ಅರಳಿಹುದು
ನಮ್ಮ ಮಡಿಲೊಳಗೊಂದು
ಮಲ್ಲಿಗೆಯ ಮುಗುಳು
ತುಂಬಿಹುದು ಮನೆ, ಮಂದಿ ಮನಸೆಲ್ಲಾ
ಒಮ್ಮುಖವಾಗಿ.
ಮರೆಯುವೆವು
ನಮ್ಮನು, ನಮ್ಮದನು
ನೋಡುವುದರಲ್ಲಿ
ನಿಸರ್ಗದೀ ವಿಶುದ್ಧ ಮೂರ್ತಿಯ
ಒಂದೊಂದು ಚಿಗುರು ನಡೆ, ನುಡಿ, ಆಟ, ನೋಟಗಳ.
ಅಂತೆಯೇ
ಮಾತರಿಯದ ಕಂದಾ
ಯಾತು ಯಾತಕೊ ಸಂಕಟ ಪಡುವಾಗ
ಯಾತನೆಯ ಪಡಿಯುಕ್ಕಿ ಹರಿಯುವುದು.
ಕೆಲವೊಮ್ಮೆ
ಗೊತ್ತರಿಯದ ಕಂದ
ಇಸ್ಸಿ, ಉಚ್ಚೆಯ ಅಭಿಷೇಕ ಮಾಡಿದಾಗ
ಕಿತ್ತರಿವ ಕೋಪ ಉಕ್ಕುವುದು
ಮಕ್ಕಳೆಂದರೆ ಮೂಗು ಮುರಿಯುವಂತಾಗುವುದಾದರೂ
ಹಾಲು, ಹಾಲು ಮನಸ
ಅದ್ಭುತ ಕೌತುಕ ಭಾವದ
ಮುದ್ದು, ಮುದ್ದಾದ ಮಗುವ
ಮುದ್ದಾಡದಿರಬಹುದೆ!
*****