ಎಲ್ಲರೂ ಮಾಡುತ್ತಾರೆ ಅಡುಗೆ
ಆದೇ ಅಕ್ಕಿ, ಬೇಳೆ, ತರಕಾರಿ
ಅದೇ ಉಪ್ಪು, ಹುಳಿ, ಖಾರ, ಕಾಯಿತುರಿ
ಎಲ್ಲರೂ ಉಪಯೋಗಿಸುವ ಪದಾರ್ಥಗಳು
ಉರಿಸುವ ವಿವಿಧ ಇಂಧನಗಳು
ಬೇಯಿಸುವ, ಕಲಸುವ ವಿಧಾನಗಳು
ಎಲ್ಲ ಒಂದೇ ಆದರೂ
ಒಬ್ಬೊಬ್ಬರ ಅಡುಗೆ ಒಂದೊಂದು ರುಚಿ
ಕೆಲವರ ಅಡುಗೆ ಪುಷ್ಕಳ ರಸದೌತಣ
ಕೆಲವರದು ಶುಷ್ಕ ಭೋಜನ.
ಈ ವ್ಯತ್ಯಾಸಕ್ಕೇನು ಕಾರಣ?
ಸೇರಿಸುತ್ತಾರೇನೋ ವಿಶೇಷ ಅಂಶ ನೋಡೋಣ.
ಹೌದು. ತಾಯಿ-ಮಕ್ಕಳು ತನ್ನಡಿಗೆ ಉಂಡು
ಸಂತಸ, ತೃಪ್ತಿ, ಆರೋಗ್ಯ, ಆಯುಷ್ಯ ಹೊಂದಲಿ
ನೂರು ಕಾಲ ಸುಖವಾಗಿ ಬಾಳಲಿ
ಎಂದು ಸೇರಿಸುತ್ತಾಳೆ ಅಪಾರ ಪ್ರೀತಿ.
ಸೊಸೆ – ತಂದೆಯ ಮನೆಯ
ಆಳು ಕಾಳು, ಅಡುಗೆಯವರನ್ನು ನೆನೆಯುತ್ತಾ
ಇವರ ಮನೆಗೆ ಬಂದು ತಾನೇ
ಅಡುಗೆಯವಳಾದುದಕ್ಕೆ ವಿಷಾದಿಸುತ್ತಾ
ಸೇರಿಸುತ್ತಾಳೆ ಸಿಟ್ಟು, ನಿಟ್ಟುಸಿರು, ಕಣ್ಣೀರು.
ಮನೆಗಳಲ್ಲಿ ಕೆಲಸ ಮಾಡುವ ಅಡುಗೆಯವರು
ಸೇರಿಸುತ್ತಾರೆ ಧಾರಾಳವಾಗಿ ಸಂಬಾರ ಪದಾರ್ಥ
ಮದುವೆ ಮನೆ ಅಡುಗೆಯವರು
ಸೇರಿಸುತ್ತಾರೆ ತಮ್ಮ ಅನುಭವ ಸಾರ.
ಹೋಟೆಲ್ ಅಡಿಗೆಯವರು
ಗಿರಾಕಿಗಳ ಮನ ಸೆಳೆಯಲು
ಸೇರಿಸುತ್ತಾರೆ – ಕಣ್ಣಿಗೆ ತಂಪಾದ
ನಾಲಿಗೆಗೆ ರುಚಿಯಾದ
ಆರೋಗ್ಯಕ್ಕೆ ಕೆಡುಕಾದ
ಜೇಬಿಗೆ ಅಪಾಯವಾದ
ವ್ಯಾಪಾರಿ ತತ್ವಗಳನ್ನು
*****
೨೩-೦೮-೧೯೯೦