ಕಾಲಿಗೆ ಕಟ್ಟಿದ ಗುಂಡು – ಸಂಸಾರ
ಕೊರಳಿಗೆ ಕಟ್ಟಿದ ಬೆಂಡು – ಪಗಾರ
ತೇಲಲೀಯದು ಗುಂಡು
ಮುಳುಗಲೀಯದು ಬೆಂಡು
ಇದರ ನಡುವೆಯೇ ನೀನು
ಬದುಕಿದೆಯಾ ಬಡಜೀವ //ಪ//
ಕಾಲಿಗೆ ತೊಡರಿದ ಬಳ್ಳಿ
ಆಕರ್ಷಣೆಯ ಫಲಿತ
ನಂತರ ಇಲ್ಲ ವಿಮೋಚನೆ
ತಪಸ್ಸಿಗೂ ಸಹಿತ
ಬುದ್ಧಿವಂತರು ಕೂಡ
ಎಡವಬೇಕು ಒಮ್ಮೆ
ಕಾಲಿದ್ದ ಮೇಲೆ ನಡಿಗೆ
ಅದೇ ಸಹಜ ಒಲುಮೆ
ಕವಿ ಮತ್ತು ವೇದಾಂತಿ
ಎತ್ತು ಮತ್ತು ಕೋಣ
ಎತ್ತು ಏರಿಗೆ ಕೋಣ ನೀರಿಗೆ
ನಡುವೆ ನಿನ್ನ ಪ್ರಾಣ
ಬದುಕಿರಲಿ ಹೇಗಾದರೂ
ನೀನಂತೂ ಇಲ್ಲಿ ಹಾಜರಿ
ಮುಟ್ಟದಿದ್ದರೆ ದಡವ
ಖಾತರಿ ನಿನಗೆ ಗುಜರಿ
*****