ಚೆಲುವಿನ ನಾಡು ಕರುನಾಡು-ಹೊಯ್
ಅದರೊಳಗೊಂದು ಒಳನಾಡು
ಅದನು ಕರೆವರು ತುಳುನಾಡು-ಅದ
ಕಣ್ಣನು ತುಂಬಿಸಿ ಪದ ಹಾಡು /ಪ//
ಪಶ್ಚಿಮ ಸಾಗರ ತೀರದಲಿ-ತುಸು
ಪಕ್ಕದ ಬೆಟ್ಟದ ಸಾಲಿನಲಿ
ಹಸಿರನು ಹಾಸಿದ ತಾಣದಲಿ-ಗಿಳಿ
ಕಾಜಾಣಗಳು ಹಾಡುವಲಿ
ನಿಂತ ನಾಡದು ತುಳುನಾಡು-ಅದ
ಕಣ್ತುಂಬಿಸಿ ನೀ ಪದ ಹಾಡು
ಮುಗಿಲನು ಮುಟ್ಟಿದ ಶಿಖರಗಳು
ಎಂದೂ ಹರಿಯುವ ಹಳ್ಳಗಳು
ಹಾಡುವ ಬಗೆಬಗೆ ಹಕ್ಕಿಗಳು
ಕುಣಿಯುವ ಸುಂದರ ನವಿಲುಗಳು
ಮೇಳೈಸಿಹ ನೆಲ ತುಳುನಾಡು-ಅದೆ
ವಿಶ್ವದ ನವರಂಗದ ಬೀಡು
ಸಂಸ್ಕೃತಿಗಿಲ್ಲಿ ಹಲ ಬಣ್ಣ
ಸೌಹಾರ್ದತೆಗಿಲ್ಲಿಲ್ಲ ಸುಣ್ಣ
ಇದರ ಭೂಗೋಳ ಸೀಮಿತವು
ಜನರಸ್ತಿತ್ವವು ಅಸೀಮವು
ಇಂಥಹ ನಾಡದು ತುಳುನಾಡು
ಎಲ್ಲೆಡೆ ಸಿಗುವುದು ನೀ ನೋಡು
*****