ಎಲ್ಲಿಂದ ಬಂತೀ ಸುಮಧುರ ಗಾನ
ಎಲ್ಲಿಂದ ಬಂದನೀ ಯಕ್ಷ
ಎಲ್ಲಿಂದ ಬಿದ್ದ ಸುರ ಸ್ವಪ್ನ
ಎಲ್ಲಿಂದ ತೆರೆದ ಗವಾಕ್ಷ
ಇನ್ನು ಭಾಗವತ ನಾನೆ ಇನ್ನು ಜಾಗಟೆ ನಾನೆ
ಚಂಡೆಮದ್ದಲೆ ನಾನೆ ಹಾಡು ಅರ್ಥವು ನಾನೆ
ಕೋಡಂಗಿ ಕುಣಿತ ಗೋಪಾಲ ಕುಣಿತ
ಎಲ್ಲ ಹೆಜ್ಜೆಗಳ ಇಡುವವನು ನಾನೆ
ಇದೋ ನಾಯಕ ಇದೋ ಖಳನಾಯಕ
ಸೌಮ್ಯವೇಷ ಬಣ್ಣದಾ ವೇಷ ಎಲ್ಲ ನಾನೆ
ಸ್ತ್ರೀ ವೇಷ ನಾನೆ ವಿದೂಷಕನು ನಾನೆ
ಕುಣಿಸುವವ ನಾನೆ ಕುಣಿವವನು ನಾನೆ
ಅಯೋಧ್ಯಾನಗರಿಗೆ ಯಾರೆಂತ ಕೇಳಿದಿರಿ
ಋತುಪರ್ಣರಾಜರೆನ್ನಬಹುದಯ್ಯ
ಆ ಋತುಪರ್ಣ ನಾನೆ ಅಷ್ಟಾವಕ್ರ ಬಾಹುಕನು ನಾನೆ
ಅಶ್ವಹೃದಯ ಪರಿಣತನು ನಾನೆ ಅಕ್ಷಕಲಾ ಪಂಡಿತನು ನಾನೆ
ವೃಕ್ಷದೆಲೆಗಳನ್ನು ಎಣಿಸಿದವ ನಾನೆ
ವಾಯುವೇಗದಲಿ ರಥ ಓಡಿಸಿದವ ನಾನೆ
ಯಕ್ಷ ನಾನೆ ಗಾನ ನಾನೆ
ಗೀತ ನಾನೆ ಸಂಗೀತ ನಾನೆ
ಕಾದಿರುವಳು ದಮಯಂತಿ ಹೂಮಾಲೆ ಹಿಡಿದು
ತನ್ನ ನಳನಿಗೆ ಕಾದು
ಇದು ಸ್ವಪ್ನದ ಹೊಳೆ ಇದು ಅನರ್ಘ್ಯದ ಖಣಿ
ಇದು ಪರುಷ ಮಣಿ ಇದ ಮುಟ್ಟಿದವನ ಭಾಗ್ಯ
ಈ ಯಕ್ಷವಾಣಿ
*****