ಕಲ್ಲಿನ ಮೂರುತಿ ಪೂಜಿ ಮಾಡುದು
ನೂರು ಪಟ್ಟು ನೆಟ್ಟಾ
ಮನುಸೆರ ದೇವರ ಪಾದ ಬೀಳುದು
ನೂರು ಪಟ್ಟು ಕೆಟ್ಟಾ ||ಪಲ್ಲ||
ಆಶಿ ಬುರುಕರು ಮನುಸೆರ ದೇವರು
ತಿಂದು ಹೇಲತಾವ
ಕಲ್ಲು ದೇವರು ಊಟ ಉಣ್ಣದೆ
ಮೌನ ಕೂಡ ತಾವ ||೧||
ಚರುಮದ ದೇವರು ನಾಯಿ ದೇವರು
ರೊಕ್ಕ ಕೇಳತಾವ
ಕಲ್ಲು ದೇವರು ಇಟ್ಟ ರೊಕ್ಕವ
ಮರೆತು ಕೂಡ ತಾವ ||೨||
ಹುಟ್ಟಿದ ದೇವರು ಹಸದು ಪಿರಿಪಿರಿ
ಭಿಕ್ಷೆ ಬೇಡತಾವ
ಹುಟ್ಟದ ದೇವರು ಯಡೀ ಇಟ್ಟರ
ಸುಮ್ನ ಕೂಡ ತಾವ ||೩||
ಸಾಯುವ ದೇವರು ಸಾಯುವ ಮೊದಲ
ಹೆಣ್ಣು ಬೇಡತಾವ
ಸಾಯದ ದೇವರು ರಂಭಿ ಕುಣಿದರು
ಗೋಂಬಿ ಆಗತಾವ ||೪||
ಮಾತಿನ ದೇವರು ಮಾತಿನ ತೂತಿಗೆ
ಜೋತು ಬೀಳತಾವ
ಮುಕಿನ ದೇವರು ನಾಕಿನ ಲೋಕದ
ಠೀಕು ತೋರತಾವ ||೫||
*****