ಒತ್ತಾಸೆ : ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ.
ಕನ್ನಡದ ಪರಂಪರೆಯಲ್ಲಿ ಬಂಡಾಯ ಸಂವೇದನೆ ಯಾವತ್ತೂ ಜೀವಂತವಾಗಿದೆ. ಆದರೆ ಅದರ ವಿನ್ಯಾಸಗಳು ಮಾತ್ರ ಕಾಲದಿಂದ ಕಾಲಕ್ಕೆ, ಅಕ್ಷರ ಸಾಹಿತ್ಯದಿಂದ ಮೌಖಿಕ ಸಾಹಿತ್ಯಕ್ಕೆ ಭಿನ್ನವಾಗುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಎರಡು ಅಭಿವ್ಯಕ್ತಿ ಪರಂಪರೆಗಳಿರುವುದನ್ನು ಗುರುತಿಸಿಕೊಳ್ಳಬೇಕು. ಒಂದು, ಅಕ್ಷರ ರೂಪಿಯಾದ ಸಾಹಿತ್ಯ. ಇನ್ನೊಂದು, ಮಾತಿನ ರೂಪದ ಮೌಖಿಕ ಸಾಹಿತ್ಯ.
ಅಕ್ಷರ ರೂಪಿಯಾದ ಕನ್ನಡ ಶಿಷ್ಟಸಾಹಿತ್ಯ ಪರಂಪರೆಯಲ್ಲಿ ಮೈವೆತ್ತಿರುವ ಪ್ರತಿಭಟನೆಯ ನೆಲೆಗಳನ್ನು ಈಗಾಗಲೇ ಅನೇಕ ವಿಮರ್ಶಕರು ಗುರುತಿಸಿದ್ದಾರೆ. ಪಂಪ, ಹರಿಹರ, ಆಂಡಯ್ಯ, ಕುಮಾರವ್ಯಾಸ, ಸರ್ವಜ್ಞ-ಹೀಗೆ ಇವರ ಪಟ್ಟಿ ದೊಡ್ಡದಿದೆ. ಇವರಲ್ಲಿ ಪ್ರತಿಭಟನೆಯ ನೆಲೆಗಳು ಎಷ್ಟೇ ಇದ್ದರೂ ಅವರ ಒಟ್ಟು ಸಾಹಿತ್ಯವು ಆಳವಾದ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯಿಂದ ಪುಟಗೊಂಡು, ಸಮಾಜದ ಸಮಗ್ರ ಬದಲಾವಣೆ ಅಥವಾ ಇರುವ ಜಡ ವ್ಯವಸ್ಥೆಗೆ ಪರ್ಯಾಯವಾದ ಆರೋಗ್ಯಕರ ಸಮಾಜ ನಿರ್ಮಾಣದ ಕನಸನ್ನು ಹೊರುವುದಿಲ್ಲ. ಆದ್ದರಿಂದ ಈ ಧಾರೆಯ ಸಾಹಿತ್ಯವನ್ನು ಬಂಡಾಯ ಸಾಹಿತ್ಯವೆಂದು ಕರೆಯಲಾಗುವುದಿಲ್ಲ. ಈ ನಡುವೆ ಕಾಣುವ ವಚನ ಸಾಹಿತ್ಯವು ಭಿನ್ನವಾದ ಅಂತಃಸತ್ವವನ್ನು ಪಡೆದಿದ್ದು, ಅದು ಸಮಾಜ ಬದಲಾವಣೆಯ ತೀವ್ರ ಒತ್ತಾಸೆಯಲ್ಲಿಯೇ ಒಡಮೂಡುತ್ತದೆ. ಇಲ್ಲಿ ಇದುವರೆಗೂ ಮಾತಾಗದ ಅನೇಕ ಸಾಮಾಜಿಕ ವರ್ಗಸಂವೇದನೆಗಳು ಮಾತಾಡುತ್ತವೆ. ಅಂಬಿಗರ, ಮಾದಾರ, ಡೋಹರ ಮೊದಲಾದ ಜಾತಿ ಮತ್ತು ವೃತ್ತಿ ಮೂಲ ಸಂವೇದನೆಗಳಲ್ಲದೆ ಅಕ್ಕಮಹಾದೇವಿ, ಸಂಕವ್ವೆ ಮೊದಲಾದವರ ಮೂಲಕ ಪುರುಷ ಬಂಧನದ ಹೆಣ್ಣು, ವೇಶ್ಯೆಯ ನಿಷ್ಠೆ ಮೊದಲಾದ ಸ್ತ್ರೀ ಸಂಬಂಧಿಯಾದ ಸಂವೇದನೆಗಳು ಇಲ್ಲಿ ಮಾತಾಗುತ್ತವೆ.
ಹೀಗೆ ವಚನ ಸಾಹಿತ್ಯ ಮತ್ತು ಚಳುವಳಿಯ ಮೂಲಕ ಕನ್ನಡ ಸಾಹಿತ್ಯ ಮತ್ತು ಪರಂಪರೆಯು ಹಿಂದೆಂದೂ ಕಾಣದ ವಿಶಿಷ್ಟ ಸಂವೇದನೆಯೊಂದನ್ನು ಮೊಟ್ಟಮೊದಲಿಗೆ ಕಾಣುವಂತಾಯಿತು. ಆದರೆ ಇಲ್ಲಿಯೇ ಗುರುತಿಸಿಕೊಳ್ಳಬೇಕಾದ ವಚನ ಸಾಹಿತ್ಯ ಮತ್ತು ಸಂವೇದನೆಗಳ ದೊಡ್ಡ ಮಿತಿಯೆಂದರೆ ಅಲ್ಲಿ ಮಾತಾದ ಎಲ್ಲಾ ಸಾಮಾಜಿಕ ಸಂವೇದನೆಗಳು ತಮ್ಮ ಜಾತಿ ಮೂಲಕ್ಕೆ ಹೊರತಾಗಿ ನಿಂತು ಅಥವಾ ಶಿವಸಂಸ್ಕೃತಿಗೆ ಮಾರ್ಪಟ್ಟು ಅನಂತರವಷ್ಟೆ ಮಾತನಾಡತೊಡಗಿದವು ಎಂಬುದು. ಹೀಗಾಗಿ ವಚನ ಸಂವೇದನೆಗೆ ಬಹುಮುಖತ್ವವು ದೊರಕದೇ ಹೋಯಿತು.
ಹೀಗೆ ಹೆಚ್ಚು ಸಮಾಜವಾದಿಯಾಗಬಹುದಾಗಿದ್ದ ಸಮಾಜದ ಬಹುಮುಖಿ ಸಂವೇದನೆಗಳನ್ನು ಏಕೀಕೃತ ಶಿವ ಸಂವೇದನೆಯನ್ನಾಗಿ ಮಾಡಿದ ವಚನ ಸಂಸ್ಕೃತಿಯು ಈ ಒಂದು ಮಿತಿಯ ನಡುವೆಯೇ ಸಮಾಜದ ಬದಲಾವಣೆಗೆ ತೀವ್ರವಾಗಿ ಹಂಬಲಿಸಿತು; ಆ ನಿಟ್ಟಿನಲ್ಲಿ ನಡೆ ಮತ್ತು ನುಡಿಗಳನ್ನು ಒಂದನ್ನಾಗಿ ಮಾಡಿಕೊಳ್ಳುತ್ತಾ ಬಂದ ಶರಣರು ಕನ್ನಡದ ಪರಂಪರೆಯಲ್ಲಿಯೇ ಹೊಸ ಅಧ್ಯಾಯವಾಗಿ ಮಾರ್ಪಟ್ಟರು. ಆದ್ದರಿಂದ ಕಳೆದ ಮೂರು ದಶಕಗಳ ಬಂಡಾಯದ ಚರ್ಚೆಯಲ್ಲಿ ವಚನ ಚಳುವಳಿಯ ಘಟ್ಟವು ನಮಗೆ ಪೂರ್ವಭಾವಿಯಾಗಿ ಹೆಚ್ಚು ಮುಖ್ಯವಾಗುತ್ತದೆ.
ವಚನ ಸಂಸ್ಕೃತಿಯ ಆಶಯಗಳು ಹರಿಹರ, ರಾಘವಾಂಕ, ಗುಬ್ಬಿಯ ಮಲ್ಲಣಾರ್ಯ ಮೊದಲಾದ ಕವಿಗಳ ಮೂಲಕ ಜಡವಾಗತೊಡಗಿದಾಗ ಅವುಗಳಿಗೆ ಪರ್ಯಾಯವಾದ ಸಾಂಸ್ಕೃತಿಕ ನೆಲೆಯಲ್ಲಿ ಮಂಟೇಸ್ವಾಮಿ ಮೊದಲಾದ ಪರಂಪರೆಗಳು ಕ್ರಿಯಾಶೀಲವಾಗತೊಡಗಿದವು. ಅಲ್ಲಿ ವಚನ ಸಂಸ್ಕೃತಿಯ ನಿರ್ವಚನವು ತನ್ನ ಪರಿಪ್ರೇಕ್ಷ್ಯದಲ್ಲಿ ನಡೆದದ್ದಲ್ಲದೆ, ಶಿಷ್ಟ ನೆಲೆಯ ವೀರಶೈವ ಸಂವೇದನೆಗಳಿಗೆ ಸಹ ಪ್ರತಿಕ್ರಿಯೆಯಾಗಿ ಅವು ಮೂಡಿದವು. ಕ್ರಮೇಣ ಅವು ಸಹ ಜನಪದರ ಮಡಿಲಲ್ಲಿ ಮಠವಾಗತೊಡಗಿದ್ದು ಅವುಗಳ ಮುಖ್ಯ ಮಿತಿ.
ಹೀಗೆ ವಚನ ಸಂವೇದನೆಯನ್ನು ತಪ್ಪಾಗಿ ವ್ಯಾಖ್ಯಾನಿಸತೊಡಗಿದ ಮಧ್ಯಕಾಲದ ವೀರಶೈವ ಸಾಹಿತ್ಯಕ್ಕೆ ಜನಪದರ ನೆಲೆಯಲ್ಲಿ ಬಂಡಾಯವಾಗಿ ಮೂಡಿದ ಈ ಪರಂಪರೆಗಳ ಅಧ್ಯಯನ ಇನ್ನೂ ಹೆಚ್ಚಾಗಬೇಕೆಂಬುದು ಇಲ್ಲಿಯ ಆಶಯ. ಈ ನಿಟ್ಟಿನಲ್ಲಿ ಆಗಿರುವ ಅಧ್ಯಯನಗಳನ್ನು ಮುಖ್ಯವೆಂದು ಪರಿಗಣಿಸಿಯೇ ಈ ಮಾತನ್ನು ಆಡುತ್ತಿದ್ದೇನೆ.
ಹೀಗೆ ಒಟ್ಟು ಶಿಷ್ಟ ಮತ್ತು ಮೌಖಿಕ ಪರಂಪರೆಯ ಕನ್ನಡ ಸಾಹಿತ್ಯದಲ್ಲಿ ವಚನ ಚಳುವಳಿಯನ್ನು ಬಂಡಾಯ ಪರಂಪರೆಯ ಮೊದಲ ಮುಖ್ಯ ಘಟ್ಟವೆಂದು ಕರೆಯಬಹುದು. ಇದರ ತರುವಾಯ ಅಂತಹುದೇ ಮತ್ತೊಂದು ಘಟ್ಟ ಕಾಣಿಸಿಕೊಳ್ಳುವುದು ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ. ಆದರೆ ಎಪ್ಪತ್ತರ ದಶಕದ ಸಂವೇದನೆಗಳು ಮೂಲ ಸಾಮಾಜಿಕ ಸ್ಮೃತಿಗಳಲ್ಲಿಯೇ ವ್ಯಕ್ತವಾದದ್ದು ವಿಶಿಷ್ಟ ಮತ್ತು ಚಾರಿತ್ರಿಕ ಮಹತ್ವದ ಸಂಗತಿ ಎನಿಸುತ್ತದೆ. ಅದನ್ನು ಎಸ್.ಎಸ್. ಹಿರೇಮಠರ ಮಾತಿನಲ್ಲೇ ಹೇಳುವುದಾದರೆ ಸಾವಿರಾರು ವರ್ಷಗಳ ಕನ್ನಡ ಸಾಹಿತ್ಯದ ಸುದೀರ್ಘ ಪರಂಪರೆಯಲ್ಲಿ ಶರಣರಾಗಿ ಮಾರ್ಪಡದೆ ಹೊಲೆ ಮಾದಿಗರಾಗಿಯೇ ಅನೇಕರು ಮಾತನಾಡಿದ ಸಾಹಿತ್ಯ ಸಿಗುವುದು ದಲಿತ-ಬಂಡಾಯ ಘಟ್ಟದಲ್ಲಿ ಮಾತ್ರ.ಅಂದರೆ ಕನ್ನಡ ಸಾಹಿತ್ಯದಲ್ಲಿ ಜಾತಿ ಮೂಲದ ಸಾಚಾ ಸಂವೇದನೆಗಳು ಸಮಾಜವಾದಿ ನೆಲೆಯಲ್ಲಿ ಪ್ರಕಟವಾದದ್ದು ಈ ಕಾಲದಲ್ಲಿ ಮಾತ್ರ.
ಹೀಗೆ ಕರ್ನಾಟಕದಲ್ಲಿ ಬಹುತೇಕ ಜಾತಿ ಮೂಲದ ಸಂವೇದನೆಗಳು ಇತಿಹಾಸದ ಗರ್ಭದಿಂದ ಹೊರಬಂದು ಮಾತನಾಡಿದವು. ಕತೆ, ಕಾವ್ಯ, ನಾಟಕ, ಕಾದಂಬರಿ ಹೀಗೆ ಸಾಹಿತ್ಯದ ಬಹುತೇಕ ಪ್ರಕಾರಗಳನ್ನು ಇದು ಆವರಿಸಿತು. ಇಂತಹ ಸಾಹಿತ್ಯ ಸೃಷ್ಟಿಗೆ ಚಳುವಳಿಗಳು ಪೂರಕವಾಗಿದ್ದವು. ಇವುಗಳಲ್ಲಿ ದಲಿತ, ಸ್ತ್ರೀವಾದಿ ಚಳುವಳಿಗಳು ತೀವ್ರವಾಗಿದ್ದವಲ್ಲದೆ, ರೈತ, ಕನ್ನಡ ಮತ್ತು ಹಿಂದುಳಿದ ವರ್ಗಗಳಲ್ಲಿ ಮೂಡುತ್ತಿದ್ದ ಜಾಗೃತ ಪ್ರಜ್ಞೆಯೂ ಇವುಗಳಿಗೆ ಪೋಷಕವಾಗಿತ್ತು.
ಹೀಗೆ ಎಪ್ಪತ್ತು ಎಂಬತ್ತರ ದಶಕಗಳಲ್ಲಿ ಕಾಣಿಸಿಕೊಂಡ ಸಾಹಿತ್ಯದಲ್ಲಿ ಊಳಿಗಮಾನ್ಯ ಸಂಸ್ಕೃತಿಯ ಶೋಷಿತ ನೆಲೆಗಳು ಪ್ರಧಾನವಾಗಿ ಅನಾವರಣಗೊಂಡವಲ್ಲದೆ, ಸಾಮಾಜಿಕ ಮತ್ತು ಲಿಂಗತಾರತಮ್ಯದ ನೆಲೆಗಳು, ಇತಿಹಾಸದ ಪುನಾರಚನೆಯ ಪಾಠಗಳು ಮುಖ್ಯ ಸ್ಥಾಯಿಗಳಾಗಿ ಮೂಡಿಬಂದವು. ಇಲ್ಲಿ ಹೊಸ ಸಮಾಜದ ಕನಸು ಸಾಹಿತ್ಯವೇ ಅಲ್ಲದೆ ರಂಗಭೂಮಿ, ಚಿತ್ರಕಲೆ ಮೊದಲಾದ ವಿವಿಧ ಕಲಾಪ್ರಕಾರಗಳಿಗೆ ಹೊಸ ಆಯಾಮಗಳನ್ನು ಕಲ್ಪಿಸಿತು. ಇದಕ್ಕೆ ಪೋಷಕವಾಗಿ ಅಂಬೇಡ್ಕರ್, ಮಾರ್ಕ್ಸ್, ಲೋಹಿಯಾ, ಪೆರಿಯಾರ್ ಸಿದ್ಧಾಂತಗಳು ಆರೋಗ್ಯಕರ ಗುಂಪುಗಳನ್ನು ನಿರ್ಮಿಸುತ್ತಿದ್ದವು. ಇವೆಲ್ಲವುಗಳಿಗೆ ಚರ್ಚಾ ಮತ್ತು ಕ್ರಿಯಾ ವೇದಿಕೆಯಾಗಿ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಅದು ವ್ಯವಸ್ಥೆ ಮಾಡುತ್ತಾ ಬಂದ ತನ್ನ ಜಿಲ್ಲಾ ಮತ್ತು ತಾಲ್ಲೂಕು ಶಾಖೆಗಳ ಕಾರ್ಯಕ್ರಮಗಳು ಮತ್ತು ರಾಜ್ಯ ಸಮ್ಮೇಳನಗಳು ಪೋಷಕವಾಗಿದ್ದವು. ಇವೆಲ್ಲವುಗಳ ಭಾಗವಾಗಿಯೇ ಬೀದಿ ನಾಟಕ, ಪುಸ್ತಕ ಜಾಥಾ, ಧರಣಿ-ಪ್ರತಿಭಟನೆಗಳನ್ನು ಗುರುತಿಸಿಕೊಳ್ಳಬೇಕು.
ಹೀಗೆ ಅಂದಿನ ಬಂಡಾಯವು ಸಿದ್ಧಾಂತ, ಚಿಂತನೆ ಮತ್ತು ಕ್ರಿಯೆಗಳ ಸಂಲಗ್ನ ಸ್ಥಿತಿಯಲ್ಲಿ ಆರೋಗ್ಯಕರ ಸಮಾಜವಾದಿ ‘ಕಲ್ಯಾಣ’ವನ್ನು ನಿರ್ಮಿಸುತ್ತಾ, ಯುವ ಜನಾಂಗವನ್ನು ಆಕರ್ಷಿಸಿದ್ದಲ್ಲದೆ, ಅಷ್ಟೊತ್ತಿಗಾಗಲೇ ಬರೆದು ನವ್ಯರೆಂದು ಪ್ರತಿಷ್ಠಿತರಾಗಿದ್ದ ಅನೇಕರನ್ನು ಸಹ ತನ್ನ ಪ್ರಭಾವಕ್ಕೆ ಒಳಪಡಿಸಿತು. ಇದರ ಪರಿಣಾಮವಾಗಿ ತೇಜಸ್ವಿಯಂಥವರಿಂದ ‘ತಬರನ ಕಥೆ’ ಯಂತಹ ಕತೆಗಳು, ಲಂಕೇಶರಂಥವರಿಂದ ‘ಅವ್ವ’ನಂತಹ ಪದ್ಯಗಳು, ಅನಂತಮೂರ್ತಿ ಅಂಥವರಿಂದ ‘ಸಂಸ್ಕಾರ’ದಂತಹ ಕಾದಂಬರಿಗಳು ಮೂಡಲು ಸಾಧ್ಯವಾಯಿತು. ಈ ಬದಲಾವಣೆಯ ಪ್ರಕ್ರಿಯೆ ಎಷ್ಟರಮಟ್ಟಿಗೆ ತೀವ್ರವಾಗಿತ್ತೆಂದರೆ, ಬಂಡಾಯದ ಕಾಲವನ್ನು ಹಾದುಹೋಗುತ್ತಿದ್ದ ನವೋದಯ, ನವ್ಯ ಮೊದಲಾದ ಯಾವುದೇ ಮನೋಧರ್ಮದ ಲೇಖಕರು ಆ ಕಾಲದ ಪ್ರಭಾವ ವಲಯದಿಂದ ಹೊರಗುಳಿದು ಬರೆಯುವುದಕ್ಕೆ ಸಾಧ್ಯವಾಗಲಿಲ್ಲ. ಪ್ರಗತಿಶೀಲರ ಪ್ರಭಾವಕ್ಕೊಳಗಾಗಿ ಕುವೆಂಪುರವರು ‘ಕಲ್ಕಿ’ ಬರೆದಂತೆ ಇಲ್ಲಿಯೂ ವಿವಿಧ ಪಂಥಗಳ ಮುಖ್ಯ ಲೇಖಕರು ಬಂಡಾಯ ಸಂವೇದನೆಗಳಿಗೆ ಮಾತುಗಳಾಗತೊಡಗಿದರು. ಇದನ್ನು ಡಿ.ಆರ್. ನಾಗರಾಜರು ‘ಪರಿಷ್ಕೃತ ನವ್ಯ’ ಎಂದು ಕರೆದದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.
ಹೀಗೆ ಎಪ್ಪತ್ತು ಮತ್ತು ಎಂಬತ್ತರ ದಶಕಗಳ ಬಂಡಾಯ ಸಾಹಿತ್ಯವು ಚಿಂತನೆ-ಸೈದ್ಧಾಂತಿಕತೆ ಮತ್ತು ಚಳುವಳಿಗಳ ಸಂಲಗ್ನ ಸ್ಥಿತಿಯಲ್ಲಿ ಹೆಚ್ಚು ತೀವ್ರವಾಗಿರುವುದಕ್ಕೆ ಸಾಧ್ಯವಾಯಿತು. ಇದರ ಪರಿಣಾಮವಾಗಿ ಈ ಸಾಹಿತ್ಯವು ಸಹಜವಾಗಿಯೇ ಜನಮುಖಿಯಾಗಿ ಹರಿಯಲು ಶಕ್ತವಾಯಿತು.
ಹೀಗೆ ತೀವ್ರ ಜನಪರತೆ ಮತ್ತು ಜನಮುಖತೆಗಳನ್ನು ಏಕಕಾಲಕ್ಕೆ ಪಡೆದಿದ್ದ ಅಂದಿನ ಬಂಡಾಯ ಸಾಹಿತ್ಯವು ಸೂಕ್ತ ವಿಮರ್ಶೆಯ ನ್ಯಾಯವನ್ನು ಮಾತ್ರ ಪಡೆಯದೆ ಹೋದದ್ದು ವಿಪರ್ಯಾಸ. ಆದರೆ ಆ ಕೊರತೆ ಇತ್ತೀಚಿನ ವರ್ಷಗಳಲ್ಲಿ ನೀಗುತ್ತಿರುವುದು ಆರೋಗ್ಯಕರ ಬೆಳವಣಿಗೆ ಎನಿಸುತ್ತದೆ. ಈ ಎಲ್ಲವುಗಳ ನಡುವೆಯೇ ಅಂದು ಸೂಕ್ತವಿಮರ್ಶೆಗೆ ಒಳಪಡದ ಕುಂ.ವೀ. ಮತ್ತು ಸಾ.ರಾ. ಅವರ ಕತೆ-ಕಾದಂಬರಿಗಳು ಇತ್ತೀಚೆಗೆ ಸೂಕ್ತ ವಿಮರ್ಶೆಗೆ ಒಳಪಡುತ್ತಿವೆ ಎನಿಸುತ್ತದೆ. ಅವರ ಕೃತಿಗಳಲ್ಲಿನ ದಲಿತ ಮತ್ತು ಮುಸ್ಲಿಂ ಬದುಕಿನ ಮೌಲ್ಯ ವ್ಯವಸ್ಥೆ ಉತ್ಪ್ರೇಕ್ಷೆಗೆ ಒಳಪಟ್ಟಿವೆಯೋ ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ಇತ್ತೀಚಿನ ವಿಮರ್ಶೆಗಳು ನಡೆಯುತ್ತಿವೆ.
ಹೀಗೆ ಕೆಲವು ಅನುಮಾನಗಳ ನಡುವೆಯೇ ಸಿದ್ಧಗೊಂಡ ಬಂಡಾಯ ಸಾಹಿತ್ಯವು ಚಾರಿತ್ರಿಕವಾಗಿ ಮಹತ್ವದ್ದೆನಿಸುತ್ತದೆ.
ಬಂಡಾಯವು ಇವತ್ತಿಗೂ ಜೀವಂತ. ಈ ಮಾತನ್ನು ಹೇಳಲು ಕಾರಣವೆಂದರೆ, ಬಂಡಾಯವು ಆವತ್ತು ಇತ್ತು,ಇವತ್ತು ಇದೆಯೇ? ಎಂಬ ಪ್ರಶ್ನೆಗಳನ್ನು ಕೇಳುತ್ತಲೇ ವರ್ತಮಾನಕ್ಕೆ ಕುರುಡರಾದವರ ನಡುವೆ ನಾವಿರುವುದರಿಂದ ಇಂತಹ ಮಾತುಗಳು ಅಪೇಕ್ಷಣೀಯ. ಈ ಹಿನ್ನೆಲೆಯಲ್ಲಿ ದಲಿತ, ಮುಸ್ಲಿಂ, ಸ್ತ್ರೀ ಮೊದಲಾದ ಸಂವೇದನೆಗಳಲ್ಲಿ ಗಮನಾರ್ಹ ಸಾಹಿತ್ಯ ರಚನೆಯಾಗುತ್ತಿದೆ. ಹೊಸ ತಲೆಮಾರಿನವರನ್ನೇ ಗುರುತಿಸಿ ಹೇಳುವುದಾದರೆ ಮೊಗಳ್ಳಿ ಗಣೇಶ್, ಮೋಹನ ನಾಗಮ್ಮನವರ, ಸತ್ಯಾನಂದ ಪಾತ್ರೋಟ, ಎನ್.ಕೆ. ಹನುಮಂತಯ್ಯ, ಎಲ್.ಸಿ. ರಾಜು, ಸುಧಾಕರ, ಅರ್ಜುನಗೊಳಸಂಗಿ, ಎಚ್.ಟಿ. ಪೋತೆ ಮೊದಲಾದವರ ಬರಹಗಳು ದಲಿತ ಸಂವೇದನೆಗಳಿಗೆ ಸಾಕ್ಷ್ಯಗಳಾದರೆ, ಕೆ. ಶರೀಫಾ, ಬಿ. ಪೀರ್‌ಭಾಷಾ ಮೊದಲಾದವರ ಬರಹಗಳು ಮುಸ್ಲಿಂ ಸಂವೇದನೆಗಳಿಗೆ ಸಮರ್ಥ ದಾಖಲೆಗಳಾಗುತ್ತವೆ. ಅಂತೆಯೇ ಸ್ತ್ರೀವಾದಿ ನೆಲೆಯಲ್ಲಿ ವಿನಯಾ, ಎಲ್.ಜಿ. ಮೀರಾ, ಕವಿತಾ ಕುಸುಗಲ್, ಛೇಯಾ ಭಗವತಿ ಮೊದಲಾದ ಅನೇಕರು ಮುಖ್ಯರಾದರೆ, ಇತರೆ ಜನಪರ ನೆಲೆಗಳಲ್ಲಿ ರಾಜಪ್ಪ ದಳವಾಯಿ, ಎಂ.ಡಿ. ವಕ್ಕುಂದ, ದೇವುಪತ್ತಾರ್, ಚಿದಾನಂದ ಸಾಲಿ, ಆನಂದ ಋಗ್ವೇದಿ ಮೊದಲಾದ ಅನೇಕರು ಮುಖ್ಯ ರಾಗುತ್ತಾರೆ.
ಹೀಗೆ ಹೊಸ ತಲೆಮಾರಿನ ನೂರಾರು ಲೇಖಕರು ಬಂಡಾಯದ ಹಿಂದಿನ ಸಂವೇದನೆಗಳಿಗೆ ಇವತ್ತಿನ ವಿಸ್ತರಣೆಗಳಾಗಿ ನಿಂತಿರುವುದು ಸಾಂಸ್ಕೃತಿಕ ಮಹತ್ವದ ಸಂಗತಿಯೆನಿಸುತ್ತದೆ. ಈ ನೆಲೆಯಲ್ಲಿ ಕೋಮುವಾದ, ಶಿಕ್ಷಣದ ಕೇಸರೀಕರಣ, ಜಾಗತೀಕರಣಗಳ ಜತೆಗೆ ಹಳೆಯ ಸವಾಲುಗಳಾದ ಜಾತಿ ವೈಷಮ್ಯ, ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯ ಮೊದಲಾದವುಗಳು ಸಹ ಇವರನ್ನು ಕಾಡುತ್ತಿವೆ. ಇವರೊಂದಿಗೆ ಹಿರಿಯ ತಲೆಮಾರಿನ ಬಂಡಾಯ ಲೇಖಕರು ಸಹ ಗಮನಾರ್ಹ ಬರವಣಿಗೆಯಲ್ಲಿ ತೊಡಗಿರುವುದು ಮುಖ್ಯವೆನಿಸುತ್ತದೆ. ಇಂತಹ ಬರವಣಿಗೆ ವಿಶೇಷವಾಗಿ ಕಾವ್ಯ, ಕತೆ, ನಾಟಕ ಈ ಪ್ರಕಾರಗಳಲ್ಲಿಕಾಣುತ್ತಿದೆ. ಈ ಸಾಲಿನ ಪ್ರಕಾರಗಳಲ್ಲಿ ವಿಚಾರ ಸಾಹಿತ್ಯಕ್ಕೆ ಮೊದಲ ಸ್ಥಾನವಿದೆ. ಕಾರಣ, ಇತರೆ ಎಲ್ಲಾ ಪ್ರಕಾರಗಳಿಗಿಂತ ವಿಚಾರ ಸಾಹಿತ್ಯದಲ್ಲಿ ಇವತ್ತಿನ ಸಂವೇದನೆಗಳ ತುಂಬು ಬೆಳೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಪ್ರಸ್ತಾಪಗೊಳ್ಳದ ಕಾದಂಬರಿ ರಚನೆಯಲ್ಲಿ ಜಾಗತೀಕರಣದಂತಹ ಹೊಸ ಸವಾಲುಗಳಿಗೆ ಮುಖಾಮುಖಿಯಾಗುವ ಪ್ರಜ್ಜೆ ಹೆಚ್ಚಾಗಬೇಕಿದೆ.
ಒಟ್ಟಾರೆ, ಬಂಡಾಯದ ಆವತ್ತಿನ ಸಂವೇದನೆಗಳೊಂದಿಗೆ ಇವತ್ತಿನ ಸಂವೇದನೆಗಳು ಸಹ ವರ್ತಮಾನದಲ್ಲಿ ಕಾಣುತ್ತಿರುವುದು ಬಂಡಾಯದ ಇವತ್ತಿನ ಸ್ವರೂಪವಾಗಿದೆ. ಈ ನೆಲೆಯಲ್ಲಿ ಬಂಡಾಯವೆಂಬುದು ನಿಂತ ನೀರಾಗದೆ, ಹರಿಯುವ ನೀರಾಗಿದೆ ಎಂಬುದು ಸ್ಪಷ್ಟ. ಇದು ಹರಿಯುವ ನೀರಾಗಿರುವುದರಿಂದ ಹೆಚ್ಚು ಆರೋಗ್ಯಕರವೂ, ಪ್ರಸ್ತುತವೂ ಆಗಿರಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಚಲನಶೀಲವೆನಿಸಿದ ಬಂಡಾಯವು ಭವಿಷ್ಯದಲ್ಲಿಯೂ ಜೀವಂತವಾಗಿದ್ದರೆ ಅದು ಆಶ್ಚರ್ಯವಲ್ಲ.
ಬಂಡಾಯ ಅಂದು-ಇಂದು ಎಂಬುದನ್ನು ಹೇಳುವಾಗಲೇ ಈ ಎರಡು ಘಟ್ಟಗಳ ಬಂಡಾಯದಲ್ಲಿನ ಭಿನ್ನತೆಗಳನ್ನು ಗುರುತಿಸಿಕೊಳ್ಳಬೇಕು. ಅವುಗಳನ್ನು ಸಂಕ್ಷೇಪಿಸುವುದಾದರೆ ಅಂದು ಸಾಮಾಜಿಕ ಚಳವಳಿಗಳು ತೀವ್ರ ಸ್ವರೂಪದಲ್ಲಿದ್ದವು. ಅವುಗಳಲ್ಲಿ ಸಾಹಿತಿ-ಚಿಂತಕರು, ಕಲಾವಿದರು ಗುರುತರವಾಗಿ ಭಾಗವಹಿಸುತ್ತಿದ್ದರು. ಅದರಿಂದ ಚಳುವಳಿಗಳಿಗೆ ಹೆಚ್ಚು ಗಂಭಿರ ಆಯಾಮಗಳು ಪ್ರಾಪ್ತವಾಗುತ್ತಿದ್ದವು. ಆದರೆ ಕಳೆದ ಒಂದು ದಶಕದಿಂದೀಚೆಗೆ ಅಂತಹ ಪರಿಪಾಠ ಮುಂದುವರೆಯದೆ, ಸಾಹಿತಿ ಮತ್ತು ಚಳವಳಿಗಳ ನಡುವೆ ಕಂದಕವೇರ್ಪಟ್ಟಿರುವುದು ಕಾಣುತ್ತಿದೆ. ಆದ್ದರಿಂದ ಇವತ್ತಿನ ಸಾಹಿತ್ಯವು ಅಂದಿನ ಪ್ರಖರತೆಯನ್ನು ಕಳೆದುಕೊಂಡಿದೆ. ಇದರ ಪರಿಣಾಮವಾಗಿ ಬಂಡಾಯವು ಎದುರಿಸುತ್ತಾ ಬಂದ ಕೋಮುವಾದಿ ಶಕ್ತಿಗಳು ಇಂದು ನೇಪಥ್ಯವನ್ನು ಬಿಟ್ಟು ಪ್ರತ್ಯಕ್ಷ ರಂಗಕ್ಕೇ ಬಂದು ವಿರಾಜಿಸಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇವತ್ತಿನ ಚಳವಳಿಗಳು ಮತ್ತು ಬಂಡಾಯ ಸಾಹಿತ್ಯವನ್ನು ವಿವರಿಸಿಕೊಳ್ಳಲು ಯತ್ನಿಸಬೇಕಿದೆ.
ಹೀಗೆ ಅನೇಕ ಮಿತಿಗಳ ನಡುವೆಯೇ ಇವತ್ತಿನ ಬಂಡಾಯ ಸಂವೇದನೆಯು ಪ್ರಖರವಲ್ಲದ ಸ್ಥಿತಿಯಲ್ಲಿಯೋ ಅಥವ ಪ್ರಖರಗೊಳ್ಳುತ್ತಿರುವ ಸ್ಥಿತಿಯಲ್ಲಿಯೋ ಮುಂದುವರೆಯುತ್ತಿರುವುದು ಸಮಾಧಾನಕರ ಸಂಗತಿ ಎನಿಸುತ್ತದೆ. ಈ ನಿಟ್ಟಿನಲ್ಲಿ ಮೂಡುತ್ತಿರುವ ಸಾಹಿತ್ಯಕ್ಕೆ ಮುಖ್ಯ ಭಿತ್ತಿಗಳಾಗಿ ಸಂಕ್ರಮಣ, ಹೊಸತು, ಅನ್ವೇಷಣೆ ಮೊದಲಾದ ಸಣ್ಣ ಪತ್ರಿಕೆಗಳಲ್ಲದೆ ಪ್ರಜಾವಾಣಿ, ಜನವಾಹಿನಿಯಂತಹ ಕೆಲವು ದಿನಪತ್ರಿಕೆಗಳು ಸಹ ಒತ್ತಾಸೆಯಾಗಿರುವುದು ಗಮನಾರ್ಹ. ಇಂತಹ ಸಾಹಿತ್ಯ ಸೃಷ್ಟಿಗೆ ಬಂಡಾಯ ಸಾಹಿತ್ಯ ಸಂಘಟನೆಯ ಕಾರ್ಯಕ್ರಮಗಳು ರಾಜ್ಯ ವ್ಯಾಪಿಯಾಗುತ್ತಿರುವುದು ಪೋಷಕವಾಗಿದೆ.
ಹೀಗೆ ಬಂಡಾಯ ಸಾಹಿತ್ಯವು ಅಂದಿನಿಂದ ಇಂದಿನವರೆಗೂ ಹರಿಯುತ್ತಿರುವ ಜೀವನದಿಯಾಗಿದೆ. ಇದು ಕಾಲದ ದಡಗಳಲ್ಲಿ ಕೆಲವೊಮ್ಮೆ ಕಿರಿದಾಗಿ, ಮತ್ತೂ ಕೆಲವೊಮ್ಮೆ ಹಿರಿದಾಗಿ ಹರಿದದ್ದಿದೆ. ಈ ಮೂಲಕ ಇದು ಬತ್ತದ ಸೆಲೆ ಮತ್ತು ನಿತ್ಯನೂತನ ದೇಹಿ ಎಂಬ ಸತ್ಯ ಭವಿಷ್ಯಕ್ಕೆ ಚಾಚುವ ಆಶಾಚುಕ್ಕಿಯಾಗಿದೆ.
*****
ಹೊಸತು, ಮಾರ್ಚಿ ೨೦೦೩