ಅಂಬನೀ ದಯಮಾಡೆ ಅಂಬುಜ ಲೋಚನೆ
ತುಂಬಿದೆ ನಿನ್ನಾ ಬಿಂಬವು ಸುತ್ತಲು
ಇಂಬುದೋರಮ್ಮ ನನ್ನೊಳಗು || ಪ ||
ಚಿಕ್ಕಿಯ ಹೂಗಳ ಶಿರದಿ ಮುಡಿದವಳೆ
ಚೊಕ್ಕಚಂದ್ರನ ತಿಲಕ ಹಣೆಯಲ್ಲಿ
ಅಕ್ಷಯ ಪ್ರಭೆಯನು ಹರಿಸುವೆ ತಾಯೆ
ಪುಷ್ಕಳ ತೇಜದ ಸೂರ್ಯನ ಕಣ್ಣಲಿ || ೧ ||
ಕಮಲವ ಕಾಲಲಿ ತಳೆದಿಹೆಯಮ್ಮಾ
ವಿಮಲ ಸಂಜೆಯ ಕಂಜಕಾಂತಿಯ ಕನ್ಯೆ
ತಮವ ಕಳೆವ ಉಷಗೆನ್ನೆಯ ಸೊಬಗಿಯೆ
ಸುಮನಲತೆಯ ತನು ಕೋಮಲೆ ಚೆನ್ನೆ || ೨ ||
ಹಸನಾದ ಚೆಂಗುಲಾಬಿ ನಾಚುವ ಚೆಲುವೆ
ಅಸಮಸುಂದರಿ ನೀ ಬೆಳ್ದಿಂಗಳೊಲವೆ
ಹೊಸಹೊಸ ಹೂಗಳ ಬಣ್ಣ ಕುಪ್ಪಸ ತೊಟ್ಟು
ಹಸಿರ ಸೀರೆಯನುಟ್ಟು ನಿರಿಯನೆ ಚಿಮ್ಮುವೆ || ೩ ||
*****