ಮೇ ತಿಂಗಳ ಪ್ರಖರ ಬಿಸಿಲು
ಗುಲ್‌ಮೋಹರಿನ ಕೆಂಪು ರಾಚಿ
ಕವಿತೆಗಳು ಸೆಖೆಯಿಂದ ತೊಯ್ದ
ತಪ್ಪಡಿಯಾಗಿ, ತುಸು ನೀರಿನ ಝಳಕಕ್ಕೆ
ಅರಳಿ ಮೆತ್ತಗೆ ನನ್ನ ಕೈ ಸೋಕಿದವು.
ಬೇವಿನ ಮರಕ್ಕೆ ಒಡ್ಡಿ ಮಲಗಿದ ಮುದುಕಿ
ಬಿಸಿಲಲ್ಲಿ ತನ್ನ ಕುಬುಸದ ಗುಂಡಿ ಬಿಚ್ಚಿ
ಅಡ್ಡಾಗಿದ್ದಾಳೆ, ತನ್ನ ಹರೆಯದ ಕನಸುಗಳ
ಮೆರವಣಿಗೆಯ ನೆನಪು ಹೊತ್ತು, ಮತ್ತೆ
ದೂರದಲ್ಲಿ ಎಲ್ಲೋ ಕೋಗಿಲೆ ಕೂಗುತ್ತಿದೆ.
ಹೃದಯ ಕಲುಕಿದೆ.
ಯಾವ ವಿಷಯಗಳೂ ಸಣ್ಣದಲ್ಲ.
ಉರಿ ಬಿಸಿಲಲ್ಲೂ ಬಾಳೇಹಣ್ಣು ಮಾರವವಳು
ನಾಳಿನ ದಿನದ ಲೆಕ್ಕಾಚಾರ ಹಾಕಿ ಓಣಿಯ
ಸುತ್ತುತ್ತಿದ್ದಾಳೆ ಮತ್ತೆ ಕತ್ತು ನೋವಿಗೆ ಬುಟ್ಟಿ ಇಳಿಸಿ
ನೀರು ಕೇಳುತ್ತಿದ್ದಾಳೆ ನಾನು ಜಾಗ್ರತ ಹೊಂದಿದೆ.
ಉಳಿದ ಭಾವಗಳ ಜೀವನ ಅವರಿವರ
ನೆನಪುಗಳ ದಾರಿಯಲಿ ಚಲನೆಯನ್ನು ಮುಂದುವರಿಸಿದೆ.
ನೀಲಿ ಆಕಾಶದಲಿ ಮಳೆ ಬೀಜ ಕಟ್ಟಿದೆ. ರೈತ ಹೊಲ
ರಂಟೇಕುಂಟೆ ಹೊಡೆದು ಹದಗೊಳಿಸಿದ್ದಾನೆ. ಒಂದು
ಪಶ್ಚಾತಾಪ ನನ್ನ ಅಲ್ಲಾಡಿಸಿದೆ.
*****