ಪ್ರಿಯ ಸಖಿ,
ಕೆಲವರು ಬಯಸುತ್ತಾರೆ
ತಾವು ಇಡುವ
ಪಾದಗಳ ಕೆಳಗೆ
ಇರಬೇಕೆಂದು ರತ್ನಕಂಬಳಿಗಳು
ಅಮೃತ ಶಿಲೆಗಳು
ಡಾಂಬರಿನ
ನಯ ನಾಜೂಕಿನ ರಸ್ತೆಗಳು
ಆದರೆ ತಮ್ಮ ಕಾಲುಗಳ ಕೆಳಗೆ
ಹಿಮಾಲಯ ಪರ್ವತ ಶಿಖರಗಳೆ
ಇರಬೇಕೆಂದು ಮೆಟ್ಟಿದವರು
ತೇನ್ಸಿಂಗ್ ಹಿಲೇರಿಗಳು.
ಜರಗನಹಳ್ಳಿ ಶಿವಶಂಕರ್ ಅವರ ‘ಸಾಧನೆ’ ಎಂಬ ಈ ಹನಿಗವನವನ್ನು ನೋಡಿದೆಯಾ ಸಖಿ, ಸಾಧನೆಯೆಂಬುದು ವ್ಯಕ್ತಿಯು ಹಾಕಿಕೊಂಡ ಮಿತಿಯನ್ನು ಅನುಸರಿಸಿ ನಿರ್ಮಿಸಲಾಗುತ್ತಿರುತ್ತದೆ. ಹಲವರು ಅಲ್ಪತೃಪ್ತರು. ಅವರಿಗೆ ತನ್ನ ಕಾಲ ಕೆಳಗೆ ರತ್ನಗಂಬಳಿ, ಅಮೃತ ಶಿಲೆಗಳಿದ್ದರೆ ಸಾಕು. ಆದರೆ ತೇನ್ಸಿಂಗ್, ಹಿಲೇರಿಗಳಂತಾ ಕೆಲವೇ ಸಾಧಕರು, ತಮ್ಮ ಕಾಲ ಕೆಳಗೆ ಹಿಮಾಲಯ ಪರ್ವತವೇ ಇರಬೇಕೆಂದು ಬಯಸುತ್ತಾರೆ. ಇಂತಹ ಸಾಧನೆಗಳು ಕಷ್ಟವಾದರೂ ಅಸಾಧ್ಯವಾದುದೇನಲ್ಲಾ.
ಇಂದಿನ ನಮ್ಮ ನಿತ್ಯ ಜೀವನದ ಎಷ್ಟೆಷ್ಟೋ ಸೂಕ್ಷ್ಮಾತಿಸೂಕ್ಷ್ಮ ಪರಿಕರಗಳು ಕೂಡ ಇಂತಹ ಸಾಧಕರಿಂದಲೇ ಮೂಡಿಬಂದಂತದು. ಇತರರ ಸುಖಕ್ಕಾಗಿ ತಮ್ಮ ಜೀವಿತದ ಅಮೂಲ್ಯ ಸಮಯವನ್ನೆಲ್ಲಾ ಇಂತಹ ಸಂಶೋಧನೆಗಾಗಿಯೇ ಮುಡಿಪಿಟ್ಟು ತಮ್ಮ ಜೀವ, ಜೀವನವನ್ನೇ ತೇಯ್ದುಕೊಂಡ ಎಷ್ಟೊಂದು ಸಾಧಕರನ್ನು ನಮ್ಮ ಕಣ್ಣ ಮುಂದೆ ಕಾಣುತ್ತಲೇ ಇರುತ್ತೇವೆ.
ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಏನಾದರೊಂದು ಸಾಧಿಸುವ ಛಲಹೊಂದಿರಬೇಕು. ಕಷ್ಟಪಡದೇ ಇಲ್ಲೇನನ್ನೂ ಸಾಧಿಸಲಾಗುವುದಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರ ಗುರಿಸೇರಲು ಸಾಧ್ಯ High aim is not crime ಎತ್ತರದ ಗುರಿ ಹೊಂದಿರುವುದು ಅಪರಾಧವಲ್ಲ. ಎನ್ನುತ್ತಾನೆ ದಾರ್ಶನಿಕನೊಬ್ಬ. ಸಖಿ, ಅದಕ್ಕೆಂದೇ ಬದುಕಿನಲ್ಲಿ ಉತ್ತಮ ಧ್ಯೇಯವೊಂದನ್ನು ಹೊಂದಿರುವುದರಲ್ಲಿ ತಪ್ಪೇನೂ ಇಲ್ಲ. ಅದನ್ನು ಸಾಧಿಸಿಯೇ ತೀರುತ್ತೇವೊ ಇಲ್ಲವೋ ಗೊತ್ತಿಲ್ಲ. ಸಾಧನೆಯ ಹಾದಿಯಲ್ಲಿ ಅವಿರತವಾಗಿ ಹೆಜ್ಜೆ ಹಾಕುತ್ತಿದ್ದರೆ ಅಷ್ಟೇ ಸಾಕು. ಅಲ್ಲವೇ?
*****