‘ಬುದ್ಧಿವಂತರಿಗೆ ಕನಸು ಬಿದ್ದರೆ’
ಅಲ್ಲಾ ಅಲ್ಲಾ ಅಲ್ಲಾ
ಅವ ನಿದ್ರಿಸುತಾನೇ
ಇಲ್ಲಾ….
ಅಲ್ಲವೋ ಮೊಹಮ್ಮದ್-
ಅಲ್ ಮಘ್ರಿಬೀ ಮತ್ತೊಮ್ಮೆ
ನೀನೂ ಕೂತೆ
ಜಗುಲಿಯ ಮೇಲೆ ಇಡೀ
ಕೈರೋದ ಮೇಲೆ ಇಳಿಸಂಜೆ
ಪ್ರತೀ
ಮಿನಾರಕ್ಕೆ ಚಿನ್ನದ ಕಲಾಯಿ
ಲೇಪಿಸುವ ವೇಳ ನೀ ನಿದ್ದೆ
ತೂಗುತ್ತ ತೂಗುತ್ತ
ಆಗೀಗ ಬೆಚ್ಚಿ
ಬೀಳುತ್ತ ಏಳುತ್ತ
ಎಷ್ಟು ತೂಗಿದ್ದ ಹೇಳು-
ಮತ್ತದೇ ಬಿತ್ತೇಕೆ
ಅದರ ಮಾತೇಕೆ ಏಕೆ
ನಿನ್ನೆಯೂ ಮೊನ್ನೆಯೂ
ರತ್ನಗಂಬಳಿಯ
ಗಾಳಿಯಲಿ ಹಾಯಿಸಿತು
ಅದರಲ್ಲಿ ಕೂರಿಸಿತು
ಆಮೇಲೆ ಇಸ್ಫಹಾನ್
ಮೊಹಮ್ಮದ್ ಅಲ್ ಮಘ್ರಿಬಿ
ಪಾಪ ! ಅವರವರ ನಸೀಬಿ
ಕೆಲವರ ಪ್ರಕಾರ ಹೀಗೆ
ಕೆಲವರ ಪ್ರಕಾರ ಹಾಗೆ
(ಕೇಳಿರುವ ಕತೆಯಿದು
ತಿಳಿದಂತೆ ಹೇಳುವೆ)
ಪ್ರತಿಯೊಂದು ತಾಳೆಯಲಿ
ಕಳೆತ ಖರ್ಜೂರಗಳು
ಪ್ರತಿಯೊಂದು ತೋಟದಲಿ
ದ್ರಾಕ್ಷಿಯ ಹಣ್ಣುಗಳು
ಪ್ರತಿಯೊಂದು ಬೀದಿಯಲಿ
ಅವಗುಂಠನ ತೊಟ್ಟ
ಹೆಣ್ಣುಗಳೂ
ಆಮೇಲೆ ಅಲ್ಲಲ್ಲಿ
ಡೇರೆಗಳೂ
ಯಾರ ಕೈ ಯಾರಿಗೋ
ಸಿಕ್ಕಂತೆ
ಯಾರು ಯಾರನೊ ನೋಡಿ
ನಕ್ಕಂತೆ
ಪ್ರತಿಯೊಂದರೊಳಗೂ
ಇಸ್ಫಹಾನ್ ! ಇಸ್ಫಹಾನ್ !
ಇಷ್ಟು ವರ್ಷಗಳಲ್ಲಿ
ಇಷ್ಟು ಜನ ಬಂದರೂ
ನನ್ನನೇ ಯಾಕೆ
ಹಿಡಿದು ತಂದು
ದಾರಿತಪ್ಪಿದ ಹೋತ
ಹೊ ಹ್ಹೊ ಹ್ಹೋ
ಎಂದಿತು ಒಂದು
ದಾರಿತಪ್ಪಿದ ಹೋತ
ಅದು-ರಾತ್ರಿಯೂಟವ ಮುಗಿಸಿ
ಅಡ್ಡಗೋಡೆಗೆ ತನ್ನ
ಗಡ್ಡ ಒರೆಸುತಲಿತ್ತು
ಎಲ್ಲರೂ ಮಲಗಿರುವ
ಸರಿ ರಾತ್ರಿಯ ಹೊತ್ತು
ಊರ ಹೊರಗಿನ ಹಾಳು
ಮಸೀದಿಯ ಕಡೆ ನೋಡಿ
ನಡೆಯತೊಡಗಿತ್ತು
ಮೊಹಮ್ಮದ್ ಅಲ್ ಮಘ್ರಿಬಿ ತಾನೂ
ಬಹಳ ಸುಸ್ತು
ರತ್ನಗಳಿಲ್ಲ-ರತ್ನ
ಕಂಬಳಿ ಕೂಡ ಇರಲಿಲ್ಲ
ಬೆಟ್ಟಗಳ ಮೇಲಿಂದ
ಬೀಸಿ ರೊಯ್ಯನೆ ಗಾಳಿ
ಕೂಗುವುದ ಕಾಯುತ್ತ
ಮುಂಜಾವದ ಕೋಳಿ
ಅವ ನಿದ್ರಿಸುತಾನೆ-ಇಲ್ಲ
ಇಸ್ಫಹಾನ್ ! ಇಸ್ಫಹಾನ್ !
ಮುಂಜಾವದ ಕನಸುಗಳು
ನಿಜವಾಗುವುದಾದರೆ-ನಿನ್ನ
ಮೇಲಿಂದ ಚಂದ್ರ
ಬೆಳದಿಂಗಳ ಸುರಿಯಲಿ-ಅದು
ನದೀ ಮೇಲೆ ಹರಿಯಲಿ
ಅಲ್ಲಾವರ್ದೀಖಾನರು
ಸಂಕದಲಿ ನಡೆಯಲಿ
ಜುಲ್ಫಾದ ತರುಣಿಯರು
ಬೇಗನೆ ಏಳಲಿ !
ಅಷ್ಟರಲಿ ಕಳ್ಳನ ಪ್ರವೇಶ
“ದೇಶ ದೇಶವ ತಿರುಗಿ
ಮೋಸಗಾರರಿಗೆಲ್ಲ
ಮೋಸಗಳನು ಮಾಡಿ”
ಕಳ್ಳನೆಂದರೆ ಕಳ್ಳ-
ತೈಮೂರನ ಜತೆಯಲಿ ಬಂದು
ಇಲ್ಲೇ ಇದ್ದು ಬಿಟ್ಟನು ನೋಡಿ !
ಸುಶಾನಳ ಗೋರಿಯನೂ
ಬಿಡಲಿಲ್ಲ ಅವನು
ಈಗೇಕೆ ಬಂದ
ಈ ಇಂಥ ಹೊತ್ತಿನಲಿ
ಎಲ್ಲರೂ ನಿದ್ರಿಸುವ ಸಮಯ
ಅವರವರ ಸೀಟಿನಲಿ ?
ಎಚ್ಚರಿಸಲೆಂದೆ ಬಂದ
ಎಚ್ಚರಾದವರು ಜೇಬ ನೋಡುವರು
ಈಚೀಚೆ ಹುಡುಕುವರು
ಆಮೇಲೆ ಕೂಗುವರು-
ಕಳ್ಳ! ಕಳ್ಳ!
ಹಿಡಿಯಿರಿ ಅವನ
ಅಷ್ಟರಲ್ಲಿ
ಕಳ್ಳನ ನಿಷ್ಕ್ರಮಣ
ವಿಚಾರಣೆ
ಘೊಳ್ಳನೆ ನಗುತಾನೆ
ಪೋಲೀಸ್ ಪಠೇಲ
ಆ ನಗೆಗೆ ಬೀದಿ
ನಾಯಿಯೂ ಬೆಚ್ಚಿಬಿದ್ದು
ಮಾಡದ ಹಕ್ಕಿಗಳೂ
ರೆಕ್ಕೆಗಳ ಬಿಚ್ಚಿದ್ದು…
ಏನು ? ಏನಂದೆ ?
ಕನಸು ! ಕನಸೇ ? ಕನಸು
ಬೀಳುವುದು ಆಗಾಗ
ನನಗೂ
ಇಂಥದೇ ಬೀದಿ
ಮಾತ್ರ ಕೈರೋದಲ್ಲಿ
ಯಾವ ಮನೆ ಮುಂದೆ
ಒಂದು ಕಬ್ಬಿಣದ ಕಾರಂಜಿ
ಆ ಕಾರಂಜಿ ನೀರು
ಎಲ್ಲಿ ಹೊರಚೆಲ್ಲಿ
ಕೊನೆಯಾಗುವುದೋ
ಅಲ್ಲಿ-
ಎಲ್ಲಿ ? ಇವನ ತಿಕಕೊದ್ದು
ಗಡಿಯ ದಾಟಿಸಿ ಬಿಡಿ !
ಇನ್ನೆಂದೂ ಈ ಕಡೆಗೆ
ತಲೆಹಾಕಿ ಮಲಗದಿರಲಿ !
(ಹೀಗೆಂದು ಒರೆಸಿ
ತನ್ನ ಮೂಗಿನ ನೆಗಡಿ…)
ಅಗೆತ
ಅಗೆವಾಗ್ಗೆ ಮೊದಲೇನು ?
“ಮೊದಲು ಕೋಶಾವಸ್ಥೆ ಮಣ್ಣು”
ಆಮೇಲೆ ಏನು ?
“ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆಮಿರಿವ ಚಿನ್ನದದಿರು”
ಭರವಸಯೀನು ?
“ಭರವಸೆಯನೇ ನಂಬಿ !”
(ಹೀಗೆಂದು ಅಡಿಗರೂ
ಅವರ ಸಂ-
ಗಡಿಗರೂ….)
ಅಹಹಾ ! ಹಾಕುವನಯ್ಯ ಮೂಲಕ್ಕೇ
ಅದೆಂಥಾ ರೋಷದ ಪೆಟ್ಟು !
ಒಂದರ ಮೇಲೆ ಇನ್ನೊಂದು
ಪ್ರತಿಬಾರಿಯೂ ಇಮ್ಮಡಿ ಪಟ್ಟು
ಸೂ ಎಂದರೆ ಸೂಳೆಮಗನೆಂಬ
ಭಯಂಕರ ಸಿಟ್ಟು!
ಆಯಿತಾಯಿತು ಮೊದಲು ಕೈಕಾಲು ಮೂಳೆ
ಆಮೇಲೆ ತಲೆಯಬುರುಡೆ
ಛಪ್ಪನ್ನ ದೇಶಗಳ ತಿರುಗಿದಂಥವನೆ
ಅಥವಾ ಅವಳೆ
ಎತ್ತಿ ಬಿಸಾಕು ಆಚೆಗೆ ಎಲಾ ಇದರ !
ಇನ್ನಷ್ಟು ಅಗೆದಾಗ್ಗೆ
ಸಕಲ ಸಂಕೇತಗಳ ಪೃಥಕ್ಕರಿಸಿದ ಹಾಗೆ
ಎಲ್ಲ ಶಕ್ತಿಯ ಹಾಕಿ ಮೀಟಿದ ಪ್ರಯತ್ನ
ಒಂದು ಅತಿಭಗ್ನ ಶಿಶ್ನ !
ಎಲಾ ಇವನ !
ಮೂಲದಲಿ ಇಲ್ಲದ್ದು
ಇಲ್ಲಿ ಯಾತಕೆ ಬಂತು !
ಈಗ ಯಾತಕೆ ಬಂತು?
ಆದಾಗ್ಯೂ
ಮಿಡಿವಂತೆ ಕಾಣುವುದು
ಇದರ ಜೀವನ ತಂತು !
ತಾನೇ ಎದ್ದು
ಕುಳಿತರೂ ಕುಳಿತೀತು
ಬೇಕಾದ್ದು
ಸ್ವಲ್ಪ ಬಿಸಿ ಉಪಚಾರ-
ಅಗೋ ಬಂದ !
ಬಾ! ಬಾರಯ್ಯ ! ಯಾರು ನೀನು?
ಈ ಭವ್ಯ
ಪರಂಪರೆಯನುದ್ಧರಿಸುವ
ಧೀರನೋ ?
ಅಥವ ಸತ್ತವರನೆಬ್ಬಿಸುವ
ಕಫನ್‌ಚೋರನೋ ?
*****