ಬಾಳಲಿ ಕೆಸರೇ ತುಂಬಿಹುದೂ
ಕಮಲ ಹುಟ್ಟಬೇಕು
ಅಂಧಕಾರದಲಿ ಅಜ್ಞತೆ ತುಂಬಿದೆ
ಜ್ಞಾನ ತಾರೆ ಬೇಕು || ೧ ||
ಜೀವರಾಶಿಗಳ ದೂರ ಪಯಣದಲಿ
ಮನುಜ ಕೊನೆಗೆ ಬಂದ
ಕೋಟಿ ಜನುಮಗಳ ಸಮುದ್ರ ಮಥನದಿ
ಅಮ್ಮತವನ್ನೆ ತಂದ || ೨ ||
ವಿಷಯಸಾಗರದಿ ವಿಷದ ಭೋಗದಲಿ
ಜೀವ ಕೊಡುವ ಫಲವು
ಹುಟ್ಟು ಸಾವುಗಳ ಬಾಳ ಜೂಜಿನಲಿ
ಉಳಿಯುವಂಥ ಛಲವು || ೩ ||
ಪ್ರಾಣಿ ನೂರರೊಲು ಹುಟ್ಟುಗುಣಗಳ
ಸೃಷ್ಟಿವೃತ್ತ ಒಳಗೆ
ಕಟ್ಟು ಹಾಕಿ ಮಾನವತೆ ನವ್ಯತೆಯ
ವಸ್ತ್ರ ಮೇಲೆ ಹೊರಗೆ || ೪ ||
ಕಮಲ ಕೆಸರಿನಲೆ ಹುಟ್ಟಿ ಬಂದರೂ
ಕೆಸರೆ ಅಲ್ಲವಲ್ಲ
ದೇಹದಿಂದಲೆ ಆತ್ಮ ಬೆಳಗುವುದು
ದೇಹವಲ್ಲ ಎಲ್ಲಾ || ೫ ||
ಇಂಥ ಪದ್ಮವನು. ನೋಂತು ಯುಗಗಳಲಿ
ಭೂಮಿ ತಾಯಿ ತಾನು
ಎನಿತೊ ನೋವುಗಳ ಕಷ್ಟರಾಶಿಗಳ
ಉಂಡು ಪಡೆದಳದನು || ೬ ||
*****