ಹಾರು ಹಾರೆಲೆ ಚೆಲುವಕ್ಕಿ
ಹಾರು, ಬದುಕಿನ ದಿನಗಳ….. ಮರೆತು
ಮುಗಿದಿತು ಕಾಲವು ಚೆಲುವಿನ ಕ್ಷಣಗಳ
ಮಾಗಿಹ ಮಾವಿನ ಕೊಂಬೆಗಳ,
ಊರಿಂದೂರಿಗೆ ಅಲೆಯುವ ಬವಣೆಯ
ಅರಿಯಲು ಜೀವನ ಸೆಳಕುಗಳ
ಹೆರವರ ಊರಿದು ತಿಳಿಯೆಲೆ ಹಕ್ಕಿಯೆ!
ಎರವಿನ ಬಾಳಿದು ತಾಸುಗಳ……
ಚಿರಕಾಲವು ಇರಲಾಗದು ತಿರೆಯೊಳು
ಅರೆ ತಾಸಿದು ಕನಸುಗಳ….
ಕಾಳು ಕಡ್ಡಿಗಳ ಹೆಕ್ಕಿ, ತನುವನು ಬಲುಮೆಗೆ ಇಕ್ಕಿ
ಮಳೆಯಲಿ ತೊಯ್ದು ತಾಪದಿ ತವೆದು ತಂಗಲು ಗೂಡನುಹೊಕ್ಕಿ
ದುಃಖಿಸದಿರು ಬಹುಪರಿ ನಿಜದುಡಿಮೆಯು
ದಕ್ಕದ ವಿಷಯಕೆ ಮಿಡುಕಿ…..
ಹಕ್ಕಿಯೆ ಪಯಣವು ಮಿಕ್ಕಿದಕ್ಕಿಂತ
ತಕ್ಕುದು ಗೆಲುವಿನ ಹಕ್ಕಿ…….ಹಾರು……
ಮರೆ ಆ ತಂಬೆಲರ, ಹಾರಿಕೆ ಕೊಂಬೆ ಕೊಂಬೆ .
ಧರೆಯನು ಕೊರೆವುದು ಮರೆಯುವ ಜೀವನಗೊಂಬೆ,
ಸುಖದ ಕನಸನು ಒಡೆವುದು ನಗೆಯಲಿ
ನಿರ್ದಯ ಲೋಕಕೆ ಇಂಬೆ
ಬರೆದಿಹ ಬರೆಹವ ಜರೆಯುತ ಬದುಕಿದೆ
ಹೊರೆಯಿದು ಬದುಕಿನ ನಾನೆಂಬೆ
ಅಳುತಿಹೆ ಉಳಿದಿಹ ಪಕ್ಕಿಗಳು ಕೂಡಿಯೆ ಆಡಿಹ ನಿನ್ನ
ಬಾಳುವ ಭರದಲಿ ಒಟ್ಟಿಲಿ ಕಟ್ಟಿದ…..ಕನಸದು ಬಣ್ಣ-ಬಣ್ಣ
ಅಂದನು ಮರೆಯುತ ಇಂದನು ನೆನೆಯುತ
ಕಂದಿಹ ಮುಖದಲಿ ತಿಳಿವನು ಬರಿಸುತ
ಅಂದದಿ….ಚಂದದಿ ಅದುರುವ ಅಧರದಿ
ಇಂದೆಯೆ ಮುಂದಕೆ ಮುಂದಕೆ ಹಾರು ……
*****