ಕರಾಳ ರಾಕ್ಷಸರ ಹೊಟ್ಟೆ ಹರಿದು
ಹೊರಗೆ ಬಾ ಭಗತಸಿಂಗ,
ಹೆಣ್ಣಿಗಾಗಿ ಸತ್ತವರ ಕಂಡೆ
ಹೊನ್ನಿಗಾಗಿ ಹೋರಾಡಿದವರ ಕಂಡೆ
ಮಣ್ಣಿಗಾಗಿ ಮಡಿದವರ ಕಂಡೆ,
ಆದರೆ ನಿನ್ನಂತಹ ವೀರನನ್ನು
ಕಾಣಲಿಲ್ಲ ಬಿಡು ಧೀರ.
ಸಾವು ಬಾಗಿಲಲಿ ನಿಂತು
ಕೈ ಬೀಸಿ ಕರೆದಾಗ
ಇಸಂಗಳ ಬಗ್ಗೆ ನಾನಿನ್ನೂ
ಅಭ್ಯಾಸ ಮಾಡಿ ಬರುತ್ತೇನೆ
ಹೋಗು ನಿನಗೆ
ಬೇರೆ ಕೆಲಸವಿಲ್ಲವೇ?
ಎಂದು ಸಾವನ್ನು ದೂರಕಟ್ಟಿದ
ನೀನು ಸಾಯಲಿಲ್ಲ ಬಿಡು ಧೀರ.
ನಿನ್ನ ಕೆಚ್ಚು, ಸ್ವಾಭಿಮಾನಗಳು
ಇಂದಿಗೂ ಸ್ಫೂರ್ತಿಯ ಸೆಲೆಗಳು
ಪರದೇಶಿ ಬಿಳಿಯರಿಗೆ ಸಲಾಮು
ಹೊಡೆಯದ ನೀನೇ
ನಿಜವಾದ ದೇಶಭಕ್ತ.
ಇತಿಹಾಸದ ಪುಟ ಪುಟಗಳಲ್ಲಿಯೂ
ಗಾಂಧಿ, ಗಾಂಧಿಗಳೇ ತುಂಬಿರುವಾಗ,
ಸಂದಿ ಗೊಂದಿಗಳಲ್ಲೂ ನಿನಗೆ
ಸೇರಲು ಜಾಗವಿಲ್ಲದಂತೆ ಮಾಡಿದರು.
ಕುಟಿಲ ಕಾರಸ್ಥಾನಕ್ಕಿಳಿಯದ ನೀನು
ಜನತೆಯ ನಿಜವಾದ ಸ್ನೇಹಿತ
ನಿಜವಾದ ಸ್ವಾತಂತ್ರ್ಯದ ವ್ಯಾಖ್ಯಾನಕಾರ
ನೀನು ಮರಳಿ ಬಾ ಧೀರ,
ಕತ್ತಲೆ ರಾಕ್ಷಸನ ಹೊಟ್ಟೆ ಹರಿದು
ಹೊರಗೆ ಬಾ ವೀರ.
*****