ಭಾಗೀರಥಿ– “ಆಚಾರ್ಯರೇ! ತಮ್ಮ ಬರುವಿಕೆಯು ನಮ್ಮ ಪೂರ್ವ ಪುಣ್ಯದ ಫಲವೇ. ತಮಗೆ ಬಹುಶಃ ನಮ್ಮ ಗುರುತವಿಲ್ಲ. ನಮ್ಮ ಮೂಲ ಸ್ಥಾನ ತಮ್ಮ ಹೆಂಡತಿ ಭೀಮಕ್ಕನ ತೌರುಮನೆ ಇರುವ ಸಮಂತಪೇಟೆ. ಇತ್ತಲಾಗಿ ನಾವು ಆ ಊರು ಬಿಟ್ಟು ಈ ಪಟ್ಟಣಕ್ಕೆ ಬಂದಿರುವೆವು. ಪಲಾಶದ ಮರ ಘಟ್ಟಕ್ಕೆ ಹೋದರೂ ಅದಕ್ಕೆ ಮೂರೆ ಎಲೆ ಎಂಬ /ಣಜಿಯಂತೆ ಎಲ್ಲಿಗೆ ಹೋದರೂ ದರಿದ್ರಾವಸ್ಥೆ ನಮ್ಮ ಬೆನ್ನು ಬಿಡಲೇ ಇಲ್ಲ. ಉಣ್ಣಲಿಕ್ಕೆ ಕೂಳೂ ಉಡಲಿಕ್ಕೆ ವಸ್ತ್ರವೂ ಉಳಕೊಳ್ಳಲಿಕ್ಕೆ ಜಾಗೆಯೂ ಸೊನ್ನೆ. ಕೆಲವು ತಿಂಗಳ ಮುಂಚೆ ಶ್ರೀಪಾದಂಗಳವದ ನಮ್ಮ ಮೇಲೆ ದಯವಿಟ್ಟು ಮಠದಲ್ಲಿ ಸಂಶ್ರ ಯ ಕೊಟ್ಟಿರುವ ಕಾರಣ ಕಷ್ಟಗಳ ಹೊರೆ ಸ್ವಲ್ಫ ಜಗ್ಗಿದಂತಾಗಿಯದೆ.”
ಭೀಮಾಚಾರ್ಯ– “ನೀನು ನನ್ನ ಹೆಂಡತಿಯ ತೌರುಮನೆ ಊರಿನ ವಳು ಹೌದು. ಅವಳು ಆಗಾಗ್ಗೆ ನಿನ್ನ ಪ್ರಸ್ತಾಪ ಮಾಡುವದಿತ್ತು ಏನು ಮಾಡೋಣ? ಪಾಪ! ಹೋದ ವರುಷ ಅವಳ ಹೋಮ ಮಾಡಿದೆ ಈಗ ಏಕಾಂಗಿಯಾಗಿ ನಿಶ್ಚಿಂತನಾಗಿದ್ದೇನೆ.”
ಭಾಗೀರಥಿ– “ಅಹಾ, ತೀರಿಹೋದಳೇನು? ಎಂಧಾ ಸುಲಕ್ಷಣ ಹೆಂಗಸು! ಎಷ್ಟು ಗುಣವಂತ! ಪಾಪವೇ!”
ಭೀಮಾಚಾರ್ಯ — “ಹೋದ ಜೀವ ಬರುವದೇನು? ಪಶ್ಚಾತ್ತಾಪ ಪಟ್ಟು ಪ್ರಯೋಜನವಿದೆಯೇ? ನಿಮ್ಮನ್ನೆಲ್ಲಾ ನೋಡಿ ಸಂತೋಷವಾಯಿ ತಮ್ಮ ನಾಳೆ ಊರಿಗೆ ಹೋಗುವದಕ್ಕೆ ಸನ್ನದ್ಧನಾಗಿದ್ದೇನೆ. ಇಲ್ಲಿಗೆ ಬಂದು ಬಹುದಿವಸವಾಯಿತು.?
ವಾಗ್ದೇವಿ– “ಅಯ್ಯೋ! ವೇದವ್ಯಾಸ ಉಪಾಧ್ಯಗೆ ದಾರಿಯಲ್ಲಿ ಹಾಕಿ ಬಿಡುವಿರೇ!”
ಭೀಮಾ— “ಮತ್ತೇನು ಮಾಡಲಿ? ಅವನನ್ನು ನನ್ನ ಕುತ್ತಿಗೆಗೆ ಕಟ್ಟಿ ಕೊಳ್ಳಲೇ?”
ವಾಗ್ದೇವಿ– “ಹಾಗೆ ಹೇಳಬಹುದೇನು? ಒಬ್ಬನ ಪಕ್ಷ ಹಿಡಿದ ಮೇಲೆ ಅವನನ್ನು ಬಿಟ್ಟು ಹಾಕಿದರೆ ಅಪಖ್ಯಾತಿಗೆ ಕಾರಣವಲ್ಲವೇ? `
ಭೀಮಾ– “ವಾಹ್ಹಾ, ನೀನು ಸಣ್ಣ ಮೂರ್ತಿಯಲ್ಲ, ನಾನು ವೇದ ವ್ಯಾಸ ಉಪಾಧ್ಯನ ಪಕ್ಷ ಹಿಡಿದೆನೆಂದು ನಿನಗೆ ಯಾರು ಹೇಳದರವ್ವಾ!”
ವಾಗ್ದೇವಿ–“ಹೌದಾದ ಮಾತು ಯಾರು ಹೇಳದರೇನು?”
ಭೀಮಾ– “ಭಾಗೀರಥಿ! ನಿನ್ನ ಮಗಳು ಸಾಮಾನ್ಯ ಹೆಂಗಸೆಂದು ತಿಳಿಯಬೇಡ. ಅವಳಿಗೆ ದೇವರು ಒಳ್ಳೇದು ಮಾಡಲಿ.”
ಭಾಗೀರಧಿ– ವಿಪ್ರವಾಕ್ಯೋ ಜನಾರ್ಧನ ಎಂಬ ವಚನವಿದೆ. ಆದರೆ ಪ್ರಕೃತದ ಅವಾಯಿ ನೋಡಿದರೆ ನಮಗೆ ಪರಿಣಾಮವಾಗುವ ಹಾಗಿಲ್ಲ.
ಅನ್ನಕ್ಕೆ ತತ್ವಾರ ಆಗುವ ಕಾಲ ಬಂದೊದಗಿಯದೆ, ಪರಾಕೆ!?
ಭೀಮಾ–“ಎಂಧಾ ಅವಾಯಿ?”
ವಾಗ್ದೇವಿ ತಮ್ಮ ಅಪ್ತ ವೇದವ್ಯಾಸನ ಅವಾಯಿ. ಅದರಲ್ಲಿ ನಾವು ಸುಧಾರಿಸಿಕೊಂಡ ಮೇಲಷ್ಟೆ ಜೀವರು ಒಳ್ಳೇದು ಮಾಡಬೇಕಾದ್ದು. ತನ್ಮಧ್ಯ ಆಶೀರ್ವಾದ ಕೊಟ್ಟ ತಾವೇ ನಮ್ಮ ಮೇಲೆ ಹೂಡಿದ ಬ್ರಹ್ಮಾಸ್ರ ಉಂಟಷ್ಟೆ?
ಭೀಮಾ– “ನನಗೆ ಹಾಗ್ಯಾಕೆ ದೂರುವಿ. ನಾನು ನಿನಗೆ ಸರ್ವಥಾ ದೋಷಕಾರಿಯಾಗೆನು. ದೇವರು ನಿನಗೆ ಒಳ್ಳೇದು ಮಾಡಲಿ ಎಂಬ ನನ್ನ ಆಶೀರ್ವಾದ ದೇವರೇ ನಿಜವಾಗಿ ನಡಿಸದೆ ಇರಲಾರನು. ನಾನು ಮನಃ ಪೂರ್ತಿಯಾಗಿ ಹೇಳಿದ ವಚನವಲ್ಲವೇ? ಅದು ಎಂದೂ ಹುಸಿಯಾಗದು.?
ವಾಗ್ದೇವಿ– “ಹಾಗಾದರೆ ತಾವು ಈ ಹೊತ್ತಿನಿಂದ ವೇದವ್ಯಾಸನ ಪಕ್ಷಬಿಟ್ಟು ನಮ್ಮ ಪಕ್ಷಕ್ಕೆ ಬಂದದ್ದು ನಿಜವಷ್ಟೆ? ತಾವೇ ನಮ್ಮ ಗುರು ಹಿರಿಯರು, ತೀರ್ಥರೂಪ ಸಮಾನರು. ಪುನಃ ತಮ್ಮ ಕಾಲಿಗೆ ಬಿದ್ದಿದ್ದೇನೆ. ಅನಾಥೆಯಾದ ನನ್ನನ್ನು ರಕ್ಷಿಸುವದಾಗಿ ವಾಗ್ದತ್ತ ಕೊಟ್ಟತನಕ ಏಳೆ.?
ಭೀಮಾ– “ನಾರಾಯಣ, ನಿನ್ನನ್ನು ಎಂದೂ ಬಿಟ್ಟು ಹಾಕಲಾರೆ, ಎದ್ದೇಳು.
ಭಾಗೀರಥಿ – “ಆಚಾರ್ಯರ ಮಾತು ಪೂರ್ಣವಾಗಿ ನಂಬಿಕೊ. ಅವರ ಅಪ್ಪಣೆ ಮೀರಬೇಡ. ವೇದವ್ಯಾಸ ಉಪಾಧ್ಯ ಹುಚ್ಚುಮುಂಡೆಗಂಡ. ಅವನ ಮುಖ ಇನ್ನು ಆಚಾರ್ಯರು ನೋಡರು. ನನಗೆ ಅವರ ನಂಬಿಕೆ ಚಂದಾಗಿ ಅದೆ.”
ಭೀಮಾ– “ವೇದವ್ಯಾಸ ಉಪಾಧ್ಯನು ಶ್ರೀಪಾದಂಗಳ ಮೇಲೆ ಮುನವಿ ಮಾಡಿದ ಕಾರಣ ಅದರ ಸತ್ಯತ್ವ ಶೋಧನೆ ಮಾಡುವದಕ್ಕೆ ಇತರ ಮರಾಧಿಪತಿಗಳು ಪ್ರತಿನಿಧಿಗಳನ್ನು ನೇಮಿಸಿರುವರು. ಈ ಪ್ರಕರಣದಿಂದ ನಿನಗಾಗಲಿ ನಿನ್ನ ಮಗಳಿಗಾಗಲಿ ಬಾಧಕ ಯಾವದೊ ನನಗೆ ತಿಳಿಯದು. ಆದಕಾರಣ ವೇದವ್ಯಾಸನ ಪಕ್ಷ ನಾನು ಬಿಡಬೇಕೆಂಬ ಅಗತ್ಯವಿಲ್ಲವಷ್ಟೇ.”
ವಾಗ್ದೇವಿ– “ಸರಿ, ಸರಿ, ಶ್ರೀಪಾದಂಗಳವರ ಮೇಲೆ ಆದ ಮನವಿ ಯಲ್ಲಿ ನನಗೇನು ಸಂಬಂಧವಿಲ್ಲವೆಂತ ಅನ್ನುವಿರಾ? ನನ್ನನ್ನು ಶ್ರೀಪಾದಂಗ ಳವರು ಇಟ್ಟು ಕೊಂಡಿದ್ದರೆಂಬುದು ಅವನ ಸಾಧನೆಯಾಗಿರುತ್ತದೆ. ತಾವು ಹೀಗೆ ಹೇಳುವದು ಅತಿ ಆಶ್ಚರ್ಯವೇ ಸರಿ?
ಭೀಮಾ– “ಅವನ ಸಾಧನೆ ಹಾಗಿರಲಿ. ಸತ್ಯತ್ವ ಹ್ಯಾಗೆ? ನಿನಗೂ ಯತಿಗಳಗೂ ಸ್ನೇಹ ಉಂಟೇನು?”
ವಾಗ್ದೇವಿ– “ಅಲ್ಲವೆಂದರೆ ತಾವು ನಂಬುವಿರೋ? ಆ ಮಾತು ಸುಡಿ. ತಮ್ಮ ಮರೆ ಹೊಕ್ಕಿದ್ದೇನೆ. ನನ್ನನ್ನು ಇನ್ನು ರಕ್ಷಿಸುವ ಬಹುಭಾರ ತಮಗೆ ಕೂಡಿಯದೆ. ಹೆಚ್ಚು ಪ್ರಶ್ನೆಗಳಿಂದ ನನ್ನ ಸ್ವರೂಪನಾಶನಮಾಡಬೇಡಿ. ತಮ್ಮ ಮೇಲೆ ಪಿತೃಭಾವ ಇಟ್ಟದ್ದೇನೆ.”
ಭೀಮಾ–“ ಹಾಗಾದರೆ ವೇದವ್ಯಾಸನ ಸಾಧನೆಯು ಸುಳ್ಳಲ್ಲ. ಅವನ ಪಕ್ಷವನ್ನು ನಾನು ಬಿಡುವುದು ನ್ಯಾಯವೇ?”
ವಾಗ್ದೇವಿ–“ನನಗೂ ಶ್ರೀಪಾದಂಗಳವರಿಗೂ ಸ್ಪೇಹವಿದ್ದರೆ ವೇದ ವ್ಯಾಸನ ಅಪ್ಪನ ಗಂಟು ಮುಗದ್ದೇನು?”
ಭೀಮಾ–“ಹಾಗಲ್ಲ, ಅವನ ಉದ್ಯೋಗವನ್ನು ಸ್ವಾಮಿಗಳು ತೆಗೆದರಲ್ಲ?”
ವಾಗ್ದೇವಿ–“ನಾನು ಹೇಳಿ ತೆಗಿಸಿದೆನೇ? ನಾನು ಇಲ್ಲಿಗೆ ಬರುವ ಮೊದಲೇ ನಡೆದ ಕರ್ಮಕ್ಕೆ ನಾನು ಹೊಣೆಯೇನು?”
ಭೀಮಾ–“ಈಗಲಾದರೂ ನೀನು ಸ್ವಾಮಿಗಳಿಗೆ ಹೇಳಿ ಅವನ ಉದ್ಯೋಗವನ್ನು ಅವನಿಗೆ ತಿರುಗಿ ಕೊಡಿಸಿದರೆ ಮುಂದೆ ಯಾವುದೊಂದು ರಗಳೆಯಿರಲಿಕ್ಕಿಲ್ಲವಷ್ಟೇ?”
ವಾಗ್ದೇವಿ–“ಚಲೋ ಮಾತು, ತಮ್ಮ ಅಪೇಕ್ಷೆಯಂತೆ ಶ್ರೀಪಾದಂಗ ಳವರು ನಡೆಸಿದರೆ ಅವರ ಮರ್ಯಾದೆಯನ್ನು ಅವರೇ ಕಳಕೊಂಡ ಹಾಗಾ ಗಲಿಕ್ಶಿಲ್ಲವೇ? ಅವನು ಯಾವ ದೊಡ್ಡ ಮನುಷ್ಯನೆಂತ ಹೆದರಬೇಕೋ ತಿಳಿಯದು.”
ಭೀಮಾ–“ಅವನು ಎಷ್ಟು ಸಣ್ಣ ಮನುಷ್ಯನಾದರೂ ಈಗ ಎದುರು ನಿಂತು ದ್ವೇಷ ಸಾಧಿಸುತ್ತಾನಲ್ಲ?”
ವಾಗ್ದೇವಿ–“ಅವನು ತಮ್ಮ ಬಲದಿಂದ ಹಾರಾಡುತ್ತಾನೆ. ತಮ್ಮ ಸಹಾಯ ತಪ್ಪಿದರೆ ಅವನನ್ನು ಒಂದು ಹಳೆ ನಾಯಿಯಾದರೂ ಕಣ್ಣೆತ್ತಿ ನೋಡದು?
ಈ ಪ್ರಮೇಯದ ಪೂರ್ವಾಪರವನ್ನು ಸ್ವಲ್ಪವಾದರೂ ವಿಚಾರಿಸಿ ತಿಳುಕೊಳ್ಳದೆ ಗಪ್ಪನೆ ತಾನಿದ್ಬೇನೆ ಹೆದರ ಬೇಡವೆಂದು ವೇದವ್ಯಾಸ ಉಪಾಧ್ಯಗೆ ಮಾತುಕೊಟ್ಟ ತನ್ನ ಹೆಡ್ಡತನಕ್ಕೆ ಭೀಮಾಚಾರ್ಯನು ಪಶ್ಚಾತ್ತಾಪ ಪಟ್ಟನು. ಈ ದೆಸೆಯಿಂದ ಅವನು ವಾಗ್ದೇವಿಯ ವಾದಕ್ಕೆ ಪ್ರತ್ಯುತ್ತರಕೂಡದೆ ಉಭಯ ಸಂಕಟದಲ್ಲಿ ಬಿದ್ದವನಂತೆ ಅವನ ಮುಖಚ್ಛಾಯೆಯಿಂದ ತಿಳಿದು ವಾಗ್ದೇವಿಯು ಇದೇ ಕಾಲೋಚಿತವೆಂದು ಮಿತಿಯಿಲ್ಲದೆ ಕಣ್ಣೀರಿಡುತ್ತಾ ಆಚಾರ್ಯನ ಕಾಲಿಗೆ ಅಡ್ಡಬಿದ್ದು ಗದ್ಗದ ಕಂಠದಿಂದ ಮಾಡುವ ಪ್ರಲಾಪ ವನ್ನು ನೋಡಿ ಅವನ ಮನಸ್ಸು ಕರಗಿತು. ಆಹಾ! ಈ ಮೂಢ ವೇದವ್ಯಾ ಸನ ಪಕ್ಷವನ್ನು ಹಿಡುಕೊಂಡು ದೊಡ್ಡ ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದೆನೆಂಬ ಚಿಂತೆ ಯಿಂದ ಕೊಂಚಸಮಯ ಅನುತ್ತರನಾಗಿದ್ದರೂ ವಾಗ್ದೇವಿಯ ದುಃಖವನ್ನು ಕಂಡು, ಅವನಿಗೆ ಬಹಳ ಅನುತಾಪವಾಯಿತು. ಮುಂದರಿಸಿ ಹೋದ ಕೆಲ ಸಕ್ಕೆ ಈಗ ನಿವೃತ್ತಿಯಿಲ್ಲ. ಇನ್ನು ನಡಿಯಲಿಕ್ಕಿರುವ ವಿಚಾರಣೆಯು ಪ್ರಧಾನ ವಾದದ್ದು. ಅದರಲ್ಲಿ ವೇದವ್ಯಾಸನ ಕೈಕಾಲು ಮುರಿಯುವ ಉಪಾಯ ಮಾಡಿದರೆ ವಾಗ್ದೇವಿಯ ಪಕ್ಷವೇ ಗೆಲ್ಲುವದೆಂದು ಅವಳನ್ನು ಆಚಾರ್ಯನು ಸಂತವಿಸುತ್ತಿರುವಾಗ ಭಾಗೀರಥಿಯು ಮನೆಯ ಒಳಗಿಂದ ಬೆಳ್ಳಿಯ ಹರಿವಾ ಣದಲ್ಲಿ ಅಪೂರ್ವವಾದ ತಿಂಡಿ, ಬೆಳ್ಳಿಯ ಚಂಬೆನಲ್ಲಿ ಬಿಸಿ ಬಿಸಿ ಚಾ ನೀರನ್ನು ಬೆಳ್ಳಿಯ ಪಂಚಪಾತ್ರೆ ಸಮೇತ ಕೈಯಲ್ಲಿ ಹಿಡುಕೊಂಡು ಆಚಾರ್ಯನ ಮುಂದೆ ಮಡಗಿ ದೂರ ಕೂತುಕೊಂಡಳು. ವಾಗ್ದೇವಿಯು ಚಾ ನೀರನ್ನು ಪಂಚಪಾತ್ರಿಯಲ್ಲಿ ಬೇಕಾದ ಹಾಗೆ ಹೊಯಿದುಕೊಟ್ಟು, ಅವನ ತೃಷೆಯನ್ನು ನಿವಾರಣೆಮಾಡಿದಳು. ಹರಿವಾಣದಲ್ಲಿದ್ದ ತಿಂಡಿಯನ್ನು ಸಾವಕಾಶವಿಲ್ಲದೆ ಆಚಾರ್ಯನು ವಿನಿಯೋಗಿಸಿದನು. ದ್ವಿಜಗೆ ತೃಪ್ತಿಯಾಯಿತು. ಸುಡು ಮೋರೆಯ ವೇದವ್ಯಾಸನ ಪಕ್ಷಕ್ಕೆ ಸೇರಿ, ದೂರಿಸಿ ಕೊಳ್ಳುವದಕ್ಕಿಂತ ಸಹಾಯಹೀನಳಾದ ವಾಗ್ದೇವಿಗೊಂದು ಉಪಕಾರ ಮಾಡಿದರೆ ಅವಳು ಜನ್ಮ ಜನ್ಮಾಂತರಕ್ಕೂ ಮರೆಯಳೆಂದು ಭಾವಿಸಿ, ಅಂದಿನಿಂದ ಅವಳ ಹಿತ ಚಿಂತಕ ನಾಗಲಿಕ್ಕೆ ಸಮ್ಮತಿಸಿ ಅವಳಿಗೆ ನಂಬಿಗೆಯನ್ನು ಕೊಟ್ಟು, ಮರುದಿವಸ ಬರುವದಾಗಿ ಹೇಳಿ ಹೊರಟನು.
*****
ಮುಂದುವರೆಯುವುದು