ಸ್ವಪ್ನ ಮಂಟಪ – ೨

ಸ್ವಪ್ನ ಮಂಟಪ – ೨

ಬೆಳಗ್ಗೆ ಎದ್ದಾಗ ಕೇರಿಗೆ ಕಳೆ ಬಂದಿತ್ತು. ಅದೊಂದು ವಿಚಿತ್ರ ಕಳೆ, ಸಿದ್ದಣ್ಣನ ಮನೆಯಲ್ಲಿ ಮಂಜುಳ ಓಡಾಡುತ್ತಿದ್ದುದೇ ಒಂದು ಕಳೆಯಾದರೆ ಈಕೆ ಯಾರು ಏನು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಉಳಿದವರಿಗೆ ಕಳೆಯೇರಿತ್ತು. ಕೆಲವರಂತೂ ಈಕೆ ಶಿವಕುಮಾರನಿಗೆ ಗಂಟುಬಿದ್ದವಳು. ಗಂಟು ಹಾಕಿಸಿಕೊಂಡವಳು ಎಂದೇ ತೀರ್ಮಾನ ಮಾಡಿಬಿಟ್ಟಿದ್ದರು. ಕೆಲವರು ಇನ್ನೂ ‘ತೀರ್ಪು’ ನೀಡುವ ಹಂತ ತಲುಪಿರಲಿಲ್ಲವಾದರೂ ಅದೇ ಅನುಮಾನದಲ್ಲಿ ನರಳುತ್ತಿದ್ದರು.

ಮಂಜುಳ ಮಾತ್ರ ಸಂಕೋಚ ಮತ್ತು ಸಹಜ ನಡವಳಿಕೆಯಿಂದ ಮನೆಯವರಿಗೆ ಹತ್ತಿರವಾಗತೊಡಗಿದ್ದಳು. ರಾತ್ರಿ ಸೌಜನ್ಯಕ್ಕಾಗಿ ಇಂಥದೇ ಮನೆಯಿಂದ ಬಂದಿದ್ದೇನೆ ಎಂದಿದ್ದಳಾದರೂ ಅವಳು ಹಳ್ಳಿಯ ಹುಡುಗಿಯಲ್ಲ. ಎಂದೊ ಹಳ್ಳಿಯಲ್ಲಿದ್ದು ಪಟ್ಟಣ ಸೇರಿದ ಕುಟುಂಬದಲ್ಲಿ ಹುಟ್ಟಿ ಬೆಳೆದವಳು. ಆರ್ಥಿಕವಾಗಿ ಶ್ರೀಮಂತವಲ್ಲದ ಸಂಸಾರದಲ್ಲಿ. ಸಂಕಟಗಳ ಜೊತೆ ರೂಪುಗೊಂಡವಳು.

ಬೆಳಗ್ಗೆ ಎದ್ದ ಕೂಡಲೆ ಆಕೆಗೆ ಎಲ್ಲವೂ ತೊಂದರೆಯೆಂದು ಶಿವಕುಮಾರನ ತಾಯಿಗೆ ಹೊಳೆದಿತ್ತು. ಹೀಗಾಗಿ ಇನ್ನೂ ಮಸುಕಾಗಿರು ವಾಗಲೇ ಮಂಜುಳಾಳನ್ನು ಏಳಿಸಿದಳು. ‘ನೋಡಮ್ಮ ನೀರ್‍ಕಡೀಕೆ ಹೋಗಂಗಿದ್ರೆ ಇವಾಗ್ಲೆ ಹೋಗ್ ಬರಾನ, ಯಾಕಂದ್ರೆ ಬಯಲಿಗೋಗ್ ಬೇಕಲ್ಲ’ ಎಂದು ಸೂಚಿಸಿದಳು. ಕರಿಯಮ್ಮ ತೆಗೆದುಕೊಂಡ ಮುನ್ನೆಚ್ಚರಿಕೆಯಿಂದ ಮಂಜುಳಾ ಖುಷಿಗೊಂಡಳು. ಇಬ್ಬರೂ ಬೆಳಕು ಹರಿಯುವುದಕ್ಕೆ ಮುಂಚೆಯೇ ಮನೆಬಿಟ್ಟು ಹೊರಟವರನ್ನು ಕಂಡ ಅಕ್ಕಪಕ್ಕದ ಕುತೂಹಲಿ ಕಣ್ಣುಗಳು ಕಾಲುಗಳಾಗಿ ಹಿಂಬಾಲಿಸಿದ್ದೂ ಉಂಟು. ಇಲ್ಲಿಂದ ಆರಂಭಗೊಂಡ ಬೆಳಗಿನ ಕುತೂಹಲ ಬೆಳೆಯುತ್ತಲೇ ಇತ್ತು.

ಗೋಡೆ-ಬಾಗಿಲುಗಳಿಲ್ಲದ ಬಚ್ಚಲಲ್ಲಿ ಮಂಜುಳ ಸ್ನಾನ ಮಾಡುವಾಗಲೂ ಅಷ್ಟೆ. ಅನೇಕ ಕಣ್ಣುಗಳು ಇಣಕಿದವು. ಒಂದಿಬ್ಬರು ರಾಗಿಯನ್ನು ಕಡ ಕೇಳುವ ನೆಪದಲ್ಲಿ ಮನೆಗೆ ಬಂದೂ ಹೋದರು. ಆದರೆ ಕರಿಯಮ್ಮ ಏನೂ ಆಗಿಲ್ಲವೆಂಬಂತೆ ಸಹಜವಾಗಿ ಇದ್ದಳು. ಇವರಾಗಿ ಕೇಳಲಿಲ್ಲ. ಅವಳಾಗಿ ಹೇಳಲಿಲ್ಲ.

ಸಿದ್ದಣ್ಣ ಹೊರಹೊರಟಾಗ ಒಂದಿಬ್ಬರು ಗಂಡಸರು ‘ಏನಪ್ಪ ಸಮಾಚಾರ ಮನ್ಯಾಗೆ?’ ಎಂದು ಕೆಣಕಿದರು. ‘ಏನೈತೆ ಎಲ್ಲಾ ಯಾವತ್ನಂಗೇ’ ಎಂದು ಸಿದ್ದಣ್ಣ ಸಹಜ ಉತ್ತರ ನೀಡಿ ಮುಂದೆ ಹೋಗಿದ್ದ.

ಶಿವಕುಮಾರ್ ನನ್ನು ಕೇಳಬೇಕೆಂದುಕೊಂಡವರಿಗೆ ಆಗಲಿಲ್ಲ. ಅವನು ಒರಟಾಗಿ ಉತ್ತರಿಸಿದರೆ? ಅದಕ್ಕಾಗಿ ಸುಮ್ಮನಿದ್ದರು.

ಸ್ನಾನ ಮಾಡಿ ತಲೆ ಬಾಚಿಕೊಂಡ ಮಂಜುಳಾ ಲಕ್ಷ್ಮಿಯನ್ನು ಕರೆದು ಕೂಡಿಸಿಕೊಂಡು ತಾನೇ ತಲೆ ಬಾಚಿದಳು. ತನ್ನಲ್ಲಿದ್ದ ಕೆಲವು ಅಲಂಕಾರ ಸಾಮಗ್ರಿಗಳನ್ನು ಬಳಸಿದಳು. ಹಜಾರದಲ್ಲಿ ಲಕ್ಷ್ಮಿಗೆ ಸಿಂಗಾರ ಮಾಡುತ್ತಿದ್ದ ಮಂಜುಳಾಳನ್ನು ನೋಡಿದ ಕೆಲವರಿಗೆ ಇನ್ನು ಅನುಮಾನವೇ ಉಳಿಯಲಿಲ್ಲ. ಇದಕ್ಕಿಂತ ಮೊದಲು ಹಟ್ಟಿಯ ಮುಂದೆ ರಂಗೋಲಿ ಹಾಕಿದ್ದನ್ನು ಬೇರೆ ಕಂಡಿದ್ದರು. ಕರಿಯಮ್ಮ ತಡೆದರೂ ಕೇಳದೆ ಖುಷಿಯಿಂದ ರಂಗೋಲಿ ಹಾಕಿದ ಮಂಜುಳ ತಾನು ಕುತೂಹಲಕ್ಕೆ ಕಾರಣವಾಗುತ್ತೇನೆಂದು ಭಾವಿಸಿರಲಿಲ್ಲ. ಅನಂತರ ಲಕ್ಷ್ಮಿಗೆ ಸಿಂಗಾರ! ಜನಕ್ಕೆ ಇಷ್ಟು ಸಾಕಿತ್ತು! ಅನುಮಾನವನ್ನು ಬಗೆಹರಿಸಿಕೊಳ್ಳುವುದಕ್ಕೆ ಮುಂಚೆಯೇ ಹೊಗೆಯಾಡಿಸುವ ಮನಸ್ಥಿತಿಗಳಿಗೆ ‘ಬೆಂಕಿಯಿಲ್ಲದೆ ಹೊಗೆಯಿಲ್ಲ’ ಎಂಬ ಮಾತು ಒಪ್ಪುವುದೇ ಇಲ್ಲ.

ಲಕ್ಷ್ಮಿಯ ಸಿಂಗಾರ ಮುಗಿಯುವುದನ್ನೇ ಕಾಯುತ್ತಿದ್ದ ಒಂದಿಬ್ಬರು ಅನಂತರ ಲಕ್ಷ್ಮಿಯನ್ನು ಸನ್ನೆ ಮಾಡಿ ಕರೆದರು. ಸಿಂಗಾರಗೊಂಡ ಲಕ್ಷ್ಮಿಗೆ ತನ್ನ ಪೌಡರಿನ ಮುಖವನ್ನು ಎಲ್ಲರಿಗೂ ತೋರಿಸುವ ಆಸೆ! ಚಂಗನೆ ಬಂದಳು. ಇವರು ತನ್ನ ಅಂದಚೆಂದ ನೋಡಿ ಹೊಗಳುವರೆಂದು ನಿರೀಕ್ಷಿಸಿದಳು. ಆದರೆ ಅವರು ಕೇಳಿದ್ದೇ ಬೇರೆ.

‘ನಿಂಗೆ ಈಗ ಜಡೆ ಹಾಕಿ, ಪೋಡ್ರು ತಟ್ಟಿದ್ಲಲ್ಲ ಅವಳು ನಿಮ್ಮಣ್ಣನ ಹೆಂಡ್ತೀನಾ?’

ಲಕ್ಷ್ಮಿಗೆ ಸಿಟ್ಟು ಬಂತು. ತನ್ನ ಅಂದ ಚೆಂದ ವಿಚಾರಿಸದಿದ್ದರೆ ಹೋಗಲಿ, ಪಕ್ಕದಮನೆ ಪುಟ್ಟಮ್ಮ ಮಂಜುಳಾ ಕುರಿತು ಅವಳು ಇವಳು ಅಂತ ಅಂದದ್ದು ಸರಿಬರಲಿಲ್ಲ. ಜೊತೆಗೆ ‘ಪೋಡ್ರು ತಟ್ಟಿದ್ದು’ ಎಂದು ಹೇಳಿದ ಧಾಟಿ ರೇಗಿಸಿತ್ತು. ಆದ್ದರಿಂದ ಪುಟ್ಟಮ್ಮನ ಮಾತಿಗೆ ಸರಿಯುತ್ತರ ಕೊಡಬೇಕೆಂದು ‘ನೀನ್ ಬೇಕಾರೆ ಪೋಡ್ರು ತಟ್ಟಿಸ್ಕಾ ನಾನ್ಯಾಕ್ ತಟ್ಟಿಸ್ಕಂಬ್ಲಿ? ನಾನು ಪೌಡ್ರನ್ನ ಮೆತ್ತಗೆ ಹಚ್ಚಿಸ್ಕಂಡಿದ್ದೀನಿ ತಟ್ಟಿಸ್ಕಂಡಿಲ್ಲ’ ಎಂದಳು. ಪುಟ್ಟಮ್ಮ ಈಕೆಯ ಸಿಟ್ಟನ್ನು ಅರ್ಥ ಮಾಡಿಕೊಂಡಳು. ಕೂಡಲೆ ಪೂಸಿ ಹೊಡೆಯುವ ಧಾಟಿಯಲ್ಲಿ ‘ಹೋಗ್ಲಿ ಬಿಡು ಲಕ್ಷ್ಮಿ, ಏನೊ ಬಾಯ್ತಪ್ಪಿ ಹಂಗಂದೆ. ಈಗ ನೀನು ಏಟಂದ್ ಚಂದಾಗ್ ಕಾಣುಸ್ತೀಯ ಗೊತ್ತಾ’ ಎಂದು ಹೊಗಳಿದಳು. ಲಕ್ಷ್ಮಿ ಹಿಗ್ಗಿ ಹೀರೇಕಾಯಿಯಾದಳು.

ಆಗ ಪುಟ್ಟಮ್ಮ ಮೆಲ್ಲನೆ ಕೇಳಿದಳು.

‘ನೋಡು, ನನ್ನೊಬ್ಬಳಿಗೇಳು ಸಾಕು. ನಿಂಗೆ ಸಿಂಗಾರ ಮಾಡಿದ್ಲಲ್ಲ ಆ ವಯ್ಯಾರಿ – ಅವಳು ನಿಮ್ಮಣ್ಣನ್‌ ಜತೆ ಓಡ್‌ ಬಂದವ್ಳಾ?’

‘ಇಲ್ಲ, ನಿನ್ ಗಂಡನ್ ಜತೆ ಓಡ್‌ ಬಂದವ್ಳೆ!’

ತಾನೇನು ಮಾತನಾಡುತ್ತೇನೆಂಬ ಪರಿವೆಯೇ ಇಲ್ಲದೆ ಲಕ್ಷ್ಮಿ ರಾಚಿದಳು. ಮತ್ತೆ ಹೇಳಿದಳು :

‘ಓಡ್ ಬಂದವಳೆ ಹಂಗೆ ಹಿಂಗೆ ಅಂಬ್ತ ಕೆಟ್ ಮಾತಾಡಿದ್ರೆ ಕಳ್ಳು ಕಿತ್ತು ಕೊಟ್ಟಿಗೇಗ್ ಹಾಕ್ ಬಿಡ್ತಾನೆ ನಮ್ಮಣ್ಣ. ಸುಮ್ ಸುಮ್ಕೆ ಏನೇನೋ ಕೇಳಿ ನನ್ ಬಾಯ್ನಾಗೂ ಕೆಟ್ ಮಾತ್ ಬರುಸ್ಟೇಡ ಪುಟ್ಟಕ್ಕಯ್ಯ.’

‘ಹಂಗಾರೆ ಅವಳ್ಯಾರು? ನಿಮ್ಮಣ್ಣನ್‌ ಜತೆ ಬಂದವ್ಳಾ?’

‘ಹೂಮತ್ತೆ. ರಾತ್ರಿ ನಮ್ಮಣ್ಣನ ಜತೆ ಬಂದವ್ರೆ. ನಿಂಗೇನ್ ಇವಾಗ’ ಎಂದವಳೆ ಮೂತಿ ತಿರುವಿ ‘ಕಂಡೋರ್ ಮ್ಯಾಲೆ ಕತೆಕಟ್ಟಿ ಹೊಟ್ಟೆ ತುಂಬಿಸ್ಕಾಬ್ಯಾಡ’ ಎಂದು ಎಚ್ಚರದ ಮಾತನ್ನೂ ಹೇಳಿ ಹೋಗಿಬಿಟ್ಟಳು. ಇದರಿಂದ ಅನುಮಾನ ಬಗೆಹರಿಯುವ ಬದಲು ಹೆಚ್ಚಾಯಿತು.

‘ಓಡಿಬಂದೋಳು’ ಅಂದರೆ ಸಿಟ್ಟು ‘ಜತೆಯಲ್ಲಿ ಬಂದೋಳು’ ಎಂದರೆ ಸಮಾಧಾನ. ಆದ್ದರಿಂದ ಇದರಲ್ಲಿ ಏನೋ ಇದೆ. ಇಲ್ಲದಿದ್ದರೆ ಈ ಸಿಡುಕಿಗೆ ಕಾರಣವೇ ಇಲ್ಲ – ಹೀಗೆ ಸಾಗಿತ್ತು ತರ್ಕ.

ಶಿವಕುಮಾರ್ ತಮ್ಮ ಮನೆಯ ಮುಂದೆ ಹೋದರೂ ಆತನನ್ನು ಕೇಳುವ ಧೈರ್ಯವಾಗಲಿಲ್ಲ. ಅನುಮಾನ ಮಾತ್ರ ಹಿಂಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಹೆಡ್ ಮಾಸ್ಟರ್ ರಂಗಪ್ಪನವರೊಂದಿಗೆ ಶಿವಕುಮಾರ್‌ ಬಂದಾಗ ಕೇರಿಯ ಕುತೂಹಲಕ್ಕೆ ಕಣ್ಣು-ಕಿವಿ ಎಲ್ಲವೂ ಎರಡುಪಟ್ಟಾದವು. ರಂಗಪ್ಪನವರನ್ನು ಹಜಾರದಲ್ಲಿ ಕೂಡಿಸಿದ ಶಿವಕುಮಾರ್ ಮಂಜುಳಾಳನ್ನು ಕೂಗಿದಾಗ ಆಕೆ ಬಂದಳು. ‘ನಮಸ್ಕಾರ’ ಎಂದಳು.

‘ಎಲ್ಲಾ ಶಿವಕುಮಾರ್ ಹೇಳಿದ್ದಾನೆ. ಒಳ್ಳೆ ಹುಡುಗ. ಬಸ್‌ನಲ್ಲಿದ್ದ. ಸರಿಹೋಯ್ತು. ಇಲ್ದಿದ್ರೆ ಬಹಳ ಕಷ್ಟ ಆಗ್ತಾ ಇತ್ತಲ್ಲಮ್ಮ’ ಎಂದರು ರಂಗಪ್ಪನವರು.

‘ಆದ್ರೂ ಹಳ್ಳಿ ಜನರಲ್ಲಿ ಇನ್ನೂ ಮುಗ್ಧತೆ ಇದೆ ಸಾರ್.’

‘ಹೌದಮ್ಮ. ಆದ್ರೆ ಸಮಯ ಸಂದರ್ಭ ಒಂದೇ ಥರಾ ಇರೋದಿಲ್ವಲ್ಲ. ಇರ್‍ಲಿ, ನಿಮ್ಮಣ್ಣ ಚನ್ನಾಗಿದಾರ?’

‘ಚನ್ನಾಗಿದಾರೆ ಸಾರ್.’

‘ಸರ್‍ಯಮ್ಮ, ಬಂದು ಇವತ್ತೇ ರಿಪೋರ್ಟ್ ಮಾಡ್ಕೊ. ಇಲ್ಲೇ ಇವ್ರ್ ಮನೆ ಹತ್ರಾನೇ ಒಂದು ಮನೆ ಖಾಲಿ ಇತ್ತು. ಹೇಗೋ ಒಪ್ಪಿಸಿ ಬಾಡಿಗೆ ಮಾತಾಡಿದ್ದೀನಿ. ಅದಕ್ಕೆ ಸೇರ್‍ಕೊ.’ – ಹೀಗೆ ರಂಗಪ್ಪನವರು ಹೇಳುತ್ತಿರುವಾಗ ಕರಿಯಮ್ಮ ‘ಇನ್ನೂ ಎರಡುದಿನ ನಮ್ಮನೇಲೆ ಇರ್‍ಲಿ. ಯಾಕ್ ಅವಸ್ರ ಮಾಡ್ತೀರ ಮೇಷ್ಟ್ರೆ?’ ಎಂದು ಒಳಗಿಂದಲೇ ಹೇಳಿದಳು. ಆದರೆ ಮಂಜುಳ ನಯವಾಗಿಯೇ ‘ಪಕ್ಕದಲ್ಲಿಯೇ ಇರ್‍ತೀನಲ್ಲ. ಯೋಚ್ನೆ ಮಾಡ್ಬೇಡಿ’ ಎಂದು ಹೇಳುತ್ತ ಇಂದೇ ಬಾಡಿಗೆ ಮನೆಗೆ ಹೋಗುವ ಇಂಗಿತ ತೋರಿದಳು. ಜೊತೆಗೆ ‘ನಾನು ಒಂದು ಸೂಟ್‌ಕೇಸ್ ಬಿಟ್ರೆ ಬೇರೇನೂ ತಂದಿಲ್ಲ. ಈ ಶನಿವಾರ ಹೋಗಿ ಎಲ್ಲಾ ಸಾಮಾನೂ ತರ್‍ತೀನಿ, ರಿಪೋರ್ಟ್ ಮಾಡ್ಕೊಂಡ್ ಬಂದ್ಮೆಲೆ ಅಣ್ಣ-ಅತ್ತಿಗೆ ಎಲ್ಲಾ ಬರ್‍ತೀವಿ ಅಂದಿದ್ರು’ ಎಂಬ ವಿವರವನ್ನೂ ನೀಡಿದಳು.

‘ನಿಮ್ಮಣ್ಣ ಎಲ್ಲಮ್ಮ ಬಿಡುವಾಗಿರ್‍ತಾನೆ. ಯಾರ್ ಕರುದ್ರೆ ಅವರ ಜೊತೆ ಹೋಗಿ ಸಮಾಜಸೇವೆ ಮಾಡ್ತಾನೆ’ ಎಂದು ತಮಾಷೆ ಮಾಡಿದ ರಂಗಪ್ಪ ಮಾಸ್ತರು ಮೇಲೆದ್ದರು. ಶಿವಕುಮಾರ್ ಕಾಫಿ ಕುಡಿಯಲು ಒತ್ತಾಯ ಮಾಡಿದ ಮೇಲೆ ಮತ್ತೆ ಕೂತರು. ಆಗ ಶಿವಕುಮಾರ್‌ ಗಮನಿಸಿದ. ಅಕ್ಕಪಕ್ಕದವರೆಲ್ಲ ಇಣಕಿ ನೋಡುತ್ತಿದ್ದರು. ಊರಿಗೆ ಹೊಸಬರು ಬಂದಾಗ ಇದು ಇದ್ದದ್ದೇ ಎಂದುಕೊಂಡು ಸುಮ್ಮನಾದ.

ರಂಗಪ್ಪ ಮಾಸ್ತರು ಹೋದಮೇಲೆ ಲಕ್ಷ್ಮಿ ಶಿವಕುಮಾರನನ್ನು ಕರೆದು ಪುಟ್ಟಮ್ಮ ಕೇಳಿದ ವಿಷಯವನ್ನು ಸಾದ್ಯಂತ ವಿವರಿಸಿದಳು. ಆಗ ಆತನಿಗೆ ವಿಷಯ ಹಾದಿ ತಪ್ಪುತ್ತಿರುವ ವಿಷಯ ಗೊತ್ತಾಯಿತು. ಈಗಲೇ ಎಲ್ಲವನ್ನೂ ಸ್ಪಷ್ಟಪಡಿಸುವುದು ಸರಿಯೆಂದು ಹಟ್ಟಿ ಮುಂದೆ ನಿಂತು ‘ಪುಟ್ಟಕ್ಕಯ್ಯ ಪುಟ್ಟಕ್ಕಯ್ಯ’ ಎಂದು ಕೂಗಿದ. ಪುಟ್ಟಮ್ಮ ತನ್ನ ಮನೆಯಿಂದ ಹೊರಬಂದಳು. ‘ಬಾರಕ್ಕ ನಿಂಗೊಂದ್ ವಿಷಯ ಹೇಳ್ತೀನಿ’ ಎಂದು ಕರೆದ. ಆಕೆ ಅಳುಕಿನಿಂದಲೇ ಬಂದಳು. ಆಗ ಒಳಗಿದ್ದ ಮಂಜುಳಾಳನ್ನು ಕರೆದ.

‘ಸ್ವಲ್ಪ ಬನ್ನಿ ಮೇಡಂ ಇಲ್ಲಿ.’

ಮಂಜುಳ ಬಂದಳು. ಆಕೆಗೆ ಪುಟ್ಟಮ್ಮನ ಪರಿಚಯ ಮಾಡಿಸಿದ.

‘ಈಕೆ ಪುಟ್ಟಮ್ಮ ಅಂತ. ನಾವೆಲ್ಲ ಪುಟ್ಟಕ್ಕಯ್ಯ ಅಂತ ಪ್ರೀತಿಯಿಂದ ಕರೀತೀವಿ.’ ಎಂದು ಹೇಳಿ ಆಕೆಗೆ ‘ನೋಡು ಪುಟ್ಟಕ್ಕಯ್ಯ. ಇವರು ಮಂಜುಳ ಮೇಡಂ ಅಂತ ಹೊಸದಾಗಿ ಹೈಸ್ಕೂಲಿಗೆ ಬಂದಿದ್ದಾರೆ. ರಾತ್ರಿ ಅಕಸ್ಮಾತ್ ಒಂದೇ ಬಸ್ನಲ್ ಬಂದ್ವಿ, ಆ ಹಾಳಾದ್ ಬಸ್ಸು ಕೆಟ್ಟು ಹೋಯ್ತು, ರಾತ್ರಿ ಇನ್ನೆಲ್ ಹೋಗ್ತಾರೆ ನೀನೇ ಹೇಳು. ನಮ್ಮನೇಗ್ ಕರ್‍ಕಂಡ್ ಬಂದೆ’ ಎಂದು ಸಾದ್ಯಂತ ವಿವರಿಸಿದ.

ಪುಟ್ಟಮ್ಮ ‘ನಾನ್ ಆವಾಗ್ಲೆ ಅಂದ್ಕಂಡೆ. ಇದಿಂಗೇ ಆಗಿರ್‍ಬೇಕು ಅಂಬ್ತ. ನೀನು ಅಂದ್ಮೇಲೆ ಪರೋಪಕಾರಿ ಪುಟ್ಟಣ್ಣ ಇದ್ದಂಗಲ್ವೇನಪ್ಪ. ನೀನು ಅಂದ್ರೇನು. ನಿನ್ನ ನಡತೆ ಅಂದ್ರೇನು. ಅದಕ್ಕೆ ಎಲ್ಲಾನ ಸಾಟಿ ಉಂಟಾ ಬಿಡ್ ಬಿಡು’ ಎಂದು ಹೊಗಳಿ ಮಂಜುಳಾಗೆ ‘ಇನ್ನೇನ್ ಇಲ್ಲೇ ಇರ್‍ತೀರಲ್ಲ, ಸಿಕ್ತೀನ್‌ ಬಿಡ್ರಮ್ಮ’ ಎಂದು ಹೇಳಿ ಹೊರಟಳು. ಆಕೆಗೆ ವಿಷಯ ಸ್ಪಷ್ಟವಾದ, ವಿಚಿತ್ರ ಆನಂದವಂತೂ ಆಗಿತ್ತು. ಆಕೆ ಹೋದಮೇಲೆ ಶಿವಕುಮಾರ್ ‘ಈಕೇನ ನಾನು ಆಲ್ ಇಂಡಿಯಾ ರೇಡಿಯೊ ಅಂತ ತಮಾಷೆ ಮಾಡ್ತೀನಿ, ಏನಾದ್ರೂ ತಿಳುಸ್ಬೇಕು ಅಂತಿದ್ರೆ ಈಕೆ ಒಬ್ಬಳಿಗೆ ಹೇಳಿದ್ರೆ ಊರೇ ಗೊತ್ತಾಗುತ್ತೆ. ಇನ್ನು ಒಂದು ಗಂಟೆ ಒಳಗೆ ಹೊಸ ಮೇಡಂ ವಿಷಯ ಎಲ್ಲಾ ಕೇರಿಗೂ ಮುಟ್ಟುತ್ತೆ.’ ಎಂದು ಹೇಳಿ ನಕ್ಕ.

ಮಂಜುಳಾ ತಾನೂ ನಗುತ್ತ ‘ಸ್ಕೂಲಿಗೆ ಸಿದ್ಧವಾಗ್ತೇನೆ’ ಎಂದು ಒಳಹೋದಳು. ಹಿಂದೆಯೇ ಲಕ್ಷ್ಮಿ ಹಿಂಬಾಲಿಸಿದಳು. ಸ್ವಲ್ಪ ಹೊತ್ತಿನ ಮುಂಚೆ ಸಿಂಗಾರವಾದ ಅವಳಿಗೆ ಆಸೆ-ಆಸಕ್ತಿ ರೆಕ್ಕೆ ಬಿಚ್ಚಿ ಹಾರಾಡತೊಡಗಿತ್ತು. ಬಾಗಿಲಿಲ್ಲದ ಒಳಮನೆಯಲ್ಲಿ ಮಂಜುಳಾ ಸಿದ್ಧವಾಗುವುದನ್ನು ಮರೆಯಲ್ಲಿ ನಿಂತು ಬೆಕ್ಕಬೆರಗಾಗಿ ದಿಟ್ಟಿಸಿದಳು. ಬರೀ ಸೀರೆಯ ಕಲ್ಪನೆಯಿದ್ದ ಅವಳಿಗೆ ಅದರೊಳಗೊಂದು ಲಂಗ ತೊಡುವುದು ವಿಚಿತ್ರವಾಗಿ, ವಿಶೇಷವಾಗಿ ಕಂಡಿತು. ಹಾಗೆಯೇ ರವಿಕೆಯ ಒಳಗೆ ತೊಟ್ಟುಕೊಂಡಿದ್ದ ಬ್ರಾ ಬಗ್ಗೆಯೂ ಕುತೂಹಲ ಕೆರಳಿತು. ಮೇಡಂ ಸ್ನೋ ಹಚ್ಚಿಕೊಂಡಿದ್ದರಿಂದ ಹಿಡಿದು ತಲೆ ಬಾಚುವವರೆಗೆ ನೋಡಿದ ಲಕ್ಷ್ಮಿಗೆ ವಿಶೇಷ ಏದುಸಿರು ಉಂಟಾಗಿ ಹೊರಬಂದಳು. ಆಗ ಬಂದು ಕೂತ ಸಿದ್ದಣ್ಣ ತನ್ನ ಮುದ್ದಿನ ಮಗಳು ಲಕ್ಷ್ಮಿಗೆ ಪೆಪ್ಪರ್‌ಮೆಂಟು ಕೊಟ್ಟ. ತಂದೆಯ ಪ್ರೀತಿಯನ್ನು ಶಿವಕುಮಾರ್ ಗಮನಿಸುತ್ತ ಯೋಚಿಸಿದ. ಲಕ್ಷ್ಮಿಯನ್ನು ಕಂಡರೆ ಸಿದ್ದಣ್ಣನಿಗೆ ಎಲ್ಲಿಲ್ಲದ ಮಮತೆ-ವಾತ್ಸಲ್ಯ. ಇಡೀಮನೆಯಲ್ಲಿ ಚಿಕ್ಕವಳು. ಉಳಿದವರು- ದೊಡ್ಡವರು-ಮದುವೆಯಾಗಿ ಗಂಡಂದಿರ ಮನೆಗೆ ಹೋಗಿದ್ದಾರೆ. ಮುದ್ದುಮುದ್ದಾಗಿ ಮಾತನಾಡುತ್ತ ಮನೆಯನ್ನು ಮನವನ್ನಾಗಿಸುವ ಮುಗ್ಧ ಮಗಳನ್ನು ಅಚ್ಚುಮೆಚ್ಚಾಗಿ ಬೆಳೆಸುವ ಹಂಬಲ ಅಪ್ಪನದು. ಹಾಗೆ ನೋಡಿದರೆ ಅಮ್ಮನಿಗಿಂತ ಅಪ್ಪನಿಗೇ ಲಕ್ಷ್ಮಿಯ ಬಗ್ಗೆ ಹೆಚ್ಚು ವಾತ್ಸಲ್ಯ. ಅಮ್ಮನಿಗೆ ಮಕ್ಕಳನ್ನು ಸಾಕಿ, ಬೆಳೆಸಿ, ಹಣ್ಣಾದ ಮನಸ್ಥಿತಿ. ಈಗ ದಣಿದ ದೇಹ-ಮನಸ್ಸುಗಳಿಂದ ಎಲ್ಲವೂ ಯಥಾಪ್ರಕಾರ ಎನ್ನುವ ಮನೋಗತಿ.

ಹೀಗೆ ಹಾದುಹೋಗುವ ಆಲೋಚನೆಯಲ್ಲಿ ತನ್ಮಯನಾಗಿದ್ದ ಶಿವಕುಮಾರ್‌ ಎಚ್ಚರಗೊಂಡದ್ದು ಮಂಜುಳ ಹೊರಬಂದಾಗ, ಆಕೆ ಸರಳ ಸುಂದರಿಯಾಗಿ ನಿಂತಿದ್ದಳು! ಶಿವಕುಮಾರನ ಚಿತ್ತ ಕದಡಿದ್ದಳು!

ಸಿದ್ದಣ್ಣ ಲಕ್ಷ್ಮಿಗೆ ‘ಮ್ಯಾಡಮ್ಮನೋರ್‍ನ ಇಸ್ಕೂಲ್‌ತಾವ ಕರ್‍ಕಂಡ್ ಹೋಗಿ ಬಿಟ್ ಬಾ ಮಗ’ ಎಂದಾಗ ಶಿವಕುಮಾರನಿಗೆ ನಿರಾಶೆಯಾಯಿತು. ಆಕೆಯೊಂದಿಗೆ ತಾನೇ ಹೋಗುವ ಆಸೆಯಿತ್ತು. ಆದ್ದರಿಂದ ‘ಪಾಪ! ಆ ಚಿಕ್ಕ ಹುಡ್ಗಿಗ್ಯಾಕ್ ತೊಂದ್ರೆ ಕೊಡ್ತೀಯಪ್ಪ. ನಾನಿಲ್ವೆ?’ ಎಂದ. ಸಿದ್ದಣ್ಣ ‘ನಿಂಗಿವೆಲ್ಲ ಗೊತ್ತಾಗಕಿಲ್ಲ ಕುಮಾರ. ಇದು ಹಳ್ಳಿಕಣಪ್ಪ ಹಳ್ಳಿ! ಪಟ್ಟಣದ ಕಣ್ಣು, ಕಿವಿ, ನಾಲಗೆ ಒಂಥರಾ ಇದ್ರೆ ಹಳ್ಳಿ ಕಣ್ಣು, ಕಿವಿ, ನಾಲಗೆ ಇನ್ನೊಂದ್ ಥರಾ ಇರುತ್ವೆ, ತಿಳೀತಾ?’ ಎಂದು ಹೇಳಿದಾಗ ಶಿವಕುಮಾರ್‌ ನಿರುತ್ತರನಾಗಿ ನಿಂತ. ಮಂಜುಳ ನಸುನಗುತ್ತಾ ಲಕ್ಷ್ಮಿಯೊಂದಿಗೆ ಹೊರಟಳು. ಕರಿಯಮ್ಮ ‘ಇರಮ್ಮ ಒಸಿ, ಬಂದೆ’ ಎಂದು ಒಳಹೋಗಿ ಪೊರಕೆ ತಂದು ನೀವಳಿಸಿ ದೃಷ್ಟಿ ತೆಗೆದಳು.

ಮಂಜುಳ ಆಕಡೆ ಹೋದಮೇಲೆ ಶಿವಕುಮಾರ್‌ಗೆ ಮನೆಯೆಲ್ಲ ಭಣಗುಡತೊಡಗಿತು. ಸ್ವಲ್ಪ ಹೊತ್ತು ಮನೆಯಲ್ಲಿದ್ದು ಆನಂತರ ಹೊರಹೊರಟ.

ಕಾಲುಗಳು ಕೋಟೆಯ ಬಳಿ ಕರೆತಂದವು. ಅದೊಂದು ಬೆಟ್ಟ. ಬೆಟ್ಟದ ಮೇಲೆ ಹಿಂದೆ ಅರಮನೆಯಾಗಿದ್ದ ಕೋಟೆ. ಈಗ ಅದು ಅರ-ಮನೆ; ಅಲ್ಲಲ್ಲೆ ಬಿದ್ದು ಬವಣೆ ಮೈವೆತ್ತ ಆಕಾರ, ಗತವೈಭವದ ಪಳೆಯುಳಿಕೆ. ಶಿವಕುಮಾರನಿಗೆ ತನ್ನೂರಿನ ಕೋಟೆಯೆಂದರೆ ಎಲ್ಲಿಲ್ಲದ ಹೆಮ್ಮೆ. ಅತ್ಯುನ್ನತ ಅಭಿಮಾನ. ತಾನು ಓದುವಾಗ ದೇಶ ವಿದೇಶದ ಪ್ರಸಿದ್ಧ ಸ್ಥಳಗಳ ಬಗ್ಗೆ, ಅಲ್ಲಿನ ರಾಜರ ಬಗ್ಗೆ ತಿಳಿದುಕೊಳ್ಳುತ್ತಿರುವಾಗ ತನ್ನ ಹುಟ್ಟಿದೂರಿಗೂ ಚರಿತ್ರೆಯಲ್ಲಿ ದೊಡ್ಡ ಹೆಸರು ಸಿಗಬಾರದಿತ್ತೆ ಎನ್ನಿಸುತ್ತಿತ್ತು. ಗೆಜಿಟಿಯರ್ ತೆಗೆದು ನೋಡಿದಾಗ ಈ ಊರಿನ ಒಂದು ಸಣ್ಣ ಉಲ್ಲೇಖವಿತ್ತಾದರೂ ದೇಶದ ಚರಿತ್ರೆಯಲ್ಲಿ ಅಂತ ಗಣನೀಯ ಸ್ಥಾನವಿರಲಿಲ್ಲ. ಇಂಥ ಅಸಂಖ್ಯಾತ ಹಳ್ಳಿಗಳಿರುವಾಗ ಬರಡುಸಂದ್ರ ಮಾತ್ರ ವಿಶೇಷ ಸ್ಥಾನ ಗಳಿಸಲು ಹೇಗೆ ಸಾಧ್ಯ? ಹೆಸರೇ ಸೂಚಿಸುವಂತೆ ಇದು ಬರಡುಪ್ರದೇಶ, ಒಣ ಬೇಸಾಯವನ್ನೇ ಹೆಚ್ಚಾಗಿ ನಂಬಿದ ಜನ. ಅಪರೂಪಕ್ಕೊಮ್ಮೆ ಬರುವ ಮಳೆ. ಕೆಲವೊಮ್ಮೆ ಮಾತ್ರ ಕೈ ತುಂಬ ಸಿಗುವ ಬೆಳೆ. ಹೀಗೆ ನಿಜಕ್ಕೂ ಬರಡಾಗಿರುವ ಬದುಕಿಗೆ ಬೆವರೇ ಬಳುವಳಿ.

ಚಿಕ್ಕಂದಿನಿಂದ ಇಂಥ ಬೆವರಬದುಕನ್ನು ಕಂಡ ಶಿವಕುಮಾರ್‌ಗೆ ತನ್ನೂರಿನ ಇತಿಹಾಸವಾದರೂ ದೊಡ್ಡದಾಗಿರಬಾರದಿತ್ತೆ? ಹಾಗಾದರೂ ಇದು ಆಕರ್ಷಿಸಬಾರದಿತ್ತೆ ಎನ್ನಿಸತೊಡಗಿತ್ತು. ಕಡೆಗೆ ತನ್ನ ನೆಲದ ಅಭಿಮಾನ ಎಷ್ಟಾಯಿತೆಂದರೆ ಕಣ ಕಣವೂ ಗತ ವೈಭವದ ಪ್ರತೀಕವಾಗ ತೊಡಗಿತು. ಅಷ್ಟಿಷ್ಟು ಇರುವ ಇತಿಹಾಸವೇ ಅಸಾಧಾರಣವಾಯಿತು. ಚರಿತ್ರೆಯ ಪಾತ್ರಗಳು ಒಳಬಂದು ಮಾತಾಡಿ ಜಗ್ಗುವ ಅನುಭವವಾಗ ತೊಡಗಿತು. ಊರಿನ ಎಲ್ಲರೊಂದಿಗೂ ಇಲ್ಲಿನ ಚರಿತ್ರೆಯನ್ನು ದೊಡ್ಡದಾಗಿ ಹೇಳುತ್ತ ಬಂದಾಗ, ಅವರ ಕಣ್ಣಲ್ಲಿ ಈತನೇ ದೊಡ್ಡವನಾಗಿದ್ದ.

ಈಗಲೂ ಬೆಟ್ಟದ ಬಳಿ ಬಂದು ಕೋಟೆ ಕಂಡರೆ ಸಾಕು, ಅದೇನೋ ಭಾವುಕತೆ ತುಂಬುತ್ತಿತ್ತು. ಈ ದಿನವಂತೂ ಆತನಿಗೆ ತಳಮಳವಾಗ ತೊಡಗಿತ್ತು. ತಾನು ಮಂಜುಳಾ ಜೊತೆ ಬಂದದ್ದರಿಂದ ಹಿಡಿದು, ಇದೇ ತಾನೆ ಅಪ್ಪ ಹೇಳಿದ ಹಳ್ಳಿಯ ಕಣ್ಣು, ಕಿವಿ, ನಾಲಗೆಗಳವರೆಗೆ ಎಲ್ಲವೂ ನೆನಪಾಗಿ ಬಂದು ಒಂದು ಕ್ಷಣ ನಡುಗಿದ.

ಮೆಟ್ಟಲು ಹತ್ತಿ ಕೋಟೆಯ ಮಧ್ಯಸ್ಥಾನಕ್ಕೆ ಬಂದ. ಸುತ್ತ ದಿಟ್ಟಿಸಿದ. ಇಂತ ವೈಭವೋಪೇತ ಚರಿತ್ರೆಯುಳ್ಳ ಊರಿನ ಹುಡುಗನಾದ ತಾನು ಒಂದು ಹೆಣ್ಣಿನ ಬಗ್ಗೆ ಹೀಗೆಲ್ಲ ಚಿಂತಿಸಿ ಕೊರಗಬಹುದೆ ಎಂದುಕೊಂಡ. ತಾನು ಇನ್ನೂ ಈ ಊರಿನ ಚರಿತ್ರೆಯನ್ನು ಬರೆಯಬೇಕು; ಬೆಳಕಿಗೆ ತರಬೇಕು. ಗತವೈಭವವನ್ನು ಎತ್ತರೆತ್ತರಕ್ಕೆ ಕೊಂಡೊಯ್ಯಬೇಕು ಎಂದು ಭಾವುಕನಾದ. ಚರಿತ್ರೆಕಾರನೊಬ್ಬ ಇಷ್ಟೊಂದು ಭಾವುಕನಾಗುವುದರ ಉಚಿತಾನುಚಿತ ವಿವೇಚನೆಗೆ ಒಳಗಾಗದೆ ಉತ್ಕಟಗೊಂಡ. ಆಗ ಅವನಲ್ಲಿ ಸುಳಿದಾಡುತ್ತಿದ್ದ ಸುಂದರಿ ಮೇಡಂ ಮಂಜುಳ ಮಸುಕಾದಳು. ಕೋಟೆಯ ಆವರಣದಲ್ಲಿ ಕುಣಿಯುತ್ತ ಬಂದು ಮನಸ್ಸಿಗೆ ಲಗ್ಗೆಯಿಟ್ಟು ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡುತ್ತಿದ್ದ ಅವಳ ರೂಪ ಮಾಯವಾಗುತ್ತ ಬಂತು. ಆಕೆಯ ಜಾಗದಲ್ಲಿ ರಾಜನೊಬ್ಬ ಕಾಣಿಸಿಕೊಳ್ಳ ತೊಡಗಿದ. ‘ಶಿವಕುಮಾರ್’ ಎಂದು ಕರೆದ.

ಶಿವಕುಮಾರ್ ಕಣ್ಣುಜ್ಜಿಕೊಂಡು ನೋಡಿದಾಗ ಆ ರಾಜ ಕಾಣಲಿಲ್ಲ. ಆದರೆ ತನ್ನನ್ನು ಕರೆಯುತ್ತಿರುವಂತೆ ಭಾಸವಾಯಿತು. ಶಿವಕುಮಾರ್ ಮತ್ತಷ್ಟು ಮೆಟ್ಟಲು ಹತ್ತಿದ. ಕೋಟೆ ಗೋಡೆಗಳ ಬಳಿ ಓಡಿದ. ಹುಡುಕಿದ.

ಇಲ್ಲ…. ಎಲ್ಲೂ ಆತ ಕಾಣಿಸುತ್ತಿಲ್ಲ. ಆದರೆ ಕರೆದಂತೆ ಆಗುತ್ತಿದೆಯಲ್ಲ? ತಾನು ನಂಬಿದ್ದ ಮನಸ್ಸಿನೊಳಗೆ ತುಂಬಿಕೊಂಡಿದ್ದ ಚರಿತ್ರೆಯ ಯಜಮಾನ ಕಾಣಿಸಿಕೊಂಡಂತೆ ಮಾಡಿ ಮಾಯವಾದನಲ್ಲ! ಶಿವಕುಮಾರ್ ಒಂದು ರೀತಿ ಹುಚ್ಚನಂತಾದ! ‘ರಾಜ…. ಮಹಾರಾಜ…. ಎಲ್ಲಿದ್ದೀಯ? ಬಾ ಹೊರಗಡೆ ಬಾ ಮಾತಾಡು’ ಎಂದು ಕಿರುಚಿದ. ಇಲ್ಲ…. ರಾಜ ಬರಲಿಲ್ಲ. ಮನಸ್ಸಿನ ಮಹಾರಾಜ ಕಾಣಿಸಲಿಲ್ಲ.

ಆಗ ಒಳಗೆ ದಾಳಿ ಮಾಡಿದವಳು ಮೇಡಂ ಮಂಜುಳ. ‘ಒಳಗೆ ಬರಲಪ್ಪಣೆಯೆ ಪ್ರಭುವೆ’ ಎಂದು ಕೇಳುತ್ತಲೇ ಉತ್ತರಕ್ಕೆ ಕಾಯದೆ ಒಳಬಂದೇ ಬಿಟ್ಟಳು. ‘ನಿಮ್ಮ ಚರಿತ್ರೇಲಿ ನೀವೇ ಮುಳುಗಿ ಹೋಗೋಡಿ. ಸ್ವಲ್ಪ ನನ್ ಕಡೇನೂ ನೋಡಿ’ ಎಂದಳು. ‘ನಿನ್ನ ನೋಡಿದ್ದರಿಂದಲೇ ತಾನೇ ನನಗೆ ಈ ತಳಮಳ’ ಎಂದ. ‘ತಳಮಳಾನ ತಳಕ್ಕೆ ಕಳಿಸಿ, ಪ್ರೀತಿಪ್ರೇಮಾನ ಆಲಂಗಿಸಿ’ ಎಂದಾಗ ‘ನಿನ್ನನ್ನ ಆಲಂಗಿಸಲೆ’ ಎಂದ. ‘ಆಲಂಗಿಸೋಕ್ ಮುಂಚೆ ನಿಮ್ಮ ಅಪ್ಪ ಹೇಳಿದ ಹಳ್ಳೀನ ಎದ್ರುಗಡೆ ಇಟ್ಕೊಂಡು ಧೈರ್ಯವಾಗಿ ಒಂದ್ಸಾರಿ ನೋಡಿ. ಆಮೇಲೆ ಅಷ್ಟೇ ಧೈರ್ಯ ಇದ್ರೆ, ಎಲ್ಲಾದ್ಕಿಂತ ಪ್ರಾಮಾಣಿಕತೆ ಇದ್ರೆ ಪ್ರೇಮ ಮಾಡಿ ಕತೆ ಕೇಳಿ ಚರಿತ್ರೆ ಚಿತ್ರಿಸ್ಕೊಂಡಂತೆ, ಸಿನಿಮಾ ನೋಡಿ ಪ್ರೇಮ ಮಾಡ್ಬೇಡಿ’ ಎಂದಳು ಮಂಜುಳ….

…. ಮುಚ್ಚಿದ ಕಣ್ತೆರೆದು ನೋಡಿದ. ಕೋಟೆಯೇ ಸುತ್ತಿದಂತಾಯಿತು. ತಲೆ ಹಿಡಿದುಕೊಂಡ. ನಿಧಾನವಾಗಿ ಚೇತರಿಸಿ ಕೊಂಡು ಬೆಟ್ಟವನ್ನು ಇಳಿಯತೊಡಗಿದ.

‘ಶಿವಕುಮಾರ್’

– ಅದೇ ರಾಜನ ದನಿ. ಶಿವಕುಮಾರ್‌ ನಿಂತುಕೊಂಡ. ಸುತ್ತ ಮುತ್ತ ನೋಡಿದ. ಯಾರೂ ಕಾಣಲಿಲ್ಲ. ಮತ್ತೆ ಹೆಜ್ಜೆ ಹಾಕಿದ.

ಮತ್ತೆ ಅದೇ ರೀತಿಯ ಕರೆ.

‘ಶಿವಕುಮಾರ್’

ನಿಂತ; ನೋಡಿದ. ಬಿಗಿ ಮುಖ ಮಾಡಿಕೊಂಡ. ಯಾತನೆಯಿಂದ ಕಣ್ಣು ಮುಚ್ಚಿದ.

‘ಯಾಕ್ ಹೀಗ್ ನನ್ನನ್ನ ಕಾಡುಸ್ತೀಯ? ಏನಾಗ್ಬೇಕು ನಿನಗೆ? ಎಂದ.

‘ನೀನು ನನ್ನನ್ನ ಮರ್‍ಯೋಕ್ ಪ್ರಾರಂಭ ಮಾಡಿದ್ದೀಯ!’

‘ಇಲ್ಲ…. ನಾನ್ ಮರೀತಾ ಇಲ್ಲ. ಈ ಕೋಟೆ, ಬೆಟ್ಟ, ನನ್ನಿಂದ ಎಲ್ಲೂ ಹೋಗಲ್ಲ.’

‘ನನ್ನ ಚರಿತ್ರೆ?’

‘ಅದೂ ಅಷ್ಟೆ.’

‘ಆದ್ರೆ ಈಗ ಕೋಟೆ-ಬೆಟ್ಟದಲ್ಲಿ ಬಿರುಕು ಬಿಟ್ಟಿದೆ.’

‘ಇಲ್ಲ, ಬಿರುಕು ಬಿಡೋದಿಕ್ಕೆ ನಾನ್ ಅವ್ಕಾಶ ಕೊಡಲ್ಲ.’

‘ಅಲ್ಲ ಮೇಡಂ ಮಂಜುಳಾನ ನೀನ್ ಬಿಡೊಲ್ಲ.’

ಶಿವಕುಮಾರ್ ಥಟ್ಟನೆ ಕಣ್ಣಿಟ್ಟ ಸುತ್ತ ನೋಡಿದ. ಯಾರೂ ಕಾಣಲಿಲ್ಲ. ಮತ್ತೆ ಮುಂದಡಿಯಿಟ್ಟ.

‘ಶಿವಕುಮಾರ್.’

– ಮತ್ತದೇ ಕರೆ.

‘ಈ ತಳಮಳದಲ್ಲಿ ನೀನೇ ತಳ ಸೇರ್‍ಬೇಡ, ಶಿವಕುಮಾರ್‌.’

ಸುತ್ತೆಲ್ಲ ಮತ್ತೆ ನೋಡಿ ಮುಂದೆ ಹೊರಟ.

‘ಹೋಗು, ಹೋಗು ಶಿವಕುಮಾರ್. ಆದರೆ ನನ್ನ ಮರೆತು ದ್ರೋಹ ಬಗೆದೋರ್‍ಗೆ ನೇಣುಗಂಬವೇ ಗತಿ. ಇದು ರಾಜಾಜ್ಞೆ’

ಶಿವಕುಮಾರ್ ನಿಂತಲ್ಲೇ ಕುಸಿದುಕೂತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತು
Next post ನೋಡಿಕೋ ಮುಖವ ಕನ್ನಡಿಯಲ್ಲಿ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…