ವಾಸ್ತವವಾಗಿ ಧರ್ಮ ಮತ್ತು Sweet Poison -ಎರಡೂ ಒಂದೇ. ಇವು ಆತ್ಮಶಕ್ತಿಯನ್ನು ಕುಗ್ಗಿಸುವ ಪರಿಣಾಮಕಾರಿ ಅಸ್ತ್ರಗಳು. ಇವುಗಳ ವ್ಯಾಪ್ತಿಯಲ್ಲಿಯೆ ದೈವ, ಅದೃಷ್ಟ, ಹಣೆಬರಹ ಮೊದಲಾದ ಮೌಢ್ಯಾಧಿಕಾರಿಗಳು ಜೀವದಿಂದಿರುವುದು. ಇವನ್ನು ಎದುರಿಸಿ ನಿಲ್ಲುವ ಎದೆಗಾರಿಕೆ ಭಾರತೀಯ ಮನಸ್ಸಿಗೆ ಭವಿಷ್ಯದಲ್ಲೂ ಪ್ರಾಪ್ತವಾಗುವುದು ಸಂದೇಹದ ಮಾತು. ಕಾರಣ, ನಮ್ಮ ಸಾಂಪ್ರಾದಾಯಿಕತೆ ಸೃಷ್ಟಿಸಿದ ‘ದ್ವೀಪ’ಗಳನ್ನು ದಾಟಿ ಮತ್ತು ದಾಟಲು ಕಲಿಸಿದ ಬುದ್ಧ, ಬಸವಣ್ಣ, ನಾನಕ ಮೊದಲಾದವರನ್ನೇ ‘ದ್ವೀಪ’ಗಳನ್ನಾಗಿ ಮಾಡಿದ ಚಾಲೂಕು ಈ ಭಾರತೀಯ ಮನಸ್ಸಿನದು. ಅಂತಹ ಮನಸ್ಸಿಗೆ ದ್ವೀಪಾತೀತವಾಗಿ ಬೆಳೆವುದನ್ನು ಇನ್ಯಾರು ಕಲಿಸಲು ಸಾಧ್ಯ? ಸಾವಿರಾರು ‘ಸೂರ್ಯ’ರು ಹುಟ್ಟಿದ ನಾಡು ಪಾರಂಪರಿಕವಾಗಿ ಕತ್ತಲಿನಿಂದ ಹೊರಬರಲು ಸಾಧ್ಯವಾಗದಿರುವಾಗ, ಅಂತಹ ಸೂರ್ಯರೇ ಕತ್ತಲಿನಲ್ಲಿ ಕರಗಿರುವಾಗ, ಅಂತಹ ಜೀರ್ಣಶಕ್ತಿಯನ್ನು ಭಾರತೀಯ ಮನೋಗರ್ಭವು ಪಡೆದಿರುವಾಗ ಇದರಿಂದ ಮುಕ್ತಿ ಹೇಗೆ ಸಾಧ್ಯವೆಂಬ ಪ್ರಶ್ನೆ ಸದಾ ಜೀವಂತವಾಗಿರುತ್ತದೆಂಬ ನಂಬಿಕೆ ನನ್ನದು. ಈ ನಡುವೆ ಮೂಡಿ ಬರುವ ವಿಚಾರವಂತರು ಕೇವಲ ಓಯಸಿಸ್‌ಗಳು ಅಷ್ಟೇ. ಅವರು ಪ್ರವಾಹವಾಗಲಾರರು ಎಂಬುದು ನನಗೆ ಭಾರತೀಯ ಇತಿಹಾಸ ಕಲಿಸಿಕೊಟ್ಟ ಪಾಠ.
ಇಂತಹ ಕತ್ತಲ ಕೂಪದಿಂದ ಹೊಮ್ಮುತ್ತಿರುವ ಒಂದು ‘ಮಿಂಚು-ಧ್ವನಿ’ – ಕುವೆಂಪು.
ಪಾಶ್ಚಾತ್ಯರ ಸಂಪರ್ಕಕ್ಕೆ ಈಡಾದ ವಸಾಹತುಶಾಹಿ ಭಾರತದಲ್ಲಿ ಗಮನಾರ್ಹವಾದ ಭೌತಿಕ ಮತ್ತು ಬೌದ್ಧಿಕ ಪಲ್ಲಟಗಳು ತಲೆದೋರಿದವು. ಇಂತಹ ಬೌದ್ಧಿಕ ಪಲ್ಲಟಗಳ ಅತ್ಯುತ್ತಮ ಮಾದರಿಯಾಗಿ ಕುವೆಂಪು ಕಾಣಿಸುತ್ತಾರೆ. ಇಂಗ್ಲೀಷ್ ಜ್ಞೆನ ಕಲಿಸಿದ ವೈಜ್ಞೆನಿಕ ಮನೋಭಾವ ಮತ್ತು ವೈಚಾರಿಕತೆಗಳನ್ನು ಮೈಗೂಡಿಸಿಕೊಂಡ ಇವರು ಭಾರತೀಯ ಇತಿಹಾಸ ಮತ್ತು ವರ್ತಮಾನವನ್ನು ಚಿಕಿತ್ಸಕ ದೃಷ್ಟಿಯಿಂದ ಕಾಣಲಾರಂಭಿಸಿದರು. ಪರಿಣಾಮವಾಗಿ ಪರಂಪರೆಯ ಪೂಜೆಯಲ್ಲಿ ತೊಡಗಿದ್ದ ಹಲವು ಚಿಂತಕರ ನಡುವೆ ಕುವೆಂಪುರವರು ಪರಂಪರೆಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದರಿಂದ ಭಿನ್ನವಾಗಿ ಕಾಣುತ್ತಾರೆ. ಇದಕ್ಕೆ ಶೂದ್ರ ಹಿನ್ನೆಲೆಯೂ ಸೇರಿ, ಪ್ರಖರವಾದ ವೈಚಾರಿಕತೆಯನ್ನು ಹರಿತವಾದ ಭಾಷೆಯಲ್ಲಿ ಹರಿಯಿಸುತ್ತಾರೆ. ಇದಕ್ಕೆ ಸಾತ್ವಿಕ ಸಿಟ್ಟು ಸೇರಿ, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಕವಿ ಪ್ರಜ್ಞೆ ತುಡಿಯುವಂತಾಗಿದೆ. ಈ ವಿನ್ಯಾಸದಲ್ಲಿ ಸಾಂಸ್ಥಿಕ ಧರ್ಮ ಕೇಂದ್ರಿತ ಪದ್ಯಗಳು ಕಾಣಿಸುತ್ತವೆ.
‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?’ ಎಂಬ ಪದ್ಯ ಈ ನಿಟ್ಟಿನಲ್ಲಿ ಮುಖ್ಯವಾಗುತ್ತದೆ. ಇದು ಸ್ವತಂತ್ರವಾಗಿ ಆಲೋಚಿಸುವ ವಿಚಾರವಂತಿಕೆಯನ್ನು ಪ್ರಚೋದಿಸುತ್ತದೆ. ಮನು, ಅವನ ಶಾಸ್ತ್ರ, ಸ್ವರ್ಗ-ನರಕ ಮೊದಲಾದ ವಿಚಾರಗಳು ಇಲ್ಲಿ ಪ್ರಾಸಂಗಿಕವಾಗಿ ಬಂದಿವೆ. ಇವುಗಳ ಮೂಲಕ ಯಾವುದೋ ನಿರ್ದಿಷ್ಟ ಕಾಲದ ಧರ್ಮಶಾಸ್ತ್ರಗಳ ಮಾರ್ಗದರ್ಶನ, ಆದೇಶಗಳು ಇಂದಿಗೆ ಅಪ್ರಸ್ತುತ ಎನ್ನುತ್ತಾ, ಅಂತಿಮವಾಗಿ-
ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ;
ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ,
ನಮ್ಮ ಹೃದಯವೆ ನಮಗೆ ಶ್ರೀಧರ್ಮ ಸೂತ್ರ!
ಎಂಬ ನಿಲುವನ್ನು ತಲುಪುತ್ತಾರೆ.
ಒಟ್ಟಾರೆ ಈ ಪದ್ಯದಲ್ಲಿ ಸಾತ್ವಿಕ ಸಿಟ್ಟು ಪರಾಕಾಷ್ಠೆ ಮುಟ್ಟಿದೆ. ಜಾತಿ, ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಅಮಾನವೀಯ ಕೃತ್ಯಗಳನ್ನು ಕುರಿತ ಉಗ್ರ ಪ್ರತಿಭಟನೆ ಇಲ್ಲಿದೆ. ಕಾವ್ಯಾತ್ಮಕತೆ ಕೊಂಚ ಸೊರಗಿದರೂ, ಚಿಂತನಾಂಶ ಎಲ್ಲಿಯೂ ಗೌಣವಾಗಿಲ್ಲ. ಅಂತಿಮವಾಗಿ ಇಲ್ಲಿನ ಸಿಟ್ಟು ಕವಿಗೆ ಮಾತ್ರ ಸೀಮಿತವಾಗದೆ, ಈ ಹೊತ್ತು ಹೀಗೆ ಯೋಚಿಸುತ್ತಿರುವವರೆಲ್ಲರದು ಆಗಿರುವುದರಿಂದಲೇ ಈ ಪದ್ಯ ಕವಿ ನಿಷ್ಪತೆಯಿಂದ ಸಾರ್ವತ್ರಿಕ ನೆಲೆಗೆ ಏರಿ, ಅಧ್ಯಯನಕ್ಕೆ ಯೋಗ್ಯ ಎನಿಸುವುದು.
ಕುವೆಂಪು ಅವರು ವಿವೇಕಾನಂದರ ಧಿರವಾಣಿಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಆದ್ದರಿಂದಲೇ ಇವರೂ ಅವರಂತೆಯೇ ಸಮಾಜದ ಬದಲಾವಣೆಗೆ ತರುಣರನ್ನೇ ನೆಚ್ಚಿಕೊಳ್ಳುವುದು. ಸ್ವಾತಂತ್ರ್ಯವನ್ನು ಸಿದ್ಧಿಸಿಕೊಂಡ ಭಾರತವು ತನ್ನ ಮನಸ್ಸಿನ ಕಿಟಕಿ-ಬಾಗಿಲುಗಳನ್ನು ‘ಪಶ್ಚಿಮದ ರಸಪೂರ್ಣ ಹೊಸಗಾಳಿ’ಗೆ ತೆರೆದುಕೊಳ್ಳಬೇಕೆಂದು ಆಶಿಸುತ್ತಾರೆ. ಅದರ ಪ್ರಯೋಜನವನ್ನು ರಷ್ಯಾ ಮೊದಲಾದ ಹಲವು ಏಷ್ಯಾದ ದೇಶಗಳು ಪಡೆದುಕೊಂಡ ಉದಾಹರಣೆಗಳನ್ನು ಕೊಡುವ ಮೂಲಕ ಪ್ರತಿಪಾದಿಸುತ್ತಾರೆ. ‘ಹಳೆಮತದ ಕೊಳೆಯನ್ನು’ ವೈಚಾರಿಕವಾದ ಬುದ್ಧಿ ತೊಳೆದು ಬಿಡಲಿ ಎಂದು ಕರೆ ನೀಡುತ್ತಾರೆ. ಇದಕ್ಕೆ ಸಾಮೂಹಿಕವಾದ ಪ್ರತಿಕ್ರಿಯೆಯನ್ನು ಅಪೇಕ್ಷಿಸುತ್ತಾರೆ.
ಹೀಗೆ, ಭಾರತವು ಸ್ವತಂತ್ರಗೊಂಡ ಹೊಸದರಲ್ಲಿ ಕಟ್ಟಿಕೊಂಡ ಈ ಆದರ್ಶವಾದಿ ಕನಸುಗಾರಿಕೆ ಕಾಲಕ್ರಮೇಣ ಭಗ್ನಗೊಂಡು ನವ್ಯ ಸಾಹಿತ್ಯಕ್ಕೆ ಪ್ರೇರಣೆ ಕೊಟ್ಟದ್ದು ಈಗಾಗಲೇ ಹಳೆಯ ಮಾತು.
ಇಂತಹದೇ ಕರೆಯನ್ನು ಕವಿ ಓ ಬನ್ನಿ, ಸೋದರರೆ, ಬೇಗ ಬನ್ನಿ’ ಎಂಬ ಪದ್ಯದಲ್ಲಿಯೂ ಕೊಡುತ್ತಾರೆ. ‘ಓ ಬನ್ನಿ ಸೋದರರೆ’, ಎಂಬ ಮಾತಿನಲ್ಲಿ ಅಡಗಿರುವ ಆತ್ಮೀಯತೆ, ಸಮಾಜದ ಬದಲಾವಣೆಗಾಗಿ ‘ಸೋದರ’ರೊಂದಿಗೆ ವ್ಯಕ್ತಪಡಿಸುತ್ತಿರುವ ತಹತಹವನ್ನು ಗಮನಿಸಬೇಕಾಗಿದೆ. ಈ ಮೂಲಕ ಮೌಢ್ಯತೆಯ ಪ್ರತೀಕಗಳಾದ ಗುಡಿ, ಚರ್ಚು, ಮಸೀದಿಗಳೆಂಬ ಆಫೀಮುಗಳಿಂದ ಹೊರಬಂದು, ವೈಜ್ಞೆನಿಕ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಆಗ ಸಹಜವಾಗಿಯೇ ಕರ್ಮ ಸಿದ್ಧಾಂತ, ಹಣೆ ಬರಹ, ಅದೃಷ್ಟ ಮೊದಲಾದ ಪಾರಂಪರಿಕ ಅಸಂಬದ್ಧ ಕಲ್ಪನೆಗಳು ಕಳಚಿಬಿದ್ದು ಹೊಸ ಬದುಕು ನಿರ್ಮಾಣವಾಗಲು ಸಾಧ್ಯ ಎಂದು ಕವಿತೆಯ ಆರಂಭದ ಚರಣದಲ್ಲಿಯೇ ಧ್ವನಿಸುತ್ತಾರೆ. ಇದಕ್ಕೆ ಹಲವು ಉದಾಹರಣೆಗಳನ್ನು ಸಹಿತ ನೀಡುತ್ತಾರೆ. ‘ನೆತ್ತರಿನೆಣ್ಣೆಯ ತಿಳಿವಿನುರಿಯಲ್ಲಿ’ ಬೆಳಕನ್ನು ಕಂಡುಕೊಂಡ ರಷ್ಯಾ, ಜಪಾನು, ತುರ್ಕಿ ಮೊದಲಾದ ದೇಶಗಳು ಮಾದರಿ ರಾಷ್ಟ್ರಗಳಾಗಿ ಮುನ್ನಡೆಯುತ್ತಿರುವುದನ್ನು ಮುಂದಿಡುತ್ತಾರೆ. ಆದ್ದರಿಂದ ಜಗತ್ತಿನಾದ್ಯಂತ ಸಂದರ್ಭದ ಅಗತ್ಯಗಳಲ್ಲಿ ಒಂದಾದ ಮನುಜ ಮತಕ್ಕೆ ಪ್ರತಿಯೋರ್ವರೂ ಸೇರಿದಾಗ, ಲೋಕಹಿತ ಸಾಧ್ಯವಾಗುತ್ತದೆಂದು ನಂಬುತ್ತಾರೆ. ಕಾರಣ ಇದು ದೈವ, ಒಣ ಆಚಾರ, ಗೊಡ್ಡುಶಾಸ್ತ್ರ, ಏಜೆಂಟ್ ರಹಿತ ಧರ್ಮವಾಗಿರುವುದೇ ಆಗಿದೆ. ಈ ನೆಲೆಯಲ್ಲಿ ಇದು ವಿಶ್ವಮಾನವ ಧರ್ಮ ಕಲ್ಪನೆಯಾಗಿಯೂ ಕಾಣಿಸುತ್ತದೆ.
ಭಾರತೀಯ ಮನಸ್ಸಿನ ಪಾರಂಪರಿಕ ಮೌಢ್ಯಗಳು ಉಪಮಾತೀತವಾದ ಕಠಿಣಗಳಾಗಿವೆ. ಅವುಗಳ ಛೇದನೆ ಅತ್ಯಂತ ಕಷ್ಟ ಸಾಧ್ಯ. ಆದ್ದರಿಂದಲೇ ಇಲ್ಲಿಯ ಎಲ್ಲಾ ಪ್ರವಾದಿಗಳೂ ಸೋಲುಂಡದ್ದು. ಈ ಹಿನ್ನೆಲೆಯಲ್ಲಿ ಕಲ್ಲಿನ ಕೋಟೆ, ಸೆರೆಮನೆ, ಕಬ್ಬಿಣದ ಸಂಕೋಲೆ, ಕಪಿಮುಷ್ಟಿ ಮೊದಲಾದ ವಿವರಗಳಿಗಿಂತ ಹೆಚ್ಚು ಸಮರ್ಥವಾಗಿ ಈ ನೆಲದ ಮತಧರ್ಮಗಳು, ದೈವಗಳು, ಮೌಢ್ಯಗಳು ಭಾರತೀಯರನ್ನು ಬಂಧಿಸಿವೆ. ಇದರ ಜೊತೆಗೆ ‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎಂಬ ಪರಲೋಕ ಪ್ರಾಪ್ತಿಯ ವಿಚಾರವೂ ಸೇರಿ, ಪಲಾಯನವಾದಿ ಧೋರಣೆ ಇಲ್ಲಿ ಗುರುತರವಾಗಿಬಿಟ್ಟಿದೆ. ಆದ್ದರಿಂದಲೇ ದಿನೇದಿನೇ ದೇವಾಲಯಗಳ, ದೇವರುಗಳ ಸಂಖ್ಯೆಯು ಜನಸಂಖ್ಯೆಯನ್ನು ಮೀರಿ ಬೆಳೆಯುತ್ತಿರುವುದು. ಭಯ ಮೂಲದ ಭಕ್ತಿ; ಅಪರಾಧ ಮತ್ತು ಪಾಪಪ್ರಜ್ಞೆ ಮೂಲವಾದ ಭಕ್ತಿಗಳು ದೇವಾಲಯ ಸಂಸ್ಕೃತಿಯನ್ನು ಹೆಚ್ಚಿಸುತ್ತಿವೆ. ಈ ಹಿನ್ನೆಲೆಯಲ್ಲಿ ‘ಮಾದೇಶ್ವರನ ಬೆಟ್ಟಕಂತೆ’ ಎಂಬ ಪದ್ಯ ಚರ್ಚೆಗೆ ವಸ್ತುವಾಗುತ್ತದೆ.
………ಅದೋ ನೋಡಲ್ಲಿ,
ಸುಡು ಹಗಲಿನುರಿಬಿಸಿಲಿನಲಿ ಕೂಗಿಕೊಳ್ಳುತ್ತೆ
ಬಿಡುಮುಡಿಯ ಪರಿದುಡೆಯ ಹೊಟ್ಟೆಗಿಲ್ಲದ ಹಳ್ಳಿ
ಹೋಗುತ್ತಿದೆ! ಕೂಸುಗಳೋ ಬಿರುಸೆಕೆಗೆ ಸೀಯುತ್ತೆ
ತಾಯ್ಗಳೆದೆಗೊರಲುತಿದೆ!
ಇಂತಹ ಚಿತ್ರಣಗಳು ಭಾರತದಾದ್ಯಂತ ಹಲವು ವಿಶಿಷ್ಟ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ.
ಹೀಗೆ ಪ್ರಸ್ತುತ ಪದ್ಯದಲ್ಲಿ ಬಹುತೇಕ ಭಾರತೀಯರ ಮನಸ್ಸಿನ ಮೌಢ್ಯದ ಕಠಿಣತೆಯನ್ನು ಹಲವು ಉಪಮೆಗಳ ಮೂಲಕ ಸೋದಾಹರಿಸುತ್ತಾರೆ.
‘ದೇವರು-ಪೂಜಾರಿ’ ಎಂಬ ಪದ್ಯದಲ್ಲಿ ಕುವೆಂಪುರವರು ಪುರೋಹಿತ ಶಾಹಿ ಸಂಸ್ಕೃತಿ ಮತ್ತು ಅದರ ವಕ್ತಾರರ ಕುಟಿಲ ತಂತ್ರಗಾರಿಕೆಯನ್ನು ತೀಕ್ಷ್ಣವಾಗಿ ವಿಡಂಬಿಸುತ್ತಾರೆ. ಇದು ಕೇವಲ ವೈದಿಕ ಧರ್ಮಕ್ಕೆ ಸೀಮಿತವಾಗಿ, ಇದರ ವ್ಯಾಪ್ತಿಗೆ ಆರಂಭಾವಸ್ಥೆಯಲ್ಲಿ ಚಲನಶೀಲವಾಗಿ ಕಾಣಿಸಿಕೊಂಡದ್ದು, ಕ್ರೈಸ್ತ, ಮುಸಲ್ಮಾನ, ಸಿಖ್, ವೀರಶೈವ ಮೊದಲಾದ ಧರ್ಮಗಳ ಅವಸ್ಥಾಂತರವನ್ನು ಧ್ವನಿಪೂರ್ಣವಾಗಿ ಚಿತ್ರಿಸುತ್ತದೆ. ಹಲವು ‘ಸ್ಥಗಿತ’ ವಿಚಾರಗಳ ವಿರುದ್ಧ ಬಂಡೆದ್ದ ಯೇಸು, ಪೈಗಂಬರ್, ನಾನಕ್, ಬಸವಣ್ಣ ಮೊದಲಾದವರೇ ಕಾಲ ಕ್ರಮೇಣ ತಮ್ಮ ಅನುಯಾಯಿಗಳೆನಿಸಿಕೊಂಡ ವಿವಿಧ ಪುರೋಹಿತ ಶಾಹಿ ವಕ್ತಾರರ ಕೈಯಲ್ಲಿ ಸಿಕ್ಕಿ ನರಳಿದ್ದನ್ನು ಮತ್ತು ಈ ಮೂಲಕ ತಾವೂ ಸ್ಥಗಿತತೆಯ ಮೂರ್ತಿಗಳಾಗಿ ಮಾರ್ಪಾಟಾದ ಐತಿಹಾಸಿಕ ದುರಂತವನ್ನು ಈ ಪದ್ಯ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಈ ಮೂಲಕ ಕತ್ತಲನ್ನು ತೊಡೆಯಲು ಬಂದ ವಿವಿಧ ‘ಅವತಾರಗಳು’ ಹೇಗೆ ಕಾಲಕ್ರಮೇಣ ಪುರೋಹಿತಶಾಹಿ ಸ್ವತ್ತಾಗಿ ಮಾರ್ಪಡುತ್ತದೆಂಬ ಪ್ರತಿಮಾತ್ಮಕ ಚಿತ್ರಣ ಇಲ್ಲಿ ಕವನವಾಗಿದೆ.
ಹೀಗೆ ಪುರೋಹಿತಶಾಹಿ ವಕ್ತಾರರ ‘ಜಾಣ’ ಕೈವಾಡದಿಂದ ವಿವಿಧ ಸಾಮಾಜಿಕ ಕ್ರಾಂತಿಗಳು ಮಣ್ಣುಪಾಲಾದದ್ದು ನೈಜ ಇತಿಹಾಸದ ಕಥನವಾಗಿದೆ.
ಇದೇ ಪದ್ಯ ಮತ್ತೊಂದು ಬಗೆಯಲ್ಲಿ ಕಾಣಿಸಿಕೊಳ್ಳುವುದು ‘ಅವತಾರ’ದಲ್ಲಿ. ಇದರ ನಾಯಕ ಕ್ರೈಸ್ತ ಧರ್ಮದ ಪ್ರವರ್ತಕ ಯೇಸು.
ಯೇಸು ಇಲ್ಲಿ ಕೇವಲ ವ್ಯಕ್ತಿ ಮಾತ್ರನಾಗದೆ ಮಾನವೀಯ ಮೌಲ್ಯಗಳ ಪ್ರತಿಮೆಯಾಗಿ ಬರುತ್ತಾನೆ. ಸತ್ಯ, ಅಹಿಂಸೆ, ತ್ಯಾಗಗಳನ್ನು ಪ್ರತಿಪಾದಿಸಿದ ಅವನ ಹೆಸರಿನಲ್ಲಿಯೇ ಅವನ ತತ್ವಗಳು ಹಿಂಸೆಗೆ ಒಳಪಟ್ಟಿರುವುದನ್ನು ಜಗತ್ತಿನ ಚರಿತ್ರೆ ಹೇಳುತ್ತದೆ. ಇದು ಇಂದಿಗೂ ನಿರಂತರವಾಗಿ ನಡೆದಿದೆ.
ಚರಿತ್ರೆಯ ದಿನಗಳಲ್ಲಿ ಕ್ರೈಸ್ತ ತತ್ವಗಳು ಧರ್ಮವಾಗಿ ಮಾರ್ಪಟ್ಟಿದ್ದು, ಅಂತಹ ಧರ್ಮವನ್ನು ರೋಮನಕ ಧರ್ಮದ ಚಕ್ರವರ್ತಿಗಳು ಕ್ರೌರ್ಯದಿಂದ ದಮನಮಾಡಲು ವಿಫಲ ಪ್ರಯತ್ನ ನಡೆಸಿದ್ದು, ಆನಂತರದಲ್ಲಿ ಕ್ರೈಸ್ತ ಧರ್ಮವು ಪ್ರಭುತ್ವದೊಂದಿಗೆ ಮಿಳಿತಗೊಂಡು ಕ್ರಿ.ಶ. ೪ನೆಯ ಶತಮಾನದಲ್ಲಿ ಪಾಗನ್ ಪಂಥದ ಅಲೆಗ್ಸಾಂಡ್ರಿಯಾದ ಮಹಾಗ್ರಂಥಾಲಯವನ್ನು ಧಾರ್ಮಿಕ ಅಸಹಿಷ್ಣುತೆಯಿಂದ ದ್ವಂಸ ಮಾಡಿದ್ದು…ಈ ಮೊದಲಾದ ಅಸಂಖ್ಯ ಉದಾಹರಣೆಗಳು ಜಗತ್ತಿನಾದ್ಯಂತ ಹರಡಿವೆ. ಆದ್ದರಿಂದಲೇ ಎಮರ್‌ಸನ್ ಅವರು ‘ಕ್ರೈಸ್ತ ಮಂಡಲದಲ್ಲಿ ಕ್ರೈಸ್ತರನ್ನು ಕಾಣುವುದು ಕಷ್ಟ’ ಎಂದು ಹೇಳಿದ್ದು; ಮತ್ತು ಜಗತ್ತಿನಲ್ಲಿ ಒಬ್ಬನೇ ಕ್ರೈಸ್ತನಿದ್ದ, ಅವನು ಶಿಲುಬೆಯ ಮೇಲೆ ಸತ್ತ ಎಂದು ನೀಷೆ ಹೇಳಿದ್ದು. ಹೀಗೆ ಚಲನೆಯ ಮೂರ್ತಿಯನ್ನು ಸ್ಥಗಿತತೆಯ ಮೂರ್ತಿಯನ್ನಾಗಿ ಮಾಡಿದ್ದು ಇತಿಹಾಸದ ಸ್ಥಾಪಿತ ಗುಣ. ಆದ್ದರಿಂದಲೇ-
ನನ್ನ ಧರ್‍ಮದಾ ಹೆಸರನೆ ಹೇಳಿ
ನನ್ನನೆ ಶಿಲುಬೆಗೆ ಕುತ್ತುವರು;
ನನ್ನ ರಕ್ತದಾ ಹೊಳೆಯೊಳೆ ತೇಲಿ
ಹೊಸ ಹೊಸ ಶಿಲುಬೆಯ ಕೆತ್ತುವರು!
ಇಂತಹ ಕೃತ್ಯ ಕೇವಲ ಕ್ರೈಸ್ತರಿಂದ ಮಾತ್ರ, ಕ್ರೈಸ್ತನ ಹೆಸರಿನಲ್ಲಿ ನಡೆದದ್ದಲ್ಲ; ಪೈಗಂಬರ್, ನಾನಕ್, ಬಸವಣ್ಣನವರ ಹೆಸರುಗಳಲ್ಲಿ ಅವರವರ ಅನುಯಾಯಿಗಳೇ ಅವರವರ ಧರ್ಮಗಳ ಹೆಸರಿನಲ್ಲಿ ಅವುಗಳ ಆಶಯಕ್ಕೆ ವಿರುದ್ಧವಾದ ಗತಿಯಲ್ಲಿ ಹಿಂಸೆಯನ್ನು ಮೆರೆದಿರುವುದು. ಇಂತಹ ಮಾನವೀಯ ಮೌಲ್ಯಗಳಿಗೆ ತಿಲಾಂಜಲಿ ಇಟ್ಟಿದ್ದು ಭೂತ ಮತ್ತು ವರ್ತಮಾನದ ಸತ್ಯವಾಗಿವೆ. ಆದ್ದರಿಂದಲೇ ಮಾನವೀಯ ಗುಣಗಳ ಪ್ರತೀಕ ಕ್ರಿಸ್ತ ಅಥವಾ ಅವನ ಅವಯವಗಳಾದ ಸತ್ಯ, ಅಹಿಂಸೆ, ತ್ಯಾಗ ಮೊದಲಾದ ಮೌಲ್ಯಗಳು ಇಂದಿಗೂ-
ದಿನದಿನ ದಿನವೂ ಶಿಲುಬೆಯನೇರಿ
ಕ್ಷಣ ಕ್ಷಣ ಕ್ಷಣವೂ ರಕ್ತವ ಸೋರಿ
ಲೋಕಕೆ ಪ್ರೇಮ ಅಹಿಂಸೆಯ ಸಾರಿ
ಸಾವಿರ ಸಲ ಹುಟ್ಟಿ,
ಸಾಯುತ್ತಿರುವುದು. ಆದರೂ ಕ್ರಿಸ್ತನು ಇಂದಿಗೂ-
ಶಿಲುಬೆಯ ಮೇಗಡೆ ನೇತಾಡುತ್ತಿಹೆ!
ಮುಳ್ಳಿನ ಮುಡಿಯನು ಇನ್ನೂ ಹೊತ್ತಿಹೆ!
ಕೈ ಕಾಲೆದೆಯಲಿ ಕಬ್ಬುನ ಕೂರ್‍ಮೊಳೆ!
ಹರಿಯುತ್ತಿದೆ ಕೆನ್ನೀರಿನ ಬಿಸಿಹೊಳೆ!
ಈ ಅವಸ್ಥೆಯನ್ನು ಅನುಭವಿಸುತ್ತಿರುವುದು. ಈ ಚಿತ್ರವು ವಾಸ್ತವವಾಗಿ ವಾಚ್ಯದ ನೆಲೆಯಲ್ಲಿ ನಿಲ್ಲದೆ, ಪ್ರತಿಮೆಯ ನೆಲೆಗೆ ಏರಿ, ಮಾನವೀಯ ಗುಣಗಳು ನಿತ್ಯವೂ, ಶೋಷಣೆಗೆ ಈಡಾಗಿರುವ ಸತ್ಯವನ್ನು ಸೂಚಿಸುತ್ತದೆ. ಇದರೊಂದಿಗೆ, ‘ಅವತಾರ’ ಮೂರ್ತಿಗಳು ಸಹ ಕ್ರಮೇಣ ‘ದೇವರು-ಪೂಜಾರಿ’ ಕಾವ್ಯದ ಆಶಯದಂತೆ ಮತ್ತೊಂದು ಅವತಾರಕ್ಕಾಗಿ ಕಾಯುತ್ತವೆ ಎಂಬ ಚಾರಿತ್ರಿಕ ಸತ್ಯವನ್ನು ಪ್ರತಿಪಾದಿಸುತ್ತದೆ.
* * *
ಹೀಗೆ ಸಾಂಸ್ಥಿಕ ಧರ್ಮ ಕೇಂದ್ರಿತ ಪದ್ಯಗಳ ಮೂಲಕ ಕುವೆಂಪು ಅವರು ತಮ್ಮ ಪ್ರಖರ ವೈಚಾರಿಕತೆಯನ್ನು, ತೀಕ್ಷ ವೈಜ್ಞೆನಿಕ ಮನೋಭಾವವನ್ನು ಸಮರ್ಥವಾಗಿ ಬಿಂಬಿಸುತ್ತಾರೆ. ಅದಕ್ಕೆ ಪೂರಕವಾಗಿ ಆ ಕವನಗಳ ಭಾಷೆ ಕತ್ತಿಯ ಮೊನಚಿನಷ್ಟೇ ಹರಿತವಾಗಿದೆ. ಇಂತಹ ಅಭಿವ್ಯಕ್ತಿಯಲ್ಲಿ ಪರಂಪರೆಯ ಪ್ರಜ್ಞೆ ಇದೆ; ವಾಸ್ತವವಾದಿ ಧೋರಣೆಯಿದೆ; ಮಿಗಿಲಾಗಿ ಸಾಮಾಜಿಕ ಕಳಕಳಿಯೂ ನೂತನ ಸಮಾಜ ರಚನೆಗೆ ಒತ್ತಾಸೆಯಾಗಿ ಕ್ರಿಯಾಶೀಲಗೊಂಡಿದೆ.
ಇಂತಹ ಪದ್ಯಗಳ ಮೇಲೆ ಅರವಿಂದ, ವಿವೇಕಾನಂದ, ಗಾಂಧಿ ಮೊದಲಾದವರ ಪೂರ್ಣಯೋಗ, ಪೂರ್ಣದೃಷ್ಟಿ, ವಿಜ್ಞೆನ, ಸರ್ವೋದಯ, ಸಮನ್ವಯ ಮೊದಲಾದ ತಾತ್ವಿಕತೆಗಳ ಪ್ರಭಾವ ಇದ್ದಾಗಲೂ ಕುವೆಂಪು ಕವಿತೆ ವಿಶಿಷ್ಟವಾದ ಸೋಪಜ್ಞತೆಯಿಂದಲೇ ಮಿಂಚಾಗಿ ಎರಗುತ್ತದೆ.
ಈ ಪದ್ಯಗಳ ಹಿನ್ನೆಲೆಯಲ್ಲಿ ಕುವೆಂಪುರವರ ಜೀವನ ವಿಧಾನ ಮತ್ತು ಬರಹದ ಆಲೋಚನ ಸರಣಿಗೆ ವ್ಯತ್ಯಾಸವೇನೂ ಮುಖ್ಯವಾಗಿ ಕಾಣುವುದಿಲ್ಲ. ಆದ್ದರಿಂದ ಕುವೆಂಪು ಕವಿತೆಗಳು ಮತ್ತೊಂದು ವಿನ್ಯಾಸದ ವಚನಗಳೆಂದೇ ಭಾವಿಸುತ್ತೇನೆ. ಇದಕ್ಕೆ ಪೂರಕವಾಗಿ ಕುವೆಂಪುರವರೆ ತಮ್ಮ ಕೃತಿಗಳನ್ನು ಕುರಿತು ಹೀಗೆ ಮಾತನಾಡಿದ್ದಾರೆ-
ನನ್ನ ಕೃತಿ ಕಲೆಯಲ್ಲ;
ನಾನು ಕವಿಯಲ್ಲ
ಕಲೆಗಾಗಿ ಕಲೆಯೆಂಬ
ಪೊಳ್ಳು ನೆಲೆಯಿಲ್ಲ
ಆದ್ದರಿಂದಲೇ ಇವರು ಅನೇಕ ಎಡೆಗಳಲ್ಲಿ ಕಾವ್ಯಾತ್ಮಕತೆಯ ಜೊತೆಗೆ ರಾಜಿ ಮಾಡಿಕೊಂಡರೂ ವೈಚಾರಿಕತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಇದೇ ಅವರ ಕವಿತೆಗಳ ಅಂತಃಸತ್ವ. ಇಂತಹ ಪದ್ಯಗಳು ಸಾಮಾಜಿಕ ಬದಲಾವಣೆಗಳ ಪರಿಕರಗಳಾಗಬೇಕೆಂದು ಅಂತಿಮವಾಗಿ ಚಿಂತಿಸಿದರು. ಅದಕ್ಕಾಗಿಯೇ ಮುಂದುವರೆದ ಅವರ ಈ ಮಾತು ಮುಖ್ಯವೆನಿಸುವುದು.
ಮೆಚ್ಚುಗೆಯೆ ನನಗೆ ಕೊಲೆ;
ಬದುಕುವುದೆ ನನಗೆ ಬೆಲೆ
ಸಾಧನೆಯ ಛೇಯೆ ಕಲೆ;
ವಿಶ್ವಾತ್ಮವದಕ ನೆಲೆ
ನಿನಗದು ಚಮತ್ಕಾರ
ನನಗೋ ಸಾಕ್ಷಾತ್ಕಾರ
ಮೌನದಿಂದನುಭವಿಸು;
ಕೋ ನಮಸ್ಕಾರ
ಕಲೆಯೆಂದು ಹೊಗಳುವೊಡೆ
ಕೋಟಿ ಧಿಕ್ಕಾರ.
ಒಟ್ಟಾರೆಯಾಗಿ ಕುವೆಂಪು ಅವರ ಕವಿತೆಗಳು ನವೋದಯದ ಸಂದರ್ಭದಲ್ಲಿ ‘ಪಾಂಚಜನ್ಯ’ವಾಗಿ ಮೊಳಗಿವೆ. ಕಲ್ಕಿಯಾಗಲು ಯತ್ನಿಸುತ್ತಿವೆ; ಅದಕ್ಕಾಗಿ ಕುವೆಂಪು ಅಂತಃಕರಣ ನಮ್ಮೊಂದಿಗೆ ಕಾದಿದೆ.
*****
೧೩-೧೦-೨೦೦೦