ನಾವು, ಗಂಡ ಹೆಂಡತಿ, ಜಗಳ ಆಡೋಕೆ ಒಂದು ಕಾರಣ ಬೇಕೆ?
ಸಂಸಾರವೆಂದಮೇಲೆ ಬಾಯಿಬಿಟ್ಟು ಹೇಳಬೇಕೆ?
ಆಡುತ್ತ ಆಡುತ್ತಲೆ ನಗೆಚಾರ ಮಾಡುತ್ತಲೆ
ಕೆಲಸಕ್ಕೆ ಬಾರದ ಯಾವುದೋ ಒಂದಕ್ಕೆ ಮನಸ್ತಾಪ ಉಂಟಾಗುತ್ತೆ
ಮಾತಿಗೆ ಮಾತು ಬೆಳೆಯುತ್ತೆ
ಚೇಳು ಕಡಿದವರಿಗೆ ಏರಿದಂಗೆ ಏರುತ್ತೆ
ಒಬ್ಬರ ಮುಖವತ್ತ, ಒಬ್ಬರ ಮುಖವಿತ್ತ ಆಗತ್ತೆ
ವಾದ, ಪ್ರತಿವಾದ ಶುವಾಗುತ್ತೆ.-
ಇಲ್ಲಿಯ ಚಿಕ್ಕವರು ದೊಡ್ಡವರಿಗೆಲ್ಲರಿಗೂ ನಾನೊಂದು ಕಾಲಕಸ, ಕತ್ತೆ
ಒದ್ದರೆ ಒದೆಸಿಕೊಳ್ಳಬೇಕು
ಉಗಿದರೆ ಉಗಿಸಿಕೊಳ್ಳಬೇಕು
ಯಾಕೆ? ನೀವು ಹಾಕೋ ತುತ್ತು ಕೂಳಿಗಾಗಿ
ನನ್ನನು ನೀವೇನು ಕುಂಡಿರಿಸಿ ಹಾಕುವುದಿಲ್ಲ
ಮುಂಜಾನೆಯಿಂದ ಸಂಜೆವರೆಗೆ ದುಡಿವೆ
ಯಾರದಾದರೂ ತಪ್ಪಿತು ನನ್ನದು ತಪ್ಪುವುದಾ?
ಒಂದು ಪಕ್ಷ ದೇವರ ತಲೆ ಮೇಲಿನ ಹೂವು ತಪ್ಪಿದರೂ ತಪ್ಪೀತು
ನನ್ನದು ತಪ್ಪುವುದಾ?
ಅನ್ಯರಿಗಾದರೆ ನೀವು ಅಯ್ಯೋ ಎನ್ನುವಿರಿ
ಎಲಾ! ಅವಳಿಗೂ ಆಸರಿಕೆ, ಬೇಸರಿಕೆ ಇರುವುದು
ಒಂಚೂರು ಸವೆದುಕೊಳ್ಳೋಣವೆಂದಿರಾ!
ಸಹಾಯ ಹೋಗಲಿ
ಬರುಬರುತ್ತಾ ಮಕ್ಕಳಾಗುವಿರಿ
ತಾವಾಯಿತು ತಮ್ಮ ಲಹರಿಯಾಯಿತು.
ಸ್ವಲ್ಪವೇ ಏರುಪೇರಾದರೂ ಹರಿಹಾಯುವಿರಿ
ನಾನಾಗಿದ್ದಕ್ಕೆ ಸರಿಹೋಗಿದೆ
ಇನ್ಯಾರಾದರೂ ಆಗಿದ್ದರೆ ಬಾಳು ಬೆಳ್ಳಗಾಗುತ್ತಿತ್ತೆನ್ನುವಳವಳು
ಉತ್ತರವಾಗಿ :
ನಿನ್ನ ತಂದಿರುವುದು ಯಾತಕ್ಕೆಂದೆ?
ತೆಪ್ಪಗೆ ಬೊಗಳು!
ನನ್ನ ದುಡಿಮೆಯಲ್ಲಿ ಬದುಕುವವಳು ನೀನು
ನಾನು ತಂದು ಹಾಕಿದ್ದ ಮಾಡಿ ಹಾಕುವುದಕ್ಕೆ ನಿನ್ನ ಕೆಲಸ
ನನ್ನ ಕೆಲಸವೇನಿದ್ದರೂ ಹೊರಗೆ
ಮನೆ ಒಳಗಲ್ಲ
ಅದು ಹೆಂಗಸರ ಕೆಲಸ
ನಾನೇನು ಹೆಣ್ಣು ಗುಡಿಯನಲ್ಲ
ನಿನ್ನೊಟ್ಟಿಗೆ ದುಡಿಯಲು ಒಲೆಮುಂದೆ.
ಇವಳದೊಂದು ಭಾರೀ ಕೆಲಸ
ಇವಳೊಬ್ಬಳು ಭಾರೀ ದುಡಿಯುವಾಕೆ
ನಾನು ಸಿಕ್ಕಬೇಕಾದರೆ ನೀನು ಪುಣ್ಯ ಮಾಡಿದ್ದೆ
ಇಷ್ಟವಾದರೆ ಇರು
ಕಷ್ಟವಾದರೆ ಹೊರಡು
ನಿನ್ನಂತವರು ಕಾಸಿಗೆ ನೂರು
ಇವತ್ತು ನಾನೊಂದು ಮಾಡಿದರೂ ಕೂಡ ದಕ್ಕಿಸಿಕೊಳ್ಳಬಲ್ಲೆ
ನಿನ್ನ ಕೈಲಾಗುತ್ತಾ?
ನಾನೇನೂ ಮಾಡುವುದಿಲ್ಲ
ಸುಮ್ಮನೆ ಮಲಗಿಕೊಳ್ಳುವೆನು
ನಿನಗೆ ನನ್ನನ್ನು ಕೇಳುವ ಹಕ್ಕಿಲ್ಲ
ನಾನೆಲ್ಲಿ ಹೋಗುವೆನು
ನಾನೇನು ಮಾಡುವೆನೆಂದು ಕೇಳಲು ನೀನು ಯಾರೆನ್ನುವೆನು
“…………………”
ಯಾಕೆ ? ಈಗೇನಾಯಿತೆಂದು ಬಿಕ್ಕಿ ಬಿಕ್ಕಿ ಅಳುವೆ
ಬೀಳಲಿಲ್ಲವೆಂತಲೆ?
ಉಸಿರು ಬಿಟ್ಟರೆ ನೋಡು
ಸಿಗಿದು ಹಾಕುವೆನೆನ್ನುವೆನು
ಅನುಭವದಿಂದ ಪಾಠ ಕಲಿತವಳು
ಸುಮ್ಮನಾಗುವಳು
ಮನೆಯಲ್ಲಿ ಸೂತಕದ ದಟ್ಟ ಹೊಗೆಯಬ್ಬುವುದು.
ಮನೆಯೇ ರಸ ರಹಿತವಾಗಿ ತೇಜೋಹೀನವಾಗುವುದು.
ಅಬ್ಬರಿಸುತ ಬರುವುದು ಭಯಂಕರ ರಾತ್ರಿ
ಮುಳ್ಳಿನ ಹಾಸಿಗೆಯ ಮೇಲೆ ಮಲಗಿದಂತಾಗುವುದು
ಸಿಟ್ಟು, ಅಸಹನೆ, ನಿಸ್ಸಹಾಯಕತೆ ಸಮತೋಲನ ಕಳೆಯುವುದು
ಮೆಲ್ಲಗೆ ಪಶ್ಚಾತ್ತಾಪ ಇಣುಕುವುದು
ಮರುಕ್ಷಣವೇ ಸೋಲಬಾರದೆಂಬುದು ಗಟ್ಟಿಯಾಗುವುದು
ಮಗದೊಂದು ಕ್ಷಣ ಇದೊಳ್ಳೆ ಪೀಕಲಾಟ ತಂದುಕೊಂಡೆನಲ್ಲಾ
ಎನ್ನಿಸುವುದು.
ಬೆನ್ನು ತಿರುಗಿಸಿ ಮಲಗಿದವಳಿಗೂ ಎಲ್ಲಾ ಹೀಗೆ!
ನನ್ನ ಒದ್ದಾಟ ನೋಡಿ ನೋಡಿ
ಇನ್ನೂ ಬೆಳೆಸಿದರೆ ಪರಿಣಾಮವೇನೋ…? ಎಂದು ಭಯಬಿದ್ದವಳು
ಸೋಲುವಳು
ಎಷ್ಟಾದರೂ ಹೆಣ್ಣಲ್ಲವೇ ಅವಳು!
ಸ್ವಾರಸ್ಯವಿರುವುದೇ ಇಲ್ಲಿ
ಏನು ಹೇಳಲಿ
ಹೇಳಿದರೆ…
ನಕ್ಕು ಬಿಡುವಿರಿ ಕೇಳಿ.
ದ್ರವಿಸಿದ ಅವಳು
ನಿದ್ದೆಯೆಲ್ಲಂಬಂತೆ ಕಾಲು, ಕೈ ಸೋಕಿಸುವಳು
ನನಗೆ ಸಂತೋಷವಾದರೂ ಕೂಡ
ತೋರಿಸಿಕೊಳ್ಳಬಾರದಲ್ಲ!
ಎಷ್ಟಾದರೂ ನಾನು ಗಂಡಸಲ್ಲವೆ!
ಅದಕ್ಕೆ ಸುಲಭವಾಗಿ ಪ್ರತಿಕ್ರಿಯಿಸುವುದಿಲ್ಲ ನಾನು
ಪ್ರಯತ್ನಿಸಿ, ಪ್ರಯತ್ನಿಸಿ ಸೋತವಳು
ಮುದುರಿ ಮಲಗುವಳು
ನಾನು ಜಾಗೃತನಾಗುವೆ
ಸುಮ್ಮನಾದರೆ ಕೈಗೆ ಬಂದ ತುತ್ತು ಬಾಯಿಗೆ ಬರದೆ ಹೋಗುವುದೆಂದು
ಇನ್ನೊಂದು ಕ್ಷಣಕ್ಕೆ ಹುಳಿಯಿಟ್ಟ ಪಾತ್ರೆಯಂತಾಗುವೆವು ನಾವು
ಎಂದಿನಂತೆ ಒಂದಾದ ನಮ್ಮನ್ನು ಸ್ವಾಗತಿಸಲು ದಿನಕರನು ಬರುವನು
*****