ಹೊಂದಿಕೊಂಡು ಹೋಗದ ಹೆಣ್ಣು
ಮನೆಯ ಒಡೆಯುವಳೆನ್ನುವರು
ಎಲ್ಲಾ ನಿಂದನೆಯ ನಮ್ಮ ತಲೆಗೆ ಕಟ್ಟುವರು
ವಿಚಾರ ಮಾಡುವವರು ಯಾರೂ ಇಲ್ಲ.
ಎಳೆಯ ಹುಡುಗಿಯ ತಂದು
ಮನೆದುಂಬಿಸಿ ಕೊಂಡಾಗ
ಹ್ಯಾಗೆ ನಡೆಸಿ ಕೊಳ್ಳಬೇಕಂತಾ
ತಿಳಿದಿಹರಾ?
ಅಪ್ಪ, ಅಮ್ಮನ ಮನೆಯಲ್ಲಿ
ಬದುಕನ್ನು ಎಷ್ಟೇ ಹತ್ತಿರದಿಂದ ನೋಡಿದರೂ ಸಹ
ಮುಖ್ಯ! ಮುಖಾಮುಖಿ ಇಲ್ಲಿ ತಾನೆ ?
ಅಲ್ಲಿ, ಆಡುತ್ತ ಕಲಿತಿದ್ದನ್ನು
ಇಲ್ಲಿ ಗಂಡನ ಮನೆಯಲ್ಲಿ
ಪ್ರಯೋಗಿಸಬೇಕಾಗಿ ಬಂದಾಗ
ತಪ್ಪುಗಳಾಗುವುದು ಸಹಜ ತಾನೆ ?
ಆಗೆಲ್ಲಾ! ತಿದ್ದಿ ತಿಳಿಸಿ ಹೇಳುವರಾರು ?
ಹಿರಿತನದ ಹೆಸರಲ್ಲಿ
ಬಯ್ದು ಬಡಿದು ಕಂಗೆಡಿಸುವರೆ ಬಹಳ ತಾನೆ ?
ಆಗ ಮನಸಿಗೆ ಏನನ್ನಿಸುತ್ತೆ
ನೀವೆ ಹೇಳಿ.
ಪ್ರಾಯವು ತುಂಬಾ ರಮ್ಯವಾದದ್ದು
ತಲೆತುಂಬಾ ನೂರಾರು ಸಿಹಿ ಸಿಹಿ ಕಲ್ಪನೆ, ಕನಸುಗಳು
ಪುಕ್ಕ ಬಿಚ್ಚಿದ ನವಿಲಿನಂತೆ ಒಂದೇ ಸಮನೆ ಕುಣಿಯುತ್ತಿರುತ್ತವೆ
ಯಾವುದು ಮಾಡೋಣ, ಹೇಗೆ ತಣಿಯೋಣ ಅನ್ನಿಸುತ್ತಿರುತ್ತದೆ.
ಇಂತದಕ್ಕೆಲ್ಲಾ ಒಟ್ಟು ಕುಟಂಬದಲ್ಲಿ ಆಸ್ಪದವಿರುತ್ತದೆಯೆ?
ಸರಸ ಸಲ್ಲಾಪ ವಿಹಾರ ವಿನೋದಗಳು ಗೌರವವಲ್ಲ ಎನ್ನುವಾಗ
ಮೂರ ಹೊತ್ತು ಮೂಗು ಹಿಡಿದುಕೊಂಡು ದುಡಿಯುತ್ತಿರಬೇಕೆಂದಾಗ
ಕೆಲವೊಮ್ಮೆ ಏಕಾಂತದ ಸಾಧನೆಯ ದುಸ್ತರವಾಗುವಾಗ
ದಿನ ದಿನಕ್ಕೆ ಕಿಚ್ಚು ಪುಟವಾಗುತ್ತ ಹೋಗುವುದೇ ಹೊರತು
ತಣಿಯುವುದಿಲ್ಲ;
ಅಂದಾಗ ಏನು ಮಾಡಬೇಕು ?
ಕೂಡಿ ಇದ್ದಾಗ ವ್ಯಕ್ತಿ ಗೌಣವಾಗುವನು
ಒಟ್ಟಾರೆಯ ವಿಚಾರಗಳು ತೂಕವಾಗುವವು
ಹೋಲಿಕೆ, ವ್ಯತ್ಯಾಸ ಹುಟ್ಟಿ ಮನಸು ರಾಡಿಯಾಗುವುದು
ತಾರುಣ್ಯದ ವಿಶಿಷ್ಟ ಬೆಳವಣಿಗೆಯಲ್ಲಿ
ತಂದೆ ತಾಯಿ ಅಣ್ಣ ತಮ್ಮಂದಿರೆಂಬ ಅನುಬಂಧದ ಕಾವು ತಗ್ಗುವುದು
ಆಗ…..
ಇದರ ಹಿಂದೆ ಇಷ್ಟು ಇನ್ನೆಷ್ಟೋ ಇರುವಾಗ
ನಮ್ಮನ್ನು ದೂರುವುದು ಯಾವ ನ್ಯಾಯ ?
*****