ಏನು ಲೋಕ ಏನು ಜನ, ಏನು ಶೋಕ ಏನು ಮನ
ತಾನು-ತನ್ನದೆಂದು ಜನ, ನೇಹವಿಲ್ಲವಿಂದು ಹಣ!
ನೇಹವ ಬಯಸಿತು ತನು ಮನ
ಗೇಯವ ಹಾಡಿತು ಅನುದಿನ
ಭವದಲಿ ವ್ಯರ್ಥವೆ ಹೋಯಿತು
ತವ ತವೆಯುತ ಬಾಳು ಗೋಳಾಯಿತು
ಏನದು ಮನದಾ ಮಹದಾಶೆಯು
ಮೇಣದು ಮಮತೆಯ ಸುಖದಿಂಗಿತವು
ಯಾಕದು ಕಲ್ಪಿಸಿ ಕಳವಳ ಪಡುವದು
ಭಾಗ್ಯದಲಿರದಕೆ ಹಾತೊರೆವುದು
ಒಳಗಿನ ಎಳದನಿ ತಿಳಿಯಾಗುಲಿಯಿತು
‘ಸೆಳೆತವು ಒಲುಮೆಯ ಚೆಲುವೆಲೊ ಜಗದಲಿ’
ಮರುಚಣ ಮರುದನಿ ಮರ ಮರಗುಟ್ಟಿತು
‘ಮರುಳೆಲೋ ನೇಹದ ಕನಸಿದು ಧರೆಯಲಿ’
ಅನುಭವವೆಂದಿತು ‘ನಿಜವಿದು ಮನವೆ’
ತನು ಮನ ನೊಂದಿತು, ಏತರ ಬಾಳುವೆ
ಹೃದಯದ ಮಲ್ಲಿಗೆ ಮುದುಡುತ್ತಿಹುದು
ಮಧುಪನ ಮಮತೆಯ ಕಾಣದೆಯೆ –
ಯಾರಿಗೆ ಬೇಕೀ ಜೀವನ ಮಹಿಯೊಳು
ಸೇರುವ ಒಲವಿನ ಸುಳಿವೆ ಅಡಗಿರಲು?
*****