ಬಿಡಬೇಡ ಬಾಲಿ ಬಿಡಬೇಡ
ಹಿಡಿಬೇಡ ಸಾಲಿ ಹಿಡಿಬೇಡ ||ಪಲ್ಲ||
ಮಾಸ್ತರಾ ಮಸ್ತಿಲ್ಲಾ ಸಾಲೀಯು ಸಿಸ್ತಿಲ್ಲಾ
ನನಕೂಟ ಸುಸ್ತಿಲ್ಲ ಬಾಬಾರ
ಪುಸ್ತಾಕ ಪ್ಯಾಟ್ಯಾಗ ಮಾರಾಕ ಬಂದಿಲ್ಲ
ಕೊಳ್ಳಾಕ ರೊಕ್ಕಿಲ್ಲ ನೀ ಬಾರ ||೧||
ಕಲಸೋರು ಕೌಹಕ್ಕಿ ಕಲಿಯೋರು ಕೂಹಕ್ಕಿ
ಯಾತಕ್ಕ ನೀ ಪುಕ್ಕಿ ನಿಲಬಾರ
ಸ್ಯಾಣ್ಯಾರು ಅಂಬೋರು ಸೆಗಣೀಯ ತಿಂಬೋರು
ಧಡ್ಡರು ಧಡೆಬೆಲ್ಲ ತಿಂದಾರ ||೨||
ನಾಕೋಟ್ರ ಉಡತೀದಿ ನಾಬಿಟ್ರ ಸಾಯ್ತಿದಿ
ನೀನನಗ ಉದ್ರೆಲ್ಲಾ ಗಡಬಾರ
ನನಗಿಲ್ಲ ದರಕಾರ ನಿನಗಿಲ್ಲ ಸರಕಾರ
ನಾ ನಿನ್ನ ಸರದಾರ ಸರಬಾರ ||೩||
ಈ ಸಾಲಿ ಬೇಸಾಲಿ ಮಸಾಲಿ ಪಡಸಾಲಿ
ಲಂಚಾವ ಕೊಟ್ಟೋರು ಕಲಿಸ್ಯಾರ
ಕೌವ್ವಂದ್ರ ಕ ಇಲ್ಲ ಹೌವ್ವಂದ್ರ ಹ ಇಲ್ಲ
ಸಾಲ್ಯಾಗ ಏನೈತಿ ಹೆಣಭಾರ ||೪||
ಮಾಸ್ತರ ಮ್ಯಾಲೀನ ಸಾಹೇಬಾ ಸತ್ತಿಲ್ಲ
ತಂಬಾಕು ಪಟ್ಟೀಯ ತಿಂದಾನ
ಪಿರಿಪಿರಿ ಮಕ್ಕಳಾ ಕೊರಿಚುಟ್ಟ ಮಾಡ್ಯಾನ
ಭುಸುಭುಸು ಸಿಗರೇಟು ಸೇದ್ಯಾನ ||೫||
*****
ಬಾಲಿ = ಆತ್ಮ
ಸಾಲಿ = ಸಂಸಾರ
ಮಾಸ್ತರ = ಜ್ಞಾನ ನೀಡಿದ ಗುರು
ನಾನು = ಮಾಯೆ (ಇಡೀ ಪದ್ಯದಲ್ಲಿ ಮಾಯೆ ಆತ್ಮಕ್ಕೆ ಹೇಳುತ್ತದೆ)
ಸಾಹೇಬ = ಭಗವಂತ
ತಂಬಾಕಿ ಪಟ್ಟಿ = ಮಾಯಾಮದ
ಸಿಗರೇಟು ಸೇದು = ಜ್ಞಾನಾಗ್ನಿಯಿಂದ ಸುಡು
ಪಿರಿಪಿರಿ ಮಕ್ಕಳು = ಸರ್ವ ಆತ್ಮರು