ಸಾವಿಗೆ ಸ್ವಾಮಿತ್ವವಿಲ್ಲ
ಸತ್ತವರು ನಗ್ನರಾಗುವರು
ಗಾಳಿಯಲೆಯಲಿ ಸುಳಿವ
ಮನುಷ್ಯನಲಿ ಮತ್ತು ಪಶ್ಚಿಮ ಚಂದ್ರನಲಿ
ಬೆರೆತು ಹೋಗುವರು.
ಅವರ ಎಲುವನ್ನು ಸರಿಯಾಗಿ ಹೆಕ್ಕುವಾಗ
ಶುದ್ಧ ಎಲುಬು ಮಾಯಾವಾಗುವುದು,
ಅವರ ಮೊಣಕ್ಕೆ ಪಾದಗಳಲಿ
ನಕ್ಷತ್ರ ಕಾಣುವುದು;
ಹುಚ್ಚರಾಗಿಯು ಅವರು ಮತಿವಂತರು,
ಸಮುದ್ರದಾಳದಲಿ ಮುಳುಗಿಯು
ಮತ್ತೆ ಏಳುವರು;
ಪ್ರೇಮಿಗಳು ಸಾಯುವರು
ಪ್ರೇಮ ಸಾಯದು
ಮತ್ತು ಸಾವಿಗೆ ಒಡೆತನವಿಲ್ಲ.
ಸಾಗರದಲೆಗಳ ಸುಳಿಯೊಳಗೆ
ಬಹುಕಾಲ ಸೇರಿಕೊಂಡರವರು
ಉದ್ದಕೆ ಒರಗಿ ಸಾಯಲಾರರು ಗಾಳಿಯಿಂದ.
ಚುಚ್ಚುವ ಮೊನಚು ಸರಲಿಗೆ
ಎದೆ ಕೊರೆಯುವಾಗಲು
ಗಾಲಿಗೆ ಬಿಗಿಯುವಾಗಲು
ಅವರು ಮುರಿಯರು ಬೇನೆಯಿಂದ.
ವಿಶ್ವಾಸ ಅವರ ಕೈಯಲಿ
ಎರಡು ತುಂಡಾಗುವುದು ಮತ್ತು
ಒಂದು ಕೋಡಿನ ದುಷ್ಟ ಮೃಗ
ಅವರನ್ನು ತೊಂದರೆಗೆ ಒಳಪಡಿಸುವುದು,
ಹೋಳಾಗಿ ಮುಗಿದರು ಅವರು ಒಡೆಯುವುದಿಲ್ಲ
ಸಾವಿಗೆಂದೂ ಸ್ವಾಮಿತ್ವವಿಲ್ಲ.
ಅವರ ಕಿವಿಯಲ್ಲಿ ಇನ್ನು ನೀರ್‌ಹಕ್ಕಿ
ಕೂಗಲಾರದು
ತೆರೆಗಳು ದಂಡೆಗೆ ಬಡಿದು
ಸದ್ದು ಮಾಡಲಾರವು
ಹೂವರಳುವಲ್ಲಿ ಇನ್ನು ಹೂವರಳದು
ಮಳೆಯ ಹೊಡೆತಕೆ ತಲೆ ಎತ್ತದು
ಸತ್ತ ಹುಚ್ಚು ಉಗುರಿನಂತಾದರು
ಮಲ್ಲಿಗೆಯ ಸುತ್ತಿಗೆಯಿಂದ
ಪಾತ್ರಗಳ ತಲೆಗೆ ಹೊಡೆದರು
ಬಿಸಿಲು ಬೀಳುವ ತನಕ ತಡೆದರು
ಬಿಸಿಲಿನಲ್ಲಿ.
ಸಾವಿಗೆ ಸ್ವಾಮಿತ್ವವೆಲ್ಲಿ.
*****
ಮೂಲ: ಸೈಲನ್ ಥೋಮಸ್
(And Death Shall Have No Dominion)