ನನ್ನೆದೆಯ ಬಾಗಿಲನು ಮುಚ್ಚಿ ನಿದ್ರಿಸುತಿದ್ದೆ
ಜೀವನದಿ ತಿರುಳಿಲ್ಲವೆಂಬ ಭ್ರಮೆಯೊಳಗೆ
ದೇವ ನೀನೈತಂದು ಬಾಗಿಲನು ಬಡಿಯೆ ನಾ
ಸಿಡುಕಿನಿಂದಲೇ ಕೇಳ್ದೆ “ಯಾರು ಅದು” ಎಂದು! ೧
ಮೌನದಲಿ ಮತ್ತೊಮ್ಮೆ ಶಬ್ದ ಮಾಡಲು ನೀನು
ನಾನೆದ್ದೆ ಕೋಪದಲಿ ಕೆಂಡದಂತಾಗಿ
“ಯಾರಿವನು-ನಿದ್ರೆಯಲಿ ಭಂಗ ತಂದಿಹ ಧೂರ್ತ”
ಎನುತ ಚಿಂತಿಸಿ ಬಂದು ಬಾಗಿಲನು ತೆರೆದೆ! ೨
ನಿನ್ನ ನೋಡುತಲೆನ್ನ ಕೋಪ ಕಣ್ಣೀರಾಯ್ತು,
ನಿನ್ನ ಮುಗುಳ್ನಗೆ ಮಿಂಚಿ ನನ್ನ ಮನ ಸೆಳೆಯೆ
ಮೌನದಲಿ ಹೃದಯದಲಿ ತಳಮಳದಿ ತಪಿಸಿದೆನು
ನೀನೊಳಗೆ ಬರಬೇಕು ಎಂಬುದೆನ್ನಿಚ್ಫೆ! ೩
ನಸುನಕ್ಕು ಚಣಕಾಲ ಒಳಗೆ ದಿಟ್ಟಿಸಿ ನೋಡಿ
ಮುಂದೆ ಸಾಗಿದೆ ನೀನು ಹೃದಯದೊಲವೆ
ನಿನ್ನ ಪುರಾಗಮನಕಾಗಿ ಕಾಯುತಲಿರುವೆ
ಎದೆಯ ಬಾಗಿಲ ತೆರೆದು ಹೊಸ್ತಿಲಲಿ ನಿಂದು! ೪
*****