ಪ್ರಿಯ ಸಖಿ,
ಎಂಟು ಹತ್ತು ವರ್ಷದ ಹುಡುಗನೊಬ್ಬ ತನ್ನಮ್ಮನನ್ನು ಪ್ರಶ್ನಿಸುತ್ತಿದ್ದಾನೆ. “ಅಮ್ಮ ಮಾನವೀಯತೆ ಎಂದರೇನು?” ಅಮ್ಮ ಕ್ಷಣಕಾಲ ತಬ್ಬಿಬ್ಬಾಗುತ್ತಾಳೆ. ದೊಡ್ಡ ದೊಡ್ಡ ಪದಗಳಲ್ಲಿ ಮಾನವೀಯತೆಯನ್ನು ಅರ್ಧೈಸಿ ಹೇಳಬಹುದು. ಆದರೆ ಇನ್ನೂ ಪ್ರಪಂಚದ ಜ್ಞಾನವಿಲ್ಲದ ಮುಗ್ಧ ಮಗುವಿಗೆ ಅದು ಅರ್ಥವಾಗುವುದು ಹೇಗೆ?
ಮಾನವೀಯತೆಯೆಂದರೆ ಮನುಷ್ಯತ್ವ, ಮನುಷ್ಯ ಧರ್ಮ ಎಂದು ಪದಕೋಶದ ಅರ್ಥ ಹೇಳಿದರೆ ಮಗುವಿನ ಬುದ್ದಿಗೆ ತಿಳಿಯುತ್ತದೆಯೇ. ಅಮ್ಮ ಸ್ವಲ್ಪ ಹೊತ್ತು ಯೋಚಿಸಿ “ಕಂದಾ ಈಗ ನೀನು ನನಗೆ ಒಂದೇಟು ಜೋರಾಗಿ ಹೊಡೆಯಬೇಕು” ಎನ್ನುತ್ತಾಳೆ. ಬಾಲಕ ಅಮ್ಮನಿಗೆ ಹೊಡೆಯಲೋ ಬೇಡವೋ ಎಂದು ಗೊಂದಲಕ್ಕೊಳಗಾಗುತ್ತಾನೆ.
ಅಮ್ಮ ಮತ್ತೆ ಕೇಳುತ್ತಾಳೆ; “ಯಾಕೆ ಹೊಡೀತಾ ಇಲ್ಲ”. ನಿನಗೆ ನೋವಾಗುತ್ತಲ್ಲ ಅದಕ್ಕೆ ಹೊಡೆಯಲ್ಲ” ಎಂದ ಬಾಲಕ.
ಮಾನವೀಯತೆಯ ಅರ್ಥವನ್ನ ತಾನೀಗ ಸುಲಭವಾಗಿ ವಿವರಿಸಬಹುದೆಂದು ತಾಯಿಗೆ ಖುಷಿಯಾಯ್ತು. ಅವಳು ಮಗುವಿಗೆ ಹೇಳಿದಳು, “ನೋಡು ಮಗು ನನಗೆ ನೀನು ಹೊಡೆದರೆ ನನಗೆ ನೋವಾಗುತ್ತದೆ ಹೌದಲ್ವಾ. ನನಗೆ ನೋವಾಗುತ್ತೆ ಅಂತ ನಿನಗೆ ಗೊತ್ತಿರೋದ್ರಿಂದ ನೀನು ನನಗೆ ಹೊಡೆಯೋದಿಲ್ಲ. ಇದೇ ಮಾನವೀಯತೆ. ನೀನು
ಮಾನವೀಯತೆ ಇರೋ ಒಳ್ಳೇ ಹುಡುಗ” ಎಂದಳು. ಮಗು ಖುಷಿಯಿಂದ ಆಡಲು ಹೊರಗೋಡಿತು.
ಸಖಿ, ಮಾನವೀಯತೆಯ ಅರ್ಥ ಎಷ್ಟೊಂದು ಸರಳವಾಗಿದೆಯಲ್ಲವೇ? ನಾವಾಡುವ ಮಾತಿನಿಂದ, ನಮ್ಮ ನಡೆಯಿಂದ ಬೇರೆಯವರಿಗೆ ನೋವಾಗುತ್ತದೆ ಎಂದು ನಾವು ತಿಳಿದುಕೊಂಡು ಆ ರೀತಿ ನಡೆದುಕೊಳ್ಳುವುದೇ ಮಾನವೀಯತೆ. ಬೇರೆಯವರಿಗೆ ನೋವಾಗುತ್ತದೆ ಎಂದು ತಿಳಿದೂ, ತಿಳಿದೂ ನಾವು ಅವರಿಗೆ ಹಿಂಸೆ ನೀಡಿದರೆ ನಮ್ಮ ನಡೆ, ನುಡಿಗಳಿಂದ ನೋಯಿಸಿದರೆ ಅದೇ ಅಮಾನವೀಯತೆ. ತತ್ವ ಎಷ್ಟೊಂದು ಸರಳವಾಗಿದೆ. ಆದರೆ ಆಚರಣೆ?
ಸಖಿ, ‘ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಣವಕ್ಕು’ ಎಂದು ಸರ್ವಜ್ಞ ನುಡಿದಿದ್ದಾನೆ. ತನ್ನಂತೆಯೂ ಇನ್ನೊಂದು ಜೀವಕ್ಕೂ ನೋವಾಗುತ್ತದೆ. ಆದ್ದರಿಂದ ಗೊತ್ತಿದ್ದೂ ತಾನು ಪರರನ್ನು ನೋಯಿಸಬಾರದು ಎಂಬ ವಿವೇಕ ನಮ್ಮಲ್ಲಿ ಜಾಗೃತವಾದರೆ ನಿಜಕ್ಕೂ ನಾವು ಮಾನವರಾಗಿದ್ದಕ್ಕೆ ಸಾರ್ಥಕ ಅಲ್ಲವೇ?
*****