ಬೆಟ್ಟಕ್ಕೆ ಮಣ್ಣೊತ್ತವೆಲ್ಲಾ ಇರುವೆಗಳು
ನೀ ನೋಡುತ್ತಾ ಇದ್ದಿ ಮಹಾರಾಯ
ಸಣ್ಣಿರುವೆ ದೊಡ್ಡಿರುವೆ
ಸಣ್ಣ ಕಣ್ಣಿನ ದೊಡ್ಡಿರುವೆ
ದೊಡ್ಡ ಕಣ್ಣಿನ ಸಣ್ಣಿರುವೆ
ಸಾಸಿವೆ ಕಾಳಿನ ನುಣ್ಣನೆ ಇರುವೆ
ಕಪ್ಪನೆ ಕಪ್ಪಿರುವೆ ಕೆಂಪನೆ ಕೆಂಪಿರುವೆ
ಮಣ್ಣಿನ ಬಣ್ಣದ ಪ್ರಾಗಿರುವೆ
ಒಂದರ ಹಿಂದೆ ಒಂದಿರುವೆ
ಆ ಒಂದರ ಹಿಂದೆ ಎರಡಿರುವೆ
ಎರಡಿರುವೆ ಮೂರಿರುವೆ
ಎಲ್ಲಾ ಇರುವೆಯು ಬಂದಿರುವೆ
ಲೆಕ್ಕ ಯಾರೂ ಇಟ್ಟಿಲ್ಲದಿರುವೆ
ಸಣ್ಣ ಸಣ್ಣ ಉಂಡೆ ಮಾಡಿ
ಒಂದಿರುವೆಯ ಇನ್ನೊಂದು ದೂಡಿ
ಕಲ್ಲ ಬಂಡೆಗಳ ಹತ್ತಿದುವು
ಮುಳ್ಳುಗಿಡಗಳ ಸುತ್ತಿದವು
ಒಂದರ ಹಿಡಿದಿನ್ನೊಂದರ ಹಾಗೆ
ಕಂದರಗಳ ದಾಟಿದವು
ಮಂದರ ಗಿರಿಗೆ ಸುಂದರ ಇರುವೆ
ಉರುಳುರುಳಿ ಒಂದೊಂದೇ ಏರಿದುವು
ಹಬ್ಬಿದಾ ಮಲೆಯಲಿ ಬಿರುಗಾಳಿ ಮಳೆಗಾಳಿ
ಮಬ್ಬಾಗಿ ಒಮ್ಮೆಲೆ ಗುಡುಗು ಮಿಂಚು
ಹತ್ತಿದಾ ಇರುವೆಗಳು ತಬ್ಬಾಗಿಬಿಟ್ಟಾವೆ
ಬೆಟ್ಟಪ್ಪ ನಿನಗೆ ಶರಣೆಂದಿವೆ
ಬೆಟ್ಟಪ್ಪ ನೀ ಜಪ್ಪನೆ ಇದ್ದಿ
ಮಂಜಿನ ಚದ್ದರ ಹೊದ್ದಿದ್ದಿ
ಸಂಜೆಗೆ ಬೇಗನೆ ನಿದ್ರಿಸಿದ್ದಿ
ಇರುವೆಲ್ಲಿ ಹೋದುವೊ ಮಹಾರಾಯ
ನಮ್ಮೂರ ಪಾಪದ ಇರುವೆಗಳೊ ಅವು
ಕಾಪಾಡೊ ಬೆಟ್ಟದ ರಾಯ
*****