ಮಗುವೊಂದಿದ್ದರೆ ಮನೆಯಲಿ
ಕಿಲಕಿಲ ನಗುವು
ಪುಳಕಿತ ಒಲವು|
ಸಂತಸ ತುಂಬಿದ
ಜೀವನ ನಿತ್ಯವು||
ಮಗುವಿನ ಸಿಹಿಯ
ತೊದಲು ಮಾತುಗಳೇ
ಸಂಗೀತಮಯವು|
ಜಿಂಕೆಯ ಕಣ್ಣು,
ಸಂಪಿಗೆ ಮೂಗು
ಸುಂದರ ಚೆಲುವು
ಅಂದದ ಮೊಗವು|
ಅಳುತಲಿ ನಗುವು
ನಗುತಲಿ ಅಳುವು
ಸುಂದರ ಸುಮಧುರ
ಪ್ರತೀ ಕ್ಷಣ ಕ್ಷಣವು||
ಅಂಬೆಗಾಲು ತರಲು
ಗೆಜ್ಜೆಯ ಗಲಗಲ ಸದ್ದು
ಹೆಬ್ಬೆರಳ ಬಾಯೊಳು
ತೆಗೆಯಲದುವೆ ಜೊಲ್ಲು|
ತನ್ನ ನೆರಳ ತಾನೆ ನೋಡಿ
ಹಿಡಿಯಲದನ ಹಿಂದೆ ಓಡಿ
ಮುಗ್ಗರಿಸಲದುವೆ ಚೆಂದ|
ಬಟ್ಟೆಯು ಒದ್ದೆಯಾದರೆ ಕಿರಿಕಿರಿ
ಕರೆಯುವೆ ಅಮ್ಮನ ಕೈಬೀರಿ||
ನಿದ್ದೆಯಲಿ ಮುಗುಳ್ನನಗುತ
ತುಟಿಯ ಚಪ್ಪರಿಸಲದುವೆ ಅಂದ|
ನಿದ್ದೆಯು ತೀರೆ ಎದ್ದು ಅಮ್ಮನ ಹುಡುಕೆ
ಕಾಣಿಸೆ ದುಃಖಿಸಿ ಅಳುತಲವಳ
ಭಯವ ಹೆಚ್ಚಿಸಲು ನಿನಗಾನಂದ|
ಅತ್ತು ಅವಳೆದೆಯ ಅಮೃತ ತಣಿದು
ತೃಪ್ತಿಯಲಿ ಕೆಳಗಿಳಿದು
ಅಂಬೆಗಾಲಲಿ ಓಡಲದುವೇ ಚೆಂದ||
*****