ಪ್ರಿಯ ಸಖಿ,
ವ್ಯವಹಾರದ ಈ ಜಗತ್ತಿನಲ್ಲಿ ಸಾಹಿತ್ಯವೂ ವ್ಯಾಪಾರವಾಗುತ್ತಿರುವುದನ್ನು ನೋಡುತ್ತಿದ್ದೇವೆ. ತಾನು ಬರೆದ ಸಾಹಿತ್ಯದಿಂದ ತನಗೆ ಸಿಗುವ ಆತ್ಮತೃಪ್ತಿಗಿಂತ, ತನಗೆ ಸಿಗುವ ಹಣ, ಕೀರ್ತಿಯೇ ಮಾನದಂಡವೆನ್ನುವ ಸಾಹಿತಿಗಳನೇಕರು ಇದ್ದಾರೆ. ಇಂತಹವರನ್ನು ಕಂಡಾಗ ಧುತ್ತನೆ ನನ್ನನ್ನೊಂದು ಗೊಂದಲ ಕಾಡಲಾರಂಭಿಸುತ್ತದೆ. ಬರವಣಿಗೆ ಒಂದು ಹೊರಹಾಕುವ ತುರ್ತೋ ಅಥವಾ ಮಾರಾಟಕ್ಕಿಡುವ ಕಲೆಯೋ?
ಭಾವೋತ್ಕರ್ಷದ ತುರ್ತನ್ನು ಹೊರಹಾಕಲೊಂದು ಮಾರ್ಗ ಬರವಣಿಗೆ. ಆದರೆ ಆ ಪ್ರಾಮಾಣಿಕ ಪರಿಪಕ್ವತೆಗಾಗಿ ಕಾಯುವವರೆಷ್ಟು ಮಂದಿ? ಹಸಿಬಿಸಿ ಬೆಂದ ಭಾವಗಳನ್ನೇ ಹಾಳೆಯಲ್ಲಿ ಮೂಡಿಸಿ ಬರೆಯಲೇಬೇಕು ಬರೆದು ಕೀರ್ತಿ, ಹೆಸರು ಸಂಪಾದಿಸಬೇಕು. ಹಣ ಮಾಡಬೇಕು ಎಂಬ ವ್ಯಾವಹಾರಿಕ ಕಾರಣದಿಂದಲೇ ಬರೆಯುವವರು ಹಲವು ಮಂದಿ. ಎಲ್ಲರಿಗೂ ಬರೆವ ಕಲೆ ಸಿದ್ಧಿಸುವುದಿಲ್ಲವಾದರೂ ಸ್ಪಲ್ಪಮಟ್ಟಿನ ಪ್ರಯತ್ನದಿಂದ ಏನೋ ಒಂದು ಬರೆಯಬಹುದು. ‘ಪ್ರತಿಭೆ ಇದ್ದವರು, ಯಾವುದಕ್ಕೂ ಕಾಯಬೇಕಿಲ್ಲ ಬರೆದು ಬಿಸಾಡಿದರೆ ಸಾಕು’ ಎಂಬ ವಿತಂಡವಾದ ಬೇರೆ. ಇಂತಹ ಕಳಪೆ ಸಾಹಿತ್ಯದ ನಡುವೆಯೂ ಬಲವಂತಕ್ಕೆ ಹೊರಹೊಮ್ಮಿಸದ, ತಂತಾನೇ ಹೊರಹೊಮ್ಮಿದ ಶುದ್ಧ ಸಾಹಿತ್ಯ ‘ಸೃಜನಶೀಲ ಬರಹಗಳು’ ಮೂಡುತ್ತಲೇ ಇರುತ್ತವೆ. ಇವು ಕಳಪೆ ಸಾಹಿತ್ಯದಂತೆ ಕ್ಷಣಕಾಲವಷ್ಟೇ ಇದ್ದು ಮರೆಯಾಗದೇ ವರ್ಷಗಳು ಕಳೆದರೂ ನೆನಪಿನಲ್ಲಿ ಉಳಿಯುತ್ತವೆ. ಹಾಗೆಂದೇ ಶೇಕ್ಸ್‍ಪಿಯರ್, ಎಲಿಯಟ್, ಪಂಪ, ಕುವೆಂಪು, ಬೇಂದ್ರೆ, ಮುಂತಾದ ಗಟ್ಟಿ ಸಾಹಿತಿಗಳು ತಾವಳಿದಿದ್ದರೂ ತಮ್ಮ ಸಾಹಿತ್ಯದಿಂದ ನಮ್ಮಲ್ಲಿ ಹಸುರಾಗಿಯೇ ಇದ್ದಾರೆ.
ಹಾಗಿದ್ದರೆ ನಿಜವಾದ ಸಾಹಿತ್ಯದ ಉದಯ ಹೇಗಾಗುತ್ತದೆ ಎಂಬುದನ್ನು ಕವಿ ಜಿ. ಎಸ್. ಶಿವರುದ್ರಪ್ಪನವರು ತಮ್ಮ ‘ಕಾವ್ಯೋದಯ’ ಎಂಬ ಕವನದ ಕೊನೆಯ ಸಾಲುಗಳಲ್ಲಿ ಹೀಗೆ ಹೇಳಿದ್ದಾರೆ. ಇಲ್ಲವರು ಕಾವ್ಯವನ್ನು ಕುರಿತು ಹೇಳಿದ್ದರೂ ಎಲ್ಲ ಬರಹಗಳಿಗೂ ಈ ಮಾತು ಅನ್ವಯಿಸಬಹುದು.
ಕೊತ ಕೊತ ಕುದಿವ ಹುಡುಕಾಟಗಳ ನಡುವೆ
ಮಾತಿರದ ಮೌನದೊಳ
ಗಸ್ತವ್ಯಸ್ತವಾಗಿ ತೊಳಲಿದ್ದ ಅಶರೀರಭಾವ
ನಿಧಾನಕ್ಕೆ ಪಾಕವಾಗುತ್ತ
ಶಬ್ದಾರ್ಥ ಸಂಪುಟದೊಳಗೆ ಮೊಳೆವ ಮುತ್ತಾಗಿ
ಮಿನುಗುತಿದೆಯಲ್ಲ
ಹೀಗೆ ಶುದ್ಧ ಭಾವಗಳನ್ನು ಅಭಿವ್ಯಕ್ತಿಸಿ, ಗಟ್ಟಿಗೊಳಿಸಿ, ಹರಳಾಗಿಸಿ ಒಂದು ಮುತ್ತು ಮಾಡಿದರೆ ಸಾಕು. ಅದಲ್ಲದೇ ಹಣ, ಕೀರ್ತಿ, ಪ್ರತಿಷ್ಠೆಗಾಗಿ ಮತ್ತೇನೋ ಕ್ಷುಲ್ಲಕ ಕಾರಣಕ್ಕಾಗಿ ಬಲವಂತಕ್ಕೆ ಬರೆದ ಬರಹಕ್ಕೆ ಏನು ಬೆಲೆ? ಹೇಳುವೆಯಾ ಸಖಿ?
*****