ಆಗಸದಷ್ಟು ವಿಶಾಲ ಹೆಣ್ಣುಗಳ
ಹೃದಯಾಂತರದ ನೋವಿನ ಹರವು
ಹೆಜ್ಜೆ ಹೆಜ್ಜೆಗೂ ಕಟ್ಟಳೆಗಳ
ಬಂಧಿನಿ – ಕಣ್ಣಿದ್ದು ಮೈತುಂಬಾ
ಎಚ್ಚರವಹಿಸಿ – ಶೋಧಿಸಿ – ಪರೀಕ್ಷಿಸಿ
ಒಂದೊಂದೇ ಹೆಜ್ಜೆ ಮುಂದಿಟ್ಟಾಗ
ಚಿಗುರನು ಚಿವುಟುವ ಕೈಗಳು
ಮೈ ಮೇಲೆ ಸಾವಿರಾರು ಗಾಯಗಳು.
ಶ್ರಾವಣದ ಮಳೆಯಲಿ ತೋಯ್ದು
ಹರಿದು ಹೊಳೆಯಾಗಿ ಸಾಗುವ
ಅವಳ ಬಿಸಿಉಸಿರು, ಕಂಬನಿಗಳು,
ರಂಗಮಹಲಿನ ಏಕಾ೦ತ ಕೋಣೆಯಲಿ
ಸದ್ದಿಲ್ಲದೇ ಬಿದ್ದಿರುವ ಕೈದಿಗಳು.
ನೋವಿನ ಕುಲುಮೆಯಲಿ
ಕುದಿ ಕುದಿದು ಹೊರಬರುವ
ಕೆಂಡದುಂಡೆಗಳಂತಹ ಕವನಗಳು
ಸಿಡಿದರೆ ಕಿಡಿಗಳಾದಾವು – ಪ್ರೀತಿಯ
ಸಿಂಚನದಲಿ – ತಂಗಾಳಿಯಾದಾವು.
*****