ಏರಿಸಿ, ಹಾರಿಸಿ, ಕನ್ನಡದ ಬಾವುಟ!
ಓಹೊ ಕನ್ನಡನಾಡು, ಆಹ್ ಕನ್ನಡನುಡಿ!
ಹಾರಿಸಿ, ತೋರಿಸಿ, ಕೆಚ್ಚೆದೆಯ ಬಾವುಟ!
ಗಾಳಿಯಲಿ ಫಟಪಟ, ದಾಳಿಯಲಿ ಚಟಚಟ,
ಉರಿಯಿತೋ ಉರಿಯಿತು ಹಗೆಯ ಹಟ ಮನೆ ಮಟ,
ಹಾಳ್ ಹಾಳ್ ಸುರಿಯಿತು ಹಗೆಯ ಬೀಡಕ್ಕಟ!
ಬಾಳ್ ಕನ್ನಡ ತಾಯ್!
ಏಳ್ ಕನ್ನಡ ತಾಯ್!
ಆಳ್ ಕನ್ನಡ ತಾಯ್!
ಕನ್ನಡಿಗರೊಡತಿ ಓ ರಾಜೇಶ್ವರೀ!
ರಾಜೇಶ್ವರೀಽ!
ಮೌರ್‍ಯ ಕಳಚೂರ್‍ಯರು, ಗಂಗರು, ಕದಂಬರು,
ರಟ್ಟರು, ಚಳುಕ್ಯರು ಹೊಯ್ಸಳರು, ಯಾದವರು,
ಇಳೆಗೆ ಮೇಲಾದವರು, ಬಾಣರು, ಜೀಣರು,
ಕೊಲೆಯ ಕೇಳ್‌ಕಿಚ್ಚಿಂಗೆ ತಂಪುಮಳೆ ತಳಿದು,
ಚೆಲುವು ನೆಲ ಸಾಲುತ್ತು, ಕಲೆಯ ಹೊಂಬೆಳೆಯಿಟ್ಟು,
ನಗಿಸಿದರು ನಾಡನು, ಕಡಿದು ಕಗ್ಗಾಡನು:
ಮಾನವನ ದೇವತೆಗೆ ತಂದ ಜಿನಭಕ್ತರು,
ಹಂಪೆಯ ವಿರುಪಾಕ್ಷ ಪುತ್ರರು, ವಿರಕ್ತರು,
ವೀರನಾರಾಯಣನ ಕೃಪೆಯೊಳಾಸಕ್ತರು,
ಶ್ರೀ ಗೌರಿ ಕಾವಲಿಹ ರಾಯರನುರಕ್ತರು,
ನಮ್ಮ ತಾಯ ಮಕ್ಕಳು-
ಬಾಳ ಬೆಳ್‌ದಿಂಗಳಲಿ ಒಲಿದು ನಲಿದವರು-
ಬೇವೊ ಬೆಲ್ಲವೊ ಬರಲಿ, ಮಲ್ಲಿಗೆಯೊ ಮುಳ್ಳೋ,
ಬಾನ ಬೆಳಕಿನಲಿ, ಮೇನದಳುಕಿನಲಿ,
ಚೆನ್ನು ಬದುಕನು ಕುಣಿಸಿ ಒಲಿದು ನಲಿದವರು-
ನಮ್ಮ ತಾಯಣುಗರು,
ಪಂಪನೋ, ರನ್ನನೋ, ಬಸವನೋ, ಮಾಧವನೊ,
ಆ ಅಕ್ಕಮಹದೇವಿ, ನಾರಣಪ, ಚಿಕದೇವ,
ಜಕ್ಕಣ, ಹೊನ್ನಮ್ಮ, ನಮ್ಮಮ್ಮನೆಳೆಯರು,
ಚೆಲುವ ಚೆಲುವೆಯರು-ಚಿನ್ನದ ಚಿಣ್ಣರು,
ಕಲಿಗಳು, ಕಿಡಿಗಳು, ಗಂಡರು, ಮೊಂಡರು,
ನಲಿದೊಲಿದು ಬೆಚ್ಚೊಂದು ನೆಚ್ಚಿಂಗೆ ಮೆಚ್ಚಿಂಗೆ
ಕಿಚ್ಚಿನಲಿ ಹಾಯ್ದು ನಲ್ಲನ ಹಿಡಿದ ಹೆಂಡಿರು,
ಸತಿಗಳು, ಯತಿಗಳು, ವ್ರತಿಗಳು, ಕೃತಿಗಳು-
ಕನ್ನಡದ ಬಾವುಟವ ಹಿಡಿಯದವರಾರು?
ಕನ್ನಡದ ಬಾವುಟಕೆ ಮಡಿಯದವರಾರು?
ನಮ್ಮ ಈ ಬಾವುಟಕೆ ಮಿಡಿಯದವರಾರು?
ಹೇಳಿರೋ ಹೆಸರೊಂದು ನೆನಹಿನಲಿ ಸುಳಿದರೆ!
ಹುಡಿಕಿರೋ ಹೇಡಿ ತಾನೊಬ್ಬ ಮನೆಗುಳಿದರೆ!
ಕನ್ನಡದ ನಾಡಲಾ,
ಕನ್ನಡದ ನುಡಿಯಲಾ,
ಕನ್ನಡಿಗನೆದೆ ಕಡೆದ ತೆನೆಯಲಾ ಕೆನೆಯಲಾ!
ಬೆಳಕು ಹರಿಯಿತು ಏಳಿ,
ಇರುಳೂ ಸವೆಯಿತು ಏಳಿ,
ತಾಯ ಕರೆ ಕೇಳಿ,
ಏಳಿರೋ, ಏಳಿರೋ, ಬಾಳ ಬಲಿ ಬೇಳಿರೋ
ಎಲ್ಲೊಲುಮೆಯೂ ಕೂಡಿದೊಂದೊಲುಮೆ ತಾಳಿರೋ,
“ತಾಯುಳಿಯೆ ನಾನುಳಿದೆ,
ತಾಯಳಿಯೆ ನಾನಳಿದೆ.
ಮನೆ ಕಾಯಿ, ತುರು ಕಾಯಿ, ನಾಡ ಗಡಿ ಗುಡಿ ಕಾಯಿ,
ಕಾಯಲಾರೆಯ, ಸಾಯಿ,”
ಎಂದೆಲ್ಲ ಏಳಿರೋ-
ಆಹ ಕನ್ನಡನುಡಿ, ಆಹ ಕನ್ನಡನಾಡು,
ಹಿರಿಯ ಕನ್ನಡ ಪಡೆ, ಮರಿಯ ಕನ್ನಡ ಪಡೆ,
ಏಳಿರೋ, ಬಾಳಿರೋ,
ಕನ್ನಡದ ಬಾವುಟವ ಹಿಡಿಯಿರೋ, ನಡೆಯಿರೋ!
ಏಳ್ ಕನ್ನಡ ತಾಯ್,
ಬಾಳ್ ಕನ್ನಡ ತಾಯ್,
ಆಳ್ ಕನ್ನಡ ತಾಯ್,
ಕನ್ನಡಿಗರೊಡತಿ ಓ ರಾಜೇಶ್ವರೀ!
ಇಂದಿನದೆ ಹೇಳಿರೋ ಈ ನಮ್ಮ ಬಾವುಟ!
ಕುಂದಿಹುದೆ ನೋಡಿರೋ ಈ ನಮ್ಮ ಬಾವುಟ!
ಕಂದದಿದೆ ಇಂದಿಗೂ ಕನ್ನಡದ ಬಾವುಟ!
ಏನೇನ ಕಂಡುದೋ ಬಾನಾಡಿ ಬಾವುಟ!
ಆವುದನು ಕಾಣದೋ ಜೀವಕಳೆ ಬಾವುಟ!
ಕನ್ನಡದ ಬಾವುಟಗಳೊಂದಾದ ಬಾವುಟ!
ಏರಿಸಿ, ಹಾರಿಸಿ, ತೋರಿಸಿ ಬಾವುಟ!
ತೇಲಾಡು, ಮೇಲಾಡು ಓಲಾಡು ಬಾವುಟ!
ಚೆಲುವಾಗು, ಗೆಲುವಾಗು, ಬಲವಾಗು, ಬಾವುಟ!
ಹೊನ್ನಾಗಿ, ಹೆಣ್ಣಾಗಿ, ಹಸನಾದ ಮಣ್ಣಾಗಿ,
ಹೊಸಹೊಸತು ಕಣ್ಣಾಗಿ, ಬೆಳಕಾಗಿ, ಬೆಳೆಯಾಗಿ,
ಕೂಡುತಿಹ ಕನ್ನಡದ ಹೊಮ್ಮುಗೆಯ ಕಾವಾಗಿ,
ಪರಿಪರಿಯ ಹೊಂಬಗೆಯ ಹೆರಿಗೆಯಾ ನೋವಾಗಿ,
ಸಿರಿಯ ಜಯಚಾಮನೆ* ಹಿರಿಯೊಲುಮೆ ಹೂವಾಗಿ,
ಬಾಳು ಎಲೆ ಬಾವುಟ!
ಬಾಳ್ ಕನ್ನಡ ತಾಯ್,
ಏಳ್ ಕನ್ನಡ ತಾಯ್,
ಆಳ್ ಕನ್ನಡ ತಾಯ್,
ಕನ್ನಡಿಗರೊಡತಿ ಓ ರಾಜೇಶ್ವರೀ!
* ಮೊದಲು – ನಾಲುಮಡಿ ಕೃಷ್ಣನೇ
*****