ರಥ, ಹರಿದಂತೆ ಈ ಬಾಳು
ಸರಿಯಾಗಿದ್ದರೆ ಮಾತ್ರ ಚೆಂದ, ಆನಂದ
ಸರಿ ತಪ್ಪಿದರೆ ಕೆಡುವುದು ಎಲ್ಲಾ ಅಂದ
ಹೋಗುವವೆ ಒಳ್ಳೆ ಕಾಲ
ಬರುವವೆ ಕೆಟ್ಟ ಕಾಲ
ನಮ್ಮದೂ ಒಂದು ಕಾಲಾನಾ?
ಏನು ಹೇಳಲಿ ಅಂದಿನ ವೈಭವವಾ-
ಎಲ್ಲಾ ಕೈ ನೀಡಿದಂಗಿತ್ತು
ಎತ್ತ ನೋಡಿದರು ಊರು ಕಾಲು ಕಟ್ಟಿದಂಗೆ ನಮ್ಮ
ಜಮೀನು ಕಾಣಿಗಳೆ
ಎಂಟಾರಿನ ಬೇಸಾಯ
ಕೈಗೊಬ್ಬ ಕಾಲಿಗೊಬ್ಬ ಅಳು
ಕುಡಿಯವಷ್ಟು ಕರೇವು
ಜೊತೆಗೆ ಗೌಡಿಕೆ ಬೇಕೆ
ಇನ್ನು ಕೇಳಬೇಕೆ!
ನಾಲ್ಕು ಜನರಿಗೆ ಬೇಕಾಗಿಬದುಕಿದರು ಹಿರಿಯರು
ನಮಗೆ ಊರು ಮನೆ ಏಕಪಥವಾಗಿತ್ತು
ತೋಳಿಂದ ಇಳಿಯಲಿಲ್ಲ-
ಮನೆಯವರು ತಪ್ಪ ಊರವರು
ಊರವರು ತಪ್ಪ ಮನೆಯವರು
ಆಡಿಸಿ ಬೆಳೆಸಿದರು
ಅದೆಲ್ಲಾ ಈಗ ಮುಗಿದ ಅಧ್ಯಾಯ!
ಹಿರಿಯರು ಹೋದರು
ಜೊತೆಗೆ ಎಲ್ಲವೂ ಹೋಯಿತು
ಪಾಂಡವರ ಬೀಳಾಗಿ ಹೋಯಿತು.
ಏನಾಯಿತೋ ಏನು ಕತೆಯೋ
ಭಗ್ಗನೆ ಬರಿದಾಯತು
ಮನೆ ಉಳಿಯಲಿಲ್ಲ
ವಂಶ ಬೆಳೆಯಲಿಲ್ಲ
ಯಾವ ಬಾಯಲ್ಲಿ ಹೇಳಲಿ
ಅತ್ತಿಗೆ ಹೋದ ಮೇಲೆ ಅಣ್ಣ ಕೆಟ್ಟು ಬಿಟ್ಟ
ಎಲ್ಲಾ ಮರೆತು ಬಿಟ್ಟ
ಮಕ್ಕಳು ಬೀದಿಗೆ ಬಿದ್ದವು
ಅನ್ಯರ ಮನೆಯ ಜಗುಲಿಯಾಯಿತು.
ಅವುಗಳಾಯಿತು
ಯಾರಿದ್ದು ಏನು ಬಂತು?
ಶಿವಾ ಇಷ್ಟು ಕಠೋರನಾಗಬಾರದಿತ್ತು
ಯಾರನ್ನಂದು ಏನು ಬರುವುದು?
ನಾವು ಬೇಡಿ ಬಂದಿದ್ದೇ ಇಷ್ಟು!
ಹಿಂದೆ ನಾವ್ಯಾರ ತೌರ ತೊರೆಸಿದ್ದೇವೊ…
ಯಾವ ಪಾಪಕ್ಕಾಗಿ ಈ ಶಿಕ್ಷೆಯೋ
ಬಲ್ಲವರಾರು?
ಎಲ್ಲರೂ ತವರೂರಿಗೆ ಹೋಗಿ
ಒಂದೆರಡು ದಿನವಿದ್ದು
ಕೈಯಾರಿಸಿ ಕೊಂಡು ಬರುವರು
ನಾವೆಲ್ಲಿಗೆ ಹೋಗುವುದು?
ನೆನೆಯದ ದಿನವಿಲ್ಲ
ಕೊರಗದ ಕ್ಷಣವಿಲ್ಲ
ಮರವೆಯಾಗದಲ್ಲ?
ಯಾರಾದರೂ ಸಿಕ್ಕಿ ಸುದ್ದಿ ಹೇಳಿದರೆ
ಆದಿನವೆಲ್ಲ ತುತ್ತುಮಿದ್ದರೆ ಮಗಳಲ್ಲ
ಏನು ಮಾಡುವುದು ಹೇಳಿ
ಎದೆ ಕೊಟ್ಟ ನಿಲ್ಲೋಣವೆಂದರೆ
ಇಲ್ಲೂ ಬಗೆ ಮಿಗಿಯಿಲ್ಲ.
ಕಂಡರೆ ಕಣ್ಣುರಿ
ಕಾಣದಿದ್ದರೆ ಹೊಟ್ಟೆಯುರಿ
ಈ ರೀತಿ ಯಾಗಿದೇ ರೀ ನನ್ನ ಸ್ಥಿತಿ
ಅದಕ್ಕೆ,
ಕಾಣದಂಗೆ ಕಣ್ಮರೆಯಲ್ಲಿರುವುದೊಂದೇ ನನಗುಳಿದಿರುವ ದಾರಿ.
*****