ಸೀರೀಯ ಬಿಚ್ಚವ್ವಾ ಸಣಬಾಲಿ
ಎದರಾಗ ಏನೈತಿ ನೀ ಖಾಲಿ ||ಪಲ್ಲ||
ತೋರ್ಮುತ್ತು ತೋರೈತಿ ಬೀರ್ಮುತ್ತು ಬೀರೈತಿ
ಮುತ್ತೀನ ಮುತ್ತೂ ಒತ್ತೈತೆ
ಹತ್ತರ ಹದಚಂದ ಬಿತ್ತರ ಏನ್ಚೆಂದ
ಹತ್ತೂರು ಸತ್ತೂರು ಸತ್ತೈತೆ || ೧||
ಸೀರೀಯ ಸಣಗಂಟು ಗಟಿಗಂಟು ಉಟಗಂಟು
ನಾ ನಿನ್ನ ನಂಟೇ ನಿಜವಂತೆ
ಅಂಟೀಗಿ ಅಂಟಾಗಿ ಅಂಟೋನು ಬಂಟಾಗಿ
ಸುಂಟೀಯ ಖಾರ್‍ಯಾಕ ಕುಲವಂತೆ ||೨||
ಒತ್ತೊತ್ತಿ ಬಾರೆನಕೆ ಚಿತ್ತೀನ ಚಿತಗಡಿಕೆ
ಹೊತ್ತೀಗಿ ಹೊತ್ತೂ ಮುತ್ತವ್ವಾ
ಸೀರೀಯ ಸೆರಗ್ಯಾಕ ಚಿಂತ್ಯಾಕ ಕಂತ್ಯಾಕ
ಕುಂತ್ಯಾಕ ಕರಬ್ಯಾಕ ಎತ್ತವ್ವ ||೩||
ನಿಂತಲ್ಲೆ ಜೋಕಾಲಿ ಕುಂತಲ್ಲೆ ಕುತನೆವ್ವ
ಕಲ್ಲೀನ ನೆಲ ನೋಡು ಹುಲ್ಲವ್ವಾ
ಹುಲ್ಲುಲ್ಲು ಹುಲಿಗೆವ್ವ ಹುಲಿಮಾವ ಸಲಿಗೆವ್ವ
ಗಣಮಗ ನಾನೂ ಬಾರವ್ವಾ ||೪||
*****
ಸೀರಿ = ದೇಹಾಭಿಮಾನ; ಬಾಲಿ-ಆತ್ಮ