ಸಂತಸದ ಸಾಗರದಿ ಶರಶೂರೆ ಸರಸಾಟ
ನೆಲಕಿಷ್ಟು ಸಿರಿಯು ವಾಸಂತದಲ್ಲಿ
ಅಂತವಿಲ್ಲದ ಇಂಥ ಶುಭದ ಸಂತೆಯು ಕೂಡ
ಹರಿಯುವದು ಕೊನೆಗೆ ಮಳೆಗಾಲದಲ್ಲಿ
ದೊರೆಯ ಭಯ ಅಲ್ಲಿಲ್ಲ ಹಿರಿಯರಂಜಿಕೆಯಿಲ್ಲ
ಋತುರಾಜ ವಾಸಂತ ಕಾಲದಲ್ಲಿ
ಕೊರತೆಯಿಲ್ಲದ ಸುಖವ ಬಡವಬಲ್ಲಿದರೆಲ್ಲ
ಸುರಿಯುವರು ಆ ಸೊಗದ ಸುಗ್ಗಿಯಲ್ಲಿ
ಸುರಿದ ಸೊಬಗಿನ ಸೊಂಪು ಮರಬಳ್ಳಿಗಳ ತಂಪು
ಪೂಗಂಪು ಸರಸ ಸುಳಿಗಾಳಿಯಲ್ಲಿ.
ಸ್ವರಬಿಚ್ಚಿ ಹಾಡುತಿಹ ಕೋಗಿಲೆಯ ದನಿ ಇಂಪು
ನಂದನದ ಸೌಂದರ್ಯಸಾರದಲ್ಲಿ
ಕಾರಹುಣ್ಣಿಮೆ ಬರಲು ಕಾರ್ಮೋಡ ಪಡೆ ಕವಿದು
ಬಿರುಗಾಳಿ ಭರಭರನೆ ಬೀಸಿಬೀಸಿ
ಸೂರೆಗೊಂಡವು ಬನದ ಸಿರಿಯಸಿಂಗಾರವನ್ನು
ಗುಡುಗು ಸಿಡಿಲುಗಳಾಗ ರಾಶಿರಾಶಿ
ಹೊಸಹೊಸದು ಹೊಂಬಣ್ಣ ಕೆಂಬಣ್ಣ ಹೂವುಗಳು
ಮರೆಯಾದವೆಂದು ನಾವರಚಲೇಕೆ?
ಕಸುಕಾಗಿ ಹಣ್ಣಾಗಿ ವಾಸಂತ ಕುವರನಿಗೆ
ಮೊಲೆಗೊಡಲು ಬರುತಿರಲು ಚಿಂತೆಯೇಕೆ?
ಮರೆಯಾದನೆನಬೇಡ ಹುರಿಯಾಗಿ ಬರುತಿಹನು
ತಿರುತಿರುಗಿ ವರುವರುಷದಾದಿಯಲ್ಲಿ
ತೆರೆಯಮರೆ ಸೇರಿದರು ಚಿರಜೀವಿ ತಾನಾಗಿ
ಮಗುಮಗುಳಿ ಮೆರೆಯುವನು ಲೋಕದಲ್ಲಿ
ಹುಟ್ಟಿದ್ದು ಸಾಯುವದು ಸತ್ತದ್ದೆ ಹುಟ್ಟುವದು
ಬ್ರಹ್ಮಾಂಡ ಚಕ್ರವಿದು ತಿರುಗಿ ತಿರುಗಿ
ಸೃಷ್ಟಿಯಲಿ ಸಕಲವೂ ಮೂಡುವದು ಮಸುಳುವದು
ನೂರೆಂಟು ಸಲ ಹೀಗೆ ಕರಗಿ ಕರಗಿ