ಇಬ್ಬರ ನಡುವೆ
ಪ್ರೀತಿಯೆಂದರೆ ಪ್ರೀತಿ ! ಹೆಣ್ಣ
ಪ್ರೀತಿಗಿಂತಲು ಹೆಚ್ಚಿ
ಇರಬಲ್ಲರೇ ಅಣ್ಣ
ತಮ್ಮ ನೆಚ್ಚಿ ?
ಹಾಗಾದರೆ ಹೇಳುವೆ-ಕೇಳಿ
ಕೋಸ್ಟಾ ಬ್ರಾವಾ ಎಂಬ ಊರು
ಎಲ್ಲ ಕಡೆ ಇರುವಂತೆ ಅಲ್ಲಿ-
ಯೂ ಹಲವು ತರ ಜನರು
ಅಮೀರರು, ಪಾಪರರು
ಕಳ್ಳರು, ಖದೀಮರು
ಹಾಗೂ ಇಂಥ ವರ್ಗಕ್ಕೆ ಸೇರಿದವರು
ಎಂದು ಹೇಳಲಾಗದವರೂ
ಅಂಥವರ ನಡುವೆ ಎಡ್ವರ್ಡೊ
ಎಂಬಾತ ಒಬ್ಬ
ಅತನ ತಮ್ಮ ಬರ್ನಾರ್ಡೊ ?
ಅಲ್ಲ ! ಕ್ರಿಸ್ಟಿಯನ್ ಎಂಬ ಇನ್ನೊಬ್ಬ
ಮನೆಯಲ್ಲಿ ಅವರಿಬ್ಬರೇ
ಎಲ್ಲಿ ಹೋದರೂ ಇಬ್ಬರೇ
ಇಬ್ಬರಲ್ಲಿ ಒಬ್ಬನ ಕೆಣಕಿದರೆ
ಸಾಕು ಇಬ್ಬರಿಂದಲೂ ತೊಂದರೆ-
ಯೆ. ಅಣ್ಣನ ಕೈಯಲ್ಲಿ ಚೂರಿ
ತಮ್ಮನ ಕೈಯಲ್ಲಿ ಬಂದೂಕು
ಈ ವ್ಯತ್ಯಾಸದಿಂದಲೆ ಸರಿ
ಅವರ ಗುರ್ತು ಹಿಡಿಯಬೇಕು.
ಕೆಲಸ ಕಾರ್ಯ
ಯಾರಿಗೂ ತಿಳಿಯದು
ನಿಲ್ಲಿಸಿ ಕೇಳುವ ಧೈರ್ಯ
ಯಾವನಿಗೂ ಇರದು
ಕೆಲವು ಬಾರಿ
ಚರ್ಮ ಸುಲಿದು ಮಾರುವರು
ಕತ್ತಿ ಚೂರಿ
ಹರಿತ ಮಾಡಿ ಕೊಡುವರು
ಸಂಜೆ ಹೊತ್ತು ಸುತ್ತು-
ವರು ಊರ ಗಲ್ಲಿ ಗಲ್ಲಿ
ರಾತ್ರಿ ಹೊತ್ತು ಯಾವತ್ತೂ
ಜುಗಾರಿ ಮನೆಗಳಲ್ಲಿ
ಎಡ್ವರ್ಡೊ ಹೇಳಿದ ತಮ್ಮನಿಗೆ :
ಹೇಳೋದಕ್ಕೆ ಮುಜುಗರ
ಹೋಗಿ ಬರುವೆ ಪರವೂರಿಗೆ
ಕಳೆದು ಈ ಬೇಸರ
ಹೀಗೆ ಹೇಳಿ ಎಡ್ವರ್ಡೊ
ಕುದುರೆಯೇರಿ ಹೋದ
ವಾರ ಕಳೆದು ಎಡ್ವರ್ಡೊ
ಹೇಳಿದಂತೆ ಮರಳಿದ
ಹಾಗೇ ಬರಲಿಲ್ಲ-ಬಂದಾಗ
ಜತೆಗೆ ಒಬ್ಬಳಿದ್ದಳು
ಕುದುರೆಯಿಂದ ಇಳಿದಾಗ
ಅವಳು ಕೂಡ ಇಳಿದಳು.
ಯಾರಿವಳು ? ಯಾರಿವಳು ?
ಊರಿಗೆ ಊರೇ ಕೇಳಿತು
ಇಬ್ಬರ ನಡುವೆ ಇವಳೊಬ್ಬಳು
ಮುಂದೆ ಏನಾದೀತು ?
ಇವಳೇ ಸರಿ !
ಯಾರಿವಳು ? ಯಾರಿವಳು ?
ಎಡ್ವರ್ಡೊ ಹೇಳು !
ನೋಟದಲೆ ಇರಿವವಳು
ಎಲ್ಲಿಯವಳು ?
ಕಣ್ಣು ಕೇದಿಗೆಯಲ್ಲ-ಮೂಗು
ಕೆಂಡಸಂಪಿಗೆಯಲ್ಲ
ನಿಜ ! ಸಂಜೆ ಕಾಮನಬಿಲ್ಲ
ಬಣ್ಣ ಚೆಲ್ಲಿದುದಲ್ಲ
ಆದರೂ ಎರಡು ಕ್ಷಣ
ನೋಡಿದರೆ ನಗುವ ಗುಣ
ತೆಗೆಯಲಾರದೆ ಕಣ್ಣ
ಬಡಬಡಿಸುವ ತಲ್ಲಣ
ಕೋದ ಕೆಂಪಿನ ಹವಳ
ಬೆಳಗಿಸುವ ಕೊರಳ
ತೊಟ್ಟ ಸರ ಬಹಳ
ಉಟ್ಟದ್ದೆ ವಿರಳ
ಎಲ್ಲಿಯ ಜಾಯಮಾನ
ಕಳೆದು ಇಷ್ಟೂ ದಿನ
ಇತ್ತ ಬಂದಳು ಯಾನ-ಆಹ !
ಜೂಲಿಯಾನ !
ಕುಣಿವುದಾದರೆ ಕುಣಿಯ-
ಬೇಕಿವಳ ಜತೆಯ
ತಣಿವುದಾದರೆ ತಣಿಯ-
ಬೇಕಿವಳ ಸನಿಯ
ಎಂದು ಕೇರಿಗೆ ಕೇರಿ
ಕಣ್ಣು ಕಿವಿ ಬಾಯಿ ಸೇರಿ
ಕೋಸ್ಟಾ ಬ್ರಾವಾಕ್ಕೆ ಇವಳೇ ಸರಿ
ಹೇಳಿ ಮಾಡಿಸಿದ ಸುಂದರಿ !
ಮಾತಿಲ್ಲ ಕತೆಯಿಲ್ಲ
ಕ್ರಿಸ್ಟಿಯನ್ ಮೂಕ
ಊಟಕ್ಕೂ ರುಚಿಯಿಲ್ಲ
ನೋಡುವನು ತದೇಕ
ಅಣ್ಣ ತಮ್ಮ ಮೊದಲಿನಂತೆ
ನಡೆದಾಡೋದು ಇತ್ತು
ಹೊರನೋಟಕೆ ಜತೆ ಜತೆ
ತಿರುಗಾಡೋದು ಸುತ್ತೂ
ಎಡ್ವರ್ಡೊ ತುಸು ಮೊದಲೆ
ಮರಳುತ್ತಾನೆ ಮನೆಗೆ
ಕ್ರಿಸ್ಟಿಯನ್ ಮಾತ್ರ ಗಡಂಗಿನಲ್ಲೆ
ನಶೆ ಇಳಿಯೋವರೆಗೆ
ಅವನು ಒಮ್ಮೆ ಒಂದು
ಹೆಣ್ಣ ತಂದು ನೋಡಿದ
ತಿಂಗಳು ಸರಿವ ಮುಂದು
ಒದ್ದು ಹೊರ ಹಾಕಿದ
ಯಾಕಪ್ಪಾ ಏನಾಗಿದೆ
ನಮ್ಮ ಈ ಕ್ರಿಸ್ಟಿಯನಿಗೆ
ಇರಲಿಲ್ಲ ಈ ಹಿಂದೆ
ಎಂದೂ ಅವ ಹೀಗೆ
ಅಣ್ಣ ತಮ್ಮ ಈಗ
ಮಾತಾಡಿದರೆ ಹೆಚ್ಚೆ
ಚರ್ಮ ಸುಲಿದು ಮಾರುವಾಗ
ಸುಮ್ಮನೇ ಚರ್ಚೆ
ಆಗಾಗ ಕತ್ತಿ ಹಿರಿದು
ಹರಿತಗೊಳಿಸುವ ಅಣ್ಣ
ತಮ್ಮ ಕೂಡ ಗುರಿಹಿಡಿದು
ಬಂದೂಕಿಗೆ ಕಣ್ಣ
ಕತ್ತರಿಸಿ ಉರುಳುವ
ಎಳೆ ಬಾಳೆದಿಂಡು
ಪಟಪಟನೆ ಉದುರುವ
ಹಕ್ಕಿಗಳ ಹಿಂಡು
ಅನ್ನವಿಕ್ಕಿ ಕಾಯುತ್ತ
ಜೂಲಿಯಾನ ಇಬ್ಬರಿಗೂ
ಏನೊ ಹಾಡ ಗೊಣಗುತ್ತ
ಜೊಂಪು ತೂಗುವವರೆಗೂ
ಹೀಗೆ ತಾನೆ ಎಷ್ಟು ದಿನ
ಎಂದು ಎಡ್ವರ್ಡೊ ತಮ್ಮನಿಗೆ
ಜೋಪಾನ ಜೂಲಿಯಾನ
ಇಂದಿರುಳು ನಿನಗೇ
ನನ್ನನಲ್ಲಿ ತಳ್ಳಲಿ
ಜೂಲಿಯಾನ ! ಓಹೊ ಜೂಲಿಯಾನ !
ಬಿಚ್ಚಿಬಿಡು ತುರುಬನ
ಕತ್ತಲಂತೆ ಸುತ್ತಲಿ-ಅದು
ನನ್ನ ಸುತ್ತ ಮುತ್ತಲಿ
ಜೂಲಿಯಾನ ! ಓಹೊ ಜೂಲಿಯಾನ !
ಕಳಚಿಬಿಡು ಮೊಲೆಯನ
ಮೊಲಗಳಂತೆ ತಬ್ಬಲಿ-ಅವು
ಆಸೆಯಂತೆ ಹಬ್ಬಲಿ
ಜೂಲಿಯಾನ ! ಓಹೊ ಜೂಲಿಯಾನ !
ತೆರೆದುಬಿಡು ಬೊಂಬಿನ
ಸಿಂಬಿಯಂತೆ ಹಿಡಿಯಲಿ
ನನ್ನನಲ್ಲಿ ತಡೆಯಲಿ
ಜೂಲಿಯಾನ ! ಓಹೊ ಜೂಲಿಯಾನ !
ತೋರಿಬಿಡು ತೊಡೆಯನ
ತೋರದಂಥ ಸುಳ್ಳಲಿ
ನನ್ನನಲ್ಲಿ ತಳ್ಳಲಿ
ನನ್ನಣ್ಣನ ಹೆಸರ
ಬೀದಿಯ ದೀವಟಿಗೆ
ಒಂದೊಂದೆ ನಂದಿ
ಕೋಸ್ಟಾ ಬ್ರಾವಾದ
ಮರ್ಯಾದಸ್ಥ ಮಂದಿ
ಹಾಸಿಗೆಯಲ್ಲಿ ಬಿದ್ದು
ನಿದ್ದೆ ಹೋದರೂ
ರಾತ್ರಿಯೆಲ್ಲ ತೆರೆದಿರೋ
ಅಂಥ ಬಾರು
ಹೆಸರಿಲ್ಲ, ಹೆಸರು
ಬೇಕಿಲ್ಲ
ಬಾರೆಂದರಾಯ್ತು
ಪ್ರತಿಯೊಬ್ಬ ಪ್ರಜೆಯೂ ಬಲ್ಲ
ನೆರೆಯುತ್ತಾರೆ ಅಲ್ಲಿ
ಧಡ್ಡರು, ಧಡೆಯರು
ಸೆರೆಮನೆ ಕಂಡವರು
ಕಾಣಲಿಕ್ಕಿರುವವರೂ
ಚುಟ್ಟಾದ ಹೊಗೆ
ಘಮ ಘಮ ಮಾಡಿಗೆ
ಹೆಂಡದ ಬನಿ
ಹನಿ ಹನಿ ದಾಡಿಗೆ
ನಗುವವರು ನಗುತ್ತಲೇ
ಕಣ್ಣು ಬಾಯಿ ಬಿಟ್ಟು
ನೋಡುವವರು ನೋಡುತ್ತಲೇ
ಕೆಲವರ ಸಿಟ್ಟು !
ಅಂಥ ಗದ್ದಲದ
ಈಚಿನ ಅಫಸಾನ
ಅಣ್ಣ ತಮ್ಮರ ನಡುವೆ
ಜೂಲಿಯಾನ
ಆದರೆ ಯಾರು ಬಾಗಿಲ ಬಳಿ
ಹಠಾತ್ತನೆ ಮಾತು
ನಿಂತು ಹೇಳಿದ :
“ಬಂದೂಕವ ಮರೆತು
ಬಂದಿರುವೆ ಇವತ್ತು
ನಿಮ್ಮ ಅದೃಷ್ಟ, ಮಕ್ಕಳಿರ !
ಮುಂದ ಎತ್ತಿದರೆ ಜೋಕೆ
ನನ್ನಣ್ಣನ ಹೆಸರ !”
ಮುಗಿಯಿತೇ ಎಲ್ಲ ?
ಹಿತ್ತಿಲಲಿ ಎರಡು ಕುರ್ಚಿಗಳ
ಹಾಕಲೇ ಜೂಲಿ-
ಟೀಪಾಯಿ ಮೇಲೆರಡು
ಗ್ಲಾಸುಗಳೂ ಇರಲಿ
ನಮಗೆ ಕಾಯೋದು ಬೇಡ
ಹೋಗಿ ಮಲಗಿಕೋ
-ಎಂದ ಎಡ್ವರ್ಡೊ
ಕತ್ತು ಕತ್ತರಿಸುವ
ಸೆಕೆಯ ಸಂಜೆ ಅದು
ಎಷ್ಟೋ ಹೊತ್ತು
ಮಾತಾಡುತ್ತ ಇದ್ದರು
ಆಮೇಲೆ ಮಳೆಬರುವ
ಸೂಚನೆ ಕಾಣಿಸಿತು-ಕೂಡಲೇ
ಗಾಡಿ ಹೂಡುವ ಹಾಗೆ
ತಮ್ಮನಿಗೆ ಹೇಳಿದ ಎಡ್ವರ್ಡೊ
ಗುಟ್ಟುಗಳನೆಲ್ಲ
ಒಳಗೇ ಹುದುಗಿಟ್ಟು
ಒಮ್ಮೆ ಅಣ್ಣನಿಗೆ ಒಮ್ಮೆ ತಮ್ಮನಿಗೆ
ಅಷ್ಟಿಷ್ಟು ಕೊಟ್ಟು
ಮಲಗಿದ್ದ ಹೆಣ್ಣ
ಕರೆದು ಹೇಳಿದ ಎಡ್ವರ್ಡೊ :
“ಗಂಟುಮೂಟೆಯ ಕಟ್ಟು
ಇನ್ನೈದು ನಿಮಿಷದಲಿ
ಗಾಡಿ ಹೊರಡುವುದು”
ಮಳೆಬಂದ ಮಾರ್ಗ
ಕೊಚ್ಚೆಗಟ್ಟಿದ ಕೆಸರು
ಕೊರೆದು ಭೂಮಿಯ ಬಸಿರು
ಸಾಗಿತು ರಾತ್ರಿಯ ಗಾಡಿ
ಬೆಳಗಿಂಜಾಮ
ಮೊರೋನಾ ತಲಪಿದರು.
ಚೌಕಾಸಿ ಗಿವುಕಾಶಿ
ಏನಿಲ್ಲ
ಎಲ್ಲ ಮೊದಲೇ
ನಿಗದಿಯಾದ ಮೇಲೆ
ವಿಕ್ರಯದ ರೊಕ್ಕ
ಹಂಚಿಕೊಂಡದ್ದಾಯ್ತು
ಮೊರೋನಾ ಬಿಡುವ ಮೊದಲೇ
ಅದು ಖರ್ಚಾಗಿ ಹೋಯ್ತು
ಮರಳಿ ಊರಿಗೆ
ಎಲ್ಲಾ ಮುಗಿದ ಹಾಗೆ-
ಮುಗಿಯಿತೇ ಎಲ್ಲ?
ಎಲ್ಲಿ ಮುಗಿಯುತ್ತದೆ ?
ಮುಗಿಯಿತೆಂದರೆ ಅದು
ಅಲ್ಲೆ ಮೊದಲಾಗುತ್ತದೆ !
ಎಷ್ಟು ದಿನ ಹೀಗೆ ?
ಅತ್ತಾಕಡೆ ಎಡ್ವರ್ಡೊ
ಇತ್ತಾಕಡೆ ಕ್ರಿಸ್ಟಿಯನ್
ಬಿಸಿಲು ಕಾಯೋದು ಎಷ್ಟು ದಿನ ?
ಗೋಡೆ ಮೇಲೊಂದು ಹಲ್ಲಿ
ಕೂತುಬಿಟ್ಟಿದೆ ಮೌನಿ-
ನೆಲ ಸಾರಿಸದೆ ದಿನಗಳಾದುವು
ಅಡುಗೆ ಪಾತೈಗಳೂ ಖಾಲಿಯಾದುವು-
ಅದಕ್ಕದರ ಕೀಟ
ಸಿಗುವುದೋ ಎಂದು ಎಡ್ವರ್ಡೊ
ಸಿಗದೋ ಎಂದು ಕ್ರಿಸ್ಟಿಯನ್
ಮರಗಳೆಡೆಯಿಂದ ಅಲ್ಲಲ್ಲಿ
ಬಿಸಿಲು ಬೀಳುವ ಹುಲ್ಲಲ್ಲಿ
ಚೂಪುಗುರ ಬೆಕ್ಕು
ಏನೇನೋ ಮಹಾ
ಯೋಚನೆಯಲ್ಲಿ ಸಿಕ್ಕು
ಮೊದಲಿಗೊಬ್ಬ ಕಾಣದಾದ
ಆಮೇಲೆ ಇನ್ನೊಬ್ಬ
ಮೊರೋನಾದ ಮನೆಯಲ್ಲಿ
ಕಳ್ಳರಂತೆ ಸಿಕ್ಕಿ
ಅವಳ ಬಿಡಿಸಿದ್ದಾಯ್ತು
ಹೇಳಿದ ಬೆಲೆ ಕಕ್ಕಿ
ನೆತ್ತರು
ಹಂಚೋದಕ್ಕೇನು
ಹೆಣ್ಣೊಂದು ವಸ್ತುವೆ ?
ಮಾತಾಡದಿರಬಹುದು ಆಕೆ-ಆದರೂ
ಕೊಟ್ಟಿರಳೇ ಒಬ್ಬನಿಗೆ
ಒಂದಗುಳು ಹೆಚ್ಚನ್ನ ?
ಕೂತಿರಳೇ ಒಬ್ಬನ ಜತೆ
ತುಸು ಜಾಸ್ತಿ ಸಾಯಾಹ್ನ ?
ಬೇಸಿಗೆಯೂ ಈಗ
ಚಟ ಚಟಾ ಸುಟ್ಟು
ತೋರಬೇಕು ಯಾರ ಮೇಲೆ
ಅವರು ತಮ್ಮ ಸಿಟ್ಟು ?
ಒಂದು ವಾರ ಕಳೆದರೆ
ಇನ್ನೊಂದು ವಾರ ಬರುತ್ತದೆ
ಹಾಗೆ ಬಂದ ಭಾನುವಾರ
ಸಂಜೆ ಬೇಗ ಮುಂದಿ
ನಿದ್ದೆತೂಗುವ ಬೇಸಗೆ-
ಅಂಗಳದಲ್ಲಿ ಕಾಯುತಿದ್ದ
ಎಡ್ವರ್ಡೊ ತಮ್ಮನಿಗೆ-
“ಪೆದ್ರೋವಿಗೆ ಇವತ್ತು
ಕೊಡೋದಿದೆ ತೊಗಲ
ಮೂಟೆಕಟ್ಟಿ ಆಗಲೇ
ಗಾಡಿಯೊಳಗೆ ಇರಿಸಿದ್ದೇನೆ
ಲಗೂನೆ ಹೋಗಿಬರೋಣ
ರಾತ್ರಿಯಾಗೋದಕ್ಕೆ ಮುಂಚೆ.”
ಎಷ್ಟು ಹೋದರೆ ಅಷ್ಟು
ಬಾಯಿ ತೆರೆಯುವ ಬಯಲು
ಗೋಮಾಳದ ಹಾದಿಯಲ್ಲಿ
ಒಂಟಿಗಾಳಿಯ ಹುಯ್ಲು
ಆಮೇಲೆ ಫಕ್ಕನೆ
ಗಾಡಿ ನಿಲ್ಲಿಸಿ ಎಡ್ವರ್ಡೊ
ಆಗತಾನೆ ಹಚ್ಚಿದ್ದ
ಚುಟ್ಟವ ಬಿಸಾಕಿದ :
“ಬೇಗನೆ ಮುಗಿಸೋಣ
ನೊಣ ಬರುವ ಮೊದಲೇ
ಈ ದಿನ ಮಧ್ಯಾಹ್ನವೇ
ಕೊಂದುಬಿಟ್ಟೆ ಅವಳನ್ನ
ದಣಿದಿದ್ದಳು ಪಾಪ !
ಮಲಕೊಳ್ಳಲಿ ಈಗ”
ಅಣ್ಣ ತಮ್ಮ ಇಬ್ಬರೂ
ತಬ್ಬಿಕೊಂಡು ಅತ್ತರು
ಬೆಸೆದಿತ್ತು ಅವರನ್ನೀಗ
ಹೊಸತೊಂದು ನೆತ್ತರು !
*****