ವ್ಯಾಸಮಠದ ಶ್ರೀವ್ಯಾಸರಾಯರು
ಪರೀಕ್ಷೆ ಮಾಡಲು ಶಿಷ್ಯರನು
ನೀಡಿದರೆಲ್ಲರಿಗೆರಡೆರಡಂತೆ
ಮಾಗಿದ ಬಾಳೆಯ ಹಣ್ಣನ್ನು
’ತಿಂದು ಬನ್ನಿರಿ ಬಾಳೆಯ ಹಣ್ಣನು
ಯಾರೂ ಇಲ್ಲದ ಜಾಗದಲಿ’
-ಎಂದು ಕಳುಹಿದರು ಎಲ್ಲ ಶಿಷ್ಯರನು
ಒಂದಿನ ಸಂಜೆಯ ವೇಳೆಯಲಿ
ಅರ್ಧಗಂಟೆಯಲಿ ಎಲ್ಲರೂ ಬಂದರು
ಹಣ್ಣನು ನುಂಗಿದ ಖುಷಿಯಲ್ಲಿ
ಆದರೆ ಕನಕನು ಹಿಂದಕೆ ತಂದನು
ತಿನ್ನದೆ ಹಣ್ಣನು ಮರೆಯಲ್ಲಿ
ವ್ಯಾಸರಾಯರ ಮಠದಲ್ಲಿದ್ದುದು
ಬ್ರಾಹ್ಮಣ ಶಿಷ್ಯರೇ ಹೆಚ್ಚಾಗಿ
ತಾವೇ ಶ್ರೇಷ್ಠರು ಎನ್ನುತ ಜಂಬವ
ಕೊಚ್ಚುತಲಿದ್ದರು ಬಲು ಬೀಗಿ
ಶಿಷ್ಯರೊಳಿದ್ದವ ಕನಕನಾಯಕ
ಹೆಸರಿನ ಕುರುಬರ ವಂಶದವ
ಜಂಬವು ಇಲ್ಲದೆ ವಿನಯತೆ ತುಂಬಿದ
ಚಿನ್ನದ ಗುಣಗಳ ಹೊಂದಿದವ
ಕುಲಹೀನನು ಅವನೆನ್ನುತಲಿದ್ದರು
ತಾವುಗಳೇ ಮೇಲೆನ್ನುತ್ತ
ಅವನನು ಕಡೆಗಣಿಸಿದ್ದರು ಎಲ್ಲರು
ತಮ್ಮಲಿ ತಾವೇ ಗೊಣಗುತ್ತ
ಬ್ರಾಹ್ಮಣ ಶಿಷ್ಯರು ಕನಕನ ಕೈಯಲಿ
ಹಣ್ಣನು ಕಂಡು ನಗಾಡಿದರು
ಶೂದ್ರನಿಗೆಲ್ಲಿಯೂ ಜಾಗವು ಸಿಕ್ಕದೆ
ಬಂದನೆಂದು ಗೊಣಗಾಡಿದರು
ವ್ಯಾಸರು ಶಿಷ್ಯರ ಕೇಳಿದೊಡನೆಯೆ
ನುಡಿದರು ಎಲ್ಲರೂ ಖುಷಿಯಿಂದ
ಯಾರೂ ಇಲ್ಲದ ಜಾಗದಿ ಹಣ್ಣನು
ತಿಂದುದನ್ನು ಲಗುಬಗೆಯಿಂದ
ಒಬ್ಬನು ನುಡಿದನು ಬಲು ಖುಷಿಯಿಂದ-
’ಬಾಗಿಲು ಮುಚ್ಚಿದ ಕೋಣೆಯಲಿ’
ಇನ್ನೊಬ್ಬನು ತಾ ತಿಂದೆನು ಎಂದನು
’ನೀರಲಿ ಮುಳುಗುತ ಹೊಳೆಯಲ್ಲಿ’
ಒಬ್ಬನು ತಿಂದೆನು ಎಂದನು ನಾಚುತ-
’ಶೌಚದ ಕೋಣೆಯ ಮೂಲೆಯಲಿ’
ಕಡೆಯಲಿ ಕನಕನು ನುಡಿದನು ಹೀಗೆ-
’ಗುರುಗಳೆ, ನನಗೀ ಜಗದಲ್ಲಿ
ದೇವರು ಇಲ್ಲದ ಜಾಗವು ಸಿಕ್ಕದೆ
ಹಿಂದಕೆ ತಂದೆನು ಈಗಿಲ್ಲಿ’
ಎನ್ನುತ ಹಣ್ಣನು ಹಿಂದಕೆ ಕೊಟ್ಟನು
ಗುರುಗಳ ಪಾದಕೆ ವಂದಿಸುತ
ಬ್ರಾಹ್ಮಣ ಶಿಷ್ಯರು ನಾಚಿಕೆಯಿಂದ
ನಿಂತರು ತಲೆಯನು ತಗ್ಗಿಸುತ!
*****