ಸಾಲ ಸರ್ಪವು ಬಂದು
ಸಂಸಾರ ಸೇರಿತು
ಚಿತ್ತ ಚಿತ್ತವನೆಲ್ಲ
ಹುತ್ತವ ಮಾಡಿತು.
ಸಣ್ಣ ಸಂದೀಲಿ ತೂರಿ ಬಂದಾ ಸರ್ಪ
ಹೆಡೆಯತ್ತಿ, ಸತಿಗೆ ಆಯ್ತಲ್ಲ ಸವತಿ
ಸವತಿಯ ಸಂತತಿ ಬುಸುಗುಟ್ಟಿ ಬೆಳೆದಂತೆ
ಸಂಸಾರದಾಗೆ ಇನ್ನೆಂಥ ಶಾಂತಿ!
ಸುತ್ತಿ ಬಳಸಿದ ಸರ್ಪ, ಆಲಿಂಗನದ ದರ್ಪ
ಸತಿಯತ್ತ ಬಿಡಲಿಲ್ಲ, ಇತ್ತ ಸಲಿಗೆ ಬೆಳೆದಿಲ್ಲ;
ನಮ್ಮ ಸುಲಿಗೆ ನಿಂತಿಲ್ಲ.
ಕತ್ತಿನ ಸುತ್ತ ಎತ್ತಿ ಆಡುವ ಹೆಡೆ
ಮುತ್ತು ಕೊಟ್ಟೇನೆಂದರೆ ಭಯವು ಹೋಗಿಲ್ಲ!
ಮನೆಯ ತುಂಬೆಲ್ಲ ಬುಸು ಬುಸು ಸದ್ದು
ತಂತಿ ಮೀಟೊ ಮಿಡಿತ ಇನ್ನಿಲ್ಲವಾಯ್ತು
ಸತ್ತೋಯ್ತು ಮಾತು.
*****