ಪ್ರಿಯ ಸಖಿ,
ಪ್ರತಿಯೊಬ್ಬರ ಬಾಳಿನಲ್ಲೂ ಗೆಳೆತನವೆನ್ನುವುದು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಷ್ಟೋ ಬಾರಿ ಗೆಳೆತನವೇ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ ಅದಕ್ಕೆಂದೇ ಆಂಗ್ಲ ನಾಣ್ಣುಡಿಯೊಂದು “ನಿನ್ನ ಗೆಳೆಯನನ್ನು ತೋರಿಸು ನೀನು ಏನೆಂದು ಹೇಳುತ್ತೇನೆ” ಎನ್ನುತ್ತದೆ. ಮಾನವ ಸಂಘಜೀವಿ ಅವನಿಗೆ ಸ್ನೇಹಿತರು ಬೇಕೇಬೇಕು. ಆದರೆ ಜಾರ್ಜ್ ವಾಷಿಂಗ್ಟನ್ ಅವರ ಈ ಮಾತುಗಳನ್ನು ನೋಡು
associate yourself with
men of good quality
if you esteem your
own reputation,
for it is better to be
alone than in
bad company
ನಿನ್ನ ಗೌರವ, ಪ್ರತಿಷ್ಟೆಗೆ ಬೆಲೆ ಕೊಡುವುದಾದರೆ ಉತ್ತಮ ಗುಣಗಳಿರುವ ವ್ಯಕ್ತಿಗಳೊಂದಿಗೆ ಸೇರು. ಕೆಟ್ಟವರ ಸಹವಾಸಕ್ಕಿಂತ ಒಂಟಿಯಾಗಿರುವುದೇ ಲೇಸು ಎಂದು ಹಿತನುಡಿಗಳನ್ನಾಡಿದ್ದಾರೆ. ಉತ್ತಮ ಗುಣಗಳಿರುವ ವ್ಯಕ್ತಿ ನಮ್ಮ ಗೆಳೆಯನಾದರೆ ಅವನಿಂದ ನಾವೂ ಉತ್ತಮರಾಗಲು ಸಾಧ್ಯ. ಜೊತೆಗೆ ಅಂತಹ ವ್ಯಕ್ತಿಯ ಸಾಹಚರ್ಯದಿಂವ ನಮಗೆ ಗೌರವವೂ ಸಿಕ್ಕುತ್ತದೆ. ಅದೇ ಕೆಟ್ಟವರ ಸಹವಾಸದಿಂದ ಅವಮಾನ, ನೋವು, ಅಪಖ್ಯಾತಿಗಳು ಕಟ್ಟಿಟ್ಟ ಬುತ್ತಿ. ಜೊತೆಗೇ ಅಂತವರ ಒಡನಾಟದಿಂದ ನಮ್ಮ ಉತ್ತಮ ಗುಣಗಳೂ ಮಸುಕಾಗಿ ಹೋಗುತ್ತವೆ. ಆದ್ದರಿಂದಲೇ ಇಂತವರ ಒಡನಾಟ, ಗೆಳೆತನಕ್ಕಿಂತ ಒಂಟಿಯಾಗಿರುವುದೇ ಮೇಲೆನ್ನುತ್ತಾರೆ ವಾಷಿಂಗ್ಟನ್.
ಉತ್ತಮ ಗೆಳೆಯರನ್ನು ಹೊಂದಲು ಪೂರ್ವಜನ್ಮದ ಪುಣ್ಯವಿರಬೇಕು ಎನ್ನುತ್ತಾರೆ ಹಿರಿಯರು. ಇದು ನಿಜವೂ ಹೌದು. ಉತ್ತಮ ಗೆಳೆಯರು ದೊರಕುವುದು, ಉತ್ತಮ ಒಡನಾಡಿಗಳನ್ನು ಹುಡುಕುವುದು ಕಷ್ಟದ ಕೆಲಸವೇ. ಹಾಗೆಂದು ಸಿಕ್ಕ ಸಿಕ್ಕವರನ್ನೇ ನಮ್ಮ ಸ್ನೇಹಿತರನ್ನಾಗಿ ಮಾಡಿಕೊಂಡು, ನಂತರ ಪಶ್ಚಾತ್ತಾಪ ಪಡುವುದರ ಬದಲು, ಒಳ್ಳೆಯ ಸ್ನೇಹಿತ ಒಬ್ಬನಿದ್ದರೂ ಸಾಕು ಅಥವಾ ಯಾರೂ ಇಲ್ಲದಿದ್ದರೆ ಒಂಟಿಯಾಗಿಯೇ ಇದ್ದು ನಮ್ಮೆಲ್ಲ ಭಾವನೆಗಳನ್ನು ನಮ್ಮ ಮನಸ್ಸಿನೊಂದಿಗೇ ಹಂಚಿಕೊಂಡು, ಒಳಿತು-ಕೆಡುಕುಗಳ ಕುರಿತು ವಿವೇಚಿಸೋಣ. ಮನವನ್ನೇ ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಳ್ಳೋಣ. ಇದಕ್ಕೆ ನೀನೇನನ್ನುತ್ತೀ ಸಖಿ?
*****