ಝುಳು ಝುಳು
ನಡು ಬಳುಕಿಸಿ
ಬಂದಳು ನೀರೆ
ಯಾರಿವಳು ಹೇಳೆ ||
ಮೌನದಿ ತೂಗುತ
ಜಾಲವ ಬೀಸುತ
ಚಂಚಲೆ ಇವಳು
ಯಾರಿವಳು ಹೇಳೆ ||
ವೈಯಾರಿ ಇವಳು
ಗಯ್ಯಾಳಿ ಇವಳು
ಮರ್ಮವ ತಿಳಿ
ಯಾರಿವಳು ಹೇಳೆ ||
ಊರ ಹೊರಗೆ
ಊರನಾಳ್ವಳು
ಆಗರ್ಭ ಸಂಜಾತೆ
ಇವಳೆ ಇವಳು ಕೇಳೆ ||
ಪಾಪದ ಕೂಪದ
ಕರ್ಮವ ನೀಗುವ
ಪುಣ್ಯವಂತೆ ಇವಳು
ಬಲ್ಲೆಯೇನೆ ಸಖಿ ||
ಜಾತಿ ನೀತಿ ಭೇದ
ಇಲ್ಲದ ಬಾಲೆ ಇವಳು
ಜಡದಲಿ ಹಾಯುವ
ಶೋಡಶಿ ಇವಳೇ ಸಖಿ… ||
ಮಾಂತ್ರಿಕಳಿವಳು
ತಾಂತ್ರಿಕಳಿವಳು
ಮನವ ಸೆಳೆವ ನೀರೇ
ಮನೋಹರಿ ಕೇಳೆ ಸಖಿ ||
ಮಂದಗಾಯಿನಿ
ಗುಪ್ತಗಾಮಿನಿ
ಸಂಗೀತ ದಾಯಿನಿ
ರಸಿಕಳಿವಳು ಸಖಿ… ||
ಗಂಗೆ ತುಂಗೆ ಭದ್ರೆ
ಕಾವೇರಿ ಕೃಷ್ಣೆ
ವಿಶ್ವರೂಪ ಇವಳದು
ವಿಶ್ವಾಂಕಿತ ಸುಂದರಿ ಸಖಿ ||
ಹಸಿರು ಉಸಿರಿನ
ದಾಹವ ನೀಗುತ
ಮನುಜ ಮತದ
ವಿಶ್ವದಾತೆ ಮಾಳ್ವಿಕೆ ಸಖಿ
ಇವಳು ಕೇಳೆ…||
*****