ಬೆಟ್ಟದ ನೆತ್ತಿಗೆ ಕಿರೀಟವಿಟ್ಟ ಬಿಸಿಲು
ಕಪ್ಪಗೆ ದೂರದಲ್ಲಿ ನೆಲಕ್ಕೆ ಜಾರಿದ ಮುಗಿಲು
ಮತ್ತೆ ಮತ್ತೆ ಮೇಲೆ ಚಿಗಿವ ಆಲದ ಬಿಳಲು
ಹೊಳೆಸುತ್ತವೆ ಹಠಾತ್ತನೆ ನಿನ್ನ ಮುಖ ಕೈಕಾಲು
ಹೊಳೆದ ಗಳಿಗೆ ಮೈಯುದ್ದ ಬೆಳೆದು ನೀ
ಪರವಶ ನಾನು
ಗಳಿಗೆಯಲ್ಲೆ ಸರಸರನೆ ಬೆಳೆದು ನಾ
ನೆತ್ತಿಗೆ ಬಾನು
ಬೆಳೆದ ಭರಕೆ ಕೊರಳುಬ್ಬಿ ಬಂದು ಧರೆ
ಕಪಿಲವಸ್ತು
ಪಡೆದ ಭಾವ ಕಡಲಗಲ ಬೆಳೆದು ಸುಖ
ಶಾಂತಿರಸ್ತು
ಗಾಂಧಿ ಬರಿ ಮಿಂಚು, ಒಂದು ಕ್ಷಣ ಸಂಚು
ಮತ್ತೆ ಕೆಳಗೆ ಧರೆಗೆ
ಗಾಂಧಿ ಸಂಜೆಬಗೆ, ಒಂದೆ ಕ್ಷಣದ ನಗೆ
ಮತ್ತ ಇರುಳಿಗೆ
ಬೆಳಕು ಮಲಗುವುದು ಇರುಳ ಗರ್ಭದಲೆ
ಮತ್ತೆ ಬರಲು ಹೊರಗೆ
ಬೆಳಕು ಕತ್ತಲೆಯ ಚಿತ್ರಕೂಟದಲಿ
ಚಿತ್ತ ಚಕ್ರ ಸುಳಿಗೆ
*****