ಏಕಮ್ಮ ಓ ಪ್ರಕೃತಿ ಎನ್ನಿಂದ ದಿನದಿನವು
ದೂರಕೆ ಸಾಗುತ ನಿಲ್ಲುತಿರುವೆ
ನರಕವಾಗಿದೆ ಎನ್ನ ಜೀವನ ವಿಕೃತಿಯಲಿ
ತಬ್ಬಲಿಗೈದೆನ್ನ ಕೊಲ್ಲು ತಿರುವೆ
ಎಲೆ ಎಲೆ ಪಿಸುಮಾತು ಕೇಳಿಸದೆ ಕಿವಿಗಳಿಗೆ
ನಾಗರಿಕ ಸಂತೆಯಲಿ ಮುಚ್ಚಿರುವುದು
ನಗುವ ಹೂಗಳ ಮೋಡಿ ಎನ್ನಿಂದ ದೂರಾಗಿ
ಕಾಗದದ ಹೂ ಮೂಗ ಮುತ್ತುತಿಹುದು
ಹಸುರ ಹುಲ್ಲಿಗೆ ಮೆತ್ತ ಮುತ್ತಿನಪ್ಪುಗೆಯಿಂದ
ಎರವಾಗಿ ನಾ ನಯದ ಮರುಳಿನಲ್ಲಿ
ಸಿಕ್ಕಿರುವೆ ಬಿಕ್ಕಿರುವೆ ಬಯಲಲ್ಲಿ ತಬ್ಬಲಿಯು
ಗೋಳಾಟ ಕಸಿವಿಸಿಯು ಕರುಳಿನಲ್ಲಿ
ನಾಕ ನಾದವನೆನಗೆ ಕಲಿಸುವಂದದಿ ಉಲಿವ
ಹಕ್ಕಿಗಳ ಸವಿಗಾನ ಕನಸಾಗಿದೆ
ನರಕರಾಗದಿ ಎನ್ನ ಮುಳುಗಿಸುವ ತೇಲಿಸುವ
ನವ್ಯತೆಯ ಗೂಗೆಗಳ ಕಿರುಚಾಗಿದೆ
ರಾಗ ತಾನಗಳಿಂದ ಮುಂಜಾನೆ ಸಂಜಾನೆ
ಎಬ್ಬಿಸುವ ಮಲಗಿಸುವ ಲಲ್ಲೆಯೆಲ್ಲಿ?
ಚಿಕ್ಕಿಗಳ ಕಾವಲಿನ ತಿಂಗಳಿನ ಸಿಹಿಗನಸ
ರಾತ್ರಿಯಲಿ ಜೋಗುಳದ ಸೊಲ್ಲದೆಲ್ಲಿ?
ನದಿನದಂಗಳ ಸೆರಗಿನಲಿಯೆನ್ನ ಮೈಯನ್ನು
ತೊಳೆದು ನಿರ್ಮಲಗೊಳಿಪ ಸಲಿಲವೆಲ್ಲಿ?
ಹಣ್ಣುಗಳ ಸ್ತನ್ಯಪಾನದ ಪೋಷಣೆಯದೆಲ್ಲಿ?
ಜನ್ಮಗಳ ಕಳೆಕಳೆವ ಒಲವದೆಲ್ಲಿ?
*****