ನನ್ನ ನುಂಗುತಿಹ ನೋವುಗಳೇ
ಬಾಳ ತುಂಬುತಿಹ ಬೇವುಗಳೇ
ಕಾಳ ರಾತ್ರಿಯಲಿ ಕಾಡಾಗದಿರಿ
ಬಾಳ ಬೀದಿಯಲಿ ಹಾವಾಗದಿರಿ
ಮೋಡದ ಮುಸುಕ ಮೆಲ್ಲನೆ ಸರಿಸಿ
ನಗುವ ಚಂದ್ರ ಬೇಕು
ಕಾಡುವ ಕತ್ತಲ ಕತ್ತನು ತರಿದು
ನೆಗೆವ ಸೂರ್ಯ ಬೇಕು.
ನೋವನು ಬಿತ್ತಿ ಬೇವು ಬೆಳೆದರೂ
ಬೆಲ್ಲ ಅರಳಬೇಕು
ಕೊಂಬೆಕೊಂಬೆಯಲಿ ಕರುಳು ಕಂಗೊಳಿಸಿ
ಬೆಳಕ ನುಡಿಯಬೇಕು.
ನಡೆಯಲಾಗದ ನುಡಿಯಲಾಗದ
ಜಡನೋವು ನನಗೆ ಬೇಡ
ಕೊಳೆತು ನಾರುತ ಕೀವು ಸುರಿಸುವ
ಹಳೆಬೇವು ನನಗೆ ಬೇಡ.
ಚಲಿಸುವ ನೋವಿಗೆ ಕಲಕುವ ಬೇವಿಗೆ
ತೆರದ ಬಾಗಿಲಿನ ಬದುಕು
ನೋವುಗತ್ತಲಿನ ನವಮಾಸದ ನಂತರ
ಹುಟ್ಟಬೇಕು ಬೆಳಕು.
*****