ನಿಶೆಯ ಸಮರದಿ ಉರುಳಿದನು ಧರೆಗೆ
ದುರ್ಯೋಧನ, ದುಶ್ಶಾಸನರು ಬಿಡದಿಯಿಂದ ಹೊರಟು ಹೋಗಿ ಎಷ್ಟೋ ಹೊತ್ತಾಗಿತ್ತು. ಕಾಡುತ್ತಿರುವ ಅಂಬೆಯ ನೆನಪಿನಿಂದಾಗಿ ಎಷ್ಟು ಯತ್ನಿಸಿದರೂ ಭೀಷ್ಮರಿಗೆ ನಿದ್ದೆ ಬರಲಿಲ್ಲ. ಸಣ್ಣ ಚಲನೆಯೂ ಎದೆಯಲ್ಲಿ ಅಪಾರ ನೋವನ್ನುಂಟು ಮಾಡುವುದರಿಂದ ಮಗ್ಗುಲು ಬದಲಾಯಿಸಲು ಸಾಧ್ಯವಾಗುತ್ತಿಲ್ಲ. ಎದೆಯಲ್ಲಿ ಆಳವಾಗಿ ನೆಟ್ಟಿರುವ ಬಾಣದಿಂದಾಗಿ ಮಕಾಡೆ ಮಲಗಿ ನಿದ್ರಿಸುವಂತಿಲ್ಲ. ಶವಾಸನ ಸ್ಥತಿಯಲ್ಲಿ ಮಲಗಿ ಮಲಗಿ ಬೆನ್ನು, ನಿತಂಬ ಉರಿಯುವಂತಾಗುತ್ತಿದೆ.
ದೇಹಕ್ಕೂ ಮನಸ್ಸಿಗೂ ಆಘಾತವಾಗಿರುವಾಗ ಸ್ವಸ್ಥವಾಗಿ ನಿದ್ರಿಸಲು ಸಾಧ್ಯವೇ ಇಲ್ಲ. ಇಲ್ಲಿ ಅಂಬೆ ನೆನಪಾಗಿ ಕಾಡುತ್ತಿದ್ದಾಳೆ. ಅಲ್ಲಿ ಕುರುಕ್ಷೇತ್ರದಲ್ಲಿ ರಾತ್ರಿಯುದ್ಧ ನಡೆಯುತ್ತಿದೆ. ಅದಕ್ಕೆ ಧರ್ಮದ ಸಮ್ಮತಿಯಿಲ್ಲ. ಅದು ಅವರ ಇಚ್ಛೆಗೆ ವಿರುದ್ಧವಾದದ್ದು. ಆದರೂ ನಡೆಯುತ್ತಲೇ ಇದೆ. ರಾತ್ರಿಯ ಗೊಂದಲದಲ್ಲಿ ತುಳಿತಕ್ಕೆ ಸಿಕ್ಕಿ ನಿಷ್ಪಾಪಿ ಜೀವಗಳು ಪ್ರಾಣಕಳಕೊಳ್ಳುತ್ತಿವೆ. ದೊಂದಿ ಬೆಳಕಲ್ಲಿ ನಡೆಯುವ ಯುದ್ಧವದು. ಶತ್ರು ಯಾರು, ಮಿತ್ರ ಯಾರು ಎನ್ನುವುದನ್ನು ಮಂದ ಬೆಳಕಲ್ಲಿ ಸರಿಯಾಗಿ ಗುರುತಿಸಲು ಸಾಧ್ಯವಾಗದೆ ಯಾರು ಯಾರನ್ನು ಕೊಂದು ಹಾಕುತ್ತಾರೋ? ಬೊಬ್ಬೆ, ಕೂಗಾಟ, ಕಿರುಚಾಟ, ಆರ್ತನಾದ ಕೇಳಿಬರುತ್ತಿದೆ. ಯಾರಿಗೋ ಬೇಕಾಗಿ ಯಾರ್‍ಯಾರೋ ಸಾಯುತ್ತಿದ್ದಾರೆ. ಕುದುರೆಗಳ ಹೇಷಾರವ, ಆನೆಗಳ ಘೀಳಾಟ, ನಡುನಡುವೆ ಶಂಖನಾದ, ಭೇರಿ ತಮಟೆ ಸ್ವರಗಳು ಕೇಳಿಸುತ್ತಿವೆ. ರಾತ್ರಿ ಯುದ್ಧವನ್ನು ಆರಂಭಿಸಿಯಾಗಿದೆ. ಯಾರಿಂದ ಯಾವಾಗ ಅದು ನಿಲುಗಡೆಯಾಗುತ್ತದೆಯೊ?
ಮಧ್ಯರಾತ್ರಿ ಕಳೆದಿರಬೇಕು. ಯುದ್ಧ ರಂಗದಿಂದ ಕೇಳಿ ಬರುತ್ತಿದ್ದ ಕೋಲಾಹಲ ಇದ್ದಕ್ಕಿ ದ್ದಂತೆ ನಿಂತುಹೋಯಿತು. ಯಾರು ಪ್ರಾಣ ಕಳಕೊಂಡರೊ? ಪಾಂಡವರಲ್ಲಿ ಯಾರನ್ನಾದರೂ ಕೊಲ್ಲಲು ದುರ್ಯೋಧನನಿಗೆ ಸಾಧ್ಯವಾಯಿತೆ? ಯುದ್ಧ ಶಾಶ್ವತವಾಗಿ ನಿಂತು ಬಿಡುತ್ತದೆಯೆ? ಈ ಹೊತ್ತಿನಲ್ಲಿ ಯುದ್ಧದ ಫಲಿತಾಂಶವನ್ನು ತಿಳಿಸಲು ಯಾರು ಬರುತ್ತಾರೆ? ಬೆಳಗ್ಗಿನವರೆಗೂ ಕಾಯಬೇಕಾಗುತ್ತದೆ.
ಬಿಡದಿಯ ಸುತ್ತ ಯಾರೋ ಓಡಾಡಿದ ಸದ್ದು ಕೇಳಿಸಿತು. ಜತೆಗೆ ಪಿಸಿಪಿಸಿ ಮಾತು. ಯಾರೋ ಪ್ರತೀಹಾರಿಯೊಡನೆ ಮಾತಾಡುತ್ತಿದ್ದಾರೆ. ಆಕೃತಿಯೊಂದು ಒಳಪ್ರವೇಶಿಸಿತು: “ತಾತಾ, ನಿಮಗೆ ನಿದ್ದೆ ಬರಲು ಸಾಧ್ಯವಿಲ್ಲವೆಂದುಕೊಂಡು ಬಂದಿದ್ದೇನೆ.”
ಭೀಷ್ಮರಿಗೆ ಧ್ವನಿಯಿಂದಾಗಿ ಗುರುತು ಸಿಕ್ಕಿತು. ಕರ್ಣನಲ್ಲವೇ, ಬಾ ಕುಳಿತುಕೋ, ಅಲ್ಲಿ ನೀವು ಧರ್ಮಬಾಹಿರ ಯುದ್ಧ ನಡೆಸುತ್ತಿರುವಾಗ ನನಗೆ ಹೇಗೆ ನಿದ್ದೆ ಬಂದೀತು ಮಗೂ? ಹೇಳು, ಏನು ವಾರ್ತೆ ತಂದಿರುವೆ?”
ಕರ್ಣ ಕಾಲ ಬುಡದಲ್ಲೇ ಕುಳಿತುಕೊಂಡ : “ರಾತ್ರಿಯ ಯುದ್ಧಕ್ಕೆ ನನ್ನ ಸಮ್ಮತಿಯಿರಲಿಲ್ಲ ತಾತಾ. ಆದರೆ ದುರ್ಯೋಧನನ ಮಾತನ್ನು ತಳ್ಳಿಹಾಕಲು ಸಾಧ್ಯವಾಗದೆ ಹೋಯಿತು. ಅಧರ್ಮ ಯುದ್ಧಕ್ಕೆ ನೀವು ಒಪ್ಪಲಾರಿರಿ ಎಂದು ನನಗೆ ಗೊತ್ತಿತ್ತು. ಎಂದೇ ನಾನಾಗ ದುರ್ಯೋಧನ, ದುಶ್ಶಾಸನರೊಡನೆ ನಿಮ್ಮಲ್ಲಿಗೆ ಬರಲಿಲ್ಲ. ಈಗ ಯುದ್ಧ ನಿಂತಿದೆ. ನನ್ನ ಮನದ ಬೇಗುದಿಯನ್ನು ನಿಮಗೆ ತಿಳಿಸದಿರಲು ನನ್ನಿಂದ ಸಾಧ್ಯವಾಗಲಿಲ್ಲ. ಅದನ್ನು ಹಾಗೆಯೇ ಇಟ್ಟುಕೊಂಡರೆ ಇನ್ನುಳಿದ ರಾತ್ರಿ ನಿದ್ರೆ ಬರಲಾರದೆಂದು ನಿಮ್ಮಲ್ಲಿಗೆ ಬಂದುಬಿಟ್ಟೆ. ನಾಳೆ ಹಗಲು ಇನ್ನೊಂದು ಘೋರ ಯುದ್ಧ ಕಾದಿದೆಯೆಂದು ನನಗನ್ನಿಸುತ್ತದೆ. ನಿದ್ದೆಗೆಟ್ಟು ನಾನೇನು ಯುದ್ಧ ಮಾಡಬಲ್ಲೆ? ಅದಕ್ಕೆಂದೇ ಈಗ ಬಂದುಬಿಟ್ಟೆ. ದುರ್ಯೋಧನನೂ ಬರುವುದರಲ್ಲಿದ್ದ. ನಾನೇ ಬೇಡವೆಂದೆ. ನಿಮ್ಮಲ್ಲಿ ಏಕಾಂತದಲ್ಲಿ ಮಾತಾಡಿ ಸ್ವಲ್ಪ ಹಗುರಾಗಲೆಂದೇ ಬಂದಿದ್ದೇನೆ.”
ಹೀಗೆ ಅಂತರಂಗವನ್ನು ಬಿಚ್ಚಿಡಲೆಂದೇ ಅವರಲ್ಲಿಗೆ ಬರುವವರಲ್ಲಿ ಕರ್ಣ ಮೊದಲಿಗನೇನಲ್ಲ. ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಗುಟ್ಟನ್ನು ಬಚ್ಚಿಟ್ಟುಕೊಂಡು ಮಾರ್ಗದರ್ಶನ ಮಾಡಬಲ್ಲ ಬುದ್ಧಿವಂತರ ಹುಡುಕಾಟದಲ್ಲಿರುತ್ತಾರೆ. ತಮ್ಮ ಜೀವನದುದ್ದಕ್ಕೂ ಭೀಷ್ಮರು ಇತರರಿಗೆ ನೈತಿಕ ನೆಲೆಗಟ್ಟಾಗಿ, ಅಂತಸ್ಸಾಕ್ಷಿಯಾಗಿ ಕಾರ್ಯನಿರ್ವಹಿಸಿದವರು. ಅವರಿಗೆ ಮಾತ್ರ ತಮ್ಮೊಳಗನ್ನು ತೋಡಿಕೊಳ್ಳಲು ಯಾರೂ ಸಿಕ್ಕಿರಲಿಲ್ಲ. ಈಗ ಕರ್ಣ ತನ್ನ ಅಂತರಂಗವನ್ನು ಬಹಿರಂಗಗೊಳಿಸಲು ಬಂದಿದ್ದಾನೆ.
ಶಾಂತ ಸ್ವರದಲ್ಲಿ ಭೀಷ್ಮರೆಂದರು: “ಕರ್ಣಾ, ಯುದ್ಧ ವಿವರಗಳನ್ನಾಗಲೀ, ಫಲಿತಾಂಶ ವನ್ನಾಗಲೀ ತಿಳಿದುಕೊಳ್ಳಲೇಬೇಕೆಂಬ ಕುತೂಹಲ ನನ್ನಲಿಲ್ಲ ಮಗೂ. ನೀನು ಆಗ ದುರ್ಯೋಧನ ನೊಟ್ಟಿಗೆ ಬಾರದಿರುವಾಗ ನನಗೆ ಖಚಿತವಾಗಿತ್ತು, ಪಾಂಡವರನ್ನು ಕೊಲ್ಲುವುದು ನಿನ್ನ ಇಷ್ಟಕ್ಕೆ ವಿರುದ್ಧವಾದುದೆಂದು. ತಮ್ಮ ಶಿಷ್ಯರನ್ನು ಕೊಲ್ಲಲು ಗುರುದ್ರೋಣರಿಗೆ ಹೇಗೆ ತಾನೇ ಮನಸ್ಸು ಬಂದೀತು? ನೀವಿಬ್ಬರು ಪೂರ್ಣಪ್ರಮಾಣದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳದಿದ್ದರೆ ಕುರು ಪಾಳಯಕ್ಕೆ ಜಯಸಿಗಲು ಹೇಗೆ ಸಾಧ್ಯ? ಯುದ್ಧವೆಂದ ಮೇಲೆ ಯಾವುದಾದರೊಂದು ಪಕ್ಷ ಸೋಲುಣ್ಣಲೇಬೇಕು. ಕುರುಸೇನೆ ಸೋತರೆ ನನಗೆ ನೋವಾಗುತ್ತದೆ. ಪಾಂಡವರು ಸೋತರೂ ನಾನು ಸಂಕಟಪಡುತ್ತೇನೆ. ಸಿಂಹಾಸನದ ರಕ್ಷಕನಾಗಿ ನಾನು ಕೌರವರೊಂದಿಗಿದ್ದೇನೆ. ಸಿಂಹಾಸನದಲ್ಲಿ ಪಾಂಡವರಿಗೆ ಪಾಲು ಸಿಗಬೇಕಾದುದು ಧರ್ಮವೆಂದು ನನ್ನ ಅಂತಸ್ಸಾಕ್ಷಿ ಹೇಳುತ್ತಿದೆ. ಪಿತಾಮಹನೆಂದು ನನ್ನನ್ನು ಎಲ್ಲರೂ ಗೌರವಿಸುತ್ತಾರೆ. ನನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳುವವರು ಯಾರೂ ಇಲ್ಲ.
ಕರ್ಣ ತಲೆದೂಗಿದ: “ನನ್ನದು ನಿಮಗಿಂತಲೂ ಇಕ್ಕಟ್ಟಿನ ಸ್ಥತಿ ತಾತಾ. ಸಂಧಾನಕ್ಕೆಂದು ಬಂದಿದ್ದ ಕೃಷ್ಣ ಗುಟ್ಟಿನಲ್ಲಿ ನನ್ನ ಜನ್ಮರಹಸ್ಯ ತಿಳಿಸಿದಾಗಲೇ ಯುದ್ಧದ ಹಣೆಬರಹ ನಿಶ್ಚಯವಾಗಿ ಹೋಯಿತು. ನೀವು ಮತ್ತು ಗುರುದ್ರೋಣರು ಪಾಂಡವ ಪಕ್ಷಪಾತಿಗಳು. ಪಾಂಡವ ನಾಶ ಕಾರ್ಯದಲ್ಲಿ ನಿಮ್ಮಮಿಬ್ಬರಿಂದ ದುರ್ಯೋಧನನಿಗೆ ಯಾವುದೇ ನೆರವು ಸಿಗಲು ಸಾಧ್ಯವಿಲ್ಲ ವೆಂಬುದು ನನಗೆ ಯಾವಾಗಲೋ ಮನವರಿಕೆಯಾಗಿತ್ತು. ಕೃಷ್ಣನಿಂದಾಗಿ ನಾನೂ ನಿಮ್ಮಮಿಬ್ಬರ ಸಾಲಿಗೆ ಸೇರಿಹೋದೆ. ಕುಂತಿಯ ಹೊಟ್ಟೆಯಲ್ಲಿ ಹುಟ್ಟುವ ಬದಲು ನಾನು ಈ ಲೋಕ ನಂಬುವ ಹಾಗೆ ನಿಜವಾಗಿಯೂ ರಾಧೇಯನೇ ಆಗಿರಬೇಕಿತ್ತು. ಆಗ ಯುದ್ಧದ ಹಣೆಬರಹ ಬೇರೆಯೇ ಆಗಿಬಿಡುತ್ತಿತ್ತು.
ಕರ್ಣ ಸ್ವಲ್ಪ ಹೊತ್ತು ಮಾತು ನಿಲ್ಲಿಸಿದ. ಮತ್ತೆ ಮುಂದುವರಿಸಿದ : “ತಾತಾ, ನಿಮ್ಮ ಹಾಗೆ ನಾನು ಪರಶುರಾಮರ ಶಿಷ್ಯ. ದ್ರೋಣರೂ ಪರಶುರಾಮರ ಶಿಷ್ಯರೇ. ದ್ರೋಣಾಚಾರ್ಯರು ಅರ್ಜುನನಿಗೆ ಎಲ್ಲವನ್ನೂ ಹೇಳಿಕೊಟ್ಟರು. ಪರಶುರಾಮರು ನನಗೆ ಹಾಗೆ ಹೇಳಿಕೊಡಲಿಲ್ಲ. ಶಿಷ್ಯನಾದವ ಗುರುವಿಗೆ ಸ್ಫೂರ್ತಿ ನೀಡಿದರೆ ಗುರು ಎಲ್ಲವನ್ನೂ ಅವನಿಗೆ ಹೇಳಿಕೊಡುತ್ತಾನೆ. ಕುಲದ ಕೀಳರಿಮೆಯಿಂದ ಆಗ ನಾನು ನರಳುತ್ತಿದ್ದೆ. ಗುರುಗಳೊಂದಿಗೆ ಸಹಜವಾಗಿ ನಡೆದು ಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಶೂದ್ರರಿಗೆ, ದಸ್ಯುಗಳಿಗೆ ಮತ್ತು ಸ್ತ್ರೀಯರಿಗೆ ಧನುರ್ವಿದ್ಯೆ ನಿಷಿದ್ಧವಾಗಿತ್ತಲ್ಲಾ? ಪರಶುರಾಮರನ್ನು ಆಗ ನಾನು ಸರಿಯಾಗಿ ಅರ್ಥೈಸಿಕೊಂಡಿರಲಿಲ್ಲ. ಅವರು ಜಾತಿವ್ಯವಸ್ಥೆಯನ್ನು ದ್ವೇಷಿಸುವವರೆಂಬುದು ಆಗ ನನಗೆ ತಿಳಿದಿರಲಿಲ್ಲ. ನಾನು ತಲೆಯನ್ನು ನುಣ್ಣಗೆ ಬೋಳಿಸಿ, ಹಿಂಬದಿಯಲ್ಲೊಂದು ಶಿಖೆ ಬಿಟ್ಟು, ಜನಿವಾರ ಹಾಕಿಕೊಂಡು ನಾನೊಬ್ಬ ಅನಾಥ ಬ್ರಾಹ್ಮಣನೆಂದು ಅವರನ್ನು ನಂಬಿಸಿ ಶಸ್ತ್ರಶಾಸ್ತ್ರಾಭ್ಯಾಸ ಮಾಡುತ್ತಿದ್ದೆ. ನನ್ನ ಮೈಕಟ್ಟು, ನಡೆನುಡಿ, ಬಿಲ್ವಿದ್ಯೆಯನ್ನು ಕರಗತ ಮಾಡಿಕೊಳ್ಳುತ್ತಿರುವ ವೇಗವನ್ನು ಗಮನಿಸಿದ ಪರಶುರಾಮರಿಗೆ ನನ್ನ ಮೂಲದ ಬಗ್ಗೆ ಸಂಶಯ ಮೂಡಿತು. ಕೊನೆಗೊಮ್ಮೆ ನನ್ನನ್ನು ದೀರ್ಘ ವಿಚಾರಣೆಗೆ ಒಳಪಡಿಸಿದರು. ಹಸ್ತಿನಾವತಿಯ ಸೂತನಾದ ಅಧಿರಥನ ಸಾಕುಪುತ್ರ ನಾನೆಂದೂ, ನನ್ನ ನಿಜವಾದ ಮೂಲ ಯಾವುದೆಂದು ತಿಳಿಯದೆಂದೂ ಸತ್ಯವನ್ನು ನುಡಿದುಬಿಟ್ಟೆ. ನಾನು ಆರಂಭದಲ್ಲಿ ಸುಳ್ಳು ಹೇಳಿದ್ದನ್ನು ನೆನೆದು ಕೋಪಾವಿಷ್ಟರಾಗಿ ಆಶ್ರಮ ಬಿಟ್ಟು ಹೋಗೆಂದು ಅವರು ಆಜ್ಞಾಪಿಸಿದರು. ನಾನವರ ಕಾಲಿಗೆ ಬಿದ್ದು ಸಾಕು ತಂದೆ ಶೂದ್ರನೆಂಬ ಕಾರಣಕ್ಕೆ ನನಗೆ ವಿದ್ಯೆಯನ್ನು ನಿರಾಕರಿಸ ಬಾರದೆಂದು ಬೇಡಿಕೊಂಡೆ. ಅವರು ಶಾಂತರಾಗಿ ಶಸ್ತ್ರಶಾಸ್ತ್ರ ವಿದ್ಯೆ ಹೇಳಿಕೊಡತೊಡಗಿದರು. ಇದ್ದಕ್ಕಿದ್ದಂತೆ ಒಂದು ದಿನ ನಿನ್ನ ವಿದ್ಯೆ ಪೂರ್ಣವಾಯಿತೆಂದು ನನ್ನನ್ನು ಆಶ್ರಮದಿಂದ ಕಳಿಸಿ ಬಿಟ್ಟರು. ನನಗೆ ಅವರಿಂದ ಎಲ್ಲವನ್ನೂ ಕಲಿಯುವ ಭಾಗ್ಯವಿರಲಿಲ್ಲ.
ಭೀಷ್ಮರಿಗೆ ಪರಶುರಾಮರ ಸ್ವಭಾವ ತಿಳಿದಿತ್ತು. ಜಾತಿವ್ಯವಸ್ಥೆಯನ್ನು ಪುರೋಹಿತರುಗಳ ಸ್ವಾರ್ಥದ ಸೃಷ್ಟಿಯೆಂದು ತನಗೆ ಎಳವೆಯಲ್ಲಿ ಗುರುಗಳು ಹೇಳಿಕೊಡುತ್ತಿದ್ದುದು ಭೀಷ್ಮರಿಗೆ ನೆನಪಾಯಿತು. ಕ್ಷತ್ರಿಯರ ಅಹಂಕಾರವನ್ನು ಅವರು ಖಂಡಿಸುತ್ತಿದ್ದರು. ಕ್ಷತ್ರಿಯರಿಗೆ ಶಸ್ತ್ರವಿದ್ಯೆ ಯನ್ನಾಗಲೀ, ಶಾಸ್ತ್ರವಿದ್ಯೆಯನ್ನಾಗಲೀ ಹೇಳಿಕೊಡುವುದಿಲ್ಲವೆಂದಿದ್ದರು. ಆದರೆ ಶಂತನು ಚಕ್ರವರ್ತಿಗಳ ಸ್ವಭಾವಕ್ಕೆ ಸೋತು ಹೋಗಿ ಎಳೆಯ ಬಾಲಕ ದೇವವ್ರತನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ್ದರು. ಜಾತಿವ್ಯವಸ್ಥೆ ಅಳಿಯದಿದ್ದರೆ ಆರ್ಯಾವರ್ತ ಮತ್ತು ದಕ್ಷಿಣಾಪಥವನ್ನು ಒಂದು ಗೂಡಿಸಿ ಭರತಖಂಡವನ್ನು ನಿರ್ಮಿಸಲು ಸಾಧ್ಯವಾಗಲಾರದು ಎಂದು ಅವರು ಹೇಳುತ್ತಿದ್ದುದು ಅದೆಷ್ಟು ಬಾರಿಯೋ. ಈಗ ಎಲ್ಲಿರಬಹುದು ಅವರು?
ನಿಡಿದಾದ ಉಸಿರು ಬಿಟ್ಟು ಭೀಷ್ಮರೆಂದರು: “ಮಗೂ, ನಿನ್ನ ವಿದ್ಯೆ ಅರ್ಜುನನದಕ್ಕಿಂತ ಕಡಿಮೆಯದೆಂದೇಕೆ ತಿಳಿದುಕೊಳ್ಳುತ್ತಿ? ಮುಖಾಮುಖಿಯಾದರೆ ಅರ್ಜುನನನ್ನು ಸೋಲಿಸುವ ಸಾಮಥ್ರ್ಯ ನಿನ್ನಲ್ಲಿದೆಯೆನ್ನುವುದು ನನಗೆ ಗೊತ್ತು. ನಿನ್ನ ನಿಜವಾದ ಸಾಮಥ್ರ್ಯ ಈವರೆಗೆ ಲೋಕಕ್ಕೆ ತಿಳಿಯಲಿಲ್ಲ. ಅಂದು ದ್ರೌಪದಿಯ ಸ್ವಯಂವರ ಮಂಟಪದಲ್ಲಿ ದುರ್ಯೋಧನನಿಗಾಗಿ ಮತ್ಸ್ಯಯಂತ್ರವನ್ನು ಭೇದಿಸಲು ನೀನು ಎದ್ದಾಗ ಸೂತಪುತ್ರನನ್ನು ವಿವಾಹವಾಗಲಾರೆ ಎಂದಿದ್ದಳಂತಲ್ಲಾ ಆ ದ್ರೌಪದಿ? ಹಿಂದೆ ಉತ್ತರ ಗೋಗ್ರಹಣದ ಸಂದರ್ಭದಲ್ಲಿ ಜಾಣ ಅರ್ಜುನ ಸಮೂಹ ಸಮ್ಮೋಹಿನಿ ವಿದ್ಯೆಯಿಂದ ಅವನ ಕಾರ್ಯ ಪೂರೈಸಿಕೊಂಡ. ನಿನ್ನ ನಿಜವಾದ ತಾಕತ್ತು ಏನೆಂಬುದು ಲೋಕಕ್ಕೆ ತಿಳಿಯುವ ಸಂದರ್ಭ ಈಗ ಒದಗಿ ಬಂದಿದೆ.
ಕರ್ಣನೂ ನಿಡುಸುಯ್ದ: “ಕುರುಕ್ಷೇತ್ರದಲ್ಲಿ ಅಂಥದ್ದೊಂದು ಅವಕಾಶ ನನಗೆ ಸಿಗುತ್ತದೆಂದು ನಾನು ತಿಳಿದುಕೊಂಡಿದ್ದೆ ತಾತಾ. ನನ್ನ ಜನನ ರಹಸ್ಯವನ್ನು ಕೃಷ್ಣ ತಿಳಿಸಿದ ಮೇಲೆ ಅದೂ ತಪ್ಪಿ ಹೋಯಿತು.”
ಭೀಷ್ಮರು ತಕ್ಷಣ ವಿಷಯಾಂತರ ಮಾಡಿದರು: “ಕರ್ಣಾ, ಈ ಅಪರ ವೇಳೆಯಲ್ಲಿ ನನ್ನಲ್ಲಿಗೆ ಬಂದು ನಿನ್ನ ಹೃದಯವನ್ನು ಹಗುರಗೊಳಿಸಿದ್ದೀಯೇ. ಸರಿ ಮಗೂ, ಹೇಳು. ಇಂದಿನ ರಾತ್ರಿ ಯುದ್ಧ ಕೊನೆಗೊಂಡದ್ದು ಹೇಗೆ?”
ಕರ್ಣ ವರ್ತಮಾನಕ್ಕೆ ಬಂದ: “ಅದನ್ನು ನಾನು ಆಗಲೇ ಹೇಳಿಬಿಡಬೇಕಿತ್ತು ತಾತಾ. ಮಾತು ಎಲ್ಲೆಲ್ಲಿಗೋ ಹೋಯಿತು. ಪಾಂಡವರಿಗೆ ತಿಳಿಯದಂತೆ ರಾತ್ರಿ ಅವರ ಪಾಳಯದ ಮೇಲೆರಗಿ ಒಬ್ಬ ಪಾಂಡವನನ್ನಾದರೂ ಮುಗಿಸುವುದು ದುರ್ಯೋಧನನ ಎಣಿಕೆಯಾಗಿತ್ತು. ಆದರೆ ತಾತಾ, ನಮ್ಮ ರಹಸ್ಯ ಯೋಜನೆ ಪಾಂಡವರ ಗೂಢಚರರಿಗೆ ಅದು ಹೇಗೋ ತಿಳಿದು ಹೋಯಿತು. ಪಾಂಡವರು ಕುರುಕ್ಷೇತ್ರದಲ್ಲಿ ದೊಂದಿ ಬೆಳಕಲ್ಲಿ ಯುದ್ಧ ಸನ್ನದ್ಧರಾಗಿ ನಮ್ಮನ್ನು ಕಾಯುತ್ತಿದ್ದರು! ನಾವು ಅವರ ಮೇಲೆ ಮುಗಿಬಿದ್ದೆವು. ದೊಡ್ಡ ಸಮೂಹಯುದ್ಧ ನಡೆದು ಹೋಯಿತು. ರಾತ್ರಿಯುದ್ಧದಲ್ಲಿ ವಿಶೇಷ ಪರಿಣತಿಯಿರುವ ಘಟೋತ್ಕಚ ತಾನೇ ತಾನಾಗಿ ವಿಜೃಂಭಿಸಿ ನಮ್ಮ ಸೇನೆಗೆ ಅಪಾರ ನಷ್ಟವನ್ನುಂಟು ಮಾಡಿದ.”
ಮಹಾವೀರ ಘಟೋತ್ಕಚ ಯುದ್ಧರಂಗದಲ್ಲಿ ಎಷ್ಟೋ ಬಾರಿ ತನಗೆದುರಾದದ್ದು ಭೀಷ್ಮರಿಗೆ ನೆನಪಾಯಿತು. ಅವನು ಹಿಡಿಂಬೆಯಲ್ಲಿ ಭೀಮಸೇನನಿಗೆ ಜನಿಸಿದವನು. ದ್ರೌಪದೀ ಸ್ವಯಂವರ ಪೂರ್ವದಲ್ಲಿ ವಾರಣಾವತದಲ್ಲಿ ದುರ್ಯೋಧನ ಅರಗಿನರಮನೆಯನ್ನು ನಿರ್ಮಿಸಿ, ಧೃತರಾಷ್ಟ್ರನ ಮೂಲಕ ಪಾಂಡವರನ್ನು ಓಲೈಸಿ ಅಲ್ಲಿಗೆ ಕಳುಹಿಸುವುದರಲ್ಲಿ ಯಶಸ್ವಿಯಾಗಿದ್ದ. ದುರ್ಯೋಧನನ ದುರಾಲೋಚನೆಯ ಸುಳಿವು ಸಿಕ್ಕ ಪಾಂಡವರು ಅರಗಿನರಮನೆಗೆ ತಾವೇ ಬೆಂಕಿ ಹಚ್ಚಿ, ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದರು. ದುರ್ಯೋಧನ ಪಾಂಡವರು ಕುಂತೀ ಸಹಿತ ಅಗ್ನಿಯಲ್ಲಿ ದಹಿಸಿ ಹೋದರೆಂದು ಭಾವಿಸಿ ಸಂತೋಷಪಟ್ಟಿದ್ದ. ಅರಣ್ಯದಲ್ಲಿ ಪಾಂಡವರನ್ನು ಕಂಡ ಹಿಡಿಂಬೆ ಭೀಮನಲ್ಲಿ ಮೋಹಿತಳಾಗಿ ಬಿಟ್ಟಳು. ಅವಳ ಅಣ್ಣ ಹಿಡಿಂಬ ಭೀಮನಲ್ಲಿ ಮಲ್ಲಯುದ್ಧ ಮಾಡಿ ಮಡಿದ. ಅನಾಥೆಯಾದ ಹಿಡಿಂಬೆಯನ್ನು ಕುಂತಿಯ ಆದೇಶದಂತೆ ವರಿಸಿದ.
ದಿಕ್ಕೆಟ್ಟಿದ್ದ ಪಾಂಡವರಿಗೆ ಹಿಡಿಂಬೆ ಆಶ್ರಯ ನೀಡಿದಳು. ದ್ರೌಪದೀ ಸ್ವಯಂವರದ ಬಳಿಕ ಯುಧಿಷ್ಠಿರನಿಂದ ಭೀಷ್ಮರಿಗೆ ಈ ವಿಷಯ ತಿಳಿದದ್ದು. ಪಾಂಡವರು ಇಂದ್ರಪ್ರಸ್ಥದಲ್ಲಿರುವಾಗ ಹಿಡಿಂಬೆ ಅಲ್ಲಿಗೆ ಬರಲಿಲ್ಲ. ಅವಳಿಗೆ ಅರಣ್ಯಬಿಟ್ಟು ಎಲ್ಲಿಗೂ ಹೋಗಲು ಇಷ್ಟವಿರಲಿಲ್ಲ. ಅವಳ ನೆನಪಾದಾಗಲೆಲ್ಲಾ ಭೀಮನೇ ಅರಣ್ಯಕ್ಕೆ ಹೋಗಿಬಿಡುತ್ತಿದ್ದ. ಘಟೋತ್ಕಚನಿಗೆ ಅಪ್ಪನೇ ಗುರು. ತಂದೆಯಿಂದ ಯುದ್ಧವಿದ್ಯೆಯನ್ನು, ತಾಯಿಯಿಂದ ಬೇಟೆಯ ತಂತ್ರಗಳನ್ನು ಕಲಿತ. ಅಂಗಸಾಧನೆ ಮಾಡಿ ಜಗಜಟ್ಟಿ ಎನಿಸಿಕೊಂಡ. ತಂದೆಯನ್ನೇ ಹೆಗಲಮೇಲೆ ಕುಳ್ಳಿರಿಸಿ ಎಲ್ಲಿಗೆ ಬೇಕೆಂದರಲ್ಲಿಗೆ ಕರಕೊಂಡು ಹೋಗುವಷ್ಟು ಶಕ್ತಿವಂತನಾದ. ಎಳವೆಯಲ್ಲಿ ಅವನನ್ನು ನೋಡಿ ಭೀಷ್ಮರು ಸಂತೋಷಪಟ್ಟಿದ್ದರು. ಅವನು ಆರ್ಯ ಅನಾರ್ಯ ಸಂಸ್ಕೃತಿಗಳ ಸುಂದರ ಸಂಮಿಶ್ರಣ ದಂತಿದ್ದ. ಜನಾಂಗ ಮಿಶ್ರಣವಾದರೆ ಎಂತಹ ಆರೋಗ್ಯಭರಿತ ಸಂತಾನದ ಸೃಷ್ಟಿಯಾಗುತ್ತದೆಂಬುದಕ್ಕೆ ದೃಷ್ಟಾಂತದಂತಿದ್ದ. ಅವನ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಭೀಷ್ಮರು ಅವನ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದರು. ಯುದ್ಧ ಆರಂಭವಾಗುವುದಕ್ಕೆ ಮುನ್ನ ಒಂದಲ್ಲ ಒಂದು ದಿನ ಅಭಿಮನ್ಯು ಕುರು ಸಮ್ರಾಟನಾಗುತ್ತಾನೆ, ಆಗ ಘಟೋತ್ಕಚ ಅದರ ಆಧಾರಸ್ತಂಭವಾಗಿರುತ್ತಾನೆ. ಆರ್ಯಾವರ್ತದಕ್ಷಿಣಾಪಥಗಳನ್ನು ಸೇರಿಸಿ ಭರತಖಂಡವನ್ನು ನಿರ್ಮಿಸುವ ಗುರು ಪರಶುರಾಮರ ಕನಸನ್ನು ಇವರಿಬ್ಬರು ಸಾಕ್ಷಾತ್ಕರಿಸುತ್ತಾರೆ ಎಂದುಕೊಂಡಿದ್ದರು. ಅಭಿಮನ್ಯುವನ್ನು ಈ ದುರುಳರು ನಿನ್ನೆ ಮೋಸದಿಂದ ಸಂಹರಿಸಿದರು. ಮಹಾವೀರ ಘಟೋತ್ಕಚನನ್ನು ಏನು ಮಾಡಿಬಿಟ್ಟರೊ?
ಕರ್ಣ ಮುಂದುವರಿಸಿದ: ಭೀರ್ಮಾರ್ಜುನರು ತುಂಬಾ ಬಳಲಿದ್ದರು. ದುರ್ಯೋಧನನ ವಿಜಯ ಸನ್ನಿಹಿತವಾಗುತ್ತಿದೆಯೆಂದು ಘಟೋತ್ಕಚನಿಗೆ ಮನವರಿಕೆಯಾಯಿತು. ಅವನು ತನ್ನ ಅರಣ್ಯಪಡೆಯನ್ನು ಹುರಿದುಂಬಿಸಿ ನಮ್ಮ ಮೇಲೇರಿ ಬಂದ. ಅವರು ರಾತ್ರಿ ಯುದ್ಧದಲ್ಲಿ ಮಹಾ ನಿಪುಣರು. ಅವರ ಚಲನೆಗೆ ಬೆಳಕಿನ ಅಗತ್ಯವೇ ಇರಲಿಲ್ಲ. ನಮ್ಮ ಸೇನೆಯಲ್ಲಿ ದೊಡ್ಡ ಕೋಲಾಹಲವೆದ್ದಿತು. ದೀಪವನ್ನು ಮುತ್ತಿಕ್ಕಿದ ಹಾತೆಗಳಂತೆ ನಮ್ಮ ಕಾಲಾಳುಗಳು, ಪಟುಭಟರು ಯುದ್ಧರಂಗದಲ್ಲಿ ಬಿದ್ದು ಒದ್ದಾಡತೊಡಗಿದರು. ಕಾಲ್ತುಳಿತಕ್ಕೆ ಸಿಕ್ಕಿ ಅನೇಕರು ಅಸುನೀಗಿದರು. ಪಾಂಡವರಲ್ಲಿ ಒಬ್ಬನನ್ನಾದರೂ ಮುಗಿಸಲೇಬೇಕೆಂಬ ಛಲದಿಂದ ಯುದ್ಧವನ್ನಾರಂಭಿಸಿದ್ದ ನಮ್ಮ ಸೇನೆ ಹಿಮ್ಮೆಟ್ಟಲೇಬೇಕಾಯಿತು.
ಭೀಷ್ಮರು ನಿರಾಳವಾಗಿ ಉಸಿರಾಡಿದರು: “ಒಳ್ಳೆಯದಾಯ್ತು. ಅಧರ್ಮದ ರಾತ್ರಿಯುದ್ಧ ಹಾಗಾದರೂ ನಿಂತು ಹೋಯಿತಲ್ಲಾ?”
ಕರ್ಣ ನಿಟ್ಟುಸಿರು ಬಿಟ್ಟು ಹೇಳಿದ: “ನಿಂತು ಹೋಗುತ್ತಿದ್ದರೆ ಚೆನ್ನಾಗಿತ್ತು ತಾತಾ. ದುರ್ಯೋಧನ ಕ್ರುದ್ಧನಾಗಿದ್ದ. ಗುರುದ್ರೋಣರನ್ನು ಕಠಿಣವಾಕ್ಕುಗಳಿಂದ ನಿಂದಿಸಿದ. ಪಾಪ, ಅವರು ತಾನೇ ಏನು ಮಾಡಿಯಾರು? ಅಷ್ಟೊಂದು ವಯಸ್ಸಾಗಿರುವ ದ್ರೋಣರಿಗೆ ರಾತ್ರಿ ಏನೇನೂ ಕಾಣಿಸುತ್ತಿರಲಿಲ್ಲ. ಎಡಗೈ ಹೆಬ್ಬೆರಳನ್ನು ನಿನ್ನೆ ಅಭಿಮನ್ಯು ಕತ್ತರಿಸಿ ಹಾಕಿದ್ದನಲ್ಲಾ? ಗಾಯಕ್ಕೆ ಮದ್ದು ಹಚ್ಚಲಿಕ್ಕೂ ಅವರಿಗೆ ಸಮಯವಿರಲಿಲ್ಲ. ಅದು ತುಂಬಾ ನೋವುಂಟು ಮಾಡುತ್ತಿತ್ತು. ಅವರೆಸೆದ ಬಾಣಗಳು ಗುರಿ ತಪ್ಪಿ ಎತ್ತೆತ್ತಲೋ ಹೋಗಿ ನಿಷ್ಫಲವಾಗುತ್ತಿದ್ದವು. ನಾವು ಹಿಮ್ಮೆಟ್ಟಿದ್ರ್ವು. ಘಟೋತ್ಕಚ ಮತ್ತಷ್ಟು ವಿಜೃಂಭಿಸುತ್ತಾ ನಮ್ಮನ್ನು ಅಟ್ಟಿಸಿಕೊಂಡು ಬರತೊಡಗಿದ. ಭೀತಿಯಿಂದ ನಖಶಿಖಾಂತ ನಡುಗುತ್ತಿದ್ದ ದುರ್ಯೋಧನ ಹೇಗಾದರೂ ಅವನನ್ನು ಮುಗಿಸುವಂತೆ ಆಜ್ಞೆ ಮಾಡಿದ. ಆ ಕ್ಷಣಕ್ಕೆ ಅವ ನನ್ನ ತಮ್ಮ ಭೀಮನ ಮಗನೆಂಬ ವ್ಯಾಮೋಹ ನನ್ನನ್ನು ಆವರಿಸಿತು. ಆದರೆ ಅದು ಘಟೋತ್ಕಚನಿಗೆ ಹೇಗೆ ಗೊತ್ತಾಗಬೇಕು? ವ್ಯಾಮೋಹಕ್ಕೊಳಗಾದ ನಾನು ಅವನಿಂದಲೇ ಹತನಾಗುವುದರಲ್ಲಿದ್ದೆ. ಅನ್ಯದಾರಿ ಕಾಣಲಿಲ್ಲ. ಪರಶುರಾಮರಿಂದ ಕಲಿತಿದ್ದನ್ನೆಲ್ಲಾ ನೆನಪಿಸಿಕೊಂಡು ಪುಂಖಾನುಪುಂಖವಾಗಿ ಬಾಣಗಳ ಮಳೆಗೆರೆದೆ. ಘಟೋತ್ಕಚ ತನ್ನ ಪಡೆಯೊಡನೆ ನೆಲಕ್ಕೊರಗಿದ. ಇಲ್ಲಿಗೆ ಸಾಕೆಂದು ನಾನು ಕುರುಸೇನೆಗೆ ಆಜ್ಞಾಪಿಸಿದೆ. ಯುದ್ಧ ನಿಂತಿತು.
ಕರ್ಣನ ದನಿಯಲ್ಲಿ ವಿವರಿಸಲಾಗದಷ್ಟು ಪಶ್ಚಾತ್ತಾಪವಿರುವುದನ್ನು ಭೀಷ್ಮರು ಗುರುತಿಸಿದರು. ಅವರೂ ವಿಷಾದದಲ್ಲಿ ಮುಳುಗಿ ಹೋದರು. ನಿನ್ನೆ ಅರ್ಜುನನ ಮಗ ಮಡಿದ; ಇಂದು ಭೀಮನ ಮಗನ ಅವಸಾನವಾಯಿತು. ನಾಳೆ ಯಾರೊ? ಅಭಿಮನ್ಯುವಿನ ಮರಣಕ್ಕೆ ಅರ್ಜುನ ಜಯದ್ರಥನನ್ನು ಬಲಿತೆಗೆದುಕೊಂಡ. ಘಟೋತ್ಕಚನ ಮರಣಕ್ಕೆ ಭೀಮ ಯಾರನ್ನು ಬಲಿತೆಗೆದು ಕೊಳ್ಳುತ್ತಾನೊ? ಈ ಮಹಾಯುದ್ಧ ಹಿರಿಯರಿಗಿಂತ ಮೊದಲು ಕಿರಿಯರನ್ನು ಬಲಿತೆಗೆದುಕೊಳ್ಳುತ್ತಿದೆ. ಅದುರುತ್ತಿರುವ ಕುರುಸಾಮ್ರಾಜ್ಯದ ತಳಪಾಯವನ್ನು ಗಟ್ಟಿಗೊಳಿಸಬಲ್ಲವರು ಒಬ್ಬೊಬ್ಬರಾಗಿ ನೆನಪಾಗಿ ಹೋಗುತ್ತಿದ್ದಾರೆ. ಎದೆಗೆ ಚುಚ್ಚಿರುವ ಈ ಬಾಣ ಬಿದ್ದು ಹೋಗಿ ಒಮ್ಮೆ ತನ್ನ ಅಂತ್ಯವಾಗಬಾರದಿತ್ತೆ?
ಭೀಷ್ಮರ ಮೌನವನ್ನು ಅರ್ಥಮಾಡಿಕೊಂಡ ಕರ್ಣ ಎದ್ದು ನಿಂತ: “ತಾತಾ, ನಾಳೆ ಏನಾಗುತ್ತದೋ ಎಂಬ ಭೀತಿ ನನ್ನನ್ನು ಕಾಡುತ್ತಿದೆ. ಅದು ನಾನು ಸತ್ತುಹೋದೇನೆಂಬ ಹೆದರಿಕೆ ಯಲ್ಲ. ಬದುಕಿದ್ದೂ ದುರ್ಯೋನನಿಗೆ ಸಹಾಯ ಮಾಡಲಾಗದ ಅಸಹಾಯಕತೆ. ನಮ್ಮ ದಿನಗಳು ಮುಗಿದವು ತಾತಾ. ಇಲ್ಲೇ ಎಲ್ಲೊ ಮೃತ್ಯು ಹೊಂಚಿ ಹಾಕಿ ಕುಳಿತ ಅನುಭವವಾಗುತ್ತಿದೆ. ಆದರೆ ನಮಗಿಂತ ಮೊದಲೇ ಈ ನಿಷ್ಪಾಪಿ ಕಂದಮ್ಮಗಳ ಬಲಿದಾನವಾಗುತ್ತಿರುವುದನ್ನು ಸಹಿಸಲಾಗುತ್ತಿಲ್ಲ.”
ಭೀಷ್ಮರಿಗೆ ಏನನ್ನು ಹೇಳಿ ಕರ್ಣನನ್ನು ಸಮಾಧಾನಪಡಿಸಬೇಕೆಂದು ತಕ್ಷಣ ತೋಚಲಿಲ್ಲ. ಗೂಢಚರ ಅಭಿಮನ್ಯು ವಧೆಯ ಸವಿಸ್ತಾರ ವರದಿಯನ್ನು ಭೀಷ್ಮರಿಗೊಪ್ಪಿಸಿದ್ದ. ನಿನ್ನೆ ಅಭಿಮನ್ಯುವಿನ ಬಿಲ್ಲು ಮುರಿಯದೆ ಹೋಗಿದ್ದರೆ ದುಶ್ಶಾಸನನ ಪುತ್ರನಿಂದ ಅವನನ್ನು ಕೊಲ್ಲಲಾಗುತ್ತಿರಲಿಲ್ಲ. ಹಿಂಬದಿಯಿಂದ ಬಾಣ ಪ್ರಯೋಗಿಸಿ ಅಭಿಮನ್ಯುವಿನ ಬಿಲ್ಲು ಮುರಿದ ಕರ್ಣ, ಅವನ ಮರಣಕ್ಕೆ ಕಾರಣನಾಗಿದ್ದ. ದುರ್ಯೋಧನನ ಆಜ್ಞೆಯನ್ನು ಕರ್ಣ ಧಿಕ್ಕರಿಸುವಂತಿರಲಿಲ್ಲ. ಇಂದು ಘಟೋತ್ಕಚನನ್ನು ನೇರ ಯುದ್ಧದಲ್ಲಿ ಕೊಂದಿದ್ದಾನೆ. ಅದಕ್ಕೂ ದುರ್ಯೋಧನನ ಆಜ್ಞೆಯೇ ಕಾರಣ. ತನ್ನ ಇಷ್ಟಕ್ಕೆ ವಿರುದ್ಧವಾಗಿ ತಮ್ಮಂದಿರ ಮಕ್ಕಳ ಮರಣಕ್ಕೆ ಕಾರಣನಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾನೆ. ಈಗ ಹೀಗೆ ತೆರೆದುಕೊಂಡು ಹಗುರಾಗುತ್ತಿದ್ದಾನೆ. ಅಭಿಮನ್ಯು ಘಟೋತ್ಕಚರ ಮರಣದಿಂದಾಗಿ ಯುದ್ಧ ನಿಂತು ಬಿಡುತ್ತಿದ್ದರೆ ಇವನ ಪಾಪಕೃತ್ಯಗಳಿಗೆ ಸಮರ್ಥನೆಯಾದರೂ ಇರುತ್ತಿತ್ತು. ಇನ್ನು ಇವನಿಗೆ ಉಳಿದಿರುವುದು ಒಂದೇ. ಬದುಕಿರುವಷ್ಟು ದಿವಸ ಎಡೆಬಿಡದೆ ಕಾಡುವ ಪಾಪಪ್ರಜ್ಞೆ.
ಭೀಷ್ಮರು ಸಾಂತ್ವನದ ಸ್ವರದಲ್ಲೆಂದರು: “ಕರ್ಣಾ, ರಾಜಕೀಯದಲ್ಲಿ ಮತ್ತು ಸಮರದಲ್ಲಿ ಸಂಬಂಧಗಳ ಬಗ್ಗೆ ಯೋಚಿಸಬಾರದು. ನಾಳೆ ಯುದ್ಧ ಇನ್ನೂ ತೀವ್ರವಾಗಲಿದೆ. ಬರಿದೆ ಚಿಂತಿಸಿ ಆತ್ಮವಿಶ್ವಾಸ ಕಳಕೊಳ್ಳಬೇಡ. ಹೋಗಿ ದಣಿವಾರಿಸಿಕೋ.”
ಕರ್ಣ ಹಾಗೇ ಬಾಗಿ ವಂದಿಸಿ ಬಿಡದಿಯಿಂದ ಹೊರಬಿದ್ದ. ಭೀಷ್ಮರ ನಿದ್ದೆ ಸಂಪೂರ್ಣವಾಗಿ ಹಾರಿಹೋಯಿತು. ಮತ್ತೆ ಮತ್ತೆ ಆ ಮಾತು ನೆನಪಿಗೆ ಬರತೊಡಗಿತು: “………… ….ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ನಿನ್ನನ್ನು ಕೊಲ್ಲುತ್ತೇನೆ.”
*****
ಮುಂದುವರೆಯುವುದು