಷ್ಟು ಹೊತ್ತಾದರೂ ಯಾರೂ ಕಾಣಿಸುತ್ತಿಲ್ಲವೇಕೆಂದು ಭೀಷ್ಮರು ಚಡಪಡಿಸತೊಡಗಿದರು. ಹೆಜ್ಜೆಯ ಸದ್ದಾಯಿತು. ಅತೀವ ಕುತೂಹಲದಿಂದ ಅವರು ದ್ವಾರದತ್ತ ನೋಟ ಹಾಯಿಸಿದರು. ಕರ್ಣ ಬಂದನೆ? ತೀರಾ ಸಮೀಪಿಸಿದಾಗ ತಿಳಿಯಿತು ಬಂದವನು ದುರ್ಯೋಧನನೆಂದು. ಅವನು ಮಧ್ಯಾಹ್ನ ಬಂದಿದ್ದ. ದುಶ್ಯಾಸನನ ಬೀಭತ್ಸಕಾರಿ ಮರಣದ ಸುದ್ದಿಯನ್ನು ತಂದಿದ್ದ. ಈಗ? ಬಂದವನೇ ತಲೆತಗ್ಗಿಸಿ ಆಸನದಲ್ಲಿ ಕೂತ. ಮಧ್ಯಾಹ್ನ ಅವನ ಮುಖದಲ್ಲಿ ಪ್ರೇತ ಕಳೆಯಿತ್ತು. ಕಣ್ಣಲ್ಲಿ ಒಂದು ತೊಟ್ಟು ನೀರಿರಲಿಲ್ಲ. ಈಗ ಧಾರಾಕಾರವಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಏನಾಗಿದೆ ಇವನಿಗೆ?
ದುರ್ಯೋಧನನ ಎಳವೆಯ ದಿನಗಳು ಅವರಿಗೆ ನೆನಪಾದವು. ಧೃತರಾಷ್ಟ್ರನ ಹನ್ನೊಂದು ಮಂದಿ ರಾಣಿಯರಿಗೆ ನೂರ ಒಂದು ಮಕ್ಕಳು. ಕುರು ವಂಶೀಯರು ಸಾಮ್ರಾಜ್ಯ ವಿಸ್ತರಿಸಿದರು. ಧೃತರಾಷ್ಟ್ರ ಸಂತಾನ ವಿಸ್ತರಿಸಲು ಕಾರಣನಾದ. ಹಿರಿಯವನೆಂದು ದುರ್ಯೋಧನನ ಮೇಲೆ ಅವರಿಗೆ ಹೆಚ್ಚು ಪ್ರೀತಿಯಿತ್ತು. ಅವನನ್ನು ಕುರು ಸಾಮ್ರಾಜ್ಯದ ಚಕ್ರವರ್ತಿಯಾಗಿ ರೂಪಿಸಬೇಕೆಂದು ಅವರು ಅಂದುಕೊಂಡಿದ್ದರು. ಎಷ್ಟು ಬಾರಿ ಅವರ ತೊಡೆಯಲ್ಲಿ ಇವನು ಉಚ್ಚೆ ಹೊಯ್ದಯಿದ್ದನೊ? ಮಹಾ ಹಟಮಾರಿ. ಇವನು ಹಟ ಮಾಡಿದಾಗ ಎರಡು ಬಿಗಿದರೂ ಇವನ ಕಣ್ಣಿನಿಂದ ನೀರು ಬಂದುದಿಲ್ಲ. ಕಾಡಾಡಿ ಪಾಂಡವರನ್ನು ಹಸ್ತಿನಾವತಿಗೆ ಕರೆತಂದ ಮೇಲೆ ಇವನ ಹಟ ಇನ್ನಷ್ಟು ಹೆಚ್ಚಾಯಿತು. ಭೀಮನೊಡನೆ ಇವನೇ ಕಾಲು ಕೆದರಿ ಜಗಳಕ್ಕೆ ನಿಂತುಬಿಡುತ್ತಿದ್ದ. ಪ್ರತಿಬಾರಿಯೂ ಸೋತು ಭೀಷ್ಮರಲ್ಲಿಗೆ ದೂರ ತರುತ್ತಿದ್ದ. ಅವರು ಭೀಮನನ್ನು ಹತ್ತಿರ ಕರೆದು ಇಬ್ಬರನ್ನೂ ತೊಡೆಗಳ ಮೇಲೆ ಕೂರಿಸಿ ಕುರು ಸಾಮ್ರಾಜ್ಯದ ಆಧಾರಸ್ತಂಭಗಳು ನೀವು. ಹೀಗೆ ಬಡಿದಾಡ ಬಾರದು. ಸಾಮ್ರಾಜ್ಯದ ಉಳಿವಿಗೆ ನಿಮ್ಮ ಬಲವನ್ನು ಬಳಸಿ ಎಂದು ಬುದ್ಧಿ ಹೇಳುತ್ತಿದ್ದರು. ಆದರೂ ಹೊಡೆದಾಟಗಳು ನಿಲ್ಲುತ್ತಿರಲಿಲ್ಲ. ಸೋತರೂ ದುರ್ಯೋಧನ ಕಣ್ಣೀರು ಹಾಕುತ್ತಿರಲಿಲ್ಲ. ಲಕ್ಷ್ಮಣಕುಮಾರ ಸತ್ತ. ಜಯದ್ರಥನನ್ನು ಅರ್ಜುನ ವಧಿಸಿದ. ದುಶ್ಯಾಸನ ಇಂದು ಮಧ್ಯಾಹ್ನ ಹೃದಯವಿದ್ರಾವಕವಾಗಿ ಇವನ ಕಣ್ಣೆದುರೇ ಕೊಲ್ಲಲ್ಪಟ್ಟ. ಯಾವ ಸಂದರ್ಭದಲ್ಲೂ ಇವನ ಕಣ್ಣು ಒದ್ದೆಯಾದದ್ದಿಲ್ಲ. ಇಷ್ಟು ದಿನ ಕಟ್ಟಿಟ್ಟದ್ದು ಈಗ ಕೋಡಿಯಾಗಿ ಹರಿದು ಹೋಗುತ್ತಿದೆ.
ಭೀಷ್ಮರು ದುರ್ಯೋಧನನನ್ನು ಸನ್ನೆಯಿಂದ ಹತ್ತಿರ ಬರ ಹೇಳಿದರು. ಬಾಗಿ ನಿಂತವನ ತಲೆಯನ್ನು ಸವರಿ ಧೈರ್ಯ ತುಂಬಿದರು. ನಿರ್ಭಾವ ಸ್ವರದಲ್ಲಿ ನಿಧಾನವಾಗಿ ಹೇಳಿದರು? ನಿನ್ನ ನೋವುಗಳೆಲ್ಲಾ ಕಣ್ಣೀರಾಗಿ ಹರಿದು ಹೋಗಲಿ. ಅತ್ತು ಹಗುರಾಗು ಮಗೂ. ನನ್ನ ಸುದೀರ್ಘ ಜೀವನದಲ್ಲಿ ಅದೆಷ್ಟೋ ಸಲ ಅತ್ತುಬಿಡಬೇಕೆಂದು ನನಗೆ ಅನ್ನಿಸಿದ್ದಿದೆ. ಆದರೆ ಮಗೂ, ಒಂದೇ ಒಂದು ಸಲ ಕಣ್ಣೀರು ಹಾಕಲು ನನ್ನಿಂದಾಗಲಿಲ್ಲ. ನೀನು ಅತ್ತರೆ ಸಂತೈಸಲು ಭಾನುಮತಿ ಇದ್ದಾಳೆ, ಧೃತರಾಷ್ಟ್ರಗಾಂಧಾರಿಯರಿದ್ದಾರೆ, ನಿನ್ನ ಅಜ್ಜ ಭೀಷ್ಮನಿದ್ದಾನೆ. ನಾನು ಅತ್ತರೆ ಅದು ಅರಣ್ಯರೋದನವಾಗುತ್ತದೆಂದು ಎಲ್ಲವನ್ನೂ ನುಂಗಿ ಕುಳಿತಿದ್ದೇನೆ”.
ದುರ್ಯೋಧನನ ಅಳು ನಿಂತು ಅವನು ಅಂತರ್ಮುಖಿಯಾದ. ಅಜ್ಜನ ಜೀವನ ಒಂದು ಮಹಾಯಾತ್ರೆ. ಉದ್ದಕ್ಕೂ ಅದೆಷ್ಟು ನೋವುಗಳೊ? ಅವರಿಗೆ ಹೆಣ್ಣಿನ ಸುಖ ಸಿಗಲಿಲ್ಲ. ಮಕ್ಕಳ ಭಾಗ್ಯ ದಕ್ಕಲಿಲ್ಲ. ಪಾಂಡವರದ್ದು ನ್ಯಾಯವೆಂದು ನಿಷ್ಠುರವಾಗಿ ವಾದಿಸಿದರೂ ಸಿಂಹಾಸನಕ್ಕೆ ನಿಷ್ಠರಾಗಿ ಕುರುಪಾಳಯದಲ್ಲಿ ಉಳಿದುಬಿಟ್ಟರು. ಹತ್ತು ದಿನ ಕೌರವ ಪಕ್ಷಕ್ಕೆ ದೊಡ್ಡ ನಷ್ಟ ಸಂಭವಿಸದಂತೆ ನೋಡಿಕೊಂಡರು. ಶಿಖಂಡಿಯಿಂದಾಗಿ ಇವರು ಈ ಸ್ಥತಿಗೆ ಮುಟ್ಟಿದ ಮೇಲೆ ಕೌರವ ಪಕ್ಷಕ್ಕೆ ಸೋಲಿನ ಮೇಲೆ ಸೋಲಾಗುತ್ತಿದೆ. ದೊಡ್ಡ ನಷ್ಟಗಳು ಸಂಭವಿಸುತ್ತಿವೆ. ಇವರಿಗೆ ಹೀಗಾಗದಿರುತ್ತಿದ್ದರೆ ಕುರುಸೇನೆಗೆ ವಿಜಯ ದಕ್ಕುತ್ತಿತ್ತು.
ನೆನಪುಗಳ ಭಾರದಿಂದ ದುರ್ಯೋಧನ ಉಮ್ಮಳಿಸಿದ. ತಾತಾ, ಕರ್ಣನೂ ಹೋಗಿ ಬಿಟ್ಟ. ಹೋಗಿಯೇ ಬಿಟ್ಟ. ಶಲ್ಯ ಮಾವ ತಾಳ್ಮೆ ಕಳೆದುಕೊಳ್ಳದಿರುತ್ತಿದ್ದರೆ ಕರ್ಣ ಬದುಕುಳಿಯುತ್ತಿದ್ದ. ನಮಗೆ ವಿಜಯ ತಂದುಕೊಡುತ್ತಿದ್ದ. ಶಲ್ಯನನ್ನು ನಂಬಿ ನಾವು ಮೋಸ ಹೋದೆವು. ಅವನನ್ನು ಸಾರಥಿಯನ್ನಾಗಿ ಮಾಡಿದ್ದೇ ತಪ್ಪು. ಅವನು ಎಂತಿದ್ದರೂ ಪಾಂಡವರ ಮಾವ. ಅವನನ್ನು ನಂಬಿದ್ದಕ್ಕೆ ಅವನು ಸರಿಯಾದ ಸಮಯದಲ್ಲಿ ಕೈಕೊಟ್ಟ”.
ಆಶ್ಚರ್ಯರಹಿತ ದನಿಯಲ್ಲಿ ಭೀಷ್ಮರೆಂದರು: “ಮಗೂ, ಯುದ್ಧರಂಗದ ಅಸಾಧ್ಯ ಗಲಭೆ ಒಮ್ಮೆಲೇ ನಿಂತು ಹೋದಾಗ ಏನೋ ಅನಾಹುತ ಸಂಭವಿಸಿದೆಯೆಂಬುದು ನನಗೆ ಖಚಿತವಾಯಿತು. ಇಂದು ಕರ್ಣ ಅಥವಾ ಅರ್ಜುನರಲ್ಲಿ ಒಬ್ಬನ ಅಂತ್ಯವಾಗುವ ನಿರೀಕ್ಷೆ ನನಗಿತ್ತು. ಹೇಳು ಮಗೂ, ಕರ್ಣನ ಅಂತ್ಯ ಹೇಗಾಯಿತು?”
ದುರ್ಯೋಧನ ನಿಡುಸುಯ್ದ: ಶಲ್ಯ ಸಾರಥ್ಯದಲ್ಲಿ ಕರ್ಣ ಅತ್ಯುತ್ಸಾಹದಿಂದ ಇಂದು ಯುದ್ಧ ಆರಂಭಿಸಿದ್ದನ್ನು ನೀವು ನೋಡಬೇಕಿತ್ತು. ಅರ್ಜುನನ ಗುರುಗಳು ದ್ರೋಣರು. ಕರ್ಣನಾದರೋ ಅರ್ಜುನನ ಗುರುವಿನ ಗುರುಗಳಿಂದ ಬಿಲ್ವಿದ್ಯೆ ಕಲಿತವನು. ಕರ್ಣನ ಶರ ಪ್ರಯೋಗಕ್ಕೆ ಅರ್ಜುನ ತತ್ತರಿಸಿ ಹೋದ. ಕೃಷ್ಣನ ಸಾರಥ್ಯವಲ್ಲದಿದ್ದರೆ ಆಗಲೇ ಅರ್ಜುನನ ಕತೆ ಮುಗಿದು ಹೋಗುತ್ತಿತ್ತು. ಕರ್ಣನ ವಿಜೃಂಭಣೆಯನ್ನು ನೋಡಿ ನಾನು ಸಂತೋಷಪಡುತ್ತಿದ್ದೆ. ಉಭಯ ಸೇನೆಗಳು ಮೈಮರೆತು ಯುದ್ಧವನ್ನು ನೋಡತೊಡಗಿತು”
ದುರ್ಯೋಧನ ಇದ್ದಕ್ಕಿದ್ದ ಹಾಗೆ ಬಿಕ್ಕಿದ. ಭೀಷ್ಮರ ಮನಸ್ಸು ರಣರಂಗದಲ್ಲಿ ವಿಹರಿಸ ತೊಡಗಿತು. ಹತ್ತು ದಿನಗಳ ಯುದ್ಧಾವಧಿಯಲ್ಲಿ ಅರ್ಜುನ ಅವರಿಗೆ ಮೂರು ಬಾರಿ ಎದುರಾಗಿದ್ದ. ಯುದ್ಧದಲ್ಲಿ ಸೋಲು ಗೆಲುವು ನಿರ್ಣಯವಾಗಿರಲಿಲ್ಲ. ಪರಶುರಾಮರಲ್ಲಿ ಶಸ್ತ್ರಾಭ್ಯಾಸ ಮಾಡಿದ್ದರೂ ಭೀಷ್ಮರಿಂದ ಅರ್ಜುನನನ್ನು ಸೋಲಿಸಲಾಗಿರಲಿಲ್ಲ. ಅವನು ಹಿಮಾಲಯದ ತಪ್ಪಲಲ್ಲಿ ಯಾರ್ಯಾರೋ ಸಾಧಕರ ಒಲವಿಗೆ ಪಾತ್ರನಾಗಿ ಬಿಲ್ವಿದ್ಯೆಯ ಹೊಸ ಆವಿಷ್ಕಾರಗಳನ್ನು ಮತ್ತು ತಂತ್ರಗಾರಿಕೆಯನ್ನು ಕಲಿತು ಬಂದವನು. ದಕ್ಷಿಣಾ ಪಥದಲ್ಲಿ ರಾಮೇಶ್ವರದವರೆಗೆ ಸಂಚರಿಸಿ, ಲೋಕಜ್ಞಾನ ಪಡೆದವನು. ಅವನ ಓದು, ಲೋಕ ಸಂಚಾರ, ಸಾಧನೆ ಮತ್ತು ಸಿದ್ಧಿ ಕೃಷ್ಣನನ್ನು ಬಿಟ್ಟರೆ ಬೇರಾರಿಗೂ ಇಲ್ಲ. ಅವರಿಬ್ಬರು ಜತೆಯಾಗಿದ್ದಾರೆಂದರೆ ಬೆಂಕಿಯೊಡನೆ ಗಾಳಿ ಸೇರಿ ಕೊಂಡಂತೆ. ಅಂತಹ ಅರ್ಜುನನನ್ನು ಸೋಲಿಸುವುದು ಸುಲಭದ ಸಂಗತಿಯಲ್ಲವೆಂಬುದು ಭೀಷ್ಮರಿಗೆ ಖಚಿತವಾಗಿ ಗೊತ್ತಿತ್ತು.
ದುರ್ಯೋಧನ ಮತ್ತೆ ತನ್ನನ್ನು ತಾನೇ ಸಂತೈಸಿಕೊಂಡು ಮುಂದುವರೆಸಿದ: “ಅರ್ಜುನನ ಕೈ ಸಾಗದಾದಾಗ ಅವನು ಕರ್ಣನನ್ನು ಸೂತಪುತ್ರನೆಂದು ಜರೆಯತೊಡಗಿದ. ಮೂಲವನ್ನು ನೆನಪಿಸಿ ಕೀಳರಿಮೆ ಉಂಟು ಮಾಡಿ, ಕರ್ಣನ ಮಾನಸಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುವ ನೀಚ ತಂತ್ರವದು. ಹೇಳಿ ತಾತಾ, ಪರಮ ವಿಕ್ರಮಿಯಾದ ಕರ್ಣ ಸೂತ ಪುತ್ರನೆಂದು ನಿಮಗೆಂದಾದರೂ ಅನ್ನಿಸಿದ್ದುಂ?”
ಭೀಷ್ಮರು ಗಂಭೀರ ಸ್ವರದಲ್ಲಿ ರಹಸ್ಯ ಸ್ಫೋಟಿಸಿದರು “ಕರ್ಣ ಸೂತ ಪುತ್ರನಲ್ಲ ಮಗೂ, ಕುಂತೀ ಪುತ್ರ”.
ದುರ್ಯೋಧನ ದಿಗ್ಭ್ರಮೆಯಿಂದ ಅಜ್ಜನನ್ನು ನೋಡಿದ. ಕರ್ಣ ಕುಂತೀಪುತ್ರನೆ? ಕುಂತೀ ಪುತ್ರರ ನೆರಳು ಕಂಡರೂ ಆಗದವ ಈಗ ದಾರುಣ ಸತ್ಯವೊಂದನ್ನು ಅರಗಿಸಿಕೊಳ್ಳಬೇಕಿತ್ತು. ಕರ್ಣ ಕುಂತೀ ಪುತ್ರ! ಅಜ್ಜನಿಗೆ ಸತ್ಯ ಗೊತ್ತಿದ್ದೂ ಅಡಗಿಸಿಟ್ಟನೆ? ಕರ್ಣನಿಗದು ಗೊತ್ತಿದ್ದೂ ಅರ್ಜುನನನ್ನು ಕೊಲ್ಲ ಹೊರಟನೆ? ದುರ್ಯೋಧನ ಆಘಾತದಿಂದ ಅಂಗೈಯಿಂದ ಹಣೆಯನ್ನು ಚಚ್ಚಿಕೊಂಡ.
ದುರ್ಯೋಧನ ಮೌನವಾಗಿರುವುದನ್ನು ಕಂಡು ಭೀಷ್ಮರೆಂದರು: “ಅದು ನಿಜ ಮಗೂ. ಕರ್ಣ ಕಾನೀನ. ಪಾಂಡುವಿನ ಮಡದಿಯಾಗುವುದಕ್ಕೆ ಮೊದಲೇ ಕುಂತಿ ಅವನನ್ನು ಪಡೆದಳು. ಲೋಕಾಪವಾದಕ್ಕೆ ಹೆದರಿ ನದಿಯಲ್ಲಿ ತ್ಯಜಿಸಿದಳು. ನವಜಾತ ಶಿಶು ನಮ್ಮ ಸೂತ ಅಧಿರಥನಿಗೆ ಸಿಕ್ಕಿತು. ಅವ ಬೆಳೆಸಿದ ಗಂಡು ಶಿಶುವೇ ಕರ್ಣ. ಲೋಕದ ಕಣ್ಣಿಗೆ ಸೂತಪುತ್ರ್”.
ದುರ್ಯೋಧನ ಈಗಲೂ ಯೋಚನಾಮಗ್ನನಾಗಿದ್ದ. ಕುಂತಿಯ ಮಕ್ಕಳಲ್ಲಿ ಮೊದಲನೆಯ ಅವನ ಪ್ರಾಣಸಖನಾದ. ಉಳಿದವರು ಮೂವರು ಆಜನ್ಮ ಶತ್ರುಗಳಾಗಿಬಿಟ್ಟರು. ಕರ್ಣ ಕುಂತೀ ಪುತ್ರನೆನ್ನುವುದು ಮೊದಲೇ ತಿಳಿದಿರುತ್ತಿದ್ದರೆ ಆತನನ್ನು ಪ್ರಾಣಸಖನನ್ನಾಗಿ ಮಾಡಿಕೊಳ್ಳಲು ಸಾಧ್ಯವಿತ್ತೆ? ಅಸಲು ಈ ಯುದ್ಧವಾದರೂ ನಡೆಯುತ್ತಿತ್ತೆ? ಏನು ಮಾಡಿ ಹಾಕಿದಳು ಆ ಕುಂತಿ?
ತಾತ್ಸಾರದಿಂದ ದುರ್ಯೋಧನನೆಂದ: “ತಾತಾ, ಎಂಥಾ ದುಷ್ಟ ಹೆಂಗಸು ಆ ಕುಂತಿ? ಅವಳನ್ನು ನೆನಪಿಸಿಕೊಂಡರೆ ಅಸಹ್ಯ ಮೂಡುತ್ತದೆ. ಪತಿಯ ದೋಷದಿಂದಾಗಿ ಅವಳು ಮೂವರು ಮಕ್ಕಳನ್ನು ಪಡೆದುದನ್ನು ಮನ್ನಿಸಬಹುದು. ಆದರೆ ವಿವಾಹಪೂರ್ವದಲ್ಲಿ ಕರ್ಣನನ್ನು ಪಡೆದಳಲ್ಲಾಲ? ಛೀ~ ನಾಚಿಕೆಗೆಟ್ಟವಳು”.
ಭೀಷ್ಮರು ನಕ್ಕರು: “ಕುಂತಿಯದ್ದು ತಪ್ಪೆನ್ನುವಂತಿಲ್ಲ. ಅವಳು ಕುಂತೀಭೋಜನ ಸಾಕು ಮಗಳು. ಋಷಿ ಮುನಿಗಳನ್ನು ಮೆಚ್ಚಿಸಿ ಅವರ ಸಾಧನೆಯ ಫಲ ಪಡೆಯಲು ಕ್ಷತ್ರಿಯರು ಮಾಡುವ ತಂತ್ರಗಳಲ್ಲಿ ಇದೂ ಒಂದು. ರಾಣಿಯರನ್ನೋ, ಹೆಣ್ಣು ಮಕ್ಕಳನ್ನೋ ಸೇವೆಗೆ ಕಳುಹಿಸುವುದು. ಸಂತಾನಭಾಗ್ಯವಿಲ್ಲದ ಅರಸರು ಹಾಗೆ ಮಾಡುವುದಕ್ಕೊಂದು ಸಮರ್ಥನೆಯಾದರೂ ಇದೆ. ಇತರರ ಸಮರ್ಥನೆಯೇನು ಗೊತ್ತಿದೆಯಾ ಮಗೂಲ್? ‘ಎಂತಹ ಸಂತಾನವೆನ್ನುವುದು ಮುಖ್ಯ, ಯಾರಿಂದ ಎಂಬುದಲ್ಲ’ ಎಂಬ ತರ್ಕ. ಇದು ವೀರ ಯುಗ ಮಗೂ. ಆರ್ಯಾವರ್ತದಲ್ಲಿ ಮೊದಲ ಸ್ಥಾನ ವಿದ್ಯೆಗಲ್ಲ, ಬುದ್ಧಿಗಲ್ಲ, ಧನಕ್ಕಲ್ಲ, ಶೌರ್ಯಕ್ಕೆ. ಅದೊಂದಿದ್ದರೆ ಏನನ್ನು ಬೇಕಾದರೂ ಗಳಿಸಿಕೊಳ್ಳಬಹುದು. ತಮ್ಮಿಂದಾಗದ್ದು ಮಕ್ಕಳಿಂದಲಾದರೂ ಆಗಲಿ ಎಂಬ ರಾಜಕೀಯ ದುರಾಲೋಚನೆ. ಕುಂತಿಯ ಬಗ್ಗೆ ಅಸಹ್ಯ ಪಡಬೇಡ. ವಂಶ ಪಾವಿತ್ರ್ಯವೆನ್ನುವುದು ಭ್ರಮೆ ಎಂಬ ಸತ್ಯವನ್ನು ಮರೆಯಬೇಡ”.
ದುರ್ಯೋಧನನಿಗೆ ತಳಮಳವಾಯಿತು. ತಾತನ ತಂದೆ ಶಂತನು ಚಕ್ರವರ್ತಿಗಳು ಚಂದ್ರವಂಶೀಯರು. ಭೀಷ್ಮರ ತಾಯಿಯ ವಂಶ ಯಾವುದು? ಯಾರಿಗೂ ಗೊತ್ತಿಲ್ಲದ ನಿಗೂಢ ಅದು. ಸತ್ಯವತೀದೇವಿ ಬೆಸ್ತರವಳು! ಅಪ್ಪ ಧೃತರಾಷ್ಟ್ರ ಮತ್ತು ಪಾಂಡು ಚಿಕ್ಕಪ್ಪ ಹುಟ್ಟಿದ್ದು ದ್ವೈಪಾಯನರಿಗೆ. ಅವರ ವಂಶ ಯಾವುದು? ಬೀಜಕ್ಷೇತ್ರ ನ್ಯಾಯವನ್ನು ಪ್ರತಿಪಾದಿಸಿ ಪಾಂಡವರಿಗೆ ಕುರು ಸಾಮ್ರಾಜ್ಯದಲ್ಲಿ ಹಕ್ಕಿಲ್ಲವೆನ್ನುವುದು ಎಂತಹಾ ಅವಿವೇಕ! ಆರ್ಯಾವರ್ತದಲ್ಲಿರುವವೆಲ್ಲವೂ ಮಿಶ್ರ ಜಾತಿ, ಮಿಶ್ರ ವರ್ಣಗಳು ಎಂದಾದರೆ ಬ್ರಾಹ್ಮಣರು ಮತ್ತು ಕ್ಷತ್ರಿಯರು ಉನ್ನತ ಕುಲದವರಾಗುವುದು ಹೇಗೆ? ಅವನ ಸ್ವಾರ್ಥಕ್ಕಾಗಿ ಕುಂತೀಭೋಜ ಕನ್ಯೆ ಕುಂತಿಯನ್ನು ಯಾವನೋ ಋಷಿಯ ಸೇವೆಗೆ ಕಳುಹಿಸಿದ. ಋಷಿ ಫಲ ಕೊಟ್ಟ. ತಪ್ಪು ಕುಂತೀಭೋಜನದು. ಒಬ್ಬಳು ಎಳೆಕನ್ಯೆ ಕುಂತಿ ವ್ಯವಸ್ಥೆಯೆದುರು ಏನನ್ನು ತಾನೇ ಮಾಡಿಯಾಳು? ಯಾರದೋ ಸ್ವಾರ್ಥಕ್ಕಾಗಿ ಹುಟ್ಟಿದ ಕರ್ಣ ಜೀವನದುದ್ದಕ್ಕೂ ನೋವನ್ನೇ ಉಂಡ. ತಪ್ಪು ಯಾರದು, ಶಿಕ್ಷೆ ಯಾರಿಗೆ? ಕುಂತಿಯದೂ ತಪ್ಪಿದೆ. ಅವಳಿಗೇಕೆ ಸತ್ಯವತೀ ದೇವಿಯ ಧೈರ್ಯ ಬರಲಿಲ್ಲ? ಸತ್ಯವತೀ ದೇವಿ ದ್ವೈಪಾಯನರನ್ನು ತನ್ನ ಮಗನೆಂದು ಜಗಜ್ಜಾಹೀರುಗೊಳಿಸಿದಳು. ಕುಂತಿಯೂ ಹಾಗೆ ಮಾಡಬೇಕಿತ್ತು. ಕರ್ಣ ತನ್ನ ಪುತ್ರನೆಂಬುವುದನ್ನು ಕುಂತಿ ಪ್ರಕಟಗೊಳಿಸುತ್ತಿದ್ದರೆ ಕುರು ಸಾಮ್ರಾಜ್ಯದ ಇತಿಹಾಸವೇ ಬದಲಾಗಿ ಹೋಗುತ್ತಿತ್ತು. ಅವಳು ಹಾಳಾಗಲಿ. ಈ ಅಜ್ಜನಾದರೂ ಹೇಳಬಾರದಿತ್ತೆ?
ಆಕ್ಷೇಪಣೆಯ ದನಿಯಲ್ಲಿ ದುರ್ಯೋಧನ ಕೇಳಿದ: “ತಾತಾ, ಕರ್ಣ ಕುಂತೀಪುತ್ರ ನೆಂಬುದು ನಿಮಗೆ ತಿಳಿದದ್ದು ಯಾವಾಗ?”
ಶಾಂತ ಸ್ವರದಲ್ಲಿ ಭೀಷ್ಮರು ಉತ್ತರಿಸಿದರು: “ಹೆಚ್ಚು ಸಮಯವಾಗಲಿಲ್ಲ ಮಗೂ. ಪಾಂಡವರು ಅಜ್ಞಾತವಾಸ ಮುಗಿಸಿದ ಮೇಲೆ ಇಂದ್ರಪ್ರಸ್ಥವನ್ನು ಸಂಧಾನ ಮುಖೇನ ಮರಳಿ ಪಡೆಯಲು ಕೃಷ್ಣನನ್ನು ಕಳುಹಿಸಿಕೊಟ್ಟರಲ್ಲಾ? ಆಗ ನೀನು ನಿನ್ನ ಛಲ ಬಿಡಲಿಲ್ಲ. ಸೂಜಿಯ ಮೊನೆಯೂರುವಷ್ಟು ಭೂಮಿಯನ್ನೂ ಪಾಂಡವರಿಗೆ ಕೊಡಲಾರೆಯೆಂದೆ. ಸಂಗ್ರಾಮ ನಿಶ್ಚಯವಾಗಿ ಹಿಂದಕ್ಕೆ ಹೋಗುವಾಗ ರಹಸ್ಯವಾಗಿ ಕೃಷ್ಣ ಕರ್ಣನನ್ನು ಭೇಟಿಯಾದ. ಅವರ ನಡುವಿನ ಮಾತುಕತೆ ಪೂರ್ಣವಾಗಿ ನಮ್ಮ ಗುಪ್ತಚರರ ಕಿವಿಗೆ ಬೀಳದಿದ್ದರೂ ಕರ್ಣ ಕುಂತೀಪುತ್ರನೆನ್ನುವುದು ತಿಳಿದು ಹೋಯಿತು. ನಾನಿದನ್ನು ರಹಸ್ಯವಾಗಿಡಲು ಅವರಿಗೆ ತಿಳಿಸಿದೆ. ಅದಾದ ಮೇಲೆ ಕರ್ಣನ ಚಲನವಲನಗಳನ್ನು ಗಮನಿಸಲು ಇಬ್ಬರು ಬೇಹಿನ ಚರರನ್ನು ನೇಮಿಸಿದೆ. ಒಂದು ಸಂಜೆ ನದೀತಟದಲ್ಲಿ ಕರ್ಣ ಒಬ್ಬನೇ ಇದ್ದಾಗ ಸ್ವತಃ ಕುಂತಿಯೇ ಅವನಲ್ಲಿಗೆ ಬಂದಳು. ಪಾಂಡವರನ್ನು ಕೊಲ್ಲಬಾರದೆಂದು ಕರ್ಣನನ್ನು ಯಾಚಿಸಿದಳು. ಇದು ಬೇಹಿರ ಚರರಿಗೆ ಮತ್ತು ನನಗೆ ಬಿಟ್ಟರೆ ಕೌರವ ಪಾಳಯದಲ್ಲಿ ಬೇರಾರಿಗೂ ತಿಳಿಯದು. ಆ ಬಳಿಕ ಕರ್ಣ ಅವನ ನೋವುಗಳನ್ನು ನನ್ನಲ್ಲಿ ಹೇಳಿಕೊಂಡು ಸಾಂತ್ವನ ಪಡುತ್ತಿದ್ದ. ನಿನ್ನಿಂದ ಅವನನ್ನು ದೂರ ಮಾಡುವ ಯಾವುದೇ ಸೌಭಾಗ್ಯ ಅವನಿಗೆ ಬೇಕಿರಲಿಲ್ಲ್”.
ದುರ್ಯೋಧನ ಚಿಂತಾಕ್ರಾಂತನಾದ. ಕರ್ಣ ಬಯಸಿದ್ದರೆ ಯಾವ ಎತ್ತರಕ್ಕೂ ಏರಬಹುದಿತ್ತು. ಆದರೆ ಅವನು ಮಾಡಿದ್ದೇನು? ಕುಂತೀ ಪುತ್ರನೆಂದು ತಿಳಿದ ಮೇಲೂ ಪಾಂಡವರನ್ನು ದೂರವೇ ಇಟ್ಟ. ಅರ್ಜುನನ ಮಗ ಅಭಿಮನ್ಯುವಿನ ವಧೆಗೆ ಕಾರಣನಾದ. ಭೀಮನ ಮಗ ಘಟೋತ್ಕಚನನ್ನು ಸ್ವಯಂ ತಾನೇ ಕೊಂದ. ಇಂದು ಅರ್ಜುನನನ್ನು ಕೊಂದು ಯುದ್ಧವನ್ನು ಪರಿಮಾಪ್ತಿಗೊಳಿಸುವುದರಲ್ಲಿದ್ದ. ಎಂತಹ ಮನೋಬಲ ಅವನದು! ನಿಷ್ಠೆ ಅಂದರೆ ಅದು. ಅಂದು ಪರೀಕ್ಷಾ ಕಣದಲ್ಲಿ ಅವನು ತೀರಾ ಅಪಮಾನಕ್ಕೊಳಗಾದಾಗ, ಅವನನ್ನು ಅಂಗ ರಾಜ್ಯಾಧಿಪತಿಯನ್ನಾಗಿ ಮಾಡಿ, ಅವನ ಸೂತತ್ವವನ್ನು ಕಳೆದು, ಅವನಿಗೊಂದು ವ್ಯಕ್ತಿತ್ವವನ್ನು ನಿರ್ಮಿಸಿದ ಋಣಭಾರಕ್ಕೆ ಕರ್ಣ ಹೀಗೆ ವರ್ತಿಸಿದನೆ? ಬಯಸಿದ್ದರೆ ಅವನು ಯುದ್ಧ ನಿಲ್ಲಿಸಿ, ಹಿರಿತನವನ್ನು ಮುಂದೊಡ್ಡಿ ಹಸ್ತಿನಾವತಿಯ ಸಿಂಹಾಸನವೇರಬಹುದಿತ್ತು. ಅದಕ್ಕಿಂತ ಅವನಿಗೆ ಸ್ನೇಹ ಮುಖ್ಯವಾಯಿತು. ಕರ್ಣ ನಿಜಕ್ಕೂ ಮಹಾತ್ಮ.
ದುರ್ಯೋಧನ ಮತ್ತೆ ಬಿಕ್ಕಳಿಸಿದ. ದ್ವಾರದಲ್ಲಿ ಹೆಜ್ಜೆ ಸಪ್ಪಳವಾದಾಗ ತನ್ನನ್ನು ನಿಯಂತ್ರಿಸಿಕೊಂಡು ಅತ್ತ ನೋಡಿದ. ಅವನತ ಮುಖನಾಗಿ ಶಲ್ಯ ಭೂಪತಿ ಬರುತ್ತಿದ್ದ. ಅವನ ಇರವನ್ನೇ ಗಮನಿಸದವನಂತೆ ದುರ್ಯೋಧನನೆಂದ: “ನಂಬಿಕೆ ದ್ರೋಹಿಗಳನ್ನು ನಾವು ಎಲ್ಲೆಲ್ಲೂ ಕಾಣುತ್ತಿರುತ್ತೇವೆ. ಕರ್ಣನಂತಹ ನಿಷ್ಠರೆಲ್ಲಿ ಸಿಕ್ಕಾರು? ಅವನದು ಅತ್ಯುನ್ನತ ವ್ಯಕ್ತಿತ್ವ. ನನ್ನ ಊಹೆಗೂ ನಿಲುಕದವನು ಅವನು. ಅವನೀಗ ನಮ್ಮ ನಡುವೆ ಇಲ್ಲ. ಅವನು, ಆ ಕೃಷ್ಣ, ಮೋಸದಿಂದ ಕರ್ಣನನ್ನು ಕೊಲ್ಲಿಸಿಬಿಟ್ಟ.
ದುರ್ಯೋಧನ ಕೈಗಳಿಂದ ಮುಖವನ್ನು ಮುಚ್ಚಿಕೊಂಡ. ಭೀಷ್ಮರಿಗೆ ವಿಷಯವೇನೆಂದು ಮನದಟ್ಟಾಗದೆ ಕೇಳಿದರು: “ಹಾಗೆಂದರೇನು ಮಗೂ, ಕೃಷ್ಣನೇ ಸ್ವಯಂ ಶರ ಪ್ರಯೋಗಕ್ಕಿಳಿದನೆ?”
ದುರ್ಯೋಧನನೆಂದ: “ಇಲ್ಲ ತಾತಾ. ಕರ್ಣಾರ್ಜುನರ ನಡುವೆ ಘನ ಘೋರವಾದ ಯುದ್ಧ ಸಂಭವಿಸಿತು. ಆರ್ಯಾವರ್ತದ ಮಟ್ಟಿಗದು ನಭೂತೋ ನಭವಿಷ್ಯತಿ. ಅರ್ಜುನನೂ ಪ್ರಚಂಡನೇ. ಅವರಿಬ್ಬರಲ್ಲಿ ಯಾರು ಸೋತರೂ ನೋಡುಗರಲ್ಲಿ ವಿಷಾದ ಮೂಡುವ ವಾತಾವರಣ ನಿರ್ಮಾಣವಾಯಿತು. ಕರ್ಣನ ಶರ ಪ್ರಯೋಗ ಕೌಶಲದೆದುರು ಅರ್ಜುನ ತತ್ತರಿಸತೊಡಗಿದ. ನಾವೆಲ್ಲಾ ಮೆಚ್ಚುಗೆಯ ಅಚ್ಚರಿಯಿಂದ ನೋಡುತ್ತಿರುವಂತೆ ಯಾವುದೋ ದಿವ್ಯಾಸ್ತ್ರವೊಂದನ್ನು ಬತ್ತಳಿಕೆಯಿಂದ ತೆಗೆದು ಬಿಲ್ಲಿಗೆ ಜೋಡಿಸಿದ. ಲಹರಿ ಬಂದವನಂತೆ ಶಲ್ಯಮಾವನಲ್ಲಿ ಹೇಳಿದ. ‘ಶಲ್ಯ ಭೂಪತೀ, ನೋಡು ಈ ಮಹಾಸ್ತ್ರವನ್ನು. ಇದು ಘಟೋತ್ಕಚನನ್ನು ಕೊಂದುದಕ್ಕಿಂತಲೂ ಪ್ರಬಲವಾದದ್ದು. ಅರ್ಜುನನ ಕತ್ತಿಗೆ ಗುರಿಯಿಟ್ಟಿದ್ದೇನೆ. ಈಗ ಅವನ ಕತೆ ಮುಗಿಯುತ್ತದೆ. ಅವನ ಮುಖವನ್ನುಕೊನೆಯ ಬಾರಿಗೊಮ್ಮೆ ನೋಡಿಕೋ’ ಎಂದು ಪ್ರಯೋಗಿಸ ಹೊರಟ. ಶಲ್ಯ ಮಾವ ತಡೆದು ‘ಕರ್ಣಾ, ನಿನ್ನ ಗುರಿಯನ್ನು ಅರ್ಜುನನ ಕುತ್ತಿಗೆಯಿಂದ ಎದೆಗೆ ಬದಲಾಯಿಸಿ ಬಿಡು. ನಿನ್ನ ಉದ್ದೇಶ ಈಡೇರುತ್ತದೆ’ ಎಂದ.
ದುರ್ಯೋಧನನಿಂದ ಮುಂದುವರಿಸಲಾಗಲಿಲ್ಲ. ಭೀಷ್ಮರು ಅವನ ಸ್ಥತಿಯನ್ನು ಮರುಕದಿಂದ ಗಮನಿಸಿ ಶಲ್ಯರಲ್ಲಿ ಕೇಳಿದರು: ‘ಭೂಪತೀ, ನೀನು ಹೇಳು. ಮುಂದೇನಾಯಿತು?’
ತನಗೆ ಮಾತಾಡಲು ಅವಕಾಶವೇ ಸಿಗುವುದಿಲ್ಲವೇನೋ ಎಂದುಕೊಂಡಿದ್ದ ಶಲ್ಯ ಗಂಭೀರ ಸ್ವರದಲ್ಲಿ ಉತ್ತರಿಸಿದ: “ಅನಾಹುತ ಆದದ್ದೇ ಅಲ್ಲಿ ಆಚಾರ್ಯರೇ. ಗುರಿ ಬದಲಾಯಿಸಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿಬಿಟ್ಟ. ಇಟ್ಟ ಗುರಿಯನ್ನು ಬದಲಾಯಿಸುವುದಿಲ್ಲವೆಂದು ತಾಯಿಗೆ ಮಾತು ಕೊಟ್ಟಿದ್ದನಂತೆ. ನಾನು ಅವನಿಗೆ ತಿಳಿ ಹೇಳಿದೆ. ಕರ್ಣಾ, ನಮ್ಮ ವಿಜಯಕ್ಕಿರುವುದು ಇದೊಂದೇ ಅವಕಾಶವೆಂದು ನನ್ನ ಮನಸ್ಸು ಹೇಳುತ್ತಿದೆ. ಈಗ ನೀನು ದುರ್ಯೋಧನನನ್ನು ಗೆಲ್ಲಿಸಬೇಕು. ತಾಯಿಗೆ ಕೊಟ್ಟ ಉಪಯೋಗವಿಲ್ಲದ ಮಾತುಗಳನ್ನು ನಿನ್ನ ಅಭ್ಯುದಯಕ್ಕೆ ಕಾರಣನಾದ ಪ್ರಾಣಮಿತ್ರ ದುರ್ಯೋಧನನಿಗಾಗಿ ಮರೆತುಬಿಡು ಎಂದೆ”
ಶಲ್ಯ ಮಾತು ನಿಲ್ಲಿಸಿದ. ಚಡಪಡಿಕೆಯಿಂದ ಭೀಷ್ಮರು ಕೇಳಿದರು: “ಆಗಲಾದರೂ ಕರ್ಣ ಗುರಿಯನ್ನು ಬದಲಿಸಿದನೇ ಭೂಪತಿ?”
ಶಲ್ಯನೆಂದ: ಮಾತೆಗೆ ತಾನಿತ್ತ ಮಾತನ್ನು ತಪ್ಪುವಂತಿಲ್ಲ. ಕತ್ತಿಗೆ ಇಟ್ಟ ಗುರಿಯನ್ನು ತಪ್ಪಿಸುವಂತಿಲ್ಲ. ನನ್ನ ಗುರಿಯ ಬಗ್ಗೆ ಸಂದೇಹವೇ ಎಂದು ನನ್ನನ್ನೇ ಪ್ರಶ್ನಿಸಿದ. ‘ಸಂದೇಹ ನಿನ್ನ ಗುರಿಯ ಬಗ್ಗೆ ಅಲ್ಲ. ಕೃಷ್ಣ ನಿನ್ನನ್ನೇ ಗಮನಿಸುತ್ತಿದ್ದಾನೆ. ಅವನಿಗೆ ನಿನ್ನ ಗುರಿ ಎಲ್ಲಿಗೆನ್ನುವುದು ಗೊತ್ತಾಗಿದೆ. ಗುರಿಯನ್ನು ಕುತ್ತಿಗೆಯಿಂದ ಎದೆಗೆ ಬದಲಾಯಿಸಿದರೆ ಅವನಿಗೆ ಪ್ರತಿತಂತ್ರ ಹೂಡಲು ಕಷ್ಟವಾಗುತ್ತದೆ. ಎಂದೋ ಮಾತೆಗಿತ್ತ ವಚನಕ್ಕಿಂತ ಇಂದು ದುರ್ಯೋಧನನ ವಿಜಯ ಮುಖ್ಯ. ಬರಿದೆ ವಾದಿಸಬೇಡ’ ಎಂದೆ. ಕರ್ಣನಾಗ, “ಇದೊಂದು ಬಾಣ ಗುರಿಯಿಟ್ಟಾಗಿದೆ. ಪ್ರಯೋಗಿಸಿಯೇ ಬಿಡುತ್ತೇನೆ. ಗುರಿ ಸಾಧಿಸದಿದ್ದರೆ ಕರ್ಣನಲ್ಲಿ ಬಾಣಗಳಿಗೇನು ಕೊರತೆ? ಬೇರೊಂದನ್ನು ಪ್ರಯೋಗಿಸಿದರಾಯಿತು” ಎಂದ. ನಾನು ಒಪ್ಪಲಿಲ್ಲ. ನಮ್ಮ ನಡುವೆ ದೊಡ್ಡ ಸಂವಾದ ನಡೆದು ನನ್ನ ಮಾತನ್ನು ಮೀರಿದರೆ ಸಾರಥ್ಯ ತ್ಯಜಿಸುವುದಾಗಿ ಹೇಳಿದೆ. ಅದನ್ನವನು ಲಕ್ಷ್ಯಕ್ಕೇ ತೆಗೆದು ಕೊಳ್ಳಲಿಲ್ಲ. ಗುರಿ ಬದಲಾಯಿಸದೆ ಶರ ಪ್ರಯೋಗ ಮಾಡಿದ. ಕೃಷ್ಣನ ಸೂಚನೆಯಂತೆ ಅರ್ಜುನ ತಲೆ ತಗ್ಗಿಸಿಬಿಟ್ಟ. ಆ ಅಪೂರ್ವವಾದ ಬಾಣ ಅರ್ಜುನನ ಕಿರೀಟವನ್ನು ಹಾರಿಸಿಕೊಂಡು ಹೋಯಿತು. ಅರ್ಜುನನ ಶಿರಚ್ಛೇದನವಾಯಿತೆಂದು ಪಾಂಡವ ಸೇನೆಯಲ್ಲಿ ಹಾಹಾಕಾರವಾಯಿತು. ಕರ್ಣ ನನ್ನ ಮಾತನ್ನು ಕೇಳುತ್ತಿದ್ದರೆ ಅರ್ಜುನನ ವಧೆಯಾಗಿ ಯುದ್ಧ ಇಂದಿಗೆ ಪರಿಸಮಾಪ್ತಿಯಾಗುತ್ತಿತ್ತು”.
ಶಲ್ಯ ಮೌನವಾದ.
“ಹಾಗಾದರೆ ಕರ್ಣ ಮಡಿದದ್ದು ಹೇಗೆ?”
ಭೀಷ್ಮರ ಪ್ರಶ್ನೆಗೆ ದುರ್ಯೋಧನ ಉತ್ತರವಿತ್ತ: “ತಾತಾ, ಈ ಶಲ್ಯ ಮಾವ ಕರ್ಣನೊಡನೆ ಜಗಳಕ್ಕಿಳಿದುಬಿಟ್ಟರು. ನನ್ನ ಮಾತನ್ನು ಕೇಳದವನ ರಥದಲ್ಲಿ ಒಂದು ನಿಮಿಷವೂ ಇರುವುದಿಲ್ಲವೆಂದರು. ಕರ್ಣ ಅಂಗಲಾಚಿದ, ಬೇಡಿಕೊಂಡ. ಆಗ ಮಾವ ‘ಹಾಗಾದರೆ ಈಗ ಹೂಡಿದಂಥದ್ದೇ ಇನ್ನೊಂದು ಬಾಣವನ್ನು ಅರ್ಜುನನ ಉರ ಪ್ರದೇಶಕ್ಕೆ ಪ್ರಯೋಗಿಸು’ ಎಂದು ಆದೇಶಿಸಿದರು. ಕರ್ಣ ಬತ್ತಳಿಕೆಯಲ್ಲಿ ತಡಕಾಡಿದ. ಅಂಥದ್ದೇ ಇನ್ನೊಂದು ಬಾಣ ಅವನಲ್ಲಿ ಇರಲಿಲ್ಲ. ‘ಇನ್ನು ಯುದ್ಧ ಮುಂದುವರಿಸಿ ಫಲವಿಲ್ಲ’ ಎಂದು ಘೋಷಿಸಿ ಮಾವ ರಥದಿಂದಿಳಿದು ನಡೆದೇ ಬಿಟ್ಟರು.
ಭೀಷ್ಮರಿಗೆ ವಿಷಯ ಮನದಟ್ಟಾಯಿತು. ಕರ್ಣನ ಸಾರಥಿಯಾಗಲು ಶಲ್ಯನಿಗೆ ನಿಜಕ್ಕೂ ಮನಸ್ಸಿರಲಿಲ್ಲ. ಅನ್ಯರನ್ನು ಮೆಚ್ಚಿಕೊಳ್ಳಲು ನಮಗೆ ಕಾರಣಗಳೇ ಸಿಗುವುದಿಲ್ಲ. ದ್ವೇಷಿಸಲು ಯಥೇಚ್ಛ ಕಾರಣಗಳು ದೊರೆಯುತ್ತವೆ. ರಥದಿಂದಿಳಿದು ಹೋಗಲು ಶಲ್ಯ ಭೂಪತಿ ಕಾರಣ ಹುಡುಕುತ್ತಿದ್ದ. ಕರ್ಣನೇ ಅದನ್ನು ಸ್ವಯಂ ಒದಗಿಸಿದ್ದಾನೆ. ವಯಸ್ಸಿನಲ್ಲಿ, ಅನುಭವದಲ್ಲಿ, ಲೋಕಜ್ಞಾನದಲ್ಲಿ ಹಿರಿಯವನಾದ ಶಲ್ಯ ಭೂಪತಿಯ ಮಾತನ್ನು ಕರ್ಣ ಕೇಳಬೇಕಿತ್ತು. ಇಟ್ಟ ಗುರಿಯನ್ನು ಬದಲಾಯಿಸುವುದಿಲ್ಲವೆಂದು ಕುಂತಿಗೆ ಮಾತು ಕೊಡಲೇಬೇಕಾದ ತಲೆ ಹೋಗುವ ಪ್ರಸಂಗ ಏನು ಬಂದಿತ್ತು ಇವನಿಗೆ? ಹೋಗಲಿ. ಮಾತೆಗಿತ್ತ ಮಾತೇ ಇವನಿಗೆ ಮುಖ್ಯವಾಯಿತು ಎಂದಿಟ್ಟುಕೊಳ್ಳೋಣ. ಶಲ್ಯನನ್ನು ಓಲೈಸಲಿಕ್ಕಾದರೂ ‘ನಿನ್ನ ಮಾತಿನಂತಾಗಲಿ ಶಲ್ಯಭೂಪತಿ’ ಎಂದು ಒಂದು ಸುಳ್ಳು ಹೇಳಿ ಗುರಿ ಬದಲಾಯಿಸದೆ ಶರ ಪ್ರಯೋಗಿಸಬಹುದಿತ್ತಲ್ಲಾ? ಆಗ ಶಲ್ಯನಿಗೆ ರಥ ತೊರೆಯಲು ಕಾರಣ ಸಿಗುತ್ತಿರಲಿಲ್ಲ. ಕರ್ಣನ ಸತ್ಯ ಸಂಧತೆಯಿಂದಾಗಿ ಅರ್ಜುನ ಬದುಕುಳಿದ. ಸ್ವಯಂ ಇವನೇ ಸತ್ತನಲ್ಲಾ? ಯಾವ ಪುರುಷಾರ್ಥ ಸಾಧಿಸಿದಂತಾಯಿತು ಇವನ ಸತ್ಯಸಂಧತೆಯಿಂದ?
ಭೀಷ್ಮರ ಯೋಚನಾ ಸರಣಿ ಶಲ್ಯನ ಮಾತಿನಿಂದ ತುಂಡಾಯಿತು: “ಆಚಾರ್ಯರೇ, ಕರ್ಣನ ಸಾವಿಗೆ ನೀನೇ ಕಾರಣನೆಂದು ಈ ದುರ್ಯೋಧನ ನನ್ನನ್ನು ಜರೆದ. ಕರ್ಣ ಸತ್ತದ್ದು ಅವನ ಅವಿವೇಕದಿಂದ. ಅವನು ಅರ್ಜುನನ ಮೇಲೆ ಪ್ರಯೋಗಿಸಿದ್ದು ಸರ್ಪಮುಖೀ ಮಹಾಸ್ತ್ರವನ್ನು. ಅವನಿಗೆ ಅದೆಲ್ಲಿಂದ ಸಿಕ್ಕಿತ್ತೊ? ಪರಶುರಾಮರ ಸಂಗ್ರಹದಿಂದ ದೊರೆಯಿತೋ ಏನೊ? ಅಂತಹ ಬಾಣವನ್ನು ತಯಾರಿಸಬಲ್ಲವರನ್ನು ಆರ್ಯಾವರ್ತದಲ್ಲಿ ನಾನೆಲ್ಲೂ ಕಂಡಿಲ್ಲ. ತಯಾರಿಸ ಬಲ್ಲವರೇ ಇಲ್ಲವೆಂದ ಮೇಲೆ ಅದಕ್ಕೆ ಪ್ರತ್ಯಸ್ತ್ರವಿರಲು ಸಾಧ್ಯವೇ? ಅದರದು ಊರ್ಧ್ವ ಮುಖೀ ಗಮನ. ಅದಕ್ಕೇ ಅರ್ಜುನನ ಎದೆಗೆ ಗುರಿ ಹಿಡಿಯಲು ನಾನು ಹೇಳಿದ್ದು. ನನ್ನ ಮಾತನ್ನು ಕೇಳುತ್ತಿದ್ದರೆ ಕರ್ಣ ಉಳಿದುಕೊಳ್ಳುತ್ತಿದ್ದ. ದುರ್ಯೋಧನ ಕುರು ಸಮ್ರಾಟನಾಗುತ್ತಿದ್ದ. ಕೋಡಗನ ಕೈಯ ರತ್ನದಂತಾಗಿ ಹೋಯಿತು ಆ ಬಾಣದ ಕತೆ. ಇನ್ನುಳಿದ ಸಾಧಾರಣದ ಬಾಣಗಳಿಂದ ಅರ್ಜುನನಂತಹ ಧನುರ್ವೇದ ಪಾರಂಗತನನ್ನು ಕೊಲ್ಲಲು ಸಾಧ್ಯವೇ ಇರಲಿಲ್ಲ. ಕರ್ಣನ ಶಠತ್ವದಿಂದ ರೋಸಿ ಹೋಗಿ ರಥವಿಳಿದು ಬಂದುಬಿಟ್ಟೆ. ಹೇಳಿ ಆಚಾರ್ಯರೇ, ನನ್ನ ತಪ್ಪೇನಿದೆ”
ಭೀಷ್ಮರು ಸಮಾಧಾನಿಸಿದರು” “ಶಲ್ಯ ಭೂಪತೀ, ಈ ಹಂತದಲ್ಲಿ ತಪ್ಪು ಯಾರದೆಂದು ವಿಶ್ಲೇಷಿಸಿ ಏನು ಪ್ರಯೋಜನವಿದೆ ಹೇಳು? ಆದರೆ ಸರ್ಪಮುಖೀ ಬಾಣದಿಂದ ಅರ್ಜುನ ಸಾಯುತ್ತಿರಲಿಲ್ಲವೆಂದು ನನಗನ್ನಿಸುತ್ತದೆ. ಕಂಠ ಪ್ರದೇಶದತ್ತ ಬರುತ್ತಿದ್ದ ಬಾಣವನ್ನು ಕಂಡು ಅರ್ಜುನ ತಲೆತಗ್ಗಿಸಿ ಬದುಕಿಕೊಂಡ. ಎದೆಯತ್ತ ಬರುತ್ತಿದ್ದರೆ ಕೂತು ಬಿಡುತ್ತಿದ್ದ. ಆಗಲೂ ಬದುಕಿಕೊಳ್ಳುತ್ತಿದ್ದ. ಕರ್ಣನಿಗೆ ವಿಜಯಕ್ಕಿಂತ ವಚನ ಮುಖ್ಯವಾಯಿತು. ನಿನಗೆ ನಿನ್ನ ಪ್ರತಿಷ್ಠೆ ಮೇಲಿನದೆನಿಸಿತು. ದುರ್ಯೋಧನಾ, ಈಗ ಕೌರವರಲ್ಲಿ ಉಳಿದಿರುವವನು ನೀನೊಬ್ಬನೇ. ಇನ್ನು ಯುದ್ಧದ ಮಾತೇಕೆ? ನಿಲ್ಲಸುವ ಯತ್ನ ಮಾಡೋಣ”.
ದುರ್ಯೋಧನ ಕರ್ಣಾವಸಾನ ವಿಷಾದದಿಂದ ಹೊರ ಬಂದಿರಲಿಲ್ಲ. ಶಲ್ಯನೇ ಮಾತಾಡಿದ: “ಆಚಾರ್ಯರೇ, ನನಗೊಂದು ಅವಕಾಶ ನೀಡಲು ದುರ್ಯೋಧನನಿಗೆ ಹೇಳಿದ್ದೇನೆ. ಶರಣಾಗತಿಯ, ಯುದ್ಧ ನಿಲುಗಡೆಯ ಮಾತು ಬೇಡ. ಅಳಿದುಳಿದ ಬಲಕ್ಕೆ ನಾನು ಸೇನಾ ನಾಯಕನಾಗಿ ಯುದ್ಧ ಮುಂದುವರಿಸುತ್ತೇನೆ. ಈ ಹಂತದಲ್ಲಿ ಪಾಂಡವರು ಸಂಧಾನಕ್ಕೆ ಒಪ್ಪಲು ಸಾಧ್ಯವಿಲ್ಲ. ಅವರೊಪ್ಪಿದರೂ ಕೃಷ್ಣ ಬಿಡುವುದಿಲ್ಲ”.
ಶಲ್ಯನ ಮಾತು ನಿಜವೆಂದು ಭೀಷ್ಮರಿಗನ್ನಿಸಿತು. ಅವರು ದುರ್ಯೋಧನನನ್ನು ನೋಡಿ ಕೇಳಿದರು: “ಮಗೂ, ಕೃಷ್ಣನ ಮೋಸದಿಂದ ಕರ್ಣ ಮಡಿದನೆಂದು ಹೇಳಿದ್ದೀಯಲ್ಲಾ? ಅದು ಹೇಗೆ?”
ತಾತಾ, ಶಲ್ಯ ಭೂಪತಿ ರಥದಿಂದಿಳಿದು ಹೋದ ತಕ್ಷಣ ನನ್ನ ಸಾರಥಿಯನ್ನು ಕರ್ಣನ ರಥಕ್ಕೆ ಕಳುಹಿಸಿದೆ. ರಕ್ತದೋಕುಳಿಯಿಂದ ಕೆಸರಾಗಿದ್ದ ಕುರುಧಾರಿಣಿಯಲ್ಲಿ ಕರ್ಣನ ರಥದ ಚಕ್ರ ಸಿಲುಕಿಕೊಂಡಿತು. ಅವನು ಯುದ್ಧ ವಿರಾಮಕ್ಕೆ ಅವಕಾಶ ಕೇಳಿ ಬಿಲ್ಲನ್ನು ಕೆಳಗಿಟ್ಟು ರಥದಿಂದಿಳಿದು ಚಕ್ರವನ್ನೆತ್ತಲು ಯತ್ನಿಸಿದ. ಆಗ ಕೃಷ್ಣನ ಮಾತಿಗೆ ಕಟ್ಟುಬಿದ್ದು ಅರ್ಜುನ ಬಾಣ ಪ್ರಯೋಗ ಮಾಡಿದ. ಒರೆಯಲ್ಲಿನ ಖಡ್ಗ ಹಿರಿದು ಅದನ್ನು ನಿವಾರಿಸಿದ ಕರ್ಣ ರಥವೇರಿ ಬಿಲ್ಲನ್ನು ಎತ್ತಿಕೊಂಡು ಯುದ್ಧ ಮುಂದುವರಿಸಿದ. ಮುಗ್ಗರಿಸಿದ ರಥದಲ್ಲಿ ನಿಂತು ಕರ್ಣ ಪ್ರಯೋಗಿಸುತ್ತಿದ್ದ ಬಾಣಗಳು ಗುರಿ ಸೇರುತ್ತಿರಲಿಲ್ಲ. ಅರ್ಜುನನದು ಮೇಲುಗೈಯಾಯಿತು. ಅರ್ಜುನನ ಶರಗಳಿಂದಾಗಿ ಸಾರಥಿ ಮಡಿದ. ಬಾಣಗಳಿಂದ ಮುತ್ತಿ ಹೋದ ಕರ್ಣನ ಕೈಯಿಂದ ಅವನ ಬಿಲ್ಲು ಕೆಳಗೆ ಜಾರಿತು. ಅವನು ನನ್ನನ್ನು ನೋಡಿ ಕೊನೆಯ ಬಾರಿಗೆ ಎರಡೂ ಕೈಯೆತ್ತಿ ವಂದಿಸಿ ರಥದಲ್ಲಿ ಕುಸಿದು ಬಿದ್ದ. ಅಲ್ಲಿಗೆ ಇಂದಿನ ಯುದ್ಧವೂ ಮುಕ್ತಾಯವಾಯಿತು”.
ಭೀಷ್ಮರು ಅಂದುಕೊಂಡರು. ನಿಷ್ಠೆಯೆಂದರೆ ಅದು! ತಾನು ಕುಂತೀಪುತ್ರನೆನ್ನುವುದು ತಿಳಿದಿದ್ದರೂ ದುರ್ಯೋಧನನಿಗೆ ಅಂತಿಮ ನಮಸ್ಕಾರ ಸಲ್ಲಿಸಿ, ಕರ್ಣ ಪ್ರಾಣತ್ಯಾಗ ಮಾಡಿದ. ಅವನು ಇತಿಹಾಸದಲ್ಲಿ ಏನೆಂದು ದಾಖಲಾಗುತ್ತಾನೊ? ಸ್ನೇಹದೆದುರು ರಕ್ತಸಂಬಂಧ ಏನೇನೂ ಅಲ್ಲವೆನ್ನುವುದನ್ನು ಅವನು ನಡೆದು ತೋರಿಸಿಕೊಟ್ಟ. ತಾಯಿಗಿತ್ತ ವಚನಕ್ಕೆ ಜೀವನದ ಕೊನೆಯುಸಿರಿರುವವರೆಗೂ ಬಧ್ಧನಾದ. ಅದರಿಂದ ಸಾಧಿಸಿದ್ದೇನು ಎಂದು ಪ್ರಶ್ನಿಸುವಂತಿಲ್ಲ. ಮೌಲ್ಯಗಳಿಂದಲೇ ಬದುಕಿಗೊಂದು ಅರ್ಥ ಎನ್ನುವುದನ್ನು ಅವನು ನಡೆದು ತೋರಿಸಿದ. ಗಾಳಿ ಬಂದತ್ತ ತೊನೆದು ಮೌಲ್ಯಗಳೇ ಇಲ್ಲದೆ ಬದುಕುವ ಸಮಯ ಸಾಧಕರ ನಡುವೆ ಅವನೊಂದು ಅನರ್ಘ್ಯರತ್ನ. ಅವನು ತಾಯಿಗಿತ್ತ ಮಾತನ್ನು ಮುರಿದು ಶಲ್ಯನ ಮಾತಿನಂತೆ ಗುರಿಯನ್ನು ಬದಲಾಯಿಸುತ್ತಿದ್ದರೂ ಅರ್ಜುನನನ್ನು ಕೊಲ್ಲಲಾಗುತ್ತಿರಲಿಲ್ಲ. ಈಗ ಮರಣ ಕಾಲಕ್ಕೆ ವಚನ ಪಾಲನೆಯ ಆನಂದವಾದರೂ ಕರ್ಣನಿಗೆ ದೊರೆತಿದೆ.
ಗಂಭೀರ ಸ್ವರದಲ್ಲಿ ಭೀಷ್ಮರೆಂದರು: “ಮಗೂ, ಶಲ್ಯ ಭೂಪತಿ ಕರ್ಣನ ರಥದಲ್ಲಿರುತ್ತಿದ್ದರೂ ರಥದ ಚಕ್ರ ರಕ್ತದ ಕೆಸರಲ್ಲಿ ಹೂತು ಹೋಗುವುದನ್ನು ತಪ್ಪಿಸಲು ಸಾಧ್ಯವಿರಲಿಲ್ಲ. ಕರ್ಣನನ್ನು ನಮಗೆ ಉಳಿಸಿಕೊಳ್ಳಲಾಗುತ್ತಿರಲಿಲ್ಲ. ಅವನ ವಧೆಗೆ ಕೃಷ್ಣ ಕಾರಣನೆಂದು ಹೇಳಬೇಡ. ಕರ್ಣ ಅಧರ್ಮದ ಪರವಾಗಿ ನಿಂತದ್ದರಿಂದ ಹೀಗಾಯಿತು. ಇಲ್ಲದಿದ್ದರೆ ಅವನದೇ ರಥದ ಗಾಲಿಯೇಕೆ ಹೂತು ಹೋಗಬೇಕಿತ್ತು ಯೋಚಿಸು? ಅವನು ಬದುಕಿರುತ್ತಿದ್ದರೆ, ನೀನು ಯುದ್ಧ ನಿಲುಗಡೆಗೆ ಸಮ್ಮತಿಸುತ್ತಿದ್ದರೆ, ಅವನನ್ನು ಹಸ್ತಿನಾವತಿಯ ಸಿಂಹಾಸನದಲ್ಲಿ ಕುಳ್ಳಿರಿಸಬಹುದಿತ್ತು. ಕಾಲ ಮಿಂಚಿ ಹೋಗಿದೆ. ಹೇಳು ಮಗೂ, ನಾಳೆ ಪಾಂಡವರಿಗೆ ರಾಜ್ಯ ಬಿಟ್ಟುಕೊಡುವುದೆ? ಅಥವಾ ಶಲ್ಯ ಸೇನಾಧಿಪತ್ಯದಲ್ಲಿ ಯುದ್ಧ ಮುಂದುವರಿಸುವುದೆ?”
ದುರ್ಯೋಧನ ಉತ್ತರವಿತ್ತ: “ತಾತಾ, ಶಲ್ಯ ಮಾವನ ನೇತೃತ್ವದಲ್ಲಿ ಯುದ್ಧ ಮುಂದುವರಿಸಲು ತೀರ್ಮಾನಿಸಿದ್ದೇನೆ. ನಾಳೆ ಬಲರಾಮನ ಆಗಮನವಾಗುತ್ತದೆ. ಅಣ್ಣನೆದುರು ಕೃಷ್ಣನ ತಂತ್ರಗಳು ಫಲಿಸುವುದಿಲ್ಲ. ಕೊನೆಗೂ ವಿಜಯ ನಮ್ಮದಾಗುತ್ತದೆ”.
ದುರ್ಯೋಧನನ ಮುಖ ಮಿನುಗುತ್ತಿತ್ತು. ಭೀಷ್ಮರು ಬಲರಾಮನನ್ನು ನೆನಪಿಸಿಕೊಂಡರು. ಅವನು ದ್ವಾರಕೆಯ ದೊರೆ. ಕೃಷ್ಣನ ಅಣ್ಣ. ಅವನಿಗೆ ತನ್ನ ತಂಗಿ ಸುಭದ್ರೆಯನ್ನು ದುರ್ಯೋಧ ನನಿಗಿತ್ತು ವಿವಾಹ ಮಾಡಿಸುವ ಇಚ್ಛೆಯಿತ್ತು. ಸುಭದ್ರೆ ಅರ್ಜುನನನ್ನು ಆರಾಧಿಸುತ್ತಿದ್ದವಳು. ತಂಗಿಯ ಮನವರಿತ ಕೃಷ್ಣ ಉಪಾಯದಿಂದ ಅರ್ಜುನನೊಡನೆ ಸುಭದ್ರೆಯ ವಿವಾಹ ನೆರವೇರಿಸಿದ. ಅಂದಿನಿಂದ ಬಲರಾಮ ಪಾಂಡವ ದ್ವೇಷಿಯಾದ. ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳದಿದ್ದರೂ ಯಾದವ ಸೇನೆಯನ್ನು ದುರ್ಯೋಧನನ ನೆರವಿಗೆ ಕಳುಹಿಸಿಕೊಟ್ಟ. ಬಲರಾಮ ನೇಗಿಲನ್ನು ಆವಿಷ್ಕರಿಸಿ ಅದನ್ನು ಉಳುಮೆಗೆ ಹೇಗೆ ಬಳಸಬಹುದೆಂದು ತೋರಿಸಿಕೊಟ್ಟು ಆರ್ಯಾವರ್ತದಾದ್ಯಂತ ಜನಪ್ರಿಯತೆ ಗಳಿಸಿದ್ದ. ಯಾದವನೆಂಬ ಕಾರಣಕ್ಕೆ ಅವನನ್ನು ಕ್ಷತ್ರಿಯರು ಹಿಂದಿನಿಂದ ಅಪಹಾಸ್ಯ ಮಾಡುತ್ತಿದ್ದರು. ಮಹಾಬಲಶಾಲಿಯಾದ ಆತ ನಾಳೆ ಬಂದು ಪಾಂಡವರ ವಿರುದ್ಧ ಹೋರಾಡುತ್ತಾನೆಯೆ?
ಭೀಷ್ಮರು ಪ್ರಶ್ನಿಸಿದರು: “ನಾಳೆ ನೀನು ಏನು ಮಾಡಬೇಕೆಂದಿರುವೆ ಮಗೂ?”
ದುರ್ಯೋಧನನೆಂದ: “ಬಲರಾಮನ ಆಗಮನವಾಗುವವರೆಗೂ ಪಾಂಡವರ ಕಣ್ಣಿಗೆ ಬೀಳದಿರಲು ನಿಶ್ಚಯಿಸಿದ್ದೇನೆ. ಬಲರಾಮ ಬಂದ ಮೇಲೆ ಮುಂದಿನದನ್ನು ಅವನು ತೀರ್ಮಾನಿಸುತ್ತಾನೆ”.
ಈಗ ಶಲ್ಯ ತನ್ನ ಅಭಿಪ್ರಾಯ ಮಂಡಿಸಿದ: “ಆಚಾರ್ಯರೇ, ಕರ್ಣನ ರಥದಿಂದ ಇಳಿದು ಬಂದುದಕ್ಕೆ ಲೋಕ ನನ್ನನ್ನು ತಪ್ಪು ತಿಳಿದುಕೊಳ್ಳಬಹುದು. ನಕುಲಸಹದೇವರ ಸೋದರ ಮಾವ ಕೌರವರ ಪಕ್ಷ ವಹಿಸಿದ್ದೇ ತಪ್ಪು. ಆದರೆ ನಾನು ಅಪ್ರಾಮಾಣಿಕನಲ್ಲ. ರಥದಲ್ಲೇ ಇರುತ್ತಿದ್ದರೆ ಕರ್ಣನೊಡನೆ ನನ್ನನ್ನೂ ಅರ್ಜುನ ಮುಗಿಸುತ್ತಿದ್ದ. ನನ್ನ ಸಾಮಥ್ರ್ಯವನ್ನು ರಣಾಂಗಣದಲ್ಲಿ ತೋರಿಸುವುದಕ್ಕಾಗಿಯೇ ನಾನು ಬದುಕಿರಬೇಕು! ಬಲರಾಮನ ಆಗಮನದವರೆಗೆ ನಾನು ದುರ್ಯೋಧನನನ್ನು ಪಾಂಡವರಿಂದ ರಕ್ಷಿಸಬಲ್ಲೆ. ಈ ಹಂತಕ್ಕೆ ಮುಟ್ಟಿದ ಮೇಲೆ ಸಾಮ್ರಾಜ್ಯವನ್ನು ನಾವಾಗಿಯೇ ಒಪ್ಪಿಸುವ ಶರಣಾಗತಿಯ ಮಾತು ಬೇಡ. ಇಷ್ಟಾದರೂ ಆ ಭೀಮಸೇನನ ಬಗ್ಗೆ ನನಗೆ ತುಂಬಾ ಭೀತಿಯಿದೆ”.
ಭೀಷ್ಮರಿಗೆ ಭೀಮಸೇನನ ಪ್ರತಿಜ್ಞೆಯ ನೆನಪಾಯಿತು. ಹಿಂದೆ ಪಾಂಡವರು ರಾಜಸೂಯ ಯಾಗ ಮಾಡಿದ್ದರು. ಕೃಷ್ಣ ತನ್ನ ಶತ್ರುಗಳಾದ ಮಾಗಧ, ಶಿಶುಪಾಲರನ್ನು ಕೊಲ್ಲಿಸಲೆಂದೇ ಮಾಡಿದ ಯಾಗ ಅದೆಂದು ಆರ್ಯಾವರ್ತ ಮಾತಾಡಿಕೊಂಡಿತ್ತು. ಭೀಮಾರ್ಜುನರ ಪರಾಕ್ರಮವೆಷ್ಟೆಂಬುದು ಲೋಕಕ್ಕೆ ವಿದಿತವಾದ ವಿದ್ಯಮಾನವದು. ಯಾಗಕ್ಕೆ ಹೋಗಿದ್ದ ದುರ್ಯೋಧನ ಪಾಂಡವರ ವಿಶಾಲ ಉದ್ಯಾನದ ಕೊಳವೊಂದರಲ್ಲಿ ಕಾಲುಜಾರಿ ಬಿದ್ದಿದ್ದ. ಅಲ್ಲೇ ಸಖಿಯರೊಂದಿಗೆ ಹೂ ಕೊಯ್ಯುತ್ತಿದ್ದ ದ್ರೌಪದಿಯಾಗ “ಕುರುಕುಲ ಸಾಮ್ರಾಟರು ಕುರುಡರಾಗಿ ಬಿಟ್ಟರೇ” ಎಂದು ಹಂಗಿಸಿದ್ದಳು. ಇದು ತನ್ನ ಅಪ್ಪ ಧೃತರಾಷ್ಟ್ರನಿಗೆ ಮಾಡಿದ ಅಪಮಾನವೆಂದು ದುರ್ಯೋಧನ ಭೀಷ್ಮರಲ್ಲಿ ಹೇಳಿಕೊಂಡಿದ್ದ. ಅದುವೇ ಅವನನ್ನು ಕಪಟದ ದ್ಯೂತಕ್ಕೆ, ದ್ರೌಪದಿ ವಸ್ತ್ರಾಪಹರಣಕ್ಕೆ ಪ್ರೇರೇಪಿಸಿದ್ದು. ದುಶ್ಯಾಸನ ದ್ರೌಪದಿಯನ್ನು ರಾಜಸಭೆಗೆ ಎಳೆದು ತಂದಾಗ ಇವನು ಸಭ್ಯತೆಯ ಎಲ್ಲೆ ಮೀರಿ “ತೊತ್ತೇ ಬಾ, ನಿನ್ನೊಡೆಯನ ತೊಡೆಯೇರು” ಎಂದು ಅಶ್ಲೀಲವಾಗಿ ತನ್ನ ತೊಡೆಯನ್ನು ತಟ್ಟಿದ್ದ. “ನಿನ್ನ ತೊಡೆಯನ್ನು ಮುರಿದು ಬಿಡುತ್ತೇನೆ ಕುನ್ನಿ” ಎಂದು ಗದೆಯೆತ್ತಿ ಭೀಮ ಮುಂದುವರಿದಾಗ ಯುಧಿಷ್ಟಿರ ತಡೆದಿದ್ದ. ಆಗ ಭೀಮಸೇನ ಅಹಂಕಾರದಿಂದ ಅಸಭ್ಯವಾಗಿ ಪಾಂಚಾಲಿಗೆ ನೀನು ಮಾಡಿದ ಅಪಮಾನಕ್ಕೆ ಪ್ರತೀಕಾರವಾಗಿ ನಿನ್ನ ತೊಡೆಗಳನ್ನು ಮುರಿದು ಹಾಕದಿದ್ದರೆ ನಾನು ಕುಂತೀಪುತ್ರ ಭೀಮಸೇನನೇ ಅಲ್ಲ ಎಂದು ಎಲ್ಲರಿಗೂ ಕೇಳಿಸುವಂತೆ ಪ್ರತಿಜ್ಞೆ ಮಾಡಿದ್ದ. ಇಂದು ಬೆಳಿಗ್ಗೆ ದುಶ್ಯಾಸನನ ಉದರ ಬಗಿದು ರಕ್ತ ಕುಡಿದವನಿಗೆ ದುರ್ಯೋಧನನ ತೊಡೆ ಮುರಿಯುವುದು ಎಷ್ಟರ ಕೆಲಸ?
ದುರ್ಯೋಧನ ಮೌನವನ್ನು ಮುರಿದ: “ತಾತಾ, ಬಲರಾಮ ಬಂದ ಮಾತ್ರಕ್ಕೆ ನಾನೇ ವಿಜಯಿಯಾಗುತ್ತೇನೆನ್ನುವುದು ಒಂದು ಆಶಾವಾದ ಮಾತ್ರ. ಧರ್ಮಯುದ್ಧ ನಡೆಯಲಿ ಎಂಬ ಕಾರಣಕ್ಕಾಗಿ ನಾನು ಅವನ ಆಗಮನವನ್ನು ಕಾಯುತ್ತಿದ್ದೇನೆ. ನಿಮ್ಮ ಸ್ಥತಿ, ಜಯದ್ರಥನ ವಧೆ, ಗುರುಗಳ ಕಗ್ಗೊಲೆ, ಕರ್ಣನ ಹತ್ಯೆ ಎಲ್ಲವೂ ಅಧರ್ಮ ಕೃತ್ಯಗಳೇ. ಎಲ್ಲರನ್ನೂ ಕಳಕೊಂಡ ಮೇಲೆ ಹಸ್ತಿನಾವತಿಯ ಸಿಂಹಾಸನದಲ್ಲಿ ವಿರಾಜಮಾನನಾಗುವ ಬಯಕೆ ದುರ್ಯೋಧನನಿಗಿಲ್ಲ. ನನಗೆ ಧೀರೋದಾತ್ತ ಮರಣ ಬೇಕು ತಾತಾ. ನನ್ನ ಬಗ್ಗೆ ನಿಮಗಿರುವ ಎಲ್ಲಾ ಅಸಮಾಧಾನಗಳನ್ನು ಮರೆತು ನನ್ನನ್ನು ಮನ್ನಿಸಬೇಕು. ತಂದೆಯಂದಿರನ್ನುಕಳಕೊಂಡ ಎಳೆಯ ಕಂದಮ್ಮಗಳಿಂದ, ಮುತ್ತೈದೆ ಭಾಗ್ಯವನ್ನು ಶಾಶ್ವತವಾಗಿ ಕಳಕೊಂಡ ಹೆಂಗಳೆಯರಿಂದ, ಮದುವೆಯಾಗಲು ತರುಣರೇ ಸಿಗದೆ ಜೀವಮಾನ ಪರ್ಯಂತ ಅವಿವಾಹಿತೆಯರಾಗಿ ಬಾಳು ಸವೆಸಬೇಕಾಗಿರುವ ತರುಣಿಯರಿಂದ ಎಂದು ಮರಣ ಸಂಭವಿಸುತ್ತದೆಯೋ ಎಂಬ ಏಕೈಕ ನಿರೀಕ್ಷೆಯಿಂದ ದಿನ ದೂಡುತ್ತಿರುವ ವೃದ್ಧ ಜೀವಗಳಿಂದ ತುಂಬಿಕೊಂಡಿರುವ ಹಸ್ತಿನಾವತಿಗೆ ನಾನೆಂದೂ ಕಾಲಿಡಲಾರೆ. ಹದಿನೇಳು ದಿನಗಳಾದವು ಅಲ್ಲಿಂದ ಹೊರಟು. ಧೃತರಾಷ್ಟ್ರ ಚಕ್ರವರ್ತಿಗಳನ್ನು, ಮಾತೆ ಗಾಂಧಾರಿಯನ್ನು, ರಾಣಿ ಭಾನುಮತಿಯನ್ನು ನೀವು ಸಂತೈಸಬೇಕು. ನಾವು ಒಂಟಿಯಾಗಿಯೇ ಬರುತ್ತೇವೆ. ಒಂಟಿಯಾಗಿಯೇ ಹೋಗುತ್ತೇವೆ. ಬರುತ್ತೇನೆ ತಾತಾ, ನೀವು ಆಶೀರ್ವದಿಸಬೇಕು”.
ಭೀಷ್ಮರಿಗೆ ಮಾತಾಡಲಾಗಲಿಲ್ಲ. ಕಾಲಿಗೆರಗಿದ ದುರ್ಯೋಧನನ ಕೈಗಳನ್ನು ಹಿಡಿದು ಕೊಂಡರು. ಅವನ ತಲೆಯನ್ನು ನೇವರಿಸಿದರು. ಅವರ ಕಣ್ಣುಗಳು ತುಂಬಿಕೊಂಡವು. ಅವನು ನಿಧಾನವಾಗಿ ಹೊರ ನಡೆದಾಗ ಇವನಿನ್ನು ಬರುತ್ತಾನಾ ಎಂದು ತಮ್ಮನ್ನೇ ಕೇಳಿಕೊಂಡರು. ಇವನ ತಂದೆತಾಯಂದಿರನ್ನು, ರಾಣಿ ಭಾನುಮತಿಯನ್ನು ಸಂತೈಸಲು ತಾನೆಲ್ಲಿ ಬದುಕಿರುತ್ತೇನೆಂದು ಅಂದುಕೊಳ್ಳುತ್ತಿರುವಾಗ ಆ ಮಾತುಗಳು ನೆನಪಾದವು: “ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ನಿನ್ನನ್ನು ಕೊಲ್ಲುತ್ತೇನೆ”.
*****
ಮುಂದುವರೆಯುವುದು