ಪ್ರಿಯ ಸಖಿ,
ಇಂದು ನಾವು ಆಡುತ್ತಿರುವ ಮಾತು ತನ್ನ ಮೌಲ್ಯವನ್ನೇ ಕಳೆದುಕೂಂಡಿದೆ. ಬೇಕಾದಾಗ ಬೇಕಾದಂತೆ ಮಾತಾಡುವ, ಅದಕ್ಕೆ ಬದ್ಧರಾಗಿರಬೇಕೆಂಬ ಯಾವುದೇ ಸಿದ್ಧಾಂತವನ್ನೂ ನಾವಿಂದು ಇಟ್ಟುಕೊಂಡಿಲ್ಲ. ಆಡುವ ಮಾತಿಗೂ ನಡೆದುಕೊಳ್ಳುವ ರೀತಿಗೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಅದನ್ನು ಕಂಡೇ ಕವಿ ಬಿ. ಅರ್. ಲಕ್ಷ್ಮಣರಾವ್ ಅವರು ತಮ್ಮ ‘ಇಂದು’ ಎಂಬ ಹನಿಗವನದಲ್ಲಿ ಹೀಗೆನ್ನುತ್ತಾರೆ.
ಮಾತು
ತನ್ನ ನಂಬಿಕೆ ಕಳೆದುಕೊಂಡಿರುವ
ಇಂದು
ಪ್ರತಿ ದಿನವೂ
ಏಪ್ರಿಲ್ ಒಂದು
ಯಾರದೋ ಮಾತನ್ನು ನಂಬಿಕೂತವನು ಇಂದು ಮೂರ್ಖನಾಗುವ ಕಾಲ ಬಂದಿದೆ. ‘ಮಾತನಾಡುವ ಮೊದಲು ಅದರಲ್ಲಿ ನಿನ್ನ ಹೃದಯವಿದೆಯೇ ಎಂದು ಪರೀಕ್ಷಿಸು ಎನ್ನುವ ಹಳೆಯ ನಾನ್ನುಡಿಯೊಂದು ನಮ್ಮಲ್ಲಿದೆ. ಹೃದಯವಿರಲಿ ಇಂದು ಮಾತಿನಲ್ಲಿ ನಾಲಿಗೆಯೂ ಇರುವುದಿಲ್ಲ. ಬರಿಯ ಗಾಳಿಯಲ್ಲಿ ಮಾತುಗಳು ಹಾರಾಡುತ್ತವೆ.
ಮಾನವೀಯ ಮೌಲ್ಯಗಳು ಕಳೆದು ಹೋಗುತ್ತಿರುವ ಇಂದಿನ ದಿನಗಳಲ್ಲಿ ಮಾತೂ ತನ್ನ ಅರ್ಥ ಕಳೆದುಕೊಳ್ಳುತ್ತಿದೆ. ತನ್ನ ಲಾಭಕ್ಕಾಗಿ ಯಾವ ಮಾತನ್ನಾದರೂ ಹೇಗೆ ಬೇಕಾದರೂ ಆಡಿ ಕಾರ್ಯ ಸಾಧಿಸಿಕೊಳ್ಳುವ ಹಂತಕ್ಕೆ ಮನುಷ್ಯ ಬಂದು ಮುಟ್ಟಿದ್ದಾನೆ. ಅವನಿಗೆ ತನ್ನ ಸ್ವಾರ್ಥ, ಸ್ವಹಿತಗಳೇ ಮುಖ್ಯ. ಇಂತಹ ನಾಟಕಗಳನ್ನರಿಯದ ಮುಗ್ಧ ವ್ಯಕ್ತಿಗಳೂ ನಮ್ಮಲ್ಲಿದ್ದಾರೆ. ಅವರೆಲ್ಲ ಇಂತಹ ಕಪಟ ಮಾತುಗಾರರ ಮಾತುಗಳನ್ನು ನಂಬಿ ಕ್ಷಣ ಕ್ಷಣವೂ ಮೂರ್ಖರಾಗುತ್ತಿರುತ್ತಾರೆ.
ನುಡಿದಂತೆ ನಡೆಯಬೇಕು ನಡೆದಂತೆ ನುಡಿಯಬೇಕು ಎಂಬ ತತ್ವಕ್ಕೆ ನಾವು ಯಾವಾಗ ಬದ್ಧರಾಗುವುದಿಲ್ಲವೋ ಅಲ್ಲಿಯವರೆಗೂ ನಾವು ಆತ್ಮವಂಚನೆ ಮಾಡಿಕೊಳ್ಳುತ್ತಲೇ ಇರುತ್ತೇವೆ. ಮಾತಿಗೂ ಅದರದ್ದೇ ಮಹತ್ವವಿದೆ. ಪ್ರಾಮಾಣಿಕ ಮಾತಿನಿಂದಲೇ ಮಾನವನಿಗೆ ಗೌರವ, ಪ್ರತಿಷ್ಠೆಗಳು ಬರುತ್ತವೆ ಎಂದು ಎಲ್ಲಿಯವರೆಗೆ ಮನುಷ್ಯ ತಿಳಿದು ಕೊಳ್ಳುವದಿಲ್ಲವೋ ಅಲ್ಲಿಯವರೆಗೆ ಬೇರೆ ಯಾರೇ ಅವನನ್ನು ಕ್ಷಮಿಸಿದರೂ ಅವನ ಆತ್ಮ ಅವನನ್ನು ಎಂದೂ ಕ್ಷಮಿಸುವುದಿಲ್ಲ. ಈ ಕುರಿತು ನಿನ್ನ ನಿಲುವೇನು ಸಖಿ?
*****