ಪ್ರಿಯ ಸಖಿ,
ಅಲ್ಲಾಗಲಿ ಅಥವಾ ಇಲ್ಲಾಗಲಿ
ಸಲ್ಲದೆನ್ನಬೇಡ
ಒಳಿತು
ಎಲ್ಲೂ ಒಂದೇ ನೋಡ
ಸೆಣಸು ನಿಸು ಒಳ್ಮನಸು ಪತಾಕೆ
ಬೀಳದಂತೆ ಜೋಕೆ !
ಕವಿ ಗೋಪಾಲಕೃಷ್ಣ ಅಡಿಗರ ‘ಅಲ್ಲಾಗಲಿ’ ಎಂಬ ಕವನದ ಈ ಸಾಲುಗಳನ್ನು ಓದಿದೆಯಾ ಸಖಿ? ಎಲ್ಲ ಕೆಡಕುಗಳನ್ನು ನೋಡಿ ನೋಡಿ ತಲ್ಲಣಿಸುತ್ತಿದ್ದ ಎದೆಗೆ ಕೊಂಚ ತಂಪಾಯಿತೆ? ಒಳಿತು ಇಲ್ಲಿ ಇಲ್ಲವೇ ಇಲ್ಲ ಎಂದು ಪರಿತಪಿಸಿ ಕೊರಗಬೇಡ ಎಲ್ಲೆಡೆಯೂ ಒಳಿತು ಇದ್ದೇ ಇದೆ. ಒಳಮನಸ್ಸಿನಲ್ಲೇ ಕೆಟ್ಟದ್ದರೊಂದಿಗೆ ಸೆಣಸು. ಒಳಿತಿನ ಪತಾಕೆ ಕೆಳಜಾರಿ ಬೀಳದಂತೆ ಜೋಪಾನವಾಗಿ ನಿಲ್ಲಿಸು ಎಂದು ಹಿತನುಡಿಗಳನ್ನಾಡಿದ್ದಾರೆ ಕವಿ.
ನಮ್ಮ ಎಲ್ಲ ಒಳಿತು ಕೆಡುಕಿನ ಮೂಲ ನಮ್ಮೊಳಗೇ ಇದೆ. ಅದನ್ನು ಆ ದಿಕ್ಕುಗಳಲ್ಲಿ ನಡೆಸುವವರೂ ನಾವೇ. ಒಳಿತಿನೆಡೆಗೇ ನಾವು ನಡೆಯುತ್ತೇವೆ ಎಂದು ಮನದಲ್ಲಿ ದೃಢವಾಗಿ ನಿಶ್ಚಯಿಸಿದರೆ, ಅದನ್ನು ಮೀರುವ ಧೈರ್ಯ ಬಹುಶಃ ನಮಗೂ ಬರಬಾರದು! ಪದ್ಯವನ್ನು ಮುಂದುವರೆಸುತ್ತಾ ಕವಿ,
ಒಳಮನ ದೇವರ ಮನೆ ಮಣಿಯಲ್ಲಿ
ಇದೆ ಇಂದಿಗೂ ಆ ದೀಪದ ಮಲ್ಲಿ
ಎಣ್ಣೆ ತೀರಿ ಕರಟಿದರೂ ಬತ್ತಿ
ಒತ್ತಿ ತುಳಿದರೂ ತಮಸ್ಸು ಮುತ್ತಿ
ಹೂಡಿದೆ ಕತ್ತಲ ಕೊಡೆ ರಣ
ಈ ಚಿತ್ಕಣ ಘನ ಚಿರಂತನ
ನೋಡಿ ಬೀಗು, ಸಂದೇಹನೀಗು
ಸಾಷ್ಟಾಂಗ ಬಾಗು ಅದಕೆ
ಒಲವಿನ ಹನಿಮಣಿ ಕೊಡುಕೈಗಾಣಿಕೆ
ಎರೆಯೊ ನಿನ್ನ ಎದೆಯೊರತೆ
ಬೆಳಕಿಗೆ ಬಾರದಂತೆ ಕೊರತೆ!
ಎನ್ನುತ್ತಾರೆ ಒಳಮನಸ್ಸಿನ ದೇವರಮನೆಯಲ್ಲಿ ಎಣ್ಣೆ ತೀರಿ, ಬತ್ತಿ ಕರಟಿದ ಹಣತೆ ಇದೆ. ತುಂಬಿರುವ ಕತ್ತಲಿನೊಡನೆ ನಿರಂತರವಾಗಿ ಯುದ್ಧ ಸಾರಿದೆ ಮನಸ್ಸು. ಮನದಲ್ಲಿ ಸದಾ ಒಳಿತು ಕೆಡುಕಿನ ಕುರಿತು ವಿವೇಚನೆ ನಡೆದೇ ಇದೆ. ಅದನ್ನು ನೋಡಿ ಹೆಮ್ಮೆ ಪಡು. ಕತ್ತಲ ಮೇಲೆ ಬೆಳಕು ಗೆಲುವು ಸಾಧಿಸೇ ಸಾಧಿಸುತ್ತದೆ ಸಂದೇಹ ಬೇಡೆನ್ನುತ್ತಾ ಧೈರ್ಯ ತುಂಬುತ್ತಾರೆ ಕವಿ.
ಬೆಳಕನ್ನು ಶಾಶ್ವತವಾಗಿ ನುಂಗಿಬಿಡಲು ಕತ್ತಲು ಶತಪ್ರಯತ್ನ ಮಾಡಿದರೂ ಕತ್ತಲಿನ ಅರಿವಿಗೇ ಬರದಂತೆ ಮೆಲ್ಲ ಮೆಲ್ಲಗೆ ಬೆಳಕು ಪಸರಿಸಿ ಕತ್ತಲನ್ನು ಹೊಡೆದೋಡಿಸಿ ಬಿಡುತ್ತವಲ್ಲವೇ ಸಖಿ?
*****